ಕಾಂಗ್ರೆಸ್ ಪಕ್ಷವು ಮಹಿಳಾ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ವಿಧಾನಸೌಧದ ಭುವನೇಶ್ವರಿ ಪ್ರತಿಮೆ ಬಳಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ ಅವರು, ಕೇಂದ್ರದ ಕಾಂಗ್ರೆಸ್ ಪಕ್ಷವೂ ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿ ಮಹಿಳೆಯರ ವಿರುದ್ಧವಾಗಿ ವರ್ತಿಸುತ್ತಿದೆ. ಶೇ 50ರಷ್ಟಿರುವ ಮಹಿಳೆಯರಿಗೆ ಇಲ್ಲಿಯೂ ಸಚಿವ ಸಂಪುಟಕ್ಕೆ ಅವಕಾಶ ನೀಡದೇ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಮತ್ತು ದೇಶದ ಜನಸಂಖ್ಯೆಯಲ್ಲಿ ಮಹಿಳೆಯರು ಶೇಕಡ 50ರಷ್ಟು ಇದ್ದಾರೆ. ಮಹಿಳೆಯರಿಗೆ ಸಮಾನ ಅವಕಾಶ ಹಾಗೂ ಸೂಕ್ತ ಪ್ರಾತಿನಿಧ್ಯ ದೊರೆಯಬೇಕು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಮಹಿಳೆಯರಿಗೆ 33ರಷ್ಟು ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಾಗ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಅವರು ಅದನ್ನು ವಿರೋಧಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಮಹಿಳೆಯರಿಗೆ ಪ್ರಾತಿನಿಧ್ಯ ನಿರಾಕರಿಸುವ ಮೂಲಕ ಮಹಿಳಾ ಸಮುದಾಯಕ್ಕೆ ಅಪಮಾನ ಮಾಡುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.
ಮಹಿಳಾ ಸಚಿವರ ಹೆಸರನ್ನು ಪ್ರಕಟಿಸಿ, ಕೈಬಿಟ್ಟಿರುವುದು ಅವಮಾನಕರ
ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಒಬ್ಬ ಮಹಿಳೆಯ ಹೆಸರೂ ಸಚಿವರಾಗಿ ಸೇರ್ಪಡೆಯಾಗಲಿದೆ ಎಂಬ ವಿಚಾರ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿತ್ತು. ಆದರೆ ಅಂತಿಮವಾಗಿ ಆ ಹೆಸರನ್ನು ಕೈಬಿಡಲಾಗಿದೆ. ಮಹಿಳೆಯರನ್ನು ಸಚಿವ ಸಂಪುಟದಿಂದ ದೂರವಿಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಅಪಮಾನ ಮಾಡಿದೆ ಎಂದು ಅವರು ಟೀಕಿಸಿದರು.
ಅಣ್ಣ ಬಸವಣ್ಣನವರ ನಾಡು ಹಾಗೂ ತಾಯಿ ಅಕ್ಕಮಹಾದೇವಿ ಜನಿಸಿದ ಪುಣ್ಯಭೂಮಿ ಕರ್ನಾಟಕ. ಇಂತಹ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಬೇಕಿತ್ತು. ಆದರೆ ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಚಿವ ಸಂಪುಟದಲ್ಲಿ ಒಬ್ಬರೂ ಮಹಿಳಾ ಸಚಿವರಿಲ್ಲದ ಸಂದರ್ಭದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ ಎಂಬುದು ಅತ್ಯಂತ ವಿಷಾದನೀಯ ಎಂದು ಆಕ್ಷೇಪಿಸಿದರು. ಮಹಿಳೆಯರಿಗೆ ಪ್ರಾತಿನಿಧ್ಯ ನೀಡದೆ ರಾಜ್ಯದ ತಾಯಂದಿರಿಗೆ ಅಪಮಾನ ಮಾಡಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಭಾರತೀಯ ಜನತಾ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದರು.
ಆರ್ಎಸ್ಎಸ್ ಗೆ ನಿರ್ಬಂಧ ಹೇರುವ ಪ್ರಯತ್ನ, ಸರ್ಕಾರಕ್ಕೆ ಎಚ್ಚರಿಕೆ
ಆರ್ಎಸ್ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸಾರ್ವಜನಿಕ ಸಭೆಗಳಿಗೆ ಅನುಮತಿ ಕಡ್ಡಾಯಗೊಳಿಸುವಂತಹ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ ಅವರು, ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಸವಾಲು ಹಾಕಿದರು. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ನೇರವಾಗಿ ಆರ್ಎಸ್ಎಸ್ ಹೆಸರನ್ನು ಉಲ್ಲೇಖಿಸದಿದ್ದರೂ, ಸರ್ಕಾರದ ಕ್ರಮಗಳ ಉದ್ದೇಶ ಸ್ಪಷ್ಟವಾಗಿದೆ. ಸದನದಲ್ಲಿ ಆರ್ಎಸ್ಎಸ್ನ ಪ್ರಾರ್ಥನೆಯ ಉಲ್ಲೇಖ ಮಾಡಿದ್ದ ಮುಖ್ಯಮಂತ್ರಿಗಳ ನಿಲುವು ಇದೀಗ ಬಯಲಾಗಿದೆ ಎಂದು ಅವರು ಟೀಕಿಸಿದರು.
ಧೈರ್ಯವಿದ್ದರೆ ಆರ್ಎಸ್ಎಸ್ ಅನ್ನು ನಿಷೇಧಿಸಿ
“ಮುಖ್ಯಮಂತ್ರಿಗಳೇ, ನಿಮಗೆ ಧೈರ್ಯವಿದ್ದರೆ ಆರ್ಎಸ್ಎಸ್ ಅನ್ನು ನಿಷೇಧಿಸುವ ಪ್ರಯತ್ನ ಮಾಡಿ ನೋಡೋಣ” ಎಂದು ಸವಾಲು ಹಾಕಿದರು. ಆರ್ಎಸ್ಎಸ್ನಿಂದ ಯಾವ ದೇಶವಿರೋಧಿ ಚಟುವಟಿಕೆ ನಡೆದಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಇಲಾಖೆಯ ಜವಾಬ್ದಾರಿಗಳ ಬಗ್ಗೆ ಗಮನಹರಿಸುವ ಬದಲು ಪದೇಪದೇ ಆರ್ಎಸ್ಎಸ್ ಅನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಆರ್ಎಸ್ಎಸ್ ವಿರುದ್ಧವೇ ಇಷ್ಟೊಂದು ಆಸಕ್ತಿ ಇದ್ದರೆ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಆರ್ಎಸ್ಎಸ್ ವಿರೋಧಿ ಇಲಾಖೆಯನ್ನು ಪಡೆದುಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಆರ್ಎಸ್ಎಸ್ ದೇಶಭಕ್ತ ಸಂಘಟನೆ
ಆರ್ಎಸ್ಎಸ್ ಶತಮಾನ ಪೂರೈಸಿರುವ ಸಂಘಟನೆ. ದೇಶಭಕ್ತಿ, ರಾμÁ್ಟ್ರಭಿಮಾನ ಹಾಗೂ ಸೇವಾ ಮನೋಭಾವ ಬೆಳೆಸುವ ಸಂಘಟನೆಯಾಗಿ ಅದು ಕಾರ್ಯನಿರ್ವಹಿಸುತ್ತಿದೆ. ದೇಶದ ಪರವಾಗಿ ಧ್ವನಿ ಎತ್ತುವ ಶಕ್ತಿಗಳಲ್ಲಿ ಆರ್ಎಸ್ಎಸ್ ಪ್ರಮುಖವಾಗಿದೆ ಎಂದು ಹೇಳಿದರು. ಹಿಂಬಾಗಿಲಿನಿಂದ ಆರ್ಎಸ್ಎಸ್ನ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಯಾವುದೇ ಪ್ರಯತ್ನವನ್ನು ಬಿಜೆಪಿ ಸಹಿಸುವುದಿಲ್ಲ. ಸರ್ಕಾರ ತನ್ನ ನಿಲುವನ್ನು ಮರುಪರಿಶೀಲಿಸಬೇಕು ಎಂದು ಅವರು ಎಚ್ಚರಿಸಿದರು.
ಹಿಂದೆ ಜವಾಹರಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ಅವರ ಅವಧಿಯಲ್ಲಿ ಆರ್ಎಸ್ಎಸ್ ವಿರುದ್ಧ ನಿμÉೀಧ ಹೇರಲಾಗಿದ್ದರೂ ಸಂಘಟನೆ ಮತ್ತಷ್ಟು ಬಲಿಷ್ಠವಾಗಿ ಬೆಳೆದಿದೆ. ಇತಿಹಾಸದಿಂದ ಪಾಠ ಕಲಿತು ಸರ್ಕಾರ ಕಾರ್ಯನಿರ್ವಹಿಸಬೇಕು ಎಂದು ವಿಜಯೇಂದ್ರ ಹೇಳಿದರು.
ದೇಶದ್ರೋಹಿ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ
ದೇಶದ ಭದ್ರತೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಗೃಹ ಸಚಿವರ ಕರ್ತವ್ಯ. ಅಂತಹ ವಿಚಾರಗಳ ಬಗ್ಗೆ ಗಮನಹರಿಸದೆ ಆರ್ಎಸ್ಎಸ್ ಕುರಿತು ಚರ್ಚೆ ಮಾಡುವುದಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಟೀಕಿಸಿದರು.
ರಾಜ್ಯದ ಜ್ವಲಂತ ಸಮಸ್ಯೆಗಳು, ಬಡವರ ಸಂಕಷ್ಟ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಬದಲು ಸರ್ಕಾರ ಅನಗತ್ಯ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ವಾಲ್ಮೀಕಿ ನಿಗಮದ ಹಗರಣ: ಭ್ರಷ್ಟಾಚಾರಕ್ಕೆ ಜಾತಿಯ ಬಣ್ಣ ಸಲ್ಲದು
ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಾಗೇಂದ್ರ ಅವರು ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಹೇಳಿದರು.
ಭಾರತೀಯ ಜನತಾ ಪಕ್ಷ ನಾಗೇಂದ್ರ ಅವರ ಜಾತಿಯನ್ನು ವಿರೋಧಿಸುತ್ತಿಲ್ಲ. ಆದರೆ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಸಚಿವ ಸಂಪುಟಕ್ಕೆ ಸೇರಿಸುವುದನ್ನು ವಿರೋಧಿಸುತ್ತಿದೆ. ಭ್ರಷ್ಟಾಚಾರಕ್ಕೆ ಯಾವುದೇ ಕಾರಣಕ್ಕೂ ಜಾತಿಯ ಬಣ್ಣ ಕಟ್ಟಬಾರದು ಎಂದು ಅವರು ಸ್ಪಷ್ಟಪಡಿಸಿದರು.
ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ, ಆರೋಪಗಳಿಂದ ಸಂಪೂರ್ಣ ಮುಕ್ತರಾದ ಬಳಿಕ ನಾಗೇಂದ್ರ ಅವರನ್ನು ಸಚಿವರನ್ನಾಗಿ ಮಾಡಿದರೂ ಬಿಜೆಪಿಗೆ ಯಾವುದೇ ತಕರಾರಿಲ್ಲ. ಅಲ್ಲಿಯವರೆಗೆ ಮುಖ್ಯಮಂತ್ರಿಗಳು ಆ ಸಮುದಾಯದಿಂದ ಒಬ್ಬರ ಬದಲು ಇಬ್ಬರು ಸಚಿವರನ್ನು ನೇಮಕ ಮಾಡಿದರೂ ಬಿಜೆಪಿಗೆ ವಿರೋಧವಿಲ್ಲ ಎಂದು ಹೇಳಿದರು
ಎಸ್ಟಿ ಅಭಿವೃದ್ಧಿಗೆ ಮೀಸಲಾದ ಹಣದ ದುರ್ಬಳಕೆ
ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟ ಹಣದ ದುರ್ಬಳಕೆ ಹಾಗೂ ಹಗರಣದ ಆರೋಪಗಳು ಅತ್ಯಂತ ಗಂಭೀರವಾಗಿವೆ. ಈ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮುದಾಯದ ಹಲವು ಪ್ರಮುಖರು ತಮ್ಮನ್ನು ಭೇಟಿಯಾಗಿ, ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದು ಸಮುದಾಯಕ್ಕೆ ಅಪಮಾನವಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹೇಳಿದರು
ರಾಜ್ಯಾದ್ಯಂತ ಹೋರಾಟ, ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಬೇಕೆಂಬ ಅಭಿಪ್ರಾಯವನ್ನು ಸಮುದಾಯದ ಮುಖಂಡರು ವ್ಯಕ್ತಪಡಿಸಿದ್ದಾರೆ. ಈ ಕುರಿತು ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಜಮೀರ್ ಅಹಮದ್ ವಿರುದ್ಧ ಟೀಕೆ
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ನಿರಾಕರಿಸಿರುವ ಸಚಿವ ಜಮೀರ್ ಅಹಮದ್ ಅವರ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ ಅವರು, ಸಚಿವರು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಜಿಲ್ಲೆಗೆ ತೆರಳಿ ತ್ರಿವರ್ಣ ಧ್ವಜಾರೋಹಣ ಮಾಡುವ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು ಎಂದು ಹೇಳಿದರು.
ಪಕ್ಷ ಸಂಘಟನೆ ಹಾಗೂ ಉಪಚುನಾವಣೆ ಎದುರಿಸುವ ಕಾರಣ ನೀಡಿ ಉಸ್ತುವಾರಿ ಸಚಿವ ಸ್ಥಾನ ಬೇಡ ಎಂದು ಜಮೀರ್ ಅಹಮದ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಸರಿಯಲ್ಲ ಎಂದು ಅವರು ಟೀಕಿಸಿದರು.
ತ್ರಿವರ್ಣ ಧ್ವಜಾರೋಹಣ ಸಚಿವರ ಕರ್ತವ್ಯ..
ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡುವುದು ಕರ್ತವ್ಯ. ಅದು ವೈಯಕ್ತಿಕ ಆಯ್ಕೆಯ ವಿಷಯವಲ್ಲ ಎಂದು ಹೇಳಿದರು. ಪಕ್ಷ ಸಂಘಟನೆ ಮಾಡಬೇಕು, ಉಪಚುನಾವಣೆ ಎದುರಿಸಬೇಕು ಎಂಬ ಕಾರಣ ನೀಡಿ ಸರ್ಕಾರಿ ಜವಾಬ್ದಾರಿಯಿಂದ ಹಿಂದೆ ಸರಿಯುವುದು ಸರಿಯಲ್ಲ. ಲಾಭ ಬೇಕು, ಆದರೆ ಹೊಣೆಗಾರಿಕೆ ಬೇಡ ಎಂಬ ಮನೋಭಾವ ಜನಪ್ರತಿನಿಧಿಗಳಿಗೆ ಇರಬಾರದು ಎಂದು ಅವರು ಟೀಕಿಸಿದರು.
ಜಮೀರ್ ಅಹಮದ್ ಅವರು ಉಸ್ತುವಾರಿ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ನೀಡಿರುವ ಪತ್ರವು ಆ ಸ್ಥಾನಕ್ಕೆ ಹಾಗೂ ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿದಂತಾಗಿದೆ ಎಂದು ಬಿ.ವೈ. ವಿಜಯೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದರು.


