Homeಕರ್ನಾಟಕಬೆಂಗಳೂರು ಭಾರತದ ಎಐ ರಾಜಧಾನಿ: ಪ್ರಿಯಾಂಕ್ ಖರ್ಗೆ

ಬೆಂಗಳೂರು ಭಾರತದ ಎಐ ರಾಜಧಾನಿ: ಪ್ರಿಯಾಂಕ್ ಖರ್ಗೆ

ಭಾರತದ ಕೃತಕ ಬುದ್ಧಿಮತ್ತೆ (ಎಐ) ಮತ್ತು ಡೀಪ್‌ಟೆಕ್ ಕ್ಷೇತ್ರದಲ್ಲಿ ಬೆಂಗಳೂರು ತನ್ನದೇ ಆದ ಪ್ರಾಬಲ್ಯ ಹೊಂದಿದ್ದು, ದೇಶದ ಎಐ ರಾಜಧಾನಿಯಾಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಜೊತೆಗೆ ಕಲಬುರಗಿ, ಹುಬ್ಬಳ್ಳಿ ಮತ್ತು ಮಂಗಳೂರಿನಂತಹ ನಗರಗಳನ್ನೂ ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಗೃಹ, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಶೃಂಗಸಭೆ–2026ರ ಎರಡನೇ ದಿನವಾದ ಬುಧವಾರ ‘ಬೆಂಗಳೂರು ನಾವೀನ್ಯತೆ ವರದಿ–2026’ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕರ್ನಾಟಕದ ಉದ್ಯಮಶೀಲತೆ ಮತ್ತು ನಾವೀನ್ಯತೆಯ ಬೆಳವಣಿಗೆಗೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ವರದಿ ಸಿದ್ಧಪಡಿಸಲಾಗಿದೆ. ಜಾಗತಿಕ ಮಟ್ಟದ ಎಐ, ಕ್ವಾಂಟಮ್ ಮತ್ತು ಸೆಮಿಕಂಡಕ್ಟರ್ ಕಂಪನಿಗಳು ಬೆಂಗಳೂರಿನ ಹೊರತಾಗಿ ರಾಜ್ಯದ ಇತರ ನಗರಗಳಲ್ಲಿಯೂ ಬೆಳೆಯಲು ಅಗತ್ಯವಾದ ಅವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದರು.

ಕರ್ನಾಟಕ ಡಿಜಿಟಲ್ ಆರ್ಥಿಕತೆ ಮಿಷನ್ (ಕೆಡಿಇಎಂ) ಮತ್ತು 3one4 ಕ್ಯಾಪಿಟಲ್ ಸಂಸ್ಥೆಗಳು ಟ್ರಾಕ್ಸನ್‌ನ ದತ್ತಾಂಶಗಳ ಸಹಕಾರದೊಂದಿಗೆ ವರದಿಯನ್ನು ಸಿದ್ಧಪಡಿಸಿವೆ. ದೇಶೀಯ ಸ್ಟಾರ್ಟ್‌ಅಪ್ ಮತ್ತು ಮಾರುಕಟ್ಟೆ ದತ್ತಾಂಶಗಳನ್ನು ಆಧರಿಸಿರುವ ವರದಿಯು ಬೆಂಗಳೂರಿನ ಹೂಡಿಕೆ, ಪ್ರತಿಭಾ ಸಂಪನ್ಮೂಲ, ಯುನಿಕಾರ್ನ್ ಕಂಪನಿಗಳು, ಡೀಪ್‌ಟೆಕ್, ಎಐ ಹಾಗೂ ಬೆಂಗಳೂರು ಹೊರಗಿನ ಉದ್ಯಮ ಸಮೂಹಗಳ ಬೆಳವಣಿಗೆಯನ್ನು ಕುರಿತು ಮಾತನಾಡಿದರು.

ಎಐ ಮತ್ತು ಡೀಪ್‌ಟೆಕ್ ಕ್ಷೇತ್ರದಲ್ಲಿ ಬೆಂಗಳೂರು ಮುಂಚೂಣಿ

ವರದಿಯ ಪ್ರಕಾರ, ಬೆಂಗಳೂರಿನಲ್ಲಿ 2010ರಿಂದ ಆರಂಭವಾದ 1,556 ಡೀಪ್‌ಟೆಕ್ ಸ್ಟಾರ್ಟ್‌ಅಪ್‌ಗಳ ಪೈಕಿ 1,319 ಸಕ್ರಿಯವಾಗಿದ್ದು, ಒಟ್ಟಾರೆ 3.77 ಶತಕೋಟಿ ಡಾಲರ್ ಹೂಡಿಕೆ ಸಂಗ್ರಹಿಸಿವೆ. ನಗರದ 799 ಸ್ವದೇಶಿ ಎಐ ಸ್ಟಾರ್ಟ್‌ಅಪ್‌ಗಳ ಪೈಕಿ 764 ಸಕ್ರಿಯವಾಗಿವೆ ಎಂದರು.

ದೇಶದ ಸ್ವದೇಶಿ ಎಐ ಸ್ಟಾರ್ಟ್‌ಅಪ್‌ಗಳಿಗೆ ದೊರೆತ ಒಟ್ಟು ಹೂಡಿಕೆಯಲ್ಲಿ ಬೆಂಗಳೂರಿನ ಪಾಲು ಶೇ.36.3ರಷ್ಟಿದೆ. 2023ರಿಂದ ದೇಶದಲ್ಲಿ ಸೃಷ್ಟಿಯಾಗಿರುವ ಎಐ ಮತ್ತು ಡೀಪ್‌ಟೆಕ್ ಯುನಿಕಾರ್ನ್ ಕಂಪನಿಗಳ ಪೈಕಿ ಶೇ.71ರಷ್ಟು ಬೆಂಗಳೂರಿನಲ್ಲಿವೆ ಎಂದು ತಿಳಿಸಿದರು.

85 ಶತಕೋಟಿ ಡಾಲರ್ ಹೂಡಿಕೆ

2010ರಿಂದ ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳು ಸುಮಾರು 85 ಶತಕೋಟಿ ಡಾಲರ್ ಹೂಡಿಕೆ ಸಂಗ್ರಹಿಸಿವೆ. ಇದು ಭಾರತದ ಸ್ಟಾರ್ಟ್‌ಅಪ್‌ಗಳಿಗೆ ದೊರೆತ ಒಟ್ಟು ವೆಂಚರ್ ಕ್ಯಾಪಿಟಲ್ ಹೂಡಿಕೆಯ ಶೇ.47ರಷ್ಟಾಗಿದೆ. ನಗರದಲ್ಲಿ 3,810 ಸಕ್ರಿಯ ಹಾಗೂ ಹೂಡಿಕೆ ಪಡೆದ ಸ್ಟಾರ್ಟ್‌ಅಪ್‌ಗಳಿದ್ದು, ಮುಂಬೈನಲ್ಲಿರುವ 1,982 ಸ್ಟಾರ್ಟ್‌ಅಪ್‌ಗಳಿಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ ಎಂಬ ಮಾಹಿತಿಯನ್ನು ತಿಳಿಸಿದರು.

ಬೆಂಗಳೂರಿನ 57 ಯುನಿಕಾರ್ನ್ ಕಂಪನಿಗಳ ಒಟ್ಟು ಮೌಲ್ಯ 211 ಶತಕೋಟಿ ಡಾಲರ್ ಆಗಿದೆ. ಭಾರತದ ಒಟ್ಟು 131 ಯುನಿಕಾರ್ನ್ ಕಂಪನಿಗಳ ಪೈಕಿ ಬೆಂಗಳೂರಿನ ಪಾಲು ಶೇ.44ರಷ್ಟಿದೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರು ಐದನೇ ಅತಿದೊಡ್ಡ ಯುನಿಕಾರ್ನ್ ಕೇಂದ್ರವಾಗಿ ಗುರುತಿಸಿಕೊಂಡಿದೆ ಎಂದು ಹೆಮ್ಮೆಯಿಂದ ಮಾತನಾಡಿದರು.

ಮಹಿಳಾ ಉದ್ಯಮಿಗಳಿಗೂ ಅವಕಾಶ

ಭಾರತದ ಡೀಪ್‌ಟೆಕ್ ಮತ್ತು ಸ್ವದೇಶಿ ಎಐ ಕ್ಷೇತ್ರಗಳಲ್ಲಿನ ಸಕ್ರಿಯ ಹಾಗೂ ಹೂಡಿಕೆ ಪಡೆದ ಮಹಿಳಾ ನೇತೃತ್ವದ ಸ್ಟಾರ್ಟ್‌ಅಪ್‌ಗಳ ಪೈಕಿ ಶೇ.30ರಷ್ಟು ಬೆಂಗಳೂರಿನಲ್ಲಿ ಆರಂಭವಾಗಿವೆ. ಈ ಸಂಸ್ಥೆಗಳು ಒಟ್ಟಾರೆ 323.65 ದಶಲಕ್ಷ ಡಾಲರ್ ಹೂಡಿಕೆಯನ್ನು ಮಾಡಿವೆ.

ನವೆಂಬರ್ 2024ರಿಂದ ಬೆಂಗಳೂರಿನೊಂದಿಗೆ ಸಂಬಂಧ ಹೊಂದಿರುವ 16 ಕಂಪನಿಗಳು ಷೇರುಪೇಟೆಯಲ್ಲಿ ನೋಂದಣಿಯಾಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 42 ಶತಕೋಟಿ ಡಾಲರ್ ಆಗಿದೆ. ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳು ಆರಂಭದಿಂದ ಹೂಡಿಕೆದಾರರಿಗೆ ನಿರ್ಗಮನ ಅವಕಾಶ ಕಲ್ಪಿಸುವ ಹಂತ ತಲುಪಲು ಸರಾಸರಿ 8.2 ವರ್ಷ ತೆಗೆದುಕೊಳ್ಳುತ್ತಿವೆ. ಜಾಗತಿಕ ಸರಾಸರಿ 11.1 ವರ್ಷಗಳಾಗಿದೆ ಎಂದರು.

ಬೆಂಗಳೂರು ಹೊರಗೂ ಸ್ಟಾರ್ಟ್‌ಅಪ್‌ಗಳ ವಿಸ್ತರಣೆ

ರಾಜ್ಯ ಸರ್ಕಾರದ ಎಲಿವೇಟ್ (ELEVATE) ಅನುದಾನ ಕಾರ್ಯಕ್ರಮದಡಿ 2017ರಿಂದ ಈವರೆಗೆ 1,479 ಸ್ಟಾರ್ಟ್‌ಅಪ್‌ಗಳಿಗೆ ಒಟ್ಟು ₹393.58 ಕೋಟಿ ನೆರವು ನೀಡಲಾಗಿದ್ದು, ಇವುಗಳ ಪೈಕಿ ಶೇ.38.6ರಷ್ಟು ಸ್ಟಾರ್ಟ್‌ಅಪ್‌ಗಳು ಬೆಂಗಳೂರಿನ ಹೊರಗಿನ ಪ್ರದೇಶಗಳಲ್ಲಿ ಸ್ಥಾಪನೆಯಾಗಿವೆ ಎಂದರು.

ಬೆಂಗಳೂರು ಹೊರಗಿನ ಉದ್ಯಮ ಸಮೂಹಗಳ ಅಭಿವೃದ್ಧಿಗಾಗಿ ₹75 ಕೋಟಿ ಮೊತ್ತದ ಕ್ಲಸ್ಟರ್ ಸೀಡ್ ಫಂಡ್ ಸ್ಥಾಪಿಸಲಾಗಿದೆ. ಮೈಸೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಐದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ₹1,000 ಕೋಟಿ ಮೊತ್ತದ ಸ್ಥಳೀಯ ಆರ್ಥಿಕತೆ ವೇಗವರ್ಧಕ ಕಾರ್ಯಕ್ರಮ (LEAP) ಜಾರಿಗೊಳಿಸಲಾಗುತ್ತಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್., ಎಲಿವೇಟ್ ಕಾರ್ಯಕ್ರಮದಡಿ ರಾಜ್ಯದ 31 ಜಿಲ್ಲೆಗಳ ಪೈಕಿ 30 ಜಿಲ್ಲೆಗಳ ಸ್ಟಾರ್ಟ್‌ಅಪ್‌ಗಳು ಯಶಸ್ಸು ಸಾಧಿಸಿವೆ. ಆರಂಭಿಕ ಹಂತದಲ್ಲಿ ನೀಡುವ ನೆರವನ್ನು ದೊಡ್ಡ ಮಟ್ಟದ ಉದ್ಯಮಗಳ ಬೆಳವಣಿಗೆಯಾಗಿ ಪರಿವರ್ತಿಸುವುದು ಇಲಾಖೆಯ ಗುರಿಯಾಗಿದೆ ಎಂದು ಹೇಳಿದರು.

ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು ಮಾತನಾಡಿ, ಹೂಡಿಕೆದಾರರು, ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ಮತ್ತು ಉದ್ಯಮ ಸಂಸ್ಥಾಪಕರಿಗೆ ಕರ್ನಾಟಕದ ವಿವಿಧ ನಗರಗಳಲ್ಲಿರುವ ಅವಕಾಶಗಳ ಕುರಿತು ದತ್ತಾಂಶ ಆಧಾರಿತ ಮಾಹಿತಿ ಒದಗಿಸುತ್ತದೆ ಎಂದು ತಿಳಿಸಿದರು.

ಕರ್ನಾಟಕ ಸರ್ಕಾರದ ಸ್ಟಾರ್ಟ್‌ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮಾತನಾಡಿ, ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳು ಯುನಿಕಾರ್ನ್ ಸ್ಥಾನ ತಲುಪುವ ವೇಗ ಮತ್ತು ದೇಶೀಯ ಹೂಡಿಕೆ ಬಂಡವಾಳದ ಹೆಚ್ಚಳವು ರಾಜ್ಯದ ಉದ್ಯಮಶೀಲತಾ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು, ಉದ್ಯಮ ಕ್ಷೇತ್ರದ ಪ್ರಮುಖರು, ಹೂಡಿಕೆದಾರರು ಹಾಗೂ ನವೋದ್ಯಮ ಸಂಸ್ಥಾಪಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments