Homeಕರ್ನಾಟಕವಿಶ್ಲೇಷಣೆ | ಮೋದಿಗೆ ಮರ್ಮಾಘಾತ, ರಾಜ್ಯದಲ್ಲಿ ಕಾಂಗ್ರೆಸ್‌-ಬಿಜೆಪಿಗೆ ಮಿಶ್ರ ಫಲ

ವಿಶ್ಲೇಷಣೆ | ಮೋದಿಗೆ ಮರ್ಮಾಘಾತ, ರಾಜ್ಯದಲ್ಲಿ ಕಾಂಗ್ರೆಸ್‌-ಬಿಜೆಪಿಗೆ ಮಿಶ್ರ ಫಲ

ಸದ್ಯದ ಫಲಿತಾಂಶ ಆಧರಿಸಿ ನೋಡುವುದಾದರೆ ಮುಂಬರುವ ದಿನಗಳಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆ ದೇಶ ಮತ್ತು ರಾಜ್ಯದಲ್ಲಿ ನಿರೀಕ್ಷಿಸಬಹುದು. ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಯಾರು ಹಿಡಿಯುತ್ತಾರೆ ಎಂಬುದನ್ನು ನಿತೀಶ್‌ ಕುಮಾರ್‌ ಮತ್ತು ಚಂದ್ರಬಾಬು ನಾಯ್ದು ನಿರ್ಧರಿಸಲಿದ್ದಾರೆ.

400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಬೇಕು ಎಂದು ಕನಸು ಕಂಡಿದ್ದ ನರೇಂದ್ರ ಮೋದಿ ಅವರಿಗೆ ಮತದಾರ ಮರ್ಮಾಘಾತ ನೀಡಿದ್ದಾನೆ.

2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಫಲಿತಾಂಶ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ದೇಶದ ರಾಜಕೀಯ ಭೂಪಟದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಉತ್ತರ ಪ್ರದೇಶದಲ್ಲಿ ಮತದಾರರು ಬಿಜೆಪಿಪಿಗೆ ದೊಡ್ಡ ಪೆಟ್ಟು ಕೊಟ್ಟಿದ್ದಾರೆ. ಹಾಗೆಯೇ ದಕ್ಷಿಣ ಭಾರತದ ತಮಿಳುನಾಡಿನಲ್ಲಿ ನಿರೀಕ್ಷೆಯಂತೆ ಬಿಜೆಪಿ ಆಘಾತ ಅನುಭವಿಸಿದೆ.

ಪಕ್ಷದ ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಜೊತೆ ಮಾಡಿಕೊಂಡ ಮೈತ್ರಿ ಒಡಿಶಾದಲ್ಲಿ ಕೇಳಿ ಬಂದ ಆಡಳಿತ ವಿರೋಧಿ ಅಲೆ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನಲ್ಲಿ ಒಗ್ಗಟ್ಟು ಮೂಡದ ಹಿನ್ನೆಲೆಯಲ್ಲಿ ಬಿಜೆಪಿ ಯಶಸ್ಸು ಗಳಿಸಿರುವುದು ಬಿಟ್ಟರೆ ಒಟ್ಟಾರೆಯಾಗಿ ಈ ಬಾರಿ ಬಿಜೆಪಿ ಸಾಕಷ್ಟು ಕಳೆದುಕೊಂಡಿದೆ.

ಕರ್ನಾಟಕದ ಮಟ್ಟಿಗೆ ಯೋಚಿಸುವುದಾದರೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಮತದಾರರು ಮಿಶ್ರ ಫಲ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ನಡುವೆಯೂ ಮತದಾರರು ಕಾಂಗ್ರೆಸ್‌ಗಿಂತ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದಾರೆ. ಕಾಂಗ್ರೆಸ್‌ 9 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಬಿಜೆಪಿ 17 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಜೆಡಿಎಸ್‌ ಮೂರು ಸ್ಥಾನಗಳ ಪೈಕಿ ಎರಡರಲ್ಲಿ ಗೆದ್ದಿದೆ.

ದಕ್ಷಿಣ ಕರ್ನಾಟಕದ ಸಾಂಪ್ರದಾಯಿಕ ಎದುರಾಳಿಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಈ ಬಾರಿ ಜಿದ್ದಾ ಜಿದ್ದಿಗೆ ಬಿದ್ದವರಂತೆ ಪೈಪೋಟಿ ನಡೆಸಿದವು ಇದರ ಲಾಭ ಸಿಕ್ಕಿದ್ದು ಬಿಜೆಪಿಗೆ.
ಲೋಕಸಭೆ ಚುನಾವಣೆ ಗೆ ಮುನ್ನ ಜೆಡಿಎಸ್, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಸೇರಲಿದೆ ಎಂದು ಹೇಳಲಾಗಿತ್ತು. ಅದಕ್ಕಾಗಿ ಮಾಜಿ ಪ್ರಧಾನಿ ದೇವೇಗೌಡ ನಿರೀಕ್ಷೆಯಲ್ಲಿದ್ದರು. ಆದರೆ, ರಾಜ್ಯ ಕಾಂಗ್ರೆಸ್ ನಾಯಕರು ನೀಡಿದ ಸಲಹೆ ಆಧರಿಸಿ ಇಂಡಿಯಾ ಮೈತ್ರಿಕೂಟದ ನಾಯಕರು ಜೆಡಿಎಸ್ ಅನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈ ಬಗ್ಗೆ ಮೊದಲೇ ಅರಿವಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಇದರ ಪರಿಣಾಮವಾಗಿ ಜೆಡಿಎಸ್ ಎನ್.ಡಿ.ಎ ಮೈತ್ರಿಕೂಟದ ಅಂಗಪಕ್ಷವಾಗಿ ಪರಿಣಮಿಸಿತು.

ಮೈತ್ರಿ ವಿಚಾರದಲ್ಲಿ ಬಿಜೆಪಿ ಅತ್ಯಂತ ಯೋಜಿತ ರೀತಿಯಲ್ಲಿ ಲೆಕ್ಕಾಚಾರ ಹಾಕಿದೆ. ಬೆಂಗಳೂರು ಹೊರತುಪಡಿಸಿ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ ಅಷ್ಟಕಷ್ಟೇ ಇತ್ತು. ಇಲ್ಲೇನಿದ್ದರೂ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ. ಇದನ್ನು ಅರಿತ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಮೂಲಕ ದಕ್ಷಿಣ ಕರ್ನಾಟಕದಲ್ಲಿ ತನ್ನ ಪ್ರಾಬಲ್ಯ ವೃದ್ಧಿಸುವ ಪ್ರಯತ್ನ ನಡೆಸಿತು.

ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಜೆಡಿಎಸ್ ಸ್ವತಃ ತನ್ನ ಶಕ್ತಿಯಿಂದ ಗೆಲುವು ಸಾಧಿಸದೆ ಹೋದರೂ ಮತ್ತೊಂದು ಪಕ್ಷದ ಸೋಲು ಗೆಲುವಿನ ಮೇಲೆ ಪರಿಣಾಮ ಬೀರುವಷ್ಟು ಶಕ್ತಿಯನ್ನು ಹೊಂದಿದೆ. ಈಗ ಬಂದಿರುವ ಫಲಿತಾಂಶ ಇದನ್ನು ಸಾಬೀತುಪಡಿಸಿದೆ.

ಜೆಡಿಎಸ್ ತನ್ನ ಭದ್ರಕೋಟೆ ಮಂಡ್ಯ ಮತ್ತು ಕೋಲಾರದಲ್ಲಿ ಯಶಸ್ಸು ಗಳಿಸಿದೆ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ತಮ್ಮದೇ ಕುಟುಂಬ ಸದಸ್ಯ ಡಾ. ಮಂಜುನಾಥ್ ಅವರನ್ನು ಗೆಲ್ಲಿಸಿಕೊಂಡಿದೆ ಈ ಮೂಲಕ ಜೆಡಿಎಸ್ ಮೂರು ಕ್ಷೇತ್ರದಲ್ಲಿ ಗೆದ್ದಂತಾಗಿದೆ. ಹಾಸನದಲ್ಲಿ ಹಲವು ಕಾರಣಗಳಿಂದಾಗಿ ಜೆಡಿಎಸ್ ಸೋತಿದೆ ಇಲ್ಲಿ ಸ್ವಲ್ಪ ಪ್ರಭಾವ ಕೊಂಡಿದ್ದರು ಕೂಡ ಬಿಜೆಪಿ ಯಾವುದೇ ಪರಿಣಾಮ ಬೀರಿಲ್ಲ.

ಆದರೆ ಜೆಡಿಎಸ್ ಕಾರಣಕ್ಕಾಗಿ ಬಿಜೆಪಿ ಅಭ್ಯರ್ಥಿಗಳು ತುಮಕೂರು ಚಿಕ್ಕಬಳ್ಳಾಪುರ ಚಿತ್ರದುರ್ಗ ವಿಜಯಪುರ ಉಡುಪಿ ಚಿಕ್ಕಮಗಳೂರು ಮತ್ತು ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ.

ಯಾವಾಗ ಜೆಡಿಎಸ್ ಎನ್.ಡಿ.ಎ. ಮೈತ್ರಿಕೂಟದ ಅಂಗ ಪಕ್ಷವಾಗಿ ಹೊರಹೊಮ್ಮಿತು ಆ ಕ್ಷಣದಿಂದಲೇ ಇನ್ನೂ ಜೆಡಿಎಸ್ ಕಥೆ ಮುಗಿಯಿತು ಜೆಡಿಎಸ್ ನ ಕಾರ್ಯಕರ್ತರಲ್ಲಿ ಕೆಲವರು ಬಿಜೆಪಿ ಜೊತೆ ಮತ್ತು ಕಾಂಗ್ರೆಸ್ ಜೊತೆ ಹೋಗಲಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗಿತ್ತು ಆದರೆ ಈ ಫಲಿತಾಂಶ ಜೆಡಿಎಸ್ ರಾಜ್ಯ ರಾಜಕಾರಣದಲ್ಲಿ ಇನ್ನೂ ಕೆಲ ಕಾಲ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂಬ ಸಂದೇಶ ರವಾನಿಸಿದೆ.

ಕಾಂಗ್ರೆಸ್ಸಿನಲ್ಲಿ ವಿಪ್ಲವ

ಆಡಳಿತರೂಢ ಕಾಂಗ್ರೆಸ್ಸಿನಲ್ಲಿ ಈ ಚುನಾವಣೆ ಫಲಿತಾಂಶ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗುವುದಂತೂ ಸತ್ಯ. ನಾಯಕತ್ವದ ಚುಕ್ಕಾಣಿ ಹಿಡಿಯಲು ಹಗ್ಗ ಜಗ್ಗಾಟ ನಡೆಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಸ್ವಕ್ಷೇತ್ರದಲ್ಲೇ ಸೋಲು ಅನುಭವಿಸಿರುವುದು ನಾಯಕತ್ವ ಬದಲಾವಣೆ ಕುರಿತಾದ ವಿದ್ಯಮಾನಗಳಿಗೆ ಕೊಂಚಕಾಲ ವಿರಾಮ ಬಿಡುವುದಂತೂ ಖಂಡಿತ. ಈ ಇಬ್ಬರಲ್ಲೂ ಯಾರೂ ಯಾರನ್ನೂ ದೂರಲಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಪರಮೇಶ್ವರ್ ಕನಸು

ಅವಕಾಶ ದೊರೆತರೆ ರಾಜ್ಯದ ಮೊದಲ ದಲಿತ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಬೇಕು ಎಂದು ಕನಸು ಕಾಣುತ್ತಿರುವ ಗೃಹ ಮಂತ್ರಿ ಪರಮೇಶ್ವರ್ ಇನ್ನು ಕೆಲ ಕಾಲ ಈ ಕನಸಿನಲ್ಲಿ ಇರಬೇಕಾಗುತ್ತದೆ. ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸೋಲು ಒಂದು ರೀತಿಯಲ್ಲಿ ಪರಮೇಶ್ವರ್ ಅವರ ಸೋಲೆ ಎಂದು ವ್ಯಾಖ್ಯಾನಿಸಲಾಗುತ್ತದೆ.

ಮುದ್ದಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ವಿಚಾರದಲ್ಲಿ ಪರಮೇಶ್ವರ್ ಅವರು ತೋರಿಸಿದ ಆಸಕ್ತಿ ಎಲ್ಲರಿಗೂ ಗೊತ್ತಿದೆ. ಈ ಚುನಾವಣೆಯಲ್ಲಿ ಮುದ್ದಹನುಮಗೌಡ ಅವರ ಗೆಲುವಿಗೆ ಇವರು ಮಾಡಿದ ಪ್ರಯತ್ನ ಯಶಸ್ವಿಯಾಗಿಲ್ಲ ಹಾಗಂತ ಹೇಳಿ ಇವರು ಸೋಲಿನ ಹೊಣೆಯನ್ನು ಮತ್ತೊಬ್ಬ ಮಂತ್ರಿ ಕೆ.ಎನ್. ರಾಜಣ್ಣ ಅವರ ಹೆಗಲಿಗೆ ಕಟ್ಟುವ ಅವಕಾಶವೂ ಇಲ್ಲ ಯಾಕೆಂದರೆ ರಾಜಣ್ಣ ಉಸ್ತುವಾರಿಯಾಗಿರುವ ಹಾಸನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಹೀಗಾಗಿ ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗುವುದಿರಲಿ, ಅವಕಾಶ ಸಿಕ್ಕರೆ ಉಪಮುಖ್ಯಮಂತ್ರಿಯಾಗಲು ಸಿದ್ದ ಎಂದು ಹೆಣದಿದ್ದ ರಾಜಕೀಯ ತಂತ್ರ ಈಗ ಕೆಲಸಕ್ಕೆ ಬರುವುದಿಲ್ಲ.

ಹಲವರ ತಲೆದಂಡ?

ಅಭ್ಯರ್ಥಿ ಆಯ್ಕೆಯ ವಿಚಾರಕ್ಕೆ ರಂಪ ರಾದ್ದಾಂತ ಸೃಷ್ಟಿಸಿದ ಆಹಾರ ಮಂತ್ರಿ ಕೆ ಹೆಚ್ ಮುನಿಯಪ್ಪ ಇದೀಗ ದೊಡ್ಡ ಪ್ರಮಾಣದ ಪ್ರತಿರೋಧ ಎದುರಿಸಲು ಸಜ್ಜಾಗಬೇಕಿದೆ. ಅದೇ ರೀತಿಯಲ್ಲಿ ಸಕ್ಕರೆ ಮಂತ್ರಿ ಶಿವಾನಂದ ಪಾಟೀಲ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್, ಕೃಷಿ ಮಂತ್ರಿ ಚೆಲುವರಾಯಸ್ವಾಮಿ ಸೋಲಿನ ಹೊಣೆ ಹೊರಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.

ಕೆ ಎಚ್ ಮುನಿಯಪ್ಪ ವಿರುದ್ಧ ಮಾಜಿ ಮಂತ್ರಿ ರಮೇಶ್ ಕುಮಾರ್ ಅವರ ಬಣ ಮೂಗಿ ಬೀಳುವುದಂತೂ ಸತ್ಯ. ಹೀಗಾಗಿ ಅವರು ತಮ್ಮ ಹುದ್ದೆ ತೊರೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಅದೇ ರೀತಿ ಬೆಳಗಾವಿಯಲ್ಲಿ ಪ್ರಾಬಲ್ಯ ಸಾಧಿಸಲು ಸಾಕಷ್ಟು ಪ್ರಯತ್ನ ನಡೆಸುತ್ತಿರುವ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಪುತ್ರನ ಸೋಲಿನಿಂದಾಗಿ ಹಿನ್ನಡೆ ಅನುಭವಿಸಲಿದ್ದಾರೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಮಾಜಿ ಸಚಿವ ಲಕ್ಷ್ಮಣ್ ಸವದಿ ಮಂತ್ರಿಯಾದರೂ ಅಚ್ಚರಿ ಇಲ್ಲ. ಅದೇ ರೀತಿಯಲ್ಲಿ ಶಿವಾನಂದ ಪಾಟೀಲ್, ಮಧು ಬಂಗಾರಪ್ಪ ಅವರು ಮಂತ್ರಿ ಸ್ಥಾನ ದೊರೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು.

ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಹಗರಣದ ಸುಳಿಯಲ್ಲಿ ಸಿಲುಕಿರುವ ಕ್ರೀಡಾ ಸಚಿವ ಬಿ ನಾಗೇಂದ್ರ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅತ್ಯಧಿಕ ಬಹುಮತ ಲಭಿಸುವಂತೆ ಮಾಡಿರುವ ಹಿನ್ನೆಲೆಯಲ್ಲಿ ಅವರ ಸ್ಥಾನ ಮತ್ತಷ್ಟು ಗಟ್ಟಿಯಾಗುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ ರಾಜ್ಯ ರಾಜಕಾರಣದ ಮೇಲೆ ಈ ಚುನಾವಣೆಯ ಫಲಿತಾಂಶ ಸಾಕಷ್ಟು ಪರಿಣಾಮ ಬೀರಲಿದೆ. ಕೊನೆಯದಾಗಿ ಇದು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಗಲಿದ್ದು ಮತ್ತೊಮ್ಮೆ ಜೆಡಿಎಸ್ ನಾಯಕ ಕುಮಾರ ಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಹಣಾ ಹಣಿಗೆ ವೇದಿಕೆ ಸೃಷ್ಟಿಸಲಿದೆ.

ವಿಜಯೇಂದ್ರ ಹಿನ್ನೆಡೆ

ಚುನಾವಣೆ ಫಲಿತಾಂಶ ಬಿಜೆಪಿಗೆ ಹೆಚ್ಚಿನ ಸ್ಥಾನ ತಂದು ಕೊಟ್ಟಿದೆ ಆದರೂ ಪಕ್ಷದಲ್ಲಿ ಆಂತರಿಕ ವಿದ್ಯಮಾನಗಳು ತೀವ್ರಗೊಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಬಿಜೆಪಿ ಗೆದ್ದಿರುವ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ತಮ್ಮ ಸ್ವಂತ ಶಕ್ತಿಯಿಂದ ಗೆಲುವು ಸಾಧಿಸಿದ್ದಾರೆ ಎಂದು ಹೇಳಿದರೆ ಅತಿಶಯೋಕ್ತಿ ಏನಲ್ಲ.

ಹಲವಾರು ಕಾರಣಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿದ್ದ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹಾಗೂ ಸಂಘ ಪರಿವಾರದ ನಾಯಕ ಬಿಎಲ್ ಸಂತೋಷ್ ಈ ಚುನಾವಣೆ ಮೂಲಕ ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ಮುಂಚೂಣಿಗೆ ಬಂದಿದ್ದಾರೆ.

ಚಿತ್ರದುರ್ಗ ಮತ್ತು ತುಮಕೂರಿನಿಂದ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ತಮ್ಮ ಆಪ್ತರಾದ ಗೋವಿಂದ ಕಾರಜೋಳ ಮತ್ತು ವಿ ಸೋಮಣ್ಣ ಅವರ ಗೆಲುವಿನಲ್ಲಿ ಬಿ ಎಲ್ ಸಂತೋಷ್ ಪ್ರಮುಖ ಪಾತ್ರ ನಿರ್ವಹಿಸಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ತುಮಕೂರಿನಲ್ಲಿ ಮಾಜಿ ಸಚಿವ ಸೋಮಣ್ಣ ಕಣಕ್ಕಿಳಿಯಲು ಅಲ್ಲದ ಮನಸ್ಸಿನಿಂದ ಒಪ್ಪಿಗೆ ನೀಡಿದ್ದ ಯಡಿಯೂರಪ್ಪ ಮತ್ತು ವಿಜಯೇಂದ್ರ ಈ ಚುನಾವಣೆಯಲ್ಲಿ ಅಷ್ಟೊಂದು ಸಕ್ರಿಯವಾಗಿ ಪಾಲ್ಗೊಳ್ಳಲಿಲ್ಲ ಅದೇ ರೀತಿ ಚಿತ್ರದುರ್ಗದಲ್ಲೂ ಕೂಡ ಯಾವುದೇ ಪರಿಣಾಮ ಬೀರಲಿಲ್ಲ.

ಯಡಿಯೂರಪ್ಪ ಸಾಕಷ್ಟು ಪ್ರಭಾವ ಬೀರಿ ಕಣಕ್ಕಿಳಿಸಿದವರ ಪೈಕಿ ಬೆಂಗಳೂರಿನ ಶೋಭಾ ಕರಂದ್ಲಾಜೆ, ಮೈಸೂರಿನ ರಾಜವಂಶಸ್ಥ ಯದುವೀರ್ ಒಡೆಯರ್ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗದಲ್ಲಿ ತಮ್ಮ ಪುತ್ರ ರಾಘವೇಂದ್ರ ಅವರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಗೆದ್ದವರೆಲ್ಲ ಯಡಿಯೂರಪ್ಪ ಅವರ ವಿರೋಧಿ ಬಣದಲ್ಲೇ ಗುರುತಿಸಿಕೊಂಡವರೇ ಆಗಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ವಿಜಯೇಂದ್ರ ಅವರ ನಾಯಕತ್ವಕ್ಕೆ ಸವಾಲು ಎನಿಸುವ ಬೆಳವಣಿಗೆಗಳು ನಡೆದರೂ ಅಚ್ಚರಿಯಿಲ್ಲ.

ಒಟ್ಟಾರೆ ಸದ್ಯದ ಫಲಿತಾಂಶ ಆಧರಿಸಿ ನೋಡುವುದಾದರೆ ಮುಂಬರುವ ದಿನಗಳಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳನ್ನು ದೇಶ ಮತ್ತು ರಾಜ್ಯದಲ್ಲಿ ನಿರೀಕ್ಷಿಸಬಹುದು. ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಕಿಂಗ್‌ ಮೇಕರ್‌ ಸ್ಥಾನದಲ್ಲಿ ನಿತೀಶ್‌ ಕುಮಾರ್‌ ಮತ್ತು ಚಂದ್ರಬಾಬು ನಾಯ್ದು ನಿಂತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments