ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಬಡ ಕುಟುಂಬಗಳಿಗೆ ನಿರ್ಮಿಸಿ ಕೊಡುತ್ತಿರುವ ಮನೆಗಳ ಗುಣಮಟ್ಟ ಉತ್ತಮ ವಾಗಿರಬೇಕು. ಜತೆಗೆ ಮೂಲ ಸೌಕರ್ಯ ಸಹಿತ ಎಲ್ಲ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ತಿಂಗಳ ಅಂತ್ಯದಲ್ಲಿ 36 ಸಾವಿರ ಮನೆ ಹಂಚಿಕೆ ಮಾಡುವ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನೆ ನಡೆಸಿದರು.
“ಮುಖ್ಯಮಂತ್ರಿ ಯವರು ಏಕ ಕಾಲದಲ್ಲಿ ರಾಜ್ಯ ದೆಲ್ಲೆಡೆ ಮನೆಗಳ ಹಂಚಿಕೆ ಗೆ ಚಾಲನೆ ನೀಡಲಿದ್ದು ಅದೇ ದಿನ ಫಲಾನುಭವಿಗಳಿಗೆ ಕೀ ನೀಡಬೇಕು. ಕುಡಿಯುವ ನೀರು, ಒಳ ಚರಂಡಿ, ವಿದ್ಯುತ್ ಸಂಪರ್ಕ ಸಹಿತ ಮೂಲ ಸೌಕರ್ಯ ಕಾಮಗಾರಿ ಫೆ.20 ರೊಳಗೆ ಮುಗಿದಿರಬೇಕು. ಇಲ್ಲದಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಪ್ರತಿ ಯೋಜನೆಯಲ್ಲಿ ಎಷ್ಟು ಮನೆ ನೀಡಲಾಗುವುದು ಎಂಬ ಗುರಿ ನೀಡಲಾಗಿದೆಯೋ ಅಷ್ಟು ಕೊಡಲೇಬೇಕು. ಗುತ್ತಿಗೆದಾರರಿಂದ ತೊಂದರೆ ಇದ್ದರೆ ಈಗಲೇ ಹೇಳಿಬಿಡಿ, ಅಂತಹವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಸಮಸ್ಯೆ ಆದರೆ ಅಮಾನತು ಸೇರಿದಂತೆ ಕಠಿಣ ಕ್ರಮ ಕೈಗೊಂಡು ಅವರನ್ನೇ ಹೊಣೆ ಮಾಡಲಾಗುವುದು” ಎಂದು ತಿಳಿಸಿದರು.
“ಮುಖ್ಯಮಂತ್ರಿಯವರು ಹಂಚಿಕೆ ಮಾಡಿದ ನಂತರ ಖುದ್ದು ನಾನೇ ಪ್ರತಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ. ಎಲ್ಲ ಮನೆಗಳಲ್ಲಿ ಫಲಾನು ಭವಿಗಳು ವಾಸ ಇರಬೇಕು. ಹಂಚಿಕೆ ವೇಳೆಗೆ ಎಲ್ಲ ಸೌಕರ್ಯ ಕಲ್ಪಿಸಬೇಕು” ಎಂದು ತಾಕೀತು ಮಾಡಿದರು.
“ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಕಳೆದ 10ವರ್ಷ ಗಳಲ್ಲಿ ಮಂಜೂರು ಮಾಡಿದ್ದ 1.82 ಲಕ್ಷ ಮನೆ ಗಳಿಗೆ ಫಲಾನುಭವಿಗಳ ವಂತಿಗೆ ಸರ್ಕಾರವೇ ಭರಿಸುತ್ತಿದೆ. ಫಲಾನುಭ ವಿಗಳು ಒಂದು ಲಕ್ಷ ರೂ. ಪಾವತಿಸಿದರೆ ಉಳಿದ ಮೊತ್ತ ಸರ್ಕಾರ ಭರಿಸುತ್ತಿದೆ. ಮೊದ ಹಂತದಲ್ಲಿ 36 ಸಾವಿರ ಮನೆ ನೀಡಲಾಗುತ್ತಿದೆ” ಎಂದು ಹೇಳಿದರು.
ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತ ವೆಂಕಟೇಶ್, ಪ್ರಧಾನ ಅಭಿಯಂತರ ಬಾಲರಾಜು ಉಪಸ್ಥಿತರಿದ್ದರು.