2023-24ನೇ ಸಾಲಿನ ಪೂರಕ ಅಂದಾಜುಗಳು (ಒಂದನೇ ಕಂತು) ಕುರಿತಂತೆ ವಿಧಾನ ಪರಿಷತ್ತಿನಲ್ಲಿ ಮುಖ್ಯಮಂತ್ರಿಯವರು ಮಂಡಿಸಿದ 3542 ಕೋಟಿ ರೂ. ಗಳ ಪೂರಕ ಅಂದಾಜುಗಳ ಒಂದನೇ ಕಂತಿಗೆ ಅನುಮೋದನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, “ಈ ಪೂರಕ ಅಂದಾಜಿನಲ್ಲಿ ರಾಜ್ಯದ ಆರ್ಥಿಕ ಪ್ರಗತಿ ಮತ್ತು ಸಂಪನ್ಮೂಲ ಸೃಜನೆಗೆ ಒತ್ತು ನೀಡುವ ದೃಷ್ಟಿಯಿಂದ 915 ಕೋಟಿ ರೂ. ಗಳನ್ನು ಬಂಡವಾಳ ವೆಚ್ಚಕ್ಕೆ ಒದಗಿಸಲಾಗಿದೆ” ಎಂದು ತಿಳಿಸಿದರು.
“2023-24 ನೇ ಸಾಲಿನ ಆಯವ್ಯಯದಲ್ಲಿ ಒಟ್ಟು ಅಭಿಯಾಚನೆ ಮಾಡಿದ ಮೊತ್ತ 3,41,321 ಕೋಟಿ ರೂ. ಗಳಲ್ಲಿ ಪೂರಕ ಅಂದಾಜಿನ ಮೊದಲನೇ ಕಂತಿನಲ್ಲಿ ಒದಗಿಸಿದ ಒಟ್ಟು ಮೊತ್ತ 3,542 ಕೋಟಿ ರೂ.ಗಳಾಗಿದ್ದು, ಇದು ಒಟ್ಟು ಅಭಿಯಾಚನೆ ಮಾಡಿದ ಮೊತ್ತದ ಶೇ.1 ರಷ್ಟಾಗಿದೆ” ಎಂದರು.
“ಇದರಲ್ಲಿ ರಾಜಸ್ವ ಖಾತೆಯಲ್ಲಿ 2677 ಕೋಟಿ ರೂ.ಗಳು ಮತ್ತು ಬಂಡವಾಳ ಖಾತೆಯಲ್ಲಿ 915 ಕೋಟಿ ರೂ.ಗಳಾಗಿದೆ. ಈ ಹೆಚ್ಚುವರಿ ಅನುದಾನದಲ್ಲಿ ಕೇಂದ್ರ ಸರ್ಕಾರದ ಸ್ವೀಕೃತಿಗಳಿಂದ 684 ಕೋಟಿ ರೂ. ಗಳು ಮತ್ತು ರಿಸರ್ವ್ ಫಂಡ್ ಠೇವಣಿಗಳಿಂದ 327 ಕೋಟಿ ರೂ. ಗಳನ್ನು ಭರಿಸಲಾಗುವುದು. ಆದ್ದರಿಂದ ನಿವ್ವಳ ಹೊರಹೋಗುವ ಮೊತ್ತವು 2531 ಕೋಟಿ ರೂ. ಗಳು ಮಾತ್ರವಾಗಿದೆ” ಎಂದು ಹೇಳಿದರು.
“ಈ ಮೊತ್ತವನ್ನು ಸ್ವಂತ ರಾಜಸ್ವ ಸ್ವೀಕೃತಿಗಳಿಂದ, ಕೇಂದ್ರ ಸರ್ಕಾರದಿಂದ ಸ್ವೀಕೃತವಾಗುವ ತೆರಿಗೆ ಪಾಲಿನ ಹೆಚ್ಚಳ, ಭಾರತ ಸರ್ಕಾರದ ವಿಶೇಷ ಬಂಡವಾಳ ಸಹಾಯ ಯೋಜನೆ ಮತ್ತು ಅಗತ್ಯವಿದ್ದಲ್ಲಿ ವೆಚ್ಚದ ಮರು ಪ್ರಾಧಾನ್ಯತೆ ಮತ್ತು ವೆಚ್ಚದಲ್ಲಿ ಸಂಭವನೀಯ ಉಳಿತಾಯದ ಮೂಲಕ ಭರಿಸಲಾಗುವುದು” ಎಂದು ವಿವರಿಸಿದರು.
“ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆಗೆ ಎಸ್‍ಸಿಎಸ್‍ಪಿ ಟಿಎಸ್‍ಪಿ ಹಣದಲ್ಲಿ 390 ಕೋಟಿ ರೂ. ಗಳು ಟಿಎಸ್ಪಿ ನಲ್ಲಿ 118 ಒಟ್ಟು ವಸತಿಶಾಲಾ ಕಟ್ಟಡ ನಿರ್ಮಾಣ-ನಿರ್ವಹಣೆಗೆ 508 ಕೋಟಿ ಸಮಾಜ ಕಲ್ಯಾಣಕ್ಕೆ ಕೊಡಲಾಗಿದೆ. ರಾಜ್ಯ ವಿಪತ್ತು ಪರಿಹಾರ ನಿಧಿ 502 ಕೋಟಿ , ಸಮಗ್ರ ಶಿಶು ಆರೋಗ್ಯ ಯೋಜನೆಗೆ 310 ಕೋಟಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ 297 ಕೋಟಿ ರೂ. , ಐಸಿಡಿಎಸ ಕೋಶಕ್ಕೆ 284 ಕೋಟಿ, ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ ಸಾಲವಾಗಿ 229 ಕೊಟಿ ರೂ. ,ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕ್ಷೇಮ ಕೇಂದ್ರವಾಗಿ ಪರಿವರ್ತನೆಗೆ 180 ಕೋಟಿ, ನಬಾರ್ಡ್ ರಸ್ತೆ ಕಾಮಗಾರಿಗೆ 150 ಕೋಟಿ ರೂ., ಮಕ್ಕಳು ಹದಿಹರೆಯದವರ ಗ್ರಂಥಾಲಯ ಯೋಜನೆಗೆ 132 ಕೋಟಿ ರೂ. , ಕೃಷಿ ಭಾಗ್ಯಕ್ಕೆ 100 ಕೋಟಿ. ಕೇಂದ್ರ ಪುರಸ್ಕೃತ ಯೋಜನೆಯಡಿ 74 ಕೋಟಿ ಕೇಂದ್ರ ಸರ್ಕಾರದಿಂದ ಬರಬೇಕಾಗಿದೆ. 3452 ಕೋಟಿ ರೂ.ಗಳ ಪೂರಕ ಬಜೆಟ್ ಗೆ ಅನುಮೋದನೆ ನೀಡಬೇಕೆಂದು” ಮನವಿ ಮಾಡಿದರು.