ಬೆಳಗಾವಿ: ಕಾಗವಾಡ ತಾಲ್ಲೂಕಿನ ಬಸವೇಶ್ವರ (ಕೆಂಪವಾಡ) ಏತ ನೀರಾವರಿ ಯೋಜನೆಯನ್ನು 2024ರ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಕಾಗವಾಡ ತಾಲ್ಲೂಕಿನ ಬಸವೇಶ್ವರ ಏತ ನೀರಾವರಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಈ ಸೂಚನೆ ನೀಡಿದರು.
2017ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಪ್ರಸ್ತುತ ಶೇ. 85 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 1067 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
2024 ರ ಫೆಬ್ರುವರಿಯೊಳಗೆ ಎರಡು ಪಂಪ್‌ಗಳನ್ನು ಹಾಗೂ ಇನ್ನೂ ಮೂರು ಪಂಪ್‌ಗಳನ್ನು ಜೂನ್ , 2024ರ ವೇಳೆಗೆ ಅಳವಡಿಸಲಾಗುವುದು. ಸೆಪ್ಟೆಂಬರ್ ಅಂತ್ಯದ ವೇಳೆಗೆ ಇಡೀ ಯೋಜನೆಯನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ತಿಳಿಸಿದರು.
ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾಗವಾಡ ಶಾಸಕ ಭರಮಗೌಡ (ರಾಜು) ಕಾಗೆ, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.