Homeಕರ್ನಾಟಕರೈತರ ಪರಿಹಾರ ವಿತರಣೆಯಲ್ಲಿ ಅನ್ಯಾಯಕ್ಕೆ ಅವಕಾಶವಿಲ್ಲ: ಡಿಸಿಎಂ ಡಾ. ಜಿ. ಪರಮೇಶ್ವರ

ರೈತರ ಪರಿಹಾರ ವಿತರಣೆಯಲ್ಲಿ ಅನ್ಯಾಯಕ್ಕೆ ಅವಕಾಶವಿಲ್ಲ: ಡಿಸಿಎಂ ಡಾ. ಜಿ. ಪರಮೇಶ್ವರ

ರೈತರಿಗೆ ಬರ ಪರಿಹಾರ ವಿತರಣೆಯಲ್ಲಿನ ವ್ಯತ್ಯಾಸವನ್ನು ತಕ್ಷಣ ಸರಿಪಡಿಸಿ, ಎಲ್ಲ ಅರ್ಹ ರೈತ ಕುಟುಂಬಗಳಿಗೂ ಸರ್ಕಾರ ಘೋಷಿಸಿರುವ ಪರಿಹಾರವನ್ನು ತಲುಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಹೇಳಿದರು.

ಇಂದು ಸದಾಶಿವನಗರದಲ್ಲಿರುವ ತಮ್ಮ ಗೃಹಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಮುಖ್ಯಮಂತ್ರಿಗಳು ಮತ್ತು ನಾನು ಒಬ್ಬ ರೈತ ಕುಟುಂಬಕ್ಕೆ ₹2,500 ನೀಡುವುದಾಗಿ ಘೋಷಿಸಿದ್ದೆವು. ಈ ಘೋಷಣೆಯ ಕುರಿತು ಕೆಲವು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟೀಕರಣವನ್ನೂ ನೀಡಿತ್ತು. ಆರಂಭದಲ್ಲಿ ಮುಖ್ಯಮಂತ್ರಿಗಳು ಮಾತನಾಡುವಾಗ ಎಕರೆಗೆ ಎಂದಿದ್ದರು. ಆಗ ಉಂಟಾದ ಗೊಂದಲವನ್ನು ಪತ್ರಿಕಾಗೋಷ್ಠಿಯ ಅಂತ್ಯದಲ್ಲಿ ಸರಿಪಡಿಸಿದ್ದರು. ಆದರೆ, ಅಧಿಕಾರಿಗಳ ಹಂತದಲ್ಲಿ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದರಿಂದ ಪರಿಹಾರ ವಿತರಣೆಯಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಹೇಳಿದರು.

ಕೆಲವು ರೈತರಿಗೆ ₹1,500, ಇನ್ನು ಕೆಲವರಿಗೆ ₹2,000 ಪಾವತಿಯಾಗಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡುವಾಗ ಪ್ರತಿ ಎಕರೆಗೆ ಲೆಕ್ಕ ಹಾಕಿದಂತೆ ಕಾಣುತ್ತಿದೆ. ಈ ಲೋಪವನ್ನು ಸರಿಪಡಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ಸಮಸ್ಯೆಯಿಲ್ಲ. ಸಂಬಂಧಪಟ್ಟ ಇಲಾಖೆಗೆ ಅಗತ್ಯ ಹಣವನ್ನು ಬಿಡುಗಡೆ ಮಾಡಲಾಗಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿಗಳನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದರಿಂದ ಈ ಗೊಂದಲ ಉಂಟಾಗಿದೆ. ಮಾರ್ಗಸೂಚಿಗಳ ಪ್ರಕಾರ ಪ್ರತಿ ಹೆಕ್ಟೇರ್‌ಗೆ ಕನಿಷ್ಠ ₹1,500 ನೀಡಬೇಕೆಂಬ ಲೆಕ್ಕಾಚಾರವನ್ನೂ ಸರಿಯಾಗಿ ಅನುಸರಿಸುವಂತೆ ಸೂಚಿಸಲಾಗಿದೆ ಎಂದರು.

ಸರ್ಕಾರ ಮೊದಲ ಹಂತದಲ್ಲಿ ಸುಮಾರು 50 ಲಕ್ಷ ರೈತ ಕುಟುಂಬಗಳಿಗೆ ತಲಾ ₹2,500 ನೀಡುವ ಉದ್ದೇಶದಿಂದ ₹1,250 ಕೋಟಿ ಅಂದಾಜು ಮಾಡಿದೆ. ಎರಡನೇ ಹಂತದಲ್ಲಿಯೂ ಅಷ್ಟೇ ಮೊತ್ತವನ್ನು ಒದಗಿಸುವ ಲೆಕ್ಕಾಚಾರವಿದ್ದು, ಒಟ್ಟಾರೆ ಒಂದು ರೈತ ಕುಟುಂಬಕ್ಕೆ ₹5,000 ಪರಿಹಾರ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಅರ್ಹತೆ ಹೊಂದಿರಬೇಕು. ಈ ಪ್ರಕ್ರಿಯೆಯಲ್ಲಿ ಕೆಲವರು ಅನರ್ಹರಾಗುವ ಸಾಧ್ಯತೆಯಿದೆ. ಅಂತಹವರ ಸಂಖ್ಯೆ ಬಹಳ ಕಡಿಮೆ ಇರಲಿದೆ. ಆದರೂ ಮೊದಲ ಹಂತದಲ್ಲಿ ಅಂದಾಜು ಮಾಡಿರುವ ₹1,250 ಕೋಟಿ ಮೊತ್ತವನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಪರಿಹಾರ ವಿತರಣೆಯಲ್ಲಿ ಆಗಿರುವ ವ್ಯತ್ಯಾಸವನ್ನು ತಕ್ಷಣ ಸರಿಪಡಿಸಲಾಗುವುದು. ಹಣಕಾಸು ಇಲಾಖೆಯ ಅನುಮತಿ ದೊರೆತ ಕೂಡಲೇ ವ್ಯತ್ಯಾಸದ ಮೊತ್ತವನ್ನು ಪಾವತಿಸಲಾಗುವುದು. ಅಗತ್ಯವಿದ್ದರೆ ಈಗಾಗಲೇ ನೀಡಿರುವ ಮೊತ್ತದೊಂದಿಗೆ ಎರಡನೇ ಕಂತಿನ ಹಣವನ್ನು ಸೇರಿಸಿ ₹3,000 ಅಥವಾ ₹3,500 ರೂಪಾಯಿಗಳಾಗಿ ನೀಡುವ ಬಗ್ಗೆಯೂ ಪರಿಶೀಲಿಸಲಾಗುವುದು. ಹಣಕಾಸು ಇಲಾಖೆಯ ಅನುಮತಿ ದೊರೆತ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಯಾದಗಿರಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಪ್ರಕ್ರಿಯೆ ಆರಂಭಿಸಲಾಗಿದ್ದು, ಇದೀಗ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಮೊದಲ ಹಂತದ ಪರಿಹಾರ ಎಲ್ಲರಿಗೂ ತಲುಪಿದ ಬಳಿಕವೇ ನಮಗೆ ಸರಿಯಾದ ಚಿತ್ರಣ ಸಿಗುತ್ತದೆ. ಎರಡನೇ ಹಂತದ ₹2,500 ವಿತರಣೆ ಆಮೇಲೆ ಮಾಡಲಾಗುವುದು ಎಂದರು.

ಎನ್‌ಡಿಆರ್‌ಎಫ್ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಈವರೆಗೆ ಸಮಯಾವಕಾಶ ದೊರೆತಿಲ್ಲ. ಈ ವಿಚಾರವಾಗಿ ಕೇಂದ್ರಕ್ಕೆ ಈಗಾಗಲೇ ಪತ್ರ ಬರೆದು ಎರಡು ವಾರಗಳಿಗೂ ಹೆಚ್ಚು ಸಮಯವಾಗಿದೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪ್ರಧಾನಮಂತ್ರಿಗಳ ಮೈಸೂರು ಪ್ರವಾಸದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿ ಸಮಯ ಕೇಳುವುದರಿಂದ ಪ್ರಯೋಜನವಿಲ್ಲ. ಅವರ ಕಾರ್ಯಕ್ರಮ ಈಗಾಗಲೇ ನಿಗದಿಯಾಗಿದ್ದು, ನಿಮಿಷದಿಂದ ನಿಮಿಷದವರೆಗೆ ವೇಳಾಪಟ್ಟಿ ಸಿದ್ಧವಾಗಿದೆ. ಆದ್ದರಿಂದ ಪ್ರತ್ಯೇಕವಾಗಿ ಸಮಯ ಕೇಳಲು ಪ್ರಯತ್ನಿಸುವುದಕ್ಕಿಂತ ಸೂಕ್ತ ಸಂದರ್ಭದಲ್ಲಿ ಭೇಟಿಗೆ ಅವಕಾಶ ಪಡೆಯುವುದು ಉತ್ತಮ. ಸಮಯ ನೀಡಿದ ತಕ್ಷಣ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ನಾಲ್ಕೈದು ವರ್ಷಗಳ ಹಿಂದೆ ನೂರಾರು, ಸಾವಿರಾರು ಪ್ರಕರಣಗಳು ವರದಿಯಾಗುತ್ತಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೂ ಈ ವರ್ಷ ಪ್ರಕರಣಗಳು ಕಡಿಮೆಯಾಗಿವೆ ಎಂದು ತಿಳಿಸಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ನಿಯಂತ್ರಿಸಲು ಸರ್ಕಾರ ಕಾನೂನು ಜಾರಿಗೆ ತಂದಿದೆ. ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ರೈತರಿಗೆ ತೊಂದರೆಯಾಗದಂತೆ ಆರು ತಿಂಗಳವರೆಗೆ ಮರುಪಾವತಿಯನ್ನು ಮುಂದೂಡುವ ನಿರ್ಧಾರವನ್ನೂ ಪ್ರಕಟಿಸಲಾಗಿದೆ. ಈ ಎರಡೂ ಕ್ರಮಗಳ ಸಂಯೋಜಿತ ಪರಿಣಾಮದಿಂದ ರೈತರು ಆತ್ಮಹತ್ಯೆಯಂತಹ ತೀವ್ರ ನಿರ್ಧಾರ ಕೈಗೊಳ್ಳುವ ಪರಿಸ್ಥಿತಿ ಕಡಿಮೆಯಾಗಲಿದೆ ಎಂದು ಹೇಳಿದರು.

ಆದರೆ, ಖಾಸಗಿಯಾಗಿ ಕೈ ಸಾಲ ಪಡೆಯುವ ಸಂದರ್ಭಗಳಲ್ಲಿ ಯಾವುದೇ ಕಾನೂನುಬದ್ಧ ದಾಖಲೆ ಅಥವಾ ನಿಯಂತ್ರಣ ಇರುವುದಿಲ್ಲ. ಇಂತಹ ವ್ಯವಹಾರಗಳು ವ್ಯಕ್ತಿಗಳ ನಡುವೆಯೇ ನಡೆಯುವುದರಿಂದ ಸರ್ಕಾರಕ್ಕೂ ಮಾಹಿತಿ ಸಿಗುವುದಿಲ್ಲ. ಈ ಸಂದರ್ಭದಲ್ಲಿ ಸಾಲ ನೀಡಿದವರು ಕಿರುಕುಳ ನೀಡಿದರೆ ಅದನ್ನು ಸಹಿಸಿಕೊಳ್ಳಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ನಡೆಯುತ್ತವೆ. ಇಂತಹ ಪ್ರಕರಣಗಳನ್ನೂ ತಡೆಗಟ್ಟುವ ಅಗತ್ಯವಿದೆ ಎಂದರು.

ಸಹಕಾರಿ ಬ್ಯಾಂಕ್‌ಗಳಿಂದ ರೈತರಿಗೆ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ನೋಟಿಸ್‌ಗಳು ಬರುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ಈಗಾಗಲೇ ಈ ಬಗ್ಗೆ ನಿರ್ದೇಶನ ನೀಡಿದೆ. ಸಹಕಾರ ಸಚಿವರು ಸರ್ಕಾರದ ತೀರ್ಮಾನದಂತೆ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಿದ್ದಾರೆ ಎಂದು ತಿಳಿಸಿದರು.

ರಾಜಕೀಯದಲ್ಲಿ ವೈಯಕ್ತಿಕ ಟೀಕೆ, ಪ್ರತಿಕ್ರಿಯೆಗಳಿಗೆ ಮಿತಿಯಿರಲಿ 

ಚಲವಾದಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ NSUI ಕಾರ್ಯಕರ್ತರು ಚಾಕು, ಚೂರಿಗಳನ್ನು ಕಳುಹಿಸುತ್ತಿರುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಇಂತಹ ಬೆಳವಣಿಗೆಗಳ ಅಗತ್ಯವಿಲ್ಲ. ಜನರು ನಮ್ಮನ್ನು ರಾಜ್ಯದಲ್ಲಿ ಕೆಲಸ ಮಾಡಲು ಆಯ್ಕೆ ಮಾಡಿದ್ದಾರೆ. ಅದರಲ್ಲೂ ಸರ್ಕಾರಕ್ಕೆ ಬಂದವರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ ಎಂದು ಹೇಳಿದರು.

ರಾಜಕೀಯ ಟೀಕೆ-ಟಿಪ್ಪಣಿಗಳು ಒಂದು ದಿನ ಅಥವಾ ಅರ್ಧ ದಿನ, ಹೆಚ್ಚೆಂದರೆ ಎರಡು ದಿನಗಳವರೆಗೆ ಇರಬಹುದು. ಆದರೆ, ಇಂತಹ ವಿಚಾರಗಳನ್ನು ತಿಂಗಳುಗಟ್ಟಲೆ ಮುಂದುವರಿಸಿ ಸಾರ್ವಜನಿಕವಾಗಿ ಚರ್ಚಿಸುವುದು ಸರಿಯಲ್ಲ. ಇದರಿಂದ ಸಾರ್ವಜನಿಕರಿಗೆ ರಾಜಕೀಯದ ಬಗ್ಗೆ ಅಸಹ್ಯ ಮೂಡುವಂತಾಗುತ್ತದೆ. ನಮ್ಮವರಾಗಲಿ, ವಿರೋಧ ಪಕ್ಷದವರಾಗಲಿ, ಯಾರೇ ಆಗಿರಲಿ, ಅವರು ಆಡುವ ಮಾತುಗಳು ಮತ್ತು ನಡೆದುಕೊಳ್ಳುವ ರೀತಿ ಸರಿಯಾಗಿರಬೇಕು. ಇಂತಹ ವಿಚಾರಗಳು ಸಾರ್ವಜನಿಕವಾಗಿ ಚರ್ಚೆಯಾಗಬಾರದು. ಅದು ಸರಿಯಲ್ಲ ಎಂದರು.

ಬೆಲೆ ಏರಿಕೆಗೆ ಕೇಂದ್ರದ ಆರ್ಥಿಕ ನೀತಿಗಳೂ ಕಾರಣ:

ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಹಾಲು, ಮೊಸರು ಸೇರಿದಂತೆ ಆಹಾರ ಪದಾರ್ಥಗಳ ಬೆಲೆ ಹೆಚ್ಚಳದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳಲು ಸರ್ಕಾರ ಬಯಸುವುದಿಲ್ಲ. ಆದರೆ, ರಾಜ್ಯದ ಮೇಲೆ ಆರ್ಥಿಕ ಹೊರೆ ಬೀಳಲು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಅನುದಾನ ಮತ್ತು ಹಣಕಾಸಿನ ಪಾಲು ಸಮರ್ಪಕವಾಗಿ ದೊರೆಯದಿರುವುದೂ ಒಂದು ಕಾರಣವಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಹಣವನ್ನು ನೀಡಿದರೆ ರಾಜ್ಯದ ಮೇಲೆ ಹೆಚ್ಚಿನ ಹೊರೆ ಬೀಳುವುದಿಲ್ಲ. ಆಗ ಬೆಲೆ ಏರಿಕೆ ಮಾಡುವ ಅನಿವಾರ್ಯತೆಯೂ ಎದುರಾಗುವುದಿಲ್ಲ ಎಂದು ಹೇಳಿದರು.

ರೈತರಿಗೆ ಡೀಸೆಲ್ ಸೇರಿದಂತೆ ಕೃಷಿಗೆ ಅಗತ್ಯವಾದ ವಸ್ತುಗಳ ಬೆಲೆ ಹೆಚ್ಚಳದಿಂದ ತೊಂದರೆಯಾಗುತ್ತಿದೆ. ಆಹಾರ ಪದಾರ್ಥಗಳ ಬೆಲೆಯೂ ಏರಿಕೆಯಾಗುತ್ತಿದೆ. ಹಾಲು ಉತ್ಪಾದಕರಿಗೆ ಸೂಕ್ತ ಬೆಲೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕರ್ನಾಟಕದಲ್ಲಿ ಈ ವರ್ಷ ಹಾಲಿನ ಉತ್ಪಾದನೆಯೂ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ರೈತರ ಪರವಾಗಿ ನಿಲ್ಲುವುದು ಅಗತ್ಯವಾಗಿದೆ. ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡದಿದ್ದರೆ ಅವರಿಗೆ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಹಾಗಾಗಿ ರೈತರಿಗೆ ನೆರವು ನೀಡುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದರು.

ಬೆಲೆ ಏರಿಕೆಯಿಂದ ನಗರ ಪ್ರದೇಶದ ಗ್ರಾಹಕರು ಸೇರಿದಂತೆ ಸಾಮಾನ್ಯ ಜನರಿಗೂ ಸ್ವಲ್ಪ ಮಟ್ಟಿನ ಆರ್ಥಿಕ ಹೊರೆ ಬೀಳುತ್ತಿರುವುದನ್ನು ನಿರಾಕರಿಸುವುದಿಲ್ಲ. ಅದನ್ನು ಸಮರ್ಥಿಸಿಕೊಳ್ಳಲು ಹೋಗುವುದೂ ಇಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಮೊಸರಿನ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇಂತಹ ತೆರಿಗೆ ವಿಚಾರಗಳನ್ನೂ ನಿಯಂತ್ರಿಸುವ ಅಗತ್ಯವಿದೆ ಎಂದು ಹೇಳಿದರು.

ಮೀಸಲಾತಿ ವಿಚಾರ; ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ ಸಲ್ಲಿಕೆ :

ರಾಜ್ಯದಲ್ಲಿ ಶೇ.56ರಷ್ಟು ಮೀಸಲಾತಿ ಕಲ್ಪಿಸುವ ಸಂಬಂಧ ಕೈಗೊಂಡಿದ್ದ ನಿರ್ಧಾರವನ್ನು ಹೈಕೋರ್ಟ್ ಶೇ.50ರ ಮಿತಿಗೆ ಸೀಮಿತಗೊಳಿಸಿ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಈಗಾಗಲೇ ಸೂಚನೆ ನೀಡಿತ್ತು. ಅದರಂತೆ ವಿಶೇಷ ಮೇಲ್ಮನವಿ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಯಾವ ತೀರ್ಮಾನ ಹೊರಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗುವುದು ಎಂದು ತಿಳಿಸಿದರು.

ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿಯನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವ ಮೂಲಕ ರಕ್ಷಣೆ ಮಾಡಲಾಗಿದೆ. ಪಕ್ಕದ ರಾಜ್ಯದಲ್ಲಿ ಶೇ.69ರಷ್ಟು ಮೀಸಲಾತಿ ಜಾರಿಯಲ್ಲಿರುವಾಗ ಕರ್ನಾಟಕದಲ್ಲಿ ಅದೇ ರೀತಿಯ ಕ್ರಮಕ್ಕೆ ಅವಕಾಶ ನೀಡದಿರುವುದು ಯಾವ ನ್ಯಾಯ ಎಂಬ ಪ್ರಶ್ನೆಯೂ ಇದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಳದ ನಿರ್ಧಾರ ಕೈಗೊಂಡಾಗಲೇ ಅದನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಒತ್ತಡ ಹೇರಿದ್ದರೆ ಈಗಿನ ಸಮಸ್ಯೆ ಎದುರಾಗುತ್ತಿರಲಿಲ್ಲ. ಈಗಾಗಲೇ ನೇಮಕಾತಿ ಪ್ರಕ್ರಿಯೆಗಳಲ್ಲಿ ಸಾಕಷ್ಟು ಗೊಂದಲಗಳಿದ್ದು, ಮೀಸಲಾತಿ ವಿಚಾರವೂ ಹೆಚ್ಚುವರಿ ಗೊಂದಲಕ್ಕೆ ಕಾರಣವಾಗಿದೆ. ಆದ್ದರಿಂದ ಸುಪ್ರೀಂ ಕೋರ್ಟ್‌ನ ತೀರ್ಪಿಗಾಗಿ ಕಾಯಬೇಕಿದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments