Homeಕರ್ನಾಟಕಬೇಡ್ತಿ-ವರದಾ ನದಿ ಜೋಡಣೆ ಯೋಜನೆ ತ್ವರಿತಗತಿಗೆ ಸಚಿವ ಚಲುವರಾಯಸ್ವಾಮಿ ಸೂಚನೆ

ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ತ್ವರಿತಗತಿಗೆ ಸಚಿವ ಚಲುವರಾಯಸ್ವಾಮಿ ಸೂಚನೆ

ರಾಜ್ಯದ ಮಹತ್ವಾಕಾಂಕ್ಷಿ ಬೇಡ್ತಿ-ವರದಾ (ಹಿರೇವಡ್ಡಟ್ಟಿ) ನದಿ ಜೋಡಣೆ ಯೋಜನೆಯ ಕಾಮಗಾರಿಗಳನ್ನು ತ್ವರಿತಗೊಳಿಸಿ, ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಕೃಷ್ಣಾ ಭಾಗ್ಯ ಜಲ ನಿಗಮದ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

9,652 ಕೋಟಿ ರೂ. ವೆಚ್ಚದ ಯೋಜನೆ; ಐದು ಜಿಲ್ಲೆಗಳ 70 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ

ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ (NWDA) ಸಿದ್ಧಪಡಿಸುತ್ತಿರುವ ಈ ಯೋಜನೆಗೆ ಅಂದಾಜು 9,652.73 ಕೋಟಿ ರೂ. ವೆಚ್ಚವಾಗಲಿದೆ. ಪಶ್ಚಿಮಾಭಿಮುಖವಾಗಿ ಹರಿಯುವ ಬೇಡ್ತಿ ನದಿಯ ಮುಂಗಾರು ಹಂಗಾಮಿನ ಹೆಚ್ಚುವರಿ 524 ಮಿಲಿಯನ್ ಘನ ಮೀಟರ್ (ಸುಮಾರು 18.5 ಟಿಎಂಸಿ) ನೀರನ್ನು ಪೈಪ್‌ಲೈನ್ ಮತ್ತು ಲಿಫ್ಟ್ ವ್ಯವಸ್ಥೆಯ ಮೂಲಕ ತುಂಗಭದ್ರಾ ಉಪಕಣಿವೆಗೆ ಹರಿಸುವ ಉದ್ದೇಶ ಹೊಂದಲಾಗಿದೆ.

ಈ ಯೋಜನೆಯಡಿ ಲಭ್ಯವಾಗುವ ನೀರಿನಲ್ಲಿ 77 ಮಿಲಿಯನ್ ಘನ ಮೀಟರ್ ಕುಡಿಯುವ ನೀರಿಗೆ, 131 ಮಿಲಿಯನ್ ಘನ ಮೀಟರ್ ಕೈಗಾರಿಕೆಗಳಿಗೆ ಹಾಗೂ 316 ಮಿಲಿಯನ್ ಘನ ಮೀಟರ್ ನೀರನ್ನು ಕೃಷಿ ಮತ್ತು ನೀರಾವರಿ ಉದ್ದೇಶಗಳಿಗೆ ಬಳಸಿಕೊಳ್ಳಲು ಯೋಜಿಸಲಾಗಿದೆ. ಇದರಿಂದ ಒಟ್ಟು 70,053 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಸುಮಾರು 20.21 ಲಕ್ಷ ಜನರಿಗೆ ಪ್ರಯೋಜನವಾಗಲಿದೆ. ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ.

ಸ್ಥಳ ಗುರುತಿಸುವಿಕೆ, ಅರಣ್ಯ ಅನುಮತಿಗೆ ಸೂಚನೆ

ಯೋಜನೆಯ ಮಾರ್ಗದಲ್ಲಿ ಹಾವೇರಿ ಜಿಲ್ಲೆಯಲ್ಲಿ ನೀರು ಸಂಗ್ರಹಣಾ ಘಟಕ ನಿರ್ಮಿಸಲು ಸೂಕ್ತ ಸ್ಥಳವನ್ನು ಕೂಡಲೇ ಗುರುತಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ನೀರಾವರಿ ಅಚ್ಚುಕಟ್ಟು ಪ್ರದೇಶವನ್ನು ತ್ವರಿತವಾಗಿ ನಿಗದಿಪಡಿಸಬೇಕು. ಯೋಜನೆಯ ಸಮೀಕ್ಷೆ ಮತ್ತು ತನಿಖಾ ಕಾರ್ಯಗಳಿಗೆ ಅಗತ್ಯವಿರುವ ಅರಣ್ಯ ಇಲಾಖೆಯ ಅನುಮತಿಗಳನ್ನು ಆದ್ಯತೆಯ ಮೇರೆಗೆ ಪಡೆದುಕೊಳ್ಳಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಯೋಜನೆಗೆ ಸಂಬಂಧಿಸಿದ ಟೊಪೊಗ್ರಾಫಿಕಲ್ ಮತ್ತು ಜಿಯೋಲಾಜಿಕಲ್ ಸಮೀಕ್ಷೆಗಳು ಪ್ರಗತಿಯಲ್ಲಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸಿ ವಿಸ್ತೃತ ಯೋಜನಾ ವರದಿಯನ್ನು (DPR) ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಗೋದಾವರಿ-ಕಾವೇರಿ ಜೋಡಣೆ ಯೋಜನೆಯೊಂದಿಗೂ ಸಂಪರ್ಕ

ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯನ್ನು ಗೋದಾವರಿ-ಕಾವೇರಿ ನದಿ ಜೋಡಣೆ ಯೋಜನೆಯೊಂದಿಗೆ ಸಂಯೋಜಿಸಲಾಗಿದ್ದು, ಪರ್ಯಾಯ ವ್ಯವಸ್ಥೆಯಡಿ ಆಲಮಟ್ಟಿ ಜಲಾಶಯದ ಮೂಲಕ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 15.89 ಟಿಎಂಸಿ ನೀರು ಲಭ್ಯವಾಗುವ ನಿರೀಕ್ಷೆಯಿದೆ.

ಸಭೆಯಲ್ಲಿ ಕೇಂದ್ರ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು, ರಾಜ್ಯ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗಳು, ಕೆಎನ್‌ಎನ್‌ಎಲ್, ವಿಜಿ‌ಎನ್‌ಎಲ್, ಸಿಎನ್‌ಎನ್‌ಎಲ್ ಹಾಗೂ ಕೆಬಿಜೆಎನ್‌ಎಲ್ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments