Homeಕರ್ನಾಟಕಪ್ರಜಾಪ್ರಭುತ್ವ, ದುರ್ಬಲ ವರ್ಗಗಳ ಹಕ್ಕುಗಳ ರಕ್ಷಕಿಯಾಗಿ ಸೋನಿಯಾ ಗಾಂಧಿ: ಬಿ.ಕೆ. ಹರಿಪ್ರಸಾದ್

ಪ್ರಜಾಪ್ರಭುತ್ವ, ದುರ್ಬಲ ವರ್ಗಗಳ ಹಕ್ಕುಗಳ ರಕ್ಷಕಿಯಾಗಿ ಸೋನಿಯಾ ಗಾಂಧಿ: ಬಿ.ಕೆ. ಹರಿಪ್ರಸಾದ್

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೇವಲ ಕಾಂಗ್ರೆಸ್ ಪಕ್ಷದ ನಾಯಕಿಯಲ್ಲ. ದೇಶದ ಏಕತೆ, ಸಮಗ್ರತೆ, ಪ್ರಜಾಪ್ರಭುತ್ವ ಹಾಗೂ ಬಡವರು, ಮಹಿಳೆಯರು ಮತ್ತು ದುರ್ಬಲ ವರ್ಗಗಳ ಹಕ್ಕುಗಳ ರಕ್ಷಣೆಗಾಗಿ ತಮ್ಮ ಸಾರ್ವಜನಿಕ ಜೀವನವನ್ನೇ ಮುಡಿಪಾಗಿಟ್ಟ ನಾಯಕಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಬಣ್ಣಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸೋನಿಯಾ ಗಾಂಧಿ ಅವರ ಆತ್ಮಕಥನ ‘Belonging: A Journey of Love’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಅಧಿಕಾರಕ್ಕಿಂತ ದೇಶದ ಹಿತವೇ ಮುಖ್ಯ ಎಂಬುದನ್ನು ತಮ್ಮ ನಡೆನುಡಿಗಳ ಮೂಲಕ ಸಾಬೀತುಪಡಿಸಿದ ಸೋನಿಯಾ ಗಾಂಧಿ ಅವರ ರಾಜಕೀಯ ತ್ಯಾಗ ಮತ್ತು ನಾಯಕತ್ವವನ್ನು ಸ್ಮರಿಸಿದರು.

ಸೋನಿಯಾ ಗಾಂಧಿ ಅವರೊಂದಿಗೆ ಸುಮಾರು ಎರಡು ದಶಕಗಳ ಕಾಲ ನಿಕಟವಾಗಿ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಂಡ ಹರಿಪ್ರಸಾದ್, ಕಾಂಗ್ರೆಸ್ ಪಕ್ಷದ ಸಂಘಟನೆ, ರೈತರ ಸಮಸ್ಯೆಗಳಿಗೆ ಸ್ಪಂದನೆ, ದುರ್ಬಲ ವರ್ಗಗಳ ಹಕ್ಕುಗಳ ರಕ್ಷಣೆ ಹಾಗೂ ಪಕ್ಷದ ಕಾರ್ಯಕರ್ತರ ಸಂಕಷ್ಟಗಳಿಗೆ ನೆರವಾದ ಹಲವು ಘಟನೆಗಳನ್ನು ನೆನಪಿಸಿಕೊಂಡರು.

ಕಾಂಗ್ರೆಸ್ ಸಂಕಷ್ಟದಲ್ಲಿದ್ದಾಗ ನಾಯಕತ್ವ ವಹಿಸಿದ ಸೋನಿಯಾ

1996, 1998 ಮತ್ತು 1999ರ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಹಲವು ಆಂತರಿಕ ಸಮಸ್ಯೆ ಹಾಗೂ ರಾಜಕೀಯ ಸವಾಲುಗಳನ್ನು ಎದುರಿಸುತ್ತಿತ್ತು. ಪಕ್ಷದ ಭವಿಷ್ಯದ ಬಗ್ಗೆ ಆತಂಕ ವ್ಯಕ್ತವಾಗಿದ್ದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ನಾಯಕತ್ವ ವಹಿಸಿಕೊಳ್ಳಬೇಕೆಂದು ಪಕ್ಷದ ಹಿರಿಯರು ಮನವಿ ಮಾಡಿದ್ದರು. ಅದರಂತೆ 1998ರ ಮಾರ್ಚ್‌ನಲ್ಲಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರು ಎಂದು ತಿಳಿಸಿದರು.

ಸುಮಾರು ಎರಡು ದಶಕಗಳ ಕಾಲ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಸೋನಿಯಾ ಗಾಂಧಿ, ಅನೇಕ ರಾಜಕೀಯ ಸವಾಲುಗಳು, ಸೋಲುಗಳು, ಟೀಕೆಗಳು ಮತ್ತು ವೈಯಕ್ತಿಕ ದಾಳಿಗಳನ್ನು ಎದುರಿಸಿದರೂ ಪಕ್ಷದ ಸಿದ್ಧಾಂತ ಹಾಗೂ ಜಾತ್ಯತೀತ ಮೌಲ್ಯಗಳ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ ಎಂದರು.

ಬಳ್ಳಾರಿ ಕ್ಷೇತ್ರದ ಐತಿಹಾಸಿಕ ಗೆಲುವು

1999ರ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರು ಕರ್ನಾಟಕದ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿದ್ದನ್ನು ಸ್ಮರಿಸಿದ ಹರಿಪ್ರಸಾದ್, ವಿದೇಶಿ ಮೂಲದ ವಿಚಾರ ಮುಂದಿಟ್ಟುಕೊಂಡು ಅವರ ವಿರುದ್ಧ ಅಪಪ್ರಚಾರ ನಡೆಸಲಾಗಿತ್ತು. ಆದರೆ ಬಳ್ಳಾರಿಯ ಜನತೆ ಅದಕ್ಕೆ ಮಣಿಯದೆ ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದರು. ಕರ್ನಾಟಕದ ಜನತೆ ಅವರ ರಾಜಕೀಯ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

ಅದೇ ಚುನಾವಣೆಯಲ್ಲಿ ತಾವು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಂದರ್ಭವನ್ನು ವಿವರಿಸಿದ ಅವರು, ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ಅವರ ವಿರುದ್ಧ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಹೆಚ್ಚಿನ ಗಮನ ಕೇಂದ್ರೀಕರಿಸುವುದನ್ನು ತಪ್ಪಿಸಲು ತಾವು ಬೆಂಗಳೂರಿನಿಂದ ಸ್ಪರ್ಧಿಸುವಂತೆ ಆಸ್ಕರ್ ಫೆರ್ನಾಂಡಿಸ್ ಸಲಹೆ ನೀಡಿದ್ದರು. ವೈಯಕ್ತಿಕ ಗೆಲುವಿಗಿಂತ ಪಕ್ಷದ ಹಿತ ಮುಖ್ಯ ಎಂಬುದನ್ನು ಅಂದು ಅರಿತುಕೊಂಡಿದ್ದೆ ಎಂದು ತಿಳಿಸಿದರು.

ಜನರ ಮನೆಬಾಗಿಲಿಗೆ ತೆರಳಿ ಸಮಸ್ಯೆ ಆಲಿಸುತ್ತಿದ್ದ ನಾಯಕಿ

ತಮ್ಮ ರಾಜಕೀಯ ಜೀವನದ ಸುಮಾರು 18ರಿಂದ 20 ವರ್ಷಗಳ ಕಾಲ ಸೋನಿಯಾ ಗಾಂಧಿ ಅವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿರುವುದಾಗಿ ತಿಳಿಸಿದ ಹರಿಪ್ರಸಾದ್, ರೈತರ ಆತ್ಮಹತ್ಯೆ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳ ನೋವನ್ನು ಆಲಿಸುತ್ತಿದ್ದ ಅವರ ಜನಪರ ಕಾಳಜಿಯನ್ನು ವಿವರಿಸಿದರು.

ರಾಜಸ್ಥಾನದ ಮರುಭೂಮಿಯ ತೀವ್ರ ಬಿಸಿಲಿನಲ್ಲಿಯೂ ರೈತರ ಮನೆಗಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸುತ್ತಿದ್ದರು. ದೆಹಲಿಯಲ್ಲಿ ಕುಳಿತು ಭಾಷಣ ಮಾಡುವುದಕ್ಕೂ, ಸಂಕಷ್ಟದಲ್ಲಿರುವ ಜನರ ಮನೆಬಾಗಿಲಿಗೆ ತೆರಳಿ ಅವರ ನೋವನ್ನು ಆಲಿಸುವುದಕ್ಕೂ ವ್ಯತ್ಯಾಸವಿದೆ. ಸೋನಿಯಾ ಗಾಂಧಿ ಅವರು ಜನರ ನಡುವೆ ತೆರಳಿ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ನಾಯಕಿಯಾಗಿದ್ದರು ಎಂದು ಹೇಳಿದರು.

ಮನಮೋಹನ್ ಸಿಂಗ್ ಅವರ ಪ್ರಾಮಾಣಿಕತೆಗೆ ಗೌರವ

ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಡಾ. ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಿದ್ದ ಘಟನೆಯನ್ನು ಹಂಚಿಕೊಂಡರು.

ಸಂಸದರಿಗೆ ಲಭ್ಯವಿರುವ ಸರ್ಕಾರಿ ವಿಮಾನ ಪ್ರಯಾಣ ಸೌಲಭ್ಯವನ್ನು ಪಕ್ಷದ ಕಾರ್ಯಕ್ರಮಕ್ಕೆ ಬಳಸುವುದಿಲ್ಲ. ಪಕ್ಷವೇ ಪ್ರಯಾಣದ ವ್ಯವಸ್ಥೆ ಮಾಡಿದರೆ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ಮನಮೋಹನ್ ಸಿಂಗ್ ತಿಳಿಸಿದ್ದರು. ಈ ವಿಚಾರವನ್ನು ಸೋನಿಯಾ ಗಾಂಧಿ ಅವರ ಗಮನಕ್ಕೆ ತಂದಾಗ, ಮನಮೋಹನ್ ಸಿಂಗ್ ಅವರಂತಹ ಪ್ರಾಮಾಣಿಕ ವ್ಯಕ್ತಿಗಳ ನಿಲುವನ್ನು ಗೌರವಿಸಿ ಪಕ್ಷದಿಂದಲೇ ಪ್ರಯಾಣದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ನೈತಿಕ ಬದ್ಧತೆ ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ಹರಿಪ್ರಸಾದ್ ಹೇಳಿದರು.

ಬಡವರ ಹಕ್ಕುಗಳಿಗೆ ಕಾನೂನಿನ ರಕ್ಷಣೆ

ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಅರಣ್ಯ ಹಕ್ಕುಗಳ ಕಾಯ್ದೆ, ಶಿಕ್ಷಣದ ಹಕ್ಕು ಕಾಯ್ದೆ ಹಾಗೂ ಆಹಾರ ಭದ್ರತಾ ಕಾಯ್ದೆಗಳ ಅನುಷ್ಠಾನದಲ್ಲಿ ಸೋನಿಯಾ ಗಾಂಧಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಬಡವರು ಮತ್ತು ಕೃಷಿ ಕಾರ್ಮಿಕರಿಗೆ ಉದ್ಯೋಗದ ಹಕ್ಕು, ಆಡಳಿತದಲ್ಲಿ ಪಾರದರ್ಶಕತೆ, ಆದಿವಾಸಿಗಳಿಗೆ ಅರಣ್ಯ ಹಕ್ಕು, ಮಕ್ಕಳಿಗೆ ಶಿಕ್ಷಣದ ಹಕ್ಕು ಹಾಗೂ ಬಡವರಿಗೆ ಆಹಾರ ಭದ್ರತೆ ಒದಗಿಸುವ ಉದ್ದೇಶದಿಂದ ಈ ಕಾನೂನುಗಳನ್ನು ಜಾರಿಗೆ ತರಲಾಯಿತು. ಈ ನಿರ್ಧಾರಗಳಿಗೆ ಪಕ್ಷದೊಳಗಿನಿಂದಲೂ ವಿರೋಧ ವ್ಯಕ್ತವಾದರೂ ದುರ್ಬಲ ವರ್ಗಗಳ ಹಿತದ ವಿಚಾರದಲ್ಲಿ ಸೋನಿಯಾ ಗಾಂಧಿ ಹಿಂದೆ ಸರಿಯಲಿಲ್ಲ ಎಂದು ತಿಳಿಸಿದರು.

ಕಾರ್ಯಕರ್ತರ ಸಂಕಷ್ಟಕ್ಕೆ ತಕ್ಷಣ ಸ್ಪಂದನೆ

ಸೋನಿಯಾ ಗಾಂಧಿ ಅವರ ಮಾನವೀಯ ಗುಣಗಳನ್ನು ವಿವರಿಸಿದ ಹರಿಪ್ರಸಾದ್, ಅಪಘಾತಕ್ಕೀಡಾದ ರಾಜಸ್ಥಾನದ ಸಂಸದರೊಬ್ಬರಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಅಗತ್ಯವಿದ್ದರೆ ಏರ್ ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ರಾತ್ರಿ ವೇಳೆ ಕರೆ ಮಾಡಿ ಸೂಚಿಸಿದ್ದ ಘಟನೆಯನ್ನು ಸ್ಮರಿಸಿದರು.

ಮತ್ತೊಂದು ಸಂದರ್ಭದಲ್ಲಿ ಮಾಜಿ ಸಂಸದರೊಬ್ಬರ ಪತಿ ಆಸ್ಪತ್ರೆಗೆ ದಾಖಲಾಗಲು ಹಣವಿಲ್ಲದೆ ಸಂಕಷ್ಟದಲ್ಲಿದ್ದಾಗ, ಪಕ್ಷದ ಖಜಾಂಚಿಯಾಗಿದ್ದ ಮೋತಿಲಾಲ್ ವೋರಾ ಅವರ ಮೂಲಕ ತಕ್ಷಣ ಹಣದ ವ್ಯವಸ್ಥೆ ಮಾಡಿಸಿ ಚಿಕಿತ್ಸೆ ಕೊಡಿಸಲು ಸೂಚಿಸಿದ್ದರು. ಕಾರ್ಯಕರ್ತರನ್ನು ಕೇವಲ ರಾಜಕೀಯ ಕೆಲಸಗಾರರಂತೆ ನೋಡದೆ ಕುಟುಂಬದ ಸದಸ್ಯರಂತೆ ಕಾಣುತ್ತಿದ್ದ ನಾಯಕಿ ಅವರು ಎಂದರು.

ನಕ್ಸಲ್ ದಾಳಿಯ ಸಂದರ್ಭದಲ್ಲೂ ಕಾರ್ಯಕರ್ತರ ಬಗ್ಗೆ ಕಾಳಜಿ

2013ರಲ್ಲಿ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ನಡೆದ ನಕ್ಸಲ್ ದಾಳಿಯನ್ನು ಸ್ಮರಿಸಿದ ಹರಿಪ್ರಸಾದ್, ಘಟನೆಯಲ್ಲಿ ಸುಮಾರು 28 ಮಂದಿ ನಾಯಕರು ಮತ್ತು ಕಾರ್ಯಕರ್ತರು ಮೃತಪಟ್ಟ ಸುದ್ದಿ ತಿಳಿದ ಕೂಡಲೇ ಸೋನಿಯಾ ಗಾಂಧಿ ತೀವ್ರ ದುಃಖಿತರಾಗಿದ್ದರು. ಅಂದೇ ರಾತ್ರಿ ಘಟನಾ ಸ್ಥಳಕ್ಕೆ ತೆರಳಲು ಸೋನಿಯಾ ಗಾಂಧಿ ಮತ್ತು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸಿದ್ಧರಾಗಿದ್ದರು.

ಭದ್ರತಾ ಕಾರಣಗಳಿಂದ ರಾತ್ರಿ ಪ್ರಯಾಣ ಬೇಡ, ಮರುದಿನ ಬೆಳಗ್ಗೆ ತೆರಳುವಂತೆ ಮನವಿ ಮಾಡಿದ್ದೆ. ರಾಹುಲ್ ಗಾಂಧಿ ಅವರೊಂದಿಗೆ ತಾವು ಘಟನಾ ಸ್ಥಳಕ್ಕೆ ತೆರಳಿದ್ದಾಗಿ ತಿಳಿಸಿದ ಅವರು, ಪಕ್ಷದ ಕಾರ್ಯಕರ್ತರಿಗೆ ಸಂಕಷ್ಟ ಎದುರಾದಾಗ ಕುಟುಂಬದ ಸದಸ್ಯರಿಗೆ ಸಂಭವಿಸಿದ ನೋವಿನಂತೆ ಸ್ಪಂದಿಸುವ ಗುಣ ಸೋನಿಯಾ ಗಾಂಧಿ ಅವರಲ್ಲಿತ್ತು ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments