ಕರ್ನಾಟಕವನ್ನು ಭಾರತದ ಕ್ವಾಂಟಮ್ ರಾಜಧಾನಿಯನ್ನಾಗಿ ಹಾಗೂ ಬೆಂಗಳೂರನ್ನು ಜಾಗತಿಕ ಕ್ವಾಂಟಮ್ ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಪ್ರಸ್ತಾವಿತ ಕ್ವಾಂಟಮ್ ಸಿಟಿ ಯೋಜನೆಯಲ್ಲಿ ಅಮೆರಿಕದ ಪ್ರಮುಖ ತಂತ್ರಜ್ಞಾನ ಕಂಪನಿಗಳು, ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಸಹಭಾಗಿಯಾಗಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಆಹ್ವಾನ ನೀಡಿದರು.
ಬೆಂಗಳೂರು ಟೆಕ್ ಸಮ್ಮಿಟ್ 2026ರ ಅಂಗವಾಗಿ ನಡೆದ ಭಾರತ–ಅಮೆರಿಕ ಕ್ವಾಂಟಮ್ ತಂತ್ರಜ್ಞಾನ ಸಹಕಾರ ಕುರಿತ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಂಶೋಧನೆ, ನಾವೀನ್ಯತೆ, ಹೂಡಿಕೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಸರ್ಕಾರದ ಆಶಯವನ್ನು ವಿವರಿಸಿದರು.
ಕ್ವಾಂಟಮ್ ಸಿಟಿಯನ್ನು ಕೇವಲ ಮೂಲಸೌಕರ್ಯ ಯೋಜನೆಯಾಗಿ ಪರಿಗಣಿಸದೆ, ಸಂಶೋಧನಾ ಸಂಸ್ಥೆಗಳು, ಸ್ಟಾರ್ಟ್ಅಪ್ಗಳು, ಕೈಗಾರಿಕೆಗಳು, ಹೂಡಿಕೆದಾರರು, ಪ್ರತಿಭಾವಂತ ಮಾನವ ಸಂಪನ್ಮೂಲ ಹಾಗೂ ಜಾಗತಿಕ ತಂತ್ರಜ್ಞಾನ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಸಮಗ್ರ ಪರಿಸರ ವ್ಯವಸ್ಥೆಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಾಧುನಿಕ ಪ್ರಯೋಗಾಲಯಗಳು, ವಿಶೇಷ ಉಪಕರಣಗಳು ಮತ್ತು ಪರೀಕ್ಷಾ ಸೌಲಭ್ಯಗಳ ಅಗತ್ಯವಿದೆ. ಇವುಗಳಿಗೆ ಹೆಚ್ಚಿನ ಬಂಡವಾಳ ಬೇಕಾಗುವುದರಿಂದ ಪ್ರತಿಯೊಂದು ಸ್ಟಾರ್ಟ್ಅಪ್ ಅಥವಾ ಸಂಶೋಧನಾ ಸಂಸ್ಥೆಯೂ ಪ್ರತ್ಯೇಕವಾಗಿ ಇಂತಹ ಸೌಲಭ್ಯಗಳನ್ನು ಹೊಂದುವುದು ಕಷ್ಟ. ಹೀಗಾಗಿ ಹಂಚಿಕೆಯ ಮೂಲಸೌಕರ್ಯ (Shared Infrastructure) ಒದಗಿಸುವ ಮೂಲಕ ಸಂಶೋಧನೆಯಿಂದ ಉತ್ಪನ್ನ ಅಭಿವೃದ್ಧಿ ಹಾಗೂ ವಾಣಿಜ್ಯೀಕರಣದವರೆಗೆ ನೆರವು ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಮಗ್ರ ಕ್ವಾಂಟಮ್ ತಂತ್ರಜ್ಞಾನ ನೀತಿ ರೂಪಣೆ
ಕರ್ನಾಟಕ ಸರ್ಕಾರ ಸಮಗ್ರ ಕ್ವಾಂಟಮ್ ತಂತ್ರಜ್ಞಾನ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿದೆ. ಸಂಶೋಧನೆ, ಶಿಕ್ಷಣ ಸಂಸ್ಥೆಗಳು, ಸ್ಟಾರ್ಟ್ಅಪ್ಗಳು, ಕೈಗಾರಿಕೆ, ಹೂಡಿಕೆ ಪ್ರೋತ್ಸಾಹ, ಜಾಗತಿಕ ಸಹಭಾಗಿತ್ವ, ಹಣಕಾಸು ವ್ಯವಸ್ಥೆ ಹಾಗೂ ಅನುಷ್ಠಾನದ ನಿರ್ದಿಷ್ಟ ಗುರಿಗಳನ್ನು ಈ ನೀತಿ ಒಳಗೊಳ್ಳಲಿದೆ ಎಂದು ಸಚಿವರು ಹೇಳಿದರು.
ಕ್ವಾಂಟಮ್ ಕಂಪ್ಯೂಟಿಂಗ್, ಕ್ವಾಂಟಮ್ ಸಂವಹನ, ಕ್ವಾಂಟಮ್ ಸೆನ್ಸಿಂಗ್, ಸೈಬರ್ ಭದ್ರತೆ, ಹಾರ್ಡ್ವೇರ್ ಅಭಿವೃದ್ಧಿ, ಮಾನವ ಸಂಪನ್ಮೂಲ ಸೃಷ್ಟಿ ಮತ್ತು ಸಂಶೋಧನೆಯ ವಾಣಿಜ್ಯೀಕರಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಸಹಕಾರಕ್ಕೆ ವಿಪುಲ ಅವಕಾಶಗಳಿವೆ ಎಂದರು.
ಮುಂದಿನ ಪೀಳಿಗೆಯ ಕ್ವಾಂಟಮ್ ತಂತ್ರಜ್ಞಾನವನ್ನು ಯಾವುದೇ ಒಂದು ದೇಶ ಅಥವಾ ಸಂಸ್ಥೆ ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ವಿವಿಧ ದೇಶಗಳ ಸಂಶೋಧಕರು, ವಿಶ್ವವಿದ್ಯಾಲಯಗಳು, ಕೈಗಾರಿಕೆಗಳು ಮತ್ತು ಸ್ಟಾರ್ಟ್ಅಪ್ಗಳ ನಡುವಿನ ಸಹಭಾಗಿತ್ವ ಅತ್ಯಗತ್ಯ. ಭಾರತೀಯ ಮತ್ತು ಅಮೆರಿಕದ ಸಂಸ್ಥೆಗಳು ಒಟ್ಟಾಗಿ ತಂತ್ರಜ್ಞಾನ ಅಭಿವೃದ್ಧಿಪಡಿಸಿ, ಪರೀಕ್ಷಿಸಿ, ಜಾಗತಿಕ ಮಾರುಕಟ್ಟೆಗೆ ಉತ್ಪನ್ನಗಳನ್ನು ಪರಿಚಯಿಸುವ ವೇದಿಕೆಯಾಗಿ ಕ್ವಾಂಟಮ್ ಸಿಟಿ ರೂಪುಗೊಳ್ಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಬೆಂಗಳೂರಿನ ವಿಶ್ವಮಟ್ಟದ ಸಂಶೋಧನಾ ಸಂಸ್ಥೆಗಳು, ತಾಂತ್ರಿಕ ಪ್ರತಿಭೆ, ಸ್ಟಾರ್ಟ್ಅಪ್ಗಳು ಮತ್ತು ತಂತ್ರಜ್ಞಾನ ಕಂಪನಿಗಳ ಸಾಮರ್ಥ್ಯವನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಕ್ವಾಂಟಮ್ ತಂತ್ರಜ್ಞಾನ ಪರಿಸರ ವ್ಯವಸ್ಥೆ ನಿರ್ಮಿಸಲು ಕರ್ನಾಟಕಕ್ಕೆ ಉತ್ತಮ ಅವಕಾಶವಿದೆ. ಸಂಶೋಧನೆಯಿಂದ ನಾವೀನ್ಯತೆ, ನಾವೀನ್ಯತೆಯಿಂದ ಉದ್ಯಮ ಹಾಗೂ ಉದ್ಯಮದಿಂದ ಜಾಗತಿಕ ಮಾರುಕಟ್ಟೆಯವರೆಗೆ ಸ್ಪಷ್ಟ ಮಾರ್ಗ ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ ಎಂದು ಸಚಿವರು ತಿಳಿಸಿದರು.


