Homeಕರ್ನಾಟಕಆದಿವಾಸಿಗಳ ಕಲ್ಯಾಣಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ: ಸಚಿವ ಸಂಪುಟ ಒಪ್ಪಿಗೆ

ಆದಿವಾಸಿಗಳ ಕಲ್ಯಾಣಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ: ಸಚಿವ ಸಂಪುಟ ಒಪ್ಪಿಗೆ

ರಾಜ್ಯದ ಆದಿವಾಸಿ ಹಾಗೂ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರಿಶಿಷ್ಟ ಪಂಗಡಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪ್ರತ್ಯೇಕವಾಗಿ ‘ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ’ ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ನಿಗಮದ ಸ್ಥಾಪನೆಗೆ ₹33.36 ಕೋಟಿ ಅನುದಾನ ಅಗತ್ಯವಿದ್ದು, ಈ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ನಿಗದಿಪಡಿಸಿರುವ ಅನುದಾನದ ಮಿತಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಈಗಾಗಲೇ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕರ್ನಾಟಕ ಮೇದಾರ ಅಭಿವೃದ್ಧಿ ನಿಗಮ ಹಾಗೂ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮಗಳು ಕಾರ್ಯನಿರ್ವಹಿಸುತ್ತಿವೆ. ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ ಸಮುದಾಯಗಳ ವೃತ್ತಿ ಮತ್ತು ವಾಸಸ್ಥಳದ ಆಧಾರದಲ್ಲಿ ವಿವಿಧ ನಿಗಮಗಳ ವ್ಯಾಪ್ತಿಯನ್ನು ಗುರುತಿಸಲಾಗಿದೆ.

ಆದರೆ, ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುವ ಇರುಳ, ಸೋಲಿಗ, ಜೇನುಕುರುಬ, ಕಾಡುಕುರುಬ, ಕುಡಿಯ, ಸಿದ್ದಿ ಸೇರಿದಂತೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸುವ ಅಗತ್ಯವನ್ನು ಸರ್ಕಾರ ಗುರುತಿಸಿದೆ.

ಈ ಹಿನ್ನೆಲೆಯಲ್ಲಿ 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಘೋಷಣೆಯಂತೆ ನೂತನ ನಿಗಮ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.

ಸಚಿವ ಸಂಪುಟದ ಮುಂದೆ ಮಂಡಿಸಲಾದ ಪ್ರಸ್ತಾವನೆಯ ಪ್ರಕಾರ, ಹೊಸ ನಿಗಮದ ವ್ಯಾಪ್ತಿಗೆ ಒಟ್ಟು 33 ಪರಿಶಿಷ್ಟ ಪಂಗಡಗಳ ಸಮುದಾಯಗಳನ್ನು ಸೇರಿಸಲು ಉದ್ದೇಶಿಸಲಾಗಿದೆ. ಈ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಗೆ ವಿಶೇಷ ಯೋಜನೆಗಳನ್ನು ರೂಪಿಸುವುದು ನಿಗಮದ ಮುಖ್ಯ ಉದ್ದೇಶವಾಗಿದೆ.

ಆರ್ಥಿಕ ಸಬಲೀಕರಣ, ಉದ್ಯಮಶೀಲತೆಗೆ ಪ್ರೋತ್ಸಾಹ, ಕೌಶಲಾಭಿವೃದ್ಧಿ, ಮಾರುಕಟ್ಟೆ ಬೆಂಬಲ ಮತ್ತು ಜೀವನೋಪಾಯ ವೃದ್ಧಿಗೆ ನಿಗಮದ ಮೂಲಕ ಒತ್ತು ನೀಡಲು ಉದ್ದೇಶಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments