Homeಕರ್ನಾಟಕಮುಂದಿನ ಸಂಪುಟ ಸಭೆಯಲ್ಲಿ ನಾಗರಿಕ ವಿಮಾನಯಾನ ನೀತಿ ಅಂಗೀಕಾರ: ಎಂ ಬಿ ಪಾಟೀಲ

ಮುಂದಿನ ಸಂಪುಟ ಸಭೆಯಲ್ಲಿ ನಾಗರಿಕ ವಿಮಾನಯಾನ ನೀತಿ ಅಂಗೀಕಾರ: ಎಂ ಬಿ ಪಾಟೀಲ

ರಾಜ್ಯದಲ್ಲಿ ವೈಮಾನಿಕ ಕ್ಷೇತ್ರದ ಬೆಳವಣಿಗೆಯನ್ನು ಪರಿಗಣಿಸಿ, ಮುಂದಿನ ಸಂಪುಟ ಸಭೆಯಲ್ಲಿ ನಮ್ಮದೇ ಆದ ನಾಗರಿಕ ವಿಮಾನಯಾನ ನೀತಿಯನ್ನು ಅಂಗೀಕರಿಸಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾವು ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಕಟ್ಟಿರುವ ವಿಮಾನ ನಿಲ್ದಾಣಗಳು ಹಾಗೆಯೇ ಖಾಲಿ ಇರಬಾರದು. ಅವುಗಳ ಮೂಲಕ ವಿಮಾನ ಸೇವೆಗಳು ಸಾರ್ವಜನಿಕರು ಮತ್ತು ಕೈಗಾರಿಕಾ ವಲಯಕ್ಕೆ ದೊರೆಯಬೇಕು ಎಂದರು.

ಶಿವಮೊಗ್ಗ ವಿಮಾನ ನಿಲ್ದಾಣ ಸ್ಥಗಿತವಾಗಿರುವುದಕ್ಕೆ ರಾಜ್ಯ ಸರಕಾರ ಹೊಣೆಯಲ್ಲ. ಕೇಂದ್ರ ಸರಕಾರದ ದೋಷಪೂರಿತ ಉಡಾನ್ ನೀತಿಯೇ ಕಾರಣವಾಗಿದೆ. ನಮ್ಮ ವಿರುದ್ಧ ಮತ್ತೆಮತ್ತೆ ಆರೋಪ ಮಾಡುತ್ತಿರುವ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಉಡಾನ್ ಯೋಜನೆಯನ್ನು ಮೂರು ವರ್ಷಗಳಿಂದ ಐದು ವರ್ಷಗಳಿಗೆ ವಿಸ್ತರಿಸಬೇಕು. ಇದಾದ ಬಳಿಕ ಇನ್ನೂ ಐದು ವರ್ಷಗಳಿಗೆ ರಾಜ್ಯವು ಶೇಕಡ 50ರಷ್ಟು ವೆಚ್ಚ ಭರಿಸಲು ಸಿದ್ಧವಿದೆ. ರಾಘವೇಂದ್ರ ಅವರು ಇದನ್ನು ಪ್ರಧಾನಿ ಮೋದಿ ಮತ್ತು ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೆ ಮನದಟ್ಟು ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.

ವಿಮಾನಯಾನ ಕ್ಷೇತ್ರದಲ್ಲಿ ಈಗ ಎಂ.ಆರ್.ಒ ಸೇವೆಗಳಿಗೆ ಭಾರೀ ಬೇಡಿಕೆ ಕಂಡುಬರುತ್ತಿದೆ. ಹೀಗಾಗಿ ನಾವು ವಿಮಾನ ತಯಾರಿಕೆಯ ಜತೆಗೆ ಬಿಡಿಭಾಗಗಳು ಮತ್ತು ಸಂಪೂರ್ಣ ಪೂರೈಕೆ ಸರಪಳಿಯ ಬೆಳವಣಿಗೆಗೆ ನೂತನ‌ ನೀತಿಯಲ್ಲಿ ಆದ್ಯತೆ ಕೊಟ್ಟಿದ್ದೇವೆ. ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮೊದಲು ಪೂರೈಕೆದಾರರ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.

ನಮ್ಮಲ್ಲಿ ಕಾಲಿನ್ಸ್, ಡೈನಮ್ಯಾಟಿಕ್ಸ್, ಸಾಫ್ರಾನ್, ಏಕಸ್, ಬೆಲಾಟ್ರಿಕ್ಸ್ ಮುಂತಾದ ವೈಮಾಂತರಿಕ್ಷ ಕಂಪನಿಗಳಿವೆ. ಈಗ ಫ್ರಾನ್ಸ್ ಸೇರಿದಂತೆ ಹಲವೆಡೆ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಹೀಗಾಗಿ ಹೂಡಿಕೆದಾರರ ಸಮಾವೇಶಕ್ಕೂ ಮೊದಲು ಅಥವಾ ಅದು ಮುಗಿದ ಬಳಿಕ ಫ್ರಾನ್ಸ್‌ನಲ್ಲಿ ಮತ್ತೊಂದು ಸುತ್ತಿನ ರೋಡ್-ಶೋ ನಡೆಸಲಾಗುವುದು ಎಂದರು.

ಕುಮಾರಸ್ವಾಮಿ ಆರೋಪ ಸರಿಯಲ್ಲ

ಕೇಂದ್ರ ಸರಕಾರದಲ್ಲಿ ಭಾರೀ ಕೈಗಾರಿಕಾ ಸಚಿವರಾಗಿರುವ ರಾಜ್ಯದ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಕೈಗಾರಿಕೆಗಳಿಗೆ ಹಿನ್ನಡೆ ಆಗುತ್ತಿದೆ ಎಂದು ಹೇಳಿರುವಂತಹ ಮಾತು ಆಧಾರರಹಿತವಾಗಿದೆ. ಅವರು ನಮಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೆ ತೆಪ್ಪಗಾದರೂ ಇರಲಿ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ.

ನಮ್ಮಲ್ಲಿ ಕೈಗಾರಿಕೆಗಳಿಗೆ ರಿಯಾಯಿತಿ ನೀಡಲು ನಿಯಮವಿದ್ದು ಶೇ 35-40ರಷ್ಟು ಕೊಡಲು ಅವಕಾಶವಿದೆ. ಫಾಕ್ಸಕಾನ್ ಕಂಪನಿಗೆ ನಾವು ಕೊಟ್ಟಿದ್ದೇವೆ. ಆದರೆ ಲೆನ್ಸ್ ಕಾರ್ಟ್ ತರಹದ ಕಂಪನಿ ಶೇ.120ರಷ್ಟು ಪ್ರೋತ್ಸಾಹ ಭತ್ಯೆ ಕೇಳಿದೆ. ಇದು ಆ ಕಂಪನಿ ಹೂಡಲು ತೀರ್ಮಾನಿಸಿದ್ದ ಬಂಡವಾಳಕ್ಕಿಂತ ಜಾಸ್ತಿ ಇದ್ದಿದ್ದರಿಂದ ನಾವು ಅಷ್ಟೊಂದು ಕೊಡಲು ಆಗುವುದಿಲ್ಲ ಬೇರೆ ರಾಜ್ಯಗಳಲ್ಲಿ ಶೇ.50-55ರಷ್ಟು ಕೊಡುತ್ತಿರಬಹುದು. ನಮಗೆ ಅಂತಹ ಅನಿವಾರ್ಯತೆ ಇನ್ನು ಬಂದೊದಗಿಲ್ಲ ಎಂದು ಸಂಪೂರ್ಣವಾಗಿ  ವಿವರಿಸಿದರು.

ಕೈಗಾರಿಕೆಗಳಿಗೆ ಪ್ರೋತ್ಸಾಹ ಕೊಡುವಲ್ಲಿ ಕೇಂದ್ರ ಸರಕಾರದ ಪಾತ್ರವೂ ಇದೆ. ಹಲವು ಸೆಮಿಕಂಡಕ್ಟರ್ ಕಂಪನಿಗಳು ರಾಜ್ಯಕ್ಕೆ ಬರಲು ಆಸಕ್ತಿ ಹೊಂದಿದ್ದವು. ನಮ್ಮ ಜತೆ ಊಟ ಮಾಡಿ, ಬರುವ ಭರವಸೆ ಕೂಡ ನೀಡಿದ್ದರು. ಆದರೆ ಕೇಂದ್ರ ಸರಕಾರ 50 ಸಾವಿರ ಕೋಟಿ ರೂಪಾಯಿ ಮತ್ತು ಗುಜರಾತ್ ಸರಕಾರ 30 ಸಾವಿರ ಕೋಟಿ ರೂಪಾಯಿ ಪ್ರೋತ್ಸಾಹ ಅನುದಾನ ಕೊಟ್ಟು ಆ ರಾಜ್ಯಕ್ಕೆ ಕರೆದುಕೊಂಡು ಹೋದವು. ಕುಮಾರಸ್ವಾಮಿ ಅವರು ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಇಷ್ಟಾದರೂ ಲ್ಯಾಮ್ ರೀಸರ್ಚ್, ಅಪ್ಪೈಡ್ ಮೆಟೀರಿಯಲ್ಸ್ ತರಹದ ಜಾಗತಿಕ ಮಟ್ಟದ ಸೆಮಿಕಂಡಕ್ಟರ್ ಕಂಪನಿಗಳು ರಾಜ್ಯಕ್ಕೆ ಬರುವಂತೆ ಮಾಡಿದ್ದೇವೆ. ಕುಮಾರಸ್ವಾಮಿ ಅವರು ಹೀರೋ ಕಂಪನಿಯ ವಿಚಾರದಲ್ಲಿ ಹಸೀ ಸುಳ್ಳು ಹೇಳಿ, ಜನರನ್ನು ತಪ್ಪು ದಾರಿಗೆಳೆದರು. ವಾಸ್ತವದಲ್ಲಿ ಆ ಕಂಪನಿಯವರು ಕುಮಾರಸ್ವಾಮಿಯವರನ್ನು ಭೇಟಿ ಮಾಡಿಯೇ ಇಲ್ಲ ಎಂದು ಹೇಳಿದರು.

ಕೇಂದ್ರ ಬರ ಪರಿಹಾರ ನೀಡಲಿ

ನಿಯಮಾವಳಿ ಪ್ರಕಾರ ಕೇಂದ್ರ ಸರಕಾರವು ರಾಜ್ಯಕ್ಕೆ ಬರ ಪರಿಹಾರ ನೀಡಬೇಕು. ಈ ವಿಚಾರದಲ್ಲಿ ಅದು ತಾರತಮ್ಯ ಮಾಡುತ್ತಿದೆ. ಹಿಂದೆ ಕೃಷ್ಣ ಬೈರೇಗೌಡರು ಈ ವಿಚಾರವಾಗಿ ಕೋರ್ಟಿನ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದಿತ್ತು. ಈಗ ನಮ್ಮಲ್ಲಿ ತೀವ್ರ ಬರಗಾಲ ಇದೆ. ಕೇಂದ್ರವು ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಸಚಿವರು ಆಗ್ರಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments