ಎಲ್ಲವೂ ಸುಖಾಂತ್ಯವಾಗಿದೆ. ನಮ್ಮ ಒಳ್ಳೇತನ ಒಳ್ಳೇ ನಡವಳಿಕೆಗೆ ಸಹಾಯ ಆಗುತ್ತದೆ. ಇದಕ್ಕೆ ದೆಹಲಿ ಭೇಟಿಯೇ ಒಂದು ಉದಾಹರಣೆ. ಅಮಿತ್ ಶಾ ನಡವಳಿಕೆ, ಅವರ ತೀರ್ಮಾನ, ಭಾವನೆ ಸಕಾರಾತ್ಮಕವಾಗಿಯೇ ಇತ್ತು ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಶನಿವಾರ ಭೇಟಿ ಮಾಡಿದ ವಿಚಾರವಾಗಿ ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, “ಕೆಲಸ ಮಾಡಿ ಬಳಿಕ ಮುಂದಿನದ್ದನ್ನು ಚರ್ಚೆ ಮಾಡುತ್ತೇವೆ. ನಾನು ರಾಜ್ಯಸಭೆ ಸ್ಥಾನ ಕೇಳಿದ್ದೇನೆ” ಎಂದರು.
“ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನಗೆ ಮೂರು ಕಷ್ಟದ ಲೋಕಸಭಾ ಕ್ಷೇತ್ರ ಕೊಡಿ. ಯಾವುದೇ ಮೂರು ಕ್ಷೇತ್ರಗಳನ್ನು ಕೊಟ್ಟರೂ ಗಲ್ಲಿಸಿಕೊಂಡು ಬರುತ್ತೇನೆ. 28 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರ ವಹಿಸಿದರೆ ಕೆಲಸ ಮಾಡುತ್ತೇನೆ ಎಂದು ಹೇಳಿರುವೆ” ಎಂದು ತಿಳಿಸಿದರು.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅನಿವಾರ್ಯವಾಗಿ ಒಪ್ಪಿಕೊಂಡು ಸೋತ ನಂತರ ಸೋಮಣ್ಣ ಪಕ್ಷದ ರಾಜ್ಯ ನಾಯಕರ ವಿರುದ್ಧ ಸಿಡಿದೆದ್ದಿದ್ದರು. ಹಲವು ನಾಯಕರ ವಿರುದ್ಧ ಬಹಿರಂಗ ಟೀಕೆಗಳನ್ನೂ ಮಾಡಿದ್ದರು. ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂಬ ವದಂತಿಗಳೂ ಹಬ್ಬಿದ್ದವು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ.