ಬೆಳಗಾವಿ: ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಕಂಪನಿ ಹೆಸರಲ್ಲಿ ಭೂಮಿ ಪಡೆದು ರಿಯಲ್ ಎಸ್ಟೇಟ್ ವ್ಯವಹಾರ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಡೂರಿನ ರೈತ ನಿಯೋಗಕ್ಕೆ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕುಡುತಿನಿಯಲ್ಲಿ ಅರ್ಸೆಲರ್ ಮಿತ್ತಲ್ ಇಂಡಿಯಾ ಲಿ,; ಉತ್ತಮ್ ಗಾಲ್ವಾ ಫೆರೋಸ್ ಕಂಪನಿ ಲಿ. ಹಾಗೂ ಮೆ. ಕರ್ನಾಟಕ ವಿಜಯನಗರ ಸ್ಟೀಲ್ಸ್ ಲಿಮಿಟೆಡ್ ಕಾರ್ಖಾನೆಗಳನ್ನು ಪ್ರಾರಂಭಿಸುವ ಕುರಿತು ಸಂಡೂರು ಶಾಸಕ ಈ.ತುಕಾರಾಮ್ ನೇತೃತ್ವದ ನಿಯೋಗದ ಜತೆ ಸಭೆ ನಡೆಸಿದ ಬಳಿಕ ತಿಳಿಸಿದರು.
“ಈ ಉದ್ದೇಶಿತ ಕಾರ್ಖಾನೆಗಳಿಗಾಗಿ ಭೂಸ್ವಾಧೀನ ಸಂದರ್ಭದಲ್ಲಿ ದರ ನಿಗದಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯು ಅನ್ಯಾಯವೆಸಗಿದೆ ಎಂಬ ರೈತರ ಆರೋಪದ ಕುರಿತಂತೆ ಪರಿಶೀಲಿಸಿ, ಸಮಸ್ಯೆ ಬಗೆಹರಿಸುವುದಾಗಿ” ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಸಭೆಯಲ್ಲೇ ಭರವಸೆ ನೀಡಿದರು.
“ಅರ್ಸೆಲರ್ ಮಿತ್ತಲ್ ಕಾರ್ಖಾನೆಗಾಗಿ ನಡೆಸಿರುವ ಭೂಸ್ವಾಧೀನ ಕುರಿತಂತೆ, ರೈತರಿಗೆ ನೀಡಿರುವ ಪರಿಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ತೀರ್ಪಿನ ಬಗ್ಗೆ ಅಡ್ವೊಕೇಟ್ ಜನರಲ್ ಅವರ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು” ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಭೆಯಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ನಾಗೇಂದ್ರ, ಸಂಡೂರು ಶಾಸಕ ಇ.ತುಕಾರಾಮ್, ಜಿಲ್ಲೆಯ ಶಾಸಕರುಗಳಾದ ಕಂಪ್ಲಿ ಗಣೇಶ್, ನಾ.ರಾ.ಭರತ್ ರೆಡ್ಡಿ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕಾರ್ಯದರ್ಶಿ ಡಾ.ಕೆ.ವಿ. ತ್ರಿಲೋಕಚಂದ್ರ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು, ಭೂಮಿ ಕಳೆದುಕೊಂಡ ರೈತ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.