ಗೃಹಜ್ಯೋತಿ ಯೋಜನೆಯಡಿ ಮಾಸಿಕ 48 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವ 70 ಲಕ್ಷ ಗ್ರಾಹಕರಿಗೆ ಇನ್ನು ಮುಂದೆ ಮಾಸಿಕ 10% ಹೆಚ್ಚುವರಿ ವಿದ್ಯುತ್ ಬದಲಾಗಿ 10 ಯುನಿಟ್ ಹೆಚ್ಚುವರಿ ಉಚಿತ ವಿದ್ಯುತ್ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಪ್ರತಿ ಮನೆಗೆ ಭರವಸೆಯ ಬೆಳಕು ಹರಿಸುವ ಸರ್ಕಾರದ ಕಾರ್ಯಕ್ರಮ ಈಗ ಇನ್ನಷ್ಟು ಜನಸ್ನೇಹಿಯಾಗಿದೆ” ಎಂದು ಹೇಳಿದ್ದಾರೆ.
ಗ್ರಾಹಕರಿಗೆ ಮಾಸಿಕ ಹೆಚ್ಚುವರಿ 10 ಯೂನಿಟ್ ಒದಗಿಸಲು ಸಂಪುಟ ಸಭೆ ಸಮ್ಮತಿ ನೀಡಿತ್ತು. ಈ ಸಂಬಂಧ ಕಳೆದ ಜೂ. 5ರಂದು ಹೊರಡಿಸಿದ್ದ ಆದೇಶ ಮಾರ್ಪಡಿಸಲು ತೀರ್ಮಾನಿಸಲಾಗಿದೆ. ಈ ತಿಂಗಳಿನಿಂದ ಇದು ಜಾರಿಗೆ ಬರಲಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ 69.73 ಲಕ್ಷ ಕುಟುಂಬಗಳು 48 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುತ್ತಿವೆ. ಹೆಚ್ಚುವರಿ 10 ಯೂನಿಟ್ ಒದಗಿಸುವ ನಿರ್ಧಾರದಿಂದ 33 ಕೋಟಿ ರೂ. ವೆಚ್ಚವಾಗುವ ಅಂದಾಜಿದೆ. ರಾಜ್ಯದಲ್ಲಿ ಗೃಹ ಬಳಕೆ ಗ್ರಾಹಕರ ಸರಾಸರಿ ಬಳಕೆ 53 ಯೂನಿಟ್‌ನಷ್ಟಿದ್ದು, ಸರಾಸರಿ ಶೇ. 10ರಷ್ಟು ಉಚಿತ ವಿದ್ಯುತ್ ಸೇರಿದಂತೆ ಒಟ್ಟು 58 ಯೂನಿಟ್‌ವರೆಗೆ ಉಚಿತವಾಗಿ ಬಳಸಲು ಅವಕಾಶವಿದೆ.