ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ‘ಸ್ಟೊಡೆಂಟ್ ಫೆಡೆರೇಷನ್ ಆಫ್ ಇಂಡಿಯಾ’ದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ ಬೆನ್ನಲ್ಲೇ ಝಡ್–ಪ್ಲಸ್ ಶ್ರೇಣಿಯ ಭದ್ರತಾ ವ್ಯವಸ್ಥೆ ಒದಗಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ.
ಈ ಕುರಿತು ಕೇರಳ ರಾಜಭವನ ಶನಿವಾರ ಮಾಹಿತಿ ಹಂಚಿಕೊಂಡಿದೆ. ಕೊಲ್ಲಂನ ನಿಲಮೇಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದಕ್ಕೆ ಬಂದಿದ್ದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ 50ಕ್ಕೂ ಹೆಚ್ಚು ಮಂದಿ ಎಸ್‌ಎಫ್ಐ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿ ಗೋ ಬ್ಯಾಕ್ ಎಂದು ಧಿಕ್ಕಾರ ಕೂಗಿದರು.
ಇದರಿಂದ ಸಿಟ್ಟಿಗೆದ್ದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಾಹನದಿಂದ ಇಳಿದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಎಸ್ಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿಲ್ಲ, ನನ್ನ ಮೇಲೆ ಹಲ್ಲೆಗೆ ಮುಂದಾದ ಹಲ್ಲೆಕೋರರನ್ನು ಏಕೆ ಬಂಧಿಸಿಲ್ಲ ಎಂದು ಸಿಟ್ಟಿನಿಂದಲೇ ಪೊಲೀಸರನ್ನು ಪ್ರಶ್ನಿಸಿದರು.
ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಎಸ್‌ಎಫ್‌ಐ ಕಾರ್ಯಕರ್ತರನ್ನು ಬಂಧಿಸುವಂತೆ ಒತ್ತಾಯಿಸಿ ಆರಿಫ್ ಅವರು ಕಾರಿನಿಂದ ಇಳಿದು ರಸ್ತೆಯ ಬದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದರು. ಈ ನಡುವೆ ಘಟನಾ ಸ್ಥಳದಲ್ಲಿ ಜನರು ಜಮಾಯಿಸಿದ್ದರಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು, ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.
ಘಟನೆಯಲ್ಲಿ 12 ಮಂದಿಯನ್ನು ಬಂಧಿಸಲಾಗಿದೆ ಎಂದು ಗ್ರಾಮಾಂತರ ಎಸ್ಪಿ ರಾಜ್ಯಪಾಲರಿಗೆ ಮಾಹಿತಿ ನೀಡಿದರು. ಆದರೆ ಎಲ್ಲ 50 ಮಂದಿಯನ್ನು ಬಂಧಿಸಬೇಕು ಎಂದು ರಾಜ್ಯಪಾಲರು ಎಸ್‌ಪಿಗೆ ಸೂಚಿಸಿದ್ದಾರೆ.
ಹಿಂದೂ ಬಲಪಂಥೀಯ ಬೆಂಬಲಿಗರನ್ನು ತಮ್ಮ ಸೆನೆಟ್‌ಗಳಿಗೆ ನೇಮಿಸುವ ಮೂಲಕ ರಾಜ್ಯಪಾಲರು ವಿಶ್ವವಿದ್ಯಾಲಯಗಳನ್ನು ಕೇಸರಿಮಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಪಿಐ(ಎಂ) ಆರೋಪಿಸಿದೆ.