‘ಬ್ರ್ಯಾಂಡ್ ಬೆಂಗಳೂರು – ಸುಗಮ ಸಂಚಾರ ಬೆಂಗಳೂರು’ ಪರಿಕಲ್ಪನೆಯಡಿ ಪಶ್ಚಿಮ ವಲಯ ವ್ಯಾಪ್ತಿಯ ಗಾಂಧಿ ನಗರ, ಮಲ್ಲೇಶ್ವರಂ, ಮಹಾಲಕ್ಷ್ಮೀ ಲೇಔಟ್ ಹಾಗೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲನೇ ಹಂತದ “ವೈಟ್ ಟಾಪಿಂಗ್” ಹಾಗೂ ಪಾದಚಾರಿ ಮಾರ್ಗಗಳ ಅಭಿವೃದ್ಧಿ ಕಾಮಗಾರಿಗಳಿಗೆ ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಸೋಮವಾರ ಚಾಲನೆ ನೀಡಿದರು.
ಈ ವೇಳೆ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್, ದಿನೇಶ್ ಗುಂಡೂರಾವ್, ಸ್ಥಳೀಯ ಶಾಸಕ ಡಾ. ಸಿ.ಎನ್ ಅಶ್ವತ್ಥ ನಾರಾಯಣ, ಕೆ. ಗೋಪಾಲಯ್ಯ, ಆಡಳಿತಗಾರ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್, ವಲಯ ಜಂಟಿ ಆಯುಕ್ತ ಪಲ್ಲವಿ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಡಿಕೆಶಿ ಶೂ ಕಳ್ಳತನ
ರಾಜ್ಯದ ಉಪ ಮುಖ್ಯಮಂತ್ರಿ ಚಲನವಲನಗಳನ್ನು ತೀವ್ರ ನಿಗಾವಹಿಸಿ ಭದ್ರತಾ ಸಿಬ್ಬಂದಿ ಕಾಯುತ್ತಿರುತ್ತಾರೆ. ಇಷ್ಟೊಂದು ಭದ್ರತೆ ಇರುವ ವ್ಯಕ್ತಿಯ ಡಿ ಕೆ ಶಿವಕುಮಾರ್ ಅವರ ಶೂ ಕಳ್ಳತನವಾಗಿದೆ.
ಸದಾಶಿವನಗರದ ಭಾಷ್ಯಂ ಸರ್ಕಲ್ ನಲ್ಲಿ ಆಯೋಜನೆ ಮಾಡಿದ್ದ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ಪೂಜೆಗೆ ಡಿಕೆಶಿ ಆಗಮಿಸಿದ್ದ ವೇಳೆ ಡಿ.ಕೆ.ಶಿವಕುಮಾರ್ ಶೂ ತೆಗೆದಿಟ್ಟು ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ಪೂಜೆ ನೆರವೇರಿಸಿದ್ದಾರೆ.
ಪೂಜೆ ನೆರವೇರಿದ ಬಳಿಕ ಹೊರಡಲು ಸಿದ್ಧರಾದ ಡಿಸಿಎಂ ಡಿ.ಕೆ.ಶಿವಕುಮಾರ್, ಶೂ ಹಾಕಿಕೊಳ್ಳಲೆಂದು ಬಂದರೆ ಅವರು ಶೂ ಕಳಚಿಟ್ಟಿದ್ದ ಜಾಗದಲ್ಲಿ ಅದು ಇರಲೇ ಇಲ್ಲ.ತಕ್ಷಣವೇ ಅವರ ಸಿಬ್ಬಂದಿ ಶೂ ಗಾಗಿ ಅಲ್ಲಿ-ಇಲ್ಲಿ ಹುಡುಕಾಟ ನಡೆಸಿದರು. ಆದರೆ,ಅದು ಪತ್ತೆಯಾಗಲೇ ಇಲ್ಲ. ಹೀಗಾಗಿ ಅವರ ಶೂ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.