Homeಕರ್ನಾಟಕಹಿಂದೂ ವಿವಾಹ ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟದಲ್ಲಿ ಅನುಮೋದನೆ

ಹಿಂದೂ ವಿವಾಹ ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟದಲ್ಲಿ ಅನುಮೋದನೆ

ಹಿಂದೂ ವಿವಾಹ ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟ ಅನುಮೋದಿಸಿದೆ. ನೋಂದಣಿ ವಿವಾಹ ಸರಳೀಕರಣಕ್ಕೆ ರಾಜ್ಯ ಸರ್ಕಾರದ ಸಮ್ಮತಿ ನೀಡಿದ್ದು, ಹಿಂದೂ ವಿವಾಹ ನೊಂದಣಿ ಕಾಯ್ದೆ 2024ಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ಹೇಳಿದರು.

ವಿಧಾನಸೌಧದ ಸಚಿವ ಸಂಪುಟ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಕರೆದು ಮಾತನಾಡಿದರು.

“ಕಚೇರಿಗಳಲ್ಲಿ ಮೊದಲು ವಿವಾಹ ನೊಂದಣಿ ಆಗುತ್ತಿದ್ದವು. ಈಗ ಆನ್ಲೈನ್ ಮೂಲಕ ನೊಂದಣಿಗೆ ಅವಕಾಶವಿದೆ. ಗ್ರಾಮ 1, ಕಾವೇರಿ 2, ಬಾಪೂಜಿ ಸೇವಾಕೇಂದ್ರಗಳಲ್ಲಿ ನೊಂದಣಿ ಮಾಡಬಹುದು. ಇನ್ಮೇಲೆ ಸಬ್ ರಿಜಿಸ್ಟರ್ ಕಚೇರಿಗೆ ಅಲೆಯುವಂತಿಲ್ಲ” ಎಂದರು.

ಆಧುನಿಕ ಅನಿಲ ವಿದ್ಯುತ್ ಚಿತಾಗಾರ

“10 ಮಹಾನಗರ ಪಾಲಿಕೆಗಳಲ್ಲಿ, 24 ನಗರಸಭೆ ವ್ಯಾಪ್ತಿಯಲ್ಲಿ 34 ಆಧುನಿಕ ಅನಿಲ ವಿದ್ಯುತ್ ಚಿತಾಗಾರ ಸ್ಥಾಪನೆಗೆ 36 ಕೋಟಿ ರೂ.ಗೆ ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ. ಹಾಸನ ವೈದ್ಯಕೀಯ ಕಾಲೇಜಿನಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಮೊತ್ತ 142 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ದೊರಕಿದೆ” ಎಂದು ಹೇಳಿದರು.

“ರಾಯಚೂರು ವಿವಿ ಆವರಣದಲ್ಲಿ ಮಾನವ ಜಿನೋಮ್ ಸಂಸ್ಥೆ ಸ್ಥಾಪನೆಗೆ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. 104 ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ 26 ಕೋಟಿ ರೂ. ಅನುಮೋದನೆ ಮತ್ತು ಅಸ್ತಿತ್ವದಲ್ಲಿರುವ 82 ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೂ ಸಂಪುಟ ಒಪ್ಪಿಗೆ ಸೂಚಿಸಲಾಗಿದೆ” ಎಂದು ತಿಳಿಸಿದರು.

ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 158 ಕೋಟಿ

“ರಾಯಚೂರು ತಾಲೂಕಿನ ಚಿಕ್ಕ ಮಂಚಾಲಿ ಗ್ರಾಮದ ಹತ್ತಿರ ತುಂಗಭದ್ರ ನದಿಗೆ ಅಡ್ಡಲಾಗಿ ಮಂತ್ರಾಲಯದ ಬಳಿ ಆಂಧ್ರದ ಅನುಮತಿ ಪಡೆದು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 158 ಕೋಟಿ ರೂ. ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ” ಎಂದರು.

“ಜಲ ಸಂಪನ್ಮೂಲ ಇಲಾಖೆಯ ಅಡಿ ಬೆಳಗಾವಿಯ ಹುಚ್ಚಗಾಂವ್, ಬಸ್ತವಾಡಿಯ 20 ಕೆರೆಗಳ ತುಂಬಿಸುವ 250 ಕೋಟಿ ರೂ. ವೆಚ್ಚದ ಯೋಜನೆ ಮತ್ತು ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ 61 ಕೆರೆ ತುಂಬಿಸುವ ಯೋಜನೆ 519 ಕೋಟಿ ರೂ. ಅಂದಾಜಿಗೆ ಅನುಮೋದಿಸಲಾಗಿದೆ. ಘಟಪ್ರಭಾ ನದಿಯಿಂದ ನೀರು ಪೂರೈಕೆ ಮಾಡಲಾಗುವುದು”ಎಂದು ಹೇಳಿದರು.

“ಚಿಕ್ಕಮಗಳೂರು ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಹೊಸ ವೈದ್ಯಕೀಯ ಕಾಲೇಜು ಹಾಸ್ಟೆಲ್ ಬೋಧಕ ಬೋಧಕೇತರ ಸಿಬ್ಬಂದಿ ವಸತಿ ನಿಲಯ, ಎಲ್ಲ ಕಟ್ಟಡ ಕಾಮಗಾರಿಗಳ ನಿರ್ಮಾಣಕ್ಕೆ 455 ಕೋಟಿ ರೂ. ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ” ಎಂದು ಸಚಿವರು ವಿವರಿಸಿದರು.

“ರಾಜ್ಯದ ಆರು ಜಿಲ್ಲೆಗಳಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹಣೆಗೆ ಶೈತ್ಯಾಗಾರ ನಿರ್ಮಾಣಕ್ಕೆ, ಮಾಜಿ ಎಂಎಲ್ಸಿ ಸಿಎಂ ನಿಂಗಪ್ಪಗೆ ಹಂಚಿಕೆಯಾದ ಜಿ ಕ್ಯಾಟಗರಿ ನಿವೇಶನ ಮಾರಾಟಕ್ಕೆ, ಪೊಲೀಸ್ ಇಲಾಖೆಯ ಪ್ರಧಾನ ಕಚೇರಿ ಸೇರಿದಂತೆ ಇತರ ಘಟಕಗಳಲ್ಲಿ ವಾಹನಗಳಿಗೆ ಪೆಟ್ರೋ ಕಾರ್ಡ್ ಮೂಲಕ ಇಂಧನ ಮತ್ತು ತೈಲವನ್ನು ಮೂರು ವರ್ಷಗಳ ಅವಧಿಗೆ 120 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಖರೀದಿಸಲು ಅನುಮತಿ ನೀಡಿದೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments