ಕಲಬುರಗಿ ನಗರದ ವಿದ್ಯುತ್ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ಉದ್ದೇಶದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಭೂಗತ ವಿದ್ಯುತ್ ಸಂಪರ್ಕ ಜಾಲವನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಗರದಾದ್ಯಂತ ಹಂತ ಹಂತವಾಗಿ ಭೂಗತ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಮೂಲಕ ಮೇಲ್ಮಟ್ಟದ ವಿದ್ಯುತ್ ಕಂಬಗಳು ಮತ್ತು ಅವುಗಳಿಗೆ ಸಂಬಂಧಿಸಿದ ಅಡೆತಡೆಗಳನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಯು ವಿದ್ಯುತ್ ಅವಘಡಗಳನ್ನು ನಿಯಂತ್ರಿಸಲು, ನಗರದ ಸೌಂದರ್ಯವನ್ನು ಹೆಚ್ಚಿಸಲು ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ನೆರವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಯೋಜನೆಯ ರೂಪುರೇಷೆ ಮತ್ತು ಅನುಷ್ಠಾನದ ಸಾಧ್ಯತೆಗಳ ಕುರಿತು ಜೆಸ್ಕಾಂ ಅಧ್ಯಕ್ಷರಾದ ಪ್ರವೀಣ್ ಪಾಟೀಲ್ ಹಾಗೂ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು.
ಪ್ರಸ್ತುತ ವಿದ್ಯುತ್ ಕಂಬಗಳು ಮತ್ತು ಮೇಲ್ಮಟ್ಟದ ವಿದ್ಯುತ್ ತಂತಿಗಳಿಂದ ಉಂಟಾಗಬಹುದಾದ ಅಪಾಯಗಳನ್ನು ಕಡಿಮೆಗೊಳಿಸುವುದು, ರಸ್ತೆಗಳಲ್ಲಿ ಸಂಚಾರಕ್ಕೆ ಎದುರಾಗುವ ಅಡೆತಡೆಗಳನ್ನು ನಿವಾರಿಸುವುದು ಹಾಗೂ ನಗರ ಮೂಲಸೌಕರ್ಯವನ್ನು ವ್ಯವಸ್ಥಿತಗೊಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.
ಭೂಗತ ವಿದ್ಯುತ್ ಸಂಪರ್ಕ ವ್ಯವಸ್ಥೆಯ ಅನುಷ್ಠಾನದಿಂದ ವಿದ್ಯುತ್ ವಿತರಣಾ ಮೂಲಸೌಕರ್ಯವನ್ನು ಹೆಚ್ಚು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲು ಹಾಗೂ ಕಲಬುರಗಿ ನಗರದ ಬೆಳವಣಿಗೆಗೆ ಅನುಗುಣವಾಗಿ ಆಧುನಿಕ ಸೌಲಭ್ಯಗಳನ್ನು ಒದಗಿಸಲು ಅವಕಾಶ ದೊರೆಯಲಿದೆ.
ಯೋಜನೆಯ ರೂಪುರೇಷೆ, ತಾಂತ್ರಿಕ ಸಾಧ್ಯತೆಗಳು ಮತ್ತು ಅನುಷ್ಠಾನದ ಮುಂದಿನ ಕ್ರಮಗಳ ಕುರಿತು ಜೆಸ್ಕಾಂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕಲಬುರಗಿ ನಗರದ ಮೂಲಸೌಕರ್ಯವನ್ನು ಆಧುನೀಕರಿಸಿ, ಸುರಕ್ಷಿತ ವಿದ್ಯುತ್ ಸಂಪರ್ಕ ವ್ಯವಸ್ಥೆ ಹಾಗೂ ಸುಗಮ ಸಂಚಾರಕ್ಕೆ ಪೂರಕವಾದ ನಗರ ಪರಿಸರವನ್ನು ರೂಪಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಹೆಜ್ಜೆಯಾಗಲಿದೆ ಎಂದರು.


