ಔಷಧ ಟೆಂಡರ್ ವಿಚಾರ ಸೇರಿದಂತೆ ಅನೇಕ ಲೋಪದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕ ಲೋಕೇಶ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆ ಕೂಡ ಒಂದು. ಇಲ್ಲಿ ಅವ್ಯವಹಾರ ಹಾಗೂ ಆಡಳಿತ ವ್ಯವಸ್ಥೆ ಕುಸಿದ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಹಾಲಿ ನಿರ್ದೇಶಕ ಡಾ. ವಿ. ಲೋಕೇಶ್ ಅವರನ್ನು ನಿರ್ದೇಶಕ ಸ್ಥಾನದಿಂದ ತೆಗೆದು, ಅವರ ಸ್ಥಾನಕ್ಕೆ ಡಾ.ಸೈಯದ್ ಅಲ್ತಾಫ್ ನೇಮಕಗೊಂಡಿದ್ದಾರೆ.
ಕಿದ್ವಾಯಿಯಲ್ಲಿ ರೋಗಿಗಳಿಂದ ಹೆಚ್ಚಿನ ಶುಲ್ಕ ಪಡೆಯಲಾಗುತ್ತಿದೆ, ಅನುದಾನದ ದುರ್ಬಳಕೆ ಆಗುತ್ತಿದೆ, ಭ್ರಷ್ಟಾಚಾರ, ಸಂಸ್ಥೆಯ ಸಿಬ್ಬಂದಿಗಳು ಖಾಸಗಿ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡುತ್ತಿದ್ದಾರೆ, ರೋಗಿಗಳಿಗೆ ಕಳಪೆ ಮಟ್ಟದ ಚಿಕಿತ್ಸೆ ನೀಡುತ್ತಿರುವುದು, ಔಷಧಗಳ ಕೊರತೆ, ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡದಿರುವುದು ಹಾಗೂ ಕೆ.ಟಿ.ಪಿ.ಪಿ. ನಿಯಮಗಳನ್ನು ಉಲ್ಲಂಘಿಸಿ ನಿಗದಿತ ಸಂಸ್ಥೆಗೆ ಹೆಚ್ಚಿನ ಲಾಭ ಬರುವಂತೆ ಟೆಂಡರ್ ನೀಡಿರುವುದರ ಕುರಿತು ಪತ್ರಿಕೆಯಲ್ಲಿ ವರದಿ ಹಾಗೂ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸರಕಾರ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಖಜಾನೆ ಇಲಾಖೆ ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.
ಸಮಿತಿ ಒಂದು ತಿಂಗಳ ಕಾಲ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿತ್ತು. ವರದಿಯಲ್ಲಿ ಅಕ್ರಮಗಳು ಕಂಡು ಬಂದ ಹಿನ್ನೆಲೆಯಲ್ಲಿ ಹಾಲಿ ನಿರ್ದೇಶಕ ಡಾ. ವಿ. ಲೋಕೇಶ್ ಅವರನ್ನು ನಿರ್ದೇಶಕ ಸ್ಥಾನದಿಂದ ಸರ್ಕಾರ ಎತ್ತಂಗಡಿ ಮಾಡಿದೆ. ಸರ್ಜಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ.ಸೈಯದ್ ಅಲ್ತಾಫ್ ಅವರನ್ನು ತಾತ್ಕಾಲಿಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.