ಚಿಕ್ಕಮಗಳೂರು: ಮದುವೆಯಾದ ಒಂದು ತಿಂಗಳಿಗೇ ಪತ್ನಿ ಬಿಟ್ಟು ಹೋಗಿದ್ದರಿಂದ ನೊಂದ ರಾಷ್ಟ್ರೀಯ ಕಬಡ್ಡಿ ಆಟಗಾರರೊಬ್ಬರು ನೇಣಿಗೆ ಶರಣಾಗಿರುವ ದಾರುಣ ಘಟನೆ ನಗರದ ಹೊರವಲಯದ ತೇಗೂರು ಗ್ರಾಮದಲ್ಲಿ ನಡೆದಿದೆ.
ತೇಗೂರು ಗ್ರಾಮದ ವಿನೋದ್ ರಾಜ್ ಅರಸ್ ಆತ್ಮಹತ್ಯೆಗೆ ಶರಣಾದವರು. ಮದುವೆಯಾದ ಒಂದೇ ತಿಂಗಳಿಗೆ ಪತ್ನಿ ಬಿಟ್ಟಹೋದ ಹಿನ್ನೆಲೆಯಲ್ಲಿ ವಿನೋದ್ ರಾಜ್ ನೊಂದು ಫೆ.2 ರಂದು ಆತ್ಮಹತ್ಯೆಗೆ ಯತ್ನಿಸಿದ ವಿನೋದ್ ರಾಜ್ ಅರಸ್‌ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ವಿನೋದ್ ರಾಜ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಎರಡು ವರ್ಷಗಳ ಕಾಲ ಪ್ರೀತಿಸಿದ್ದ ವಿನೋದ್ ರಾಜ್ 2023ರ ಡಿ.10 ರಂದು ಮದುವೆಯಾಗಿದ್ದರು. ಆದರೆ, ಡಿ.31ಕ್ಕೆ ಪತಿ ಬೇಡ ಎಂದು ಪತ್ನಿ ಬಿಟ್ಟು ಹೋಗಿದ್ದಳು. ಪ್ರೇಮ ವಿವಾಹವು ಡಿ.31 ನಂತರ ಮಹಿಳಾ ಪೊಲೀಸ್ ಠಾಣಾ ಮೆಟ್ಟೀಲೇರಿತ್ತು. ದಾಂಪತ್ಯದಲ್ಲಿ ಕಲಹ ಉಂಟಾಗಿತ್ತು ಎನ್ನಲಾಗಿದೆ.