Homeಕರ್ನಾಟಕಯೋಜಿತ ಬೆಂಗಳೂರು ನಿರ್ಮಾಣಕ್ಕಾಗಿ ವ್ಯವಸ್ಥಿತ ರಸ್ತೆ ಜಾಲ: ಸಚಿವ ಕೃಷ್ಣ ಬೈರೇಗೌಡ

ಯೋಜಿತ ಬೆಂಗಳೂರು ನಿರ್ಮಾಣಕ್ಕಾಗಿ ವ್ಯವಸ್ಥಿತ ರಸ್ತೆ ಜಾಲ: ಸಚಿವ ಕೃಷ್ಣ ಬೈರೇಗೌಡ

ಜಿಬಿಎ ಹೊರಗಿನ-ಬೆಂಗಳೂರು ನಗರ ಜಿಲ್ಲೆಯ ಒಳಗಿನ ಪ್ರದೇಶಗಳ ಭವಿಷ್ಯದ ದೃಷ್ಟಿಯಿಂದ ಹೊಸ ರಸ್ತೆ ಜಾಲ (ರೋಡ್ ಗ್ರಿಡ್) ನಿರ್ಮಾಣ ಹಾಗೂ ಸಮರ್ಪಕ ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಮಂಗಳವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ನಗರ ಕಳೆದ 25 ವರ್ಷಗಳಿಂದ ಸೂಕ್ತ ಪೂರ್ವಯೋಜನೆ ಹಾಗೂ ಮುಂಜಾಗ್ರತಾ ತಯಾರಿ ಇಲ್ಲದೆ ಬೆಳೆದಿದೆ. ಪರಿಣಾಮ ಇಂದು ಟ್ರಾಫಿಕ್ ಸಮಸ್ಯೆ, ರಸ್ತೆ, ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯಂತಹ ಮೂಲಭೂತ ಸೌಲಭ್ಯಗಳು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂದು ಬೇಸರ ಹೊರಹಾಕಿದರು.

ಸುಮಾರು 20 ವರ್ಷಗಳ ಹಿಂದೆ ಯಾವುದೇ ಮುನ್ನೆಚ್ಚರಿಕೆ ಹಾಗೂ ತಯಾರಿ ಇಲ್ಲದೆ 110 ಹಳ್ಳಿಗಳು ಹಾಗೂ 7 ನಗರಸಭೆಗಳನ್ನು ಬೆಂಗಳೂರಿನ ವ್ಯಾಪ್ತಿಗೆ ಒಳಪಡಿಸಲಾಗಿತ್ತು. ಈ ವೇಳೆ ಆ ಭಾಗದಲ್ಲಿ ಸೂಕ್ತ ಮೂಲಭೂತ ಸೌಕರ್ಯಗಳು ಇರಲಿಲ್ಲ. ಕಳೆದ ಎರಡು ದಶಕಗಳಿಂದ ಅಲ್ಲಿಗೆ ಶಾಶ್ವತ ಕುಡಿಯುವ ನೀರು, ಒಳಚರಂಡಿ ಹಾಗೂ ಸಮರ್ಪಕ ರಸ್ತೆಗಳನ್ನು ನೀಡಲು ಸರ್ಕಾರಗಳು ಎಷ್ಟೇ ಪ್ರಯತ್ನಿಸುತ್ತಿದ್ದರೂ, ಮೂಲಭೂತ ಸೌಲಭ್ಯಗಳನ್ನು ಇಂದಿಗೂ ಸಂಪೂರ್ಣವಾಗಿ ಕಲ್ಪಿಸಲು ಸಾಧ್ಯವಾಗಿಲ್ಲ. ನಾವುಗಳು ಈ ಹಿಂದೆ ಮಾಡಿದ ಯೋಜನಾ ಲೋಪಗಳ ಪರಿಣಾಮವನ್ನು ಇಂದು ಸಂಕಷ್ಟ ಎದುರಿಸುತ್ತಿದ್ದು, ಈ ತಪ್ಪುಗಳಿಂದ ಕಲಿಯಬೇಕು ಹಾಗೂ ಈ ತಪ್ಪುಗಳು ಮತ್ತೆ ಮರುಕಳಿಸಬಾರದು ಎಂದು ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ಹೊರಗೂ ಸಮಸ್ಯೆ ಉಲ್ಬಣಿಸಬಾರದು

ಜಿಬಿಎ (Greater Bengaluru Area) ಹೊರಗಿನ ಪ್ರದೇಶಗಳಲ್ಲಿ ನಗರೀಕರಣಕ್ಕೆ ವೇಗವಾಗಿ ಒಳಪಡುತ್ತಿವೆ. ಈ ಪ್ರದೇಶಗಳು ಸದ್ಯ ಜಿಬಿಎ ವ್ಯಾಪ್ತಿಯಲ್ಲಿ ಇಲ್ಲದಿದ್ದರೂ, ಬೆಂಗಳೂರಿನ ಭಾಗವಾಗಿ ಬೆಳೆಯುತ್ತಿದ್ದು ಭವಿಷ್ಯದಲ್ಲಿ ನಗರದ ಭಾಗವಾಗುವ ಎಲ್ಲ ಸಾಧ್ಯತೆಗಳಿವೆ. ನಗರದ 750 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ಈಗಾಗಲೇ ನಗರೀಕರಣ ವೇಗವಾಗಿದ್ದು, ಈ ಪ್ರಮಾಣ ಮುಂಬರುವ ದಿನಗಳಲ್ಲಿ 1400 ರಿಂದ 1800 ಚದರ ಕಿಲೋಮೀಟರ್ಗಳ ವರೆಗೆ ವಿಸ್ತರಣೆಯಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿರುತ್ತಾರೆ.

ನಾವು ಬಯಸಲಿ ಅಥವಾ ಬಿಡಲಿ ಬೆಂಗಳೂರಿನ ಸುತ್ತಮುತ್ತ ನಗರೀಕರಣ ಆಗುವುದು ನಿಶ್ಚಿತ. ಹೀಗಾಗಿ ಈಗಿನಿಂದಲೇ ಆ ಭಾಗಗಳಲ್ಲಿ ಪೂರ್ವಯೋಜಿತ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳದಿದ್ದರೆ, ಇಂದು ಜಿಬಿಎ ವ್ಯಾಪ್ತಿಯಲ್ಲಿ ಅನುಭವಿಸುತ್ತಿರುವ ಅದೇ ಟ್ರಾಫಿಕ್ ಹಾಗೂ ಒಳಚರಂಡಿ ಸಮಸ್ಯೆಗಳನ್ನು ಹೊರಗಿನ ಪ್ರದೇಶಗಳಲ್ಲೂ ಅನುಭವಿಸಬೇಕಾಗುತ್ತದೆ. ಹೀಗಾಗಿ ಜಿಬಿಎ ಹೊರಗೆ ಈಗಾಗಲೇ ಆರಂಭವಾಗಿರುವ ಅನಾಹುತಗಳಿಗೆ ಕಡಿವಾಣ ಹಾಕಿ ಯೋಜಿತ ಅಭಿವೃದ್ಧಿ ತರುವುದು ಸರ್ಕಾರದ ಪ್ರಮುಖ ಸಂಕಲ್ಪವಾಗಿದೆ ಎಂದು ಅಭಿಪ್ರಾಯಪಟ್ಟರು.

ಹೊಸ ರಸ್ತೆಜಾಲ-ಮೂಲಭೂತ ಸೌಲಭ್ಯ

ಈ ಯೋಜನಾಬದ್ಧ ಅಭಿವೃದ್ಧಿಯ ಭಾಗವಾಗಿ ಕಳೆದ ವಾರ ಇಡೀ ಬೆಂಗಳೂರು ನಗರ ಜಿಲ್ಲೆಯನ್ನು ಬಿಡಬ್ಲ್ಯೂಎಸ್ಎಸ್ಬಿ (BWSSB) ವ್ಯಾಪ್ತಿಗೆ ತರಲಾಗಿದ್ದು, ಕುಡಿಯುವ ನೀರು ಪೂರೈಕೆ ಹಾಗೂ ಹಂತ ಹಂತವಾಗಿ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕಗೊಳಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ. ಅದೇ ರೀತಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಬಿಎಂಆರ್‌ಡಿಎ (BMRDA) ಸೇರಿದಂತೆ ಎಲ್ಲಾ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಹೊಸ ‘ರೋಡ್ ಗ್ರಿಡ್’ (ರಸ್ತೆ ಜಾಲ) ಅನ್ನು ಮಾಸ್ಟರ್ ಪ್ಲಾನ್ನಲ್ಲಿ ಗುರುತಿಸಲಾಗಿದೆ.

ಜಿಬಿಎ ಒಳಗೆ ಈಗಾಗಲೇ ಲೇಔಟ್‌ಗಳು ಮತ್ತು ಮನೆಗಳು ನಿರ್ಮಾಣವಾಗಿರುವುದರಿಂದ ಅಲ್ಲಿ ಹೊಸ ರಸ್ತೆಗಳನ್ನು ಗುರುತಿಸುವುದರಿಂದ ಪ್ರಯೋಜನವಿಲ್ಲ. ಆದ್ದರಿಂದ ಈಗ ಎಲ್ಲಿ ಬೆಳವಣಿಗೆಯಾಗುತ್ತಿದೆಯೋ ಆ ಭಾಗಗಳಲ್ಲಿ, ಅಂದರೆ ತಾಲೂಕು ಕೇಂದ್ರ, ಹೋಬಳಿ ಕೇಂದ್ರ, ಪ್ರಮುಖ ಜಿಲ್ಲಾ ರಸ್ತೆ, ರಾಜ್ಯ ಹೆದ್ದಾರಿ, ಪೆರಿಫೆರಲ್ ರಿಂಗ್ ರೋಡ್ ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಗ್ರಿಡ್ ಮಾದರಿಯಲ್ಲಿ ಸಿಡಿಪಿ (CDP) ರಸ್ತೆಗಳನ್ನಾಗಿ ಅಧಿಸೂಚನೆ ಹೊರಡಿಸಲಾಗಿದೆ.

ಅಧಿಸೂಚಿತ ರಸ್ತೆಗಳಲ್ಲಿ ನಿರ್ಮಾಣ ಕಾರ್ಯಕ್ಕೆ ನಿಯಂತ್ರಣ

ಈ ಹೊಸ ಅಧಿಸೂಚನೆಯಲ್ಲಿ ನೂರಾರು ರಸ್ತೆಗಳನ್ನು ಸೇರಿಸಲಾಗಿದ್ದು, ಹಿಂದೆ ಇದ್ದ ಜಿಲ್ಲಾ ಪಂಚಾಯತ್, ಪಿಡಬ್ಲ್ಯೂಡಿ (PWD) ಹಾಗೂ ರಾಜ್ಯ ಹೆದ್ದಾರಿ ರಸ್ತೆಗಳನ್ನು ಅಗಲೀಕರಿಸಲಾಗಿದೆ. ಕೇವಲ 10 ಮೀಟರ್ ಇದ್ದ ರಸ್ತೆಗಳನ್ನು ಇಂದು 30 ಮೀಟರ್, 45 ಮೀಟರ್ ಹಾಗೂ ಕೆಲವು ರಸ್ತೆಗಳನ್ನು 90 ಮೀಟರ್ ವರೆಗೆಗೆ ವಿಸ್ತರಿಸಿ ನೋಟಿಫೈ ಮಾಡಲಾಗಿದೆ. ಈ ರಸ್ತೆಗಳ ಸಂಪೂರ್ಣ ನಿರ್ಮಾಣಕ್ಕೆ ಐದರಿಂದ ಹತ್ತು ವರ್ಷಗಳು ಬೇಕಾಗಬಹುದು. ಆದರೆ, ಇನ್ಮುಂದೆ ಈ ವ್ಯಾಪ್ತಿಯಲ್ಲಿ ವ್ಯವಸ್ಥಿತ ಅಭಿವೃದ್ಧಿ ಕೈಗೊಳ್ಳಲು ರಸ್ತೆಗೆ ಅಗತ್ಯವಿರುವ ಜಾಗವನ್ನು ಕಡ್ಡಾಯವಾಗಿ ಬಿಟ್ಟು ಲೇಔಟ್ ಅಥವಾ ಮನೆಗಳನ್ನು ಕಟ್ಟಿಕೊಳ್ಳಬೇಕೆಂಬ ನಿಯಮವನ್ನು ಪ್ರಸ್ತುತ ಕಾನೂನಿನ ಅಡಿಯಲ್ಲಿ ತರಲಾಗುತ್ತಿದೆ. ಬೆಂಗಳೂರಿನ ಒಳಗಿನ ಸಮಸ್ಯೆಗಳು ಹೊರಗೆ ಮರುಕಳಿಸಬಾರದು ಎಂಬ ಮುಂಜಾಗ್ರತೆಯಿಂದ ಈ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಈ ಹೊಸ ಅಧಿಸೂಚನೆಯ ಸಂಪೂರ್ಣ ಮಾಹಿತಿ ಬಿಎಂಆರ್‌ಡಿಎ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಸಾರ್ವಜನಿಕರು ಆ ಮಾಹಿತಿಯನ್ನು ಪರಿಶೀಲಿಸಿ ನಿಯಮಗಳನ್ನು ಗೌರವಿಸಬೇಕು. ಅಧಿಸೂಚಿತ ರಸ್ತೆಯ ಜಾಗದಲ್ಲಿ ಮನೆ ಅಥವಾ ಲೇಔಟ್ ನಿರ್ಮಿಸಿದರೆ ಅದು ಕಾನೂನು ಉಲ್ಲಂಘನೆಯಾಗುತ್ತದೆ. ಸಾರ್ವಜನಿಕರ ಜಾಗೃತಿಗಾಗಿ ಹಳೆಯ ಮತ್ತು ಹೊಸ ರಸ್ತೆಗಳ ವಿಡಿಯೋ ಮಾಡಿ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

ಜೊತೆಗೆ ಬಿಎಂಆರ್‌ಡಿಎ, ಜಿಲ್ಲಾ ಪಂಚಾಯತ್ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳು ಜಂಟಿಯಾಗಿ ಈ ರಸ್ತೆಗಳನ್ನು ಗುರುತಿಸಿ, ಗ್ರಾಮ ಪಂಚಾಯತಿ ಮತ್ತು ಕಂದಾಯ ಇಲಾಖೆಯ ನೋಟಿಸ್ ಬೋರ್ಡ್‌ಗಳಲ್ಲಿ ಪ್ರಕಟಿಸುವ ಮೂಲಕ ಜನರಿಗೆ ಅರಿವು ಮೂಡಿಸಲು ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಸೂಚಿಸಲಾಗಿದೆ. ಸಾವಿರಾರು ಕಿಲೋಮೀಟರ್ಗಳಷ್ಟು ಗುರುತಿಸಲಾದ ಈ ರಸ್ತೆಗಳನ್ನು ಒಂದೇ ಬಾರಿಗೆ ನಿರ್ಮಿಸಲು ಸಾಧ್ಯವಿಲ್ಲದ ಕಾರಣ, ಆದ್ಯತೆಯ ಮೇರೆಗೆ ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.

ಬಿಎಂಆರ್‌ಡಿಎ ಆಯುಕ್ತರಾದ ರಾಜೇಂದ್ರ ಚೋಳನ್, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಯತೀಶ್. ಆರ್ ಹಾಗೂ ಕೆಆರ್‌ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಅರುಣ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments