ಕೆಪಿಸಿಸಿ ಕಾರ್ಯದರ್ಶಿಗಳ ನೇಮಕ ಪೂರ್ಣಗೊಂಡಿದೆ ಎಂದು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳು ತಪ್ಪಾಗಿದ್ದು, ಈ ಕುರಿತು ತಿದ್ದುಪಡಿ ಮಾಡಿಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರು ಮನವಿ ಮಾಡಿದ್ದಾರೆ. ಕಾರ್ಯದರ್ಶಿಗಳ ಆಯ್ಕೆ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದ್ದು, ನವೆಂಬರ್ 16ರ ಬಳಿಕ 112 ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆಯ್ಕೆಯಾಗುವ 112 ಕಾರ್ಯದರ್ಶಿಗಳಿಗೆ ತಲಾ ಎರಡು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ವಹಿಸಲಾಗುತ್ತದೆ. ಅವರು ತಮಗೆ ವಹಿಸಲಾದ ಕ್ಷೇತ್ರಗಳಲ್ಲಿ ಒಂದೂವರೆ ವರ್ಷಗಳ ಕಾಲ ಪೂರ್ಣಪ್ರಮಾಣದಲ್ಲಿ ಪಕ್ಷದ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಇವರೊಂದಿಗೆ 112 ಸಂಚಾಲಕರನ್ನೂ (ಕೋಆರ್ಡಿನೇಟರ್) ನೇಮಕ ಮಾಡಲಾಗುತ್ತದೆ.
ಇದಲ್ಲದೆ, ಜಿಲ್ಲಾ ಮಟ್ಟದಲ್ಲಿಯೂ ವಿವಿಧ ಮುಖಂಡರನ್ನು ನೇಮಕ ಮಾಡುವ ಉದ್ದೇಶದಿಂದ ಸಂದರ್ಶನ ಪ್ರಕ್ರಿಯೆ ಮುಂದುವರಿದಿದೆ ಎಂದು ಹರಿಪ್ರಸಾದ್ ಅವರು ಸ್ಪಷ್ಟಪಡಿಸಿದ್ದಾರೆ.
ನಿನ್ನೆಯ ಪತ್ರಿಕಾಗೋಷ್ಠಿಯ ಮಾಧ್ಯಮ ಪ್ರತಿಯಲ್ಲಿ ಕಣ್ತಪ್ಪಿನಿಂದಾಗಿ ಕೆಪಿಸಿಸಿ ಕಾರ್ಯದರ್ಶಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಉಲ್ಲೇಖಿಸಲಾಗಿತ್ತು. ಈ ಅಂಶವನ್ನು ಸರಿಪಡಿಸಿಕೊಳ್ಳುವಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.


