ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕಿನ ರಕ್ಷಣೆಗಾಗಿ ‘ಮತ ಉಳಿಸಿ – ದೇಶ ಉಳಿಸಿ’ ಘೋಷಣೆಯಡಿ ಕರ್ನಾಟಕದಲ್ಲಿ ಸಂಘಟಿತ ಹೋರಾಟ ರೂಪಿಸಲು ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳು ನಿರ್ಧರಿಸಿವೆ. ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ನಗರದ ಶಾಸಕರ ಭವನದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಸಭೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ, ಅರ್ಹ ಮತದಾರರ ಹೆಸರುಗಳ ಕೈಬಿಡುವಿಕೆ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಮತದಾನದ ಹಕ್ಕು ಪ್ರಜಾಪ್ರಭುತ್ವದ ಅಡಿಪಾಯ. ಯಾವುದೇ ಕಾರಣಕ್ಕೂ ನೈಜ ಹಾಗೂ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಎಸ್ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ದೇಶಾದ್ಯಂತ ಸುಮಾರು 13 ಕೋಟಿ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ, ಅರ್ಹ ಮತದಾರರ ಹೆಸರುಗಳನ್ನು ಮರುಸೇರ್ಪಡೆಗೊಳಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬುದು ಇಂಡಿಯಾ ಮೈತ್ರಿಕೂಟದ ಸ್ಪಷ್ಟ ನಿಲುವಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವ ವಿರೋಧಿ ಹಾಗೂ ಫ್ಯಾಸಿಸ್ಟ್ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕಾದ ಚುನಾವಣಾ ಆಯೋಗವು ರಾಜಕೀಯ ಪಕ್ಷವೊಂದರ ಪರವಾಗಿ ನಡೆದುಕೊಳ್ಳುತ್ತಿದೆ. ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನದ ವಿರುದ್ಧ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪ್ರಜಾಸತ್ತಾತ್ಮಕ ಶಕ್ತಿಗಳು ಒಗ್ಗೂಡಿ ಹೋರಾಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಕರ್ನಾಟಕದಲ್ಲಿ ಇಂಡಿಯಾ ಮೈತ್ರಿಕೂಟದ ಸಮನ್ವಯ ಸಮಿತಿ ರಚನೆ
ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟದ ಹೋರಾಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಸಂಘಟಿಸಲು ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್) ಲಿಬರೇಶನ್, ಸಮಾಜವಾದಿ ಪಕ್ಷ ಹಾಗೂ ಫಾರ್ವರ್ಡ್ ಬ್ಲಾಕ್ ಸೇರಿದಂತೆ ಮಿತ್ರಪಕ್ಷಗಳ ಪ್ರತಿನಿಧಿಗಳನ್ನೊಳಗೊಂಡ ಸಮನ್ವಯ ಸಮಿತಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಮಿತಿಯ ಮೂಲಕ ರಾಜ್ಯಾದ್ಯಂತ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿ, ಬೆಂಗಳೂರಿನಿಂದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದವರೆಗೆ ಜನಾಂದೋಲನ ರೂಪಿಸಲು ನಿರ್ಧರಿಸಲಾಯಿತು.
ನವೆಂಬರ್ 1ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಕರ್ನಾಟಕದ ಇಂಡಿಯಾ ಮೈತ್ರಿಕೂಟದ ಎಲ್ಲ ಮಿತ್ರಪಕ್ಷಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದರ ಮುಂದುವರಿದ ಭಾಗವಾಗಿ ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಹೋರಾಟವನ್ನು ವಿಸ್ತರಿಸಲಾಗುವುದು ಎಂದು ಹರಿಪ್ರಸಾದ್ ತಿಳಿಸಿದರು. ಬೆಂಗಳೂರಿನ ಪ್ರತಿಭಟನೆಗೆ ನವೆಂಬರ್ 5ರಂದು ದಿನಾಂಕ ನಿಗದಿಪಡಿಸಿರುವ ಮಾಹಿತಿಯೂ ಲಭ್ಯವಾಗಿದೆ.
ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ನಾಗರಿಕನ ಪ್ರಜಾಸತ್ತಾತ್ಮಕ ಹಕ್ಕು. ನಿರ್ಬಂಧಗಳನ್ನು ವಿಧಿಸುವ ಮೂಲಕ ಜನರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಸಂವಿಧಾನ ಮತ್ತು ಮತಾಧಿಕಾರದ ರಕ್ಷಣೆಗಾಗಿ ನಡೆಯುವ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಇದು ಕೇವಲ ರಾಜಕೀಯ ಪಕ್ಷಗಳ ಹೋರಾಟವಲ್ಲ, ದೇಶದ ಪ್ರಜಾಪ್ರಭುತ್ವದ ಅಸ್ತಿತ್ವ ಹಾಗೂ ನಾಗರಿಕರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ನಡೆಯುವ ಹೋರಾಟ ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಮಿತ್ರಪಕ್ಷಗಳ ಮುಖಂಡರು ಎಸ್ಐಆರ್ ಪ್ರಕ್ರಿಯೆಯ ಪರಿಣಾಮಗಳು, ಮತದಾರರ ಪಟ್ಟಿಯಲ್ಲಿನ ಲೋಪದೋಷಗಳು ಹಾಗೂ ಮುಂದಿನ ಹೋರಾಟದ ಕಾರ್ಯತಂತ್ರದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಮತಾಧಿಕಾರದ ರಕ್ಷಣೆಯ ಹೋರಾಟವನ್ನು ಜನಾಂದೋಲನವಾಗಿ ರೂಪಿಸುವ ಅಗತ್ಯವನ್ನು ಪ್ರತಿಪಾದಿಸಿದರು.
ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು
- ಕರ್ನಾಟಕ ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟದ ಸಮನ್ವಯ ಸಮಿತಿ ರಚನೆ
- ನವೆಂಬರ್ 1 ದೆಹಲಿಯ ರಾಮಲೀಲಾ ಮೈದಾನದಲ್ಲಿ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು.
- ನವೆಂಬರ್ 5ರಂದು ಬೆಂಗಳೂರಿನಲ್ಲಿ ಎಸ್ ಐ ಆರ್ ವಿರೋಧಿಸಿ, ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಬೃಹತ್ ಪ್ರತಿಭಟನಾ ಸಮಾವೇಶ.
ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೆ. ಪ್ರಕಾಶ್, ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಮಂಜಪ್ಪ ಯಾದವ್ ಸೇರಿದಂತೆ ಸಿಪಿಐ(ಎಂಎಲ್) ಲಿಬರೇಶನ್, ಫಾರ್ವರ್ಡ್ ಬ್ಲಾಕ್ ಹಾಗೂ ಇಂಡಿಯಾ ಮೈತ್ರಿಕೂಟದ ವಿವಿಧ ಮಿತ್ರಪಕ್ಷಗಳ ಮುಖಂಡರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು.


