ಅಪರಾಧ ಮಾಡಿದವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ. ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು. ಆದರೆ ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಆತನ ಕುಟುಂಬದ ಸದಸ್ಯರು ಏಕೆ ಶಿಕ್ಷೆ ಅನುಭವಿಸಬೇಕು? ಜೈಲಿನ ಕಂಬಿಗಳ ಹಿಂದೆ ಒಬ್ಬ ವ್ಯಕ್ತಿ ಬಂಧಿಯಾಗಿದ್ದರೆ, ಹೊರಗೆ ಆತನ ಕುಟುಂಬದ ಬದುಕು ಕೂಡ ಸಮಾಜದ ಅನುಮಾನ, ಅವಮಾನ, ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಒತ್ತಡದ ಕಂಬಿಗಳ ನಡುವೆ ಸಿಲುಕಿಕೊಂಡಿದೆ. ತಪ್ಪು ಮಾಡದ ಕುಟುಂಬದ ಸದಸ್ಯರಿಗೂ ಗೌರವದಿಂದ ಬದುಕುವ ಹಕ್ಕಿದೆ. ಒಬ್ಬನ ತಪ್ಪಿಗೆ ಇಡೀ ಕುಟುಂಬವನ್ನು ಅಪರಾಧಿಗಳಂತೆ ನೋಡುವ ಮನೋಭಾವ ಬದಲಾಗಬೇಕು ಎಂದು ‘ನ್ಯಾಯಕ್ಕಾಗಿ ಕೈದಿಗಳ ಕುಟುಂಬಗಳ ಸಂಘ’ ಆಗ್ರಹಿಸಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೈದಿಗಳ ಕುಟುಂಬದ ಸದಸ್ಯರು ತಮ್ಮ ನೋವು, ಸಂಕಷ್ಟ ಮತ್ತು ಅನುಭವಗಳನ್ನು ಹಂಚಿಕೊಂಡು ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಕಾನೂನು ಸೇವಾ ಪ್ರಾಧಿಕಾರಗಳು ತಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಒಬ್ಬ ವ್ಯಕ್ತಿ ಅಪರಾಧ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದಾನೆ ಎಂಬ ಕಾರಣಕ್ಕೆ ಆತನ ಕುಟುಂಬದವರೂ ಅಪರಾಧಿಗಳಾಗುವುದಿಲ್ಲ. ಕಾನೂನಿನ ಮುಂದೆ ಪ್ರತಿಯೊಬ್ಬ ವ್ಯಕ್ತಿಗೂ ಸ್ವತಂತ್ರ ಅಸ್ತಿತ್ವವಿದೆ. ಆದರೆ ವಾಸ್ತವದಲ್ಲಿ ಪ್ರಕರಣವೊಂದರಲ್ಲಿ ಕುಟುಂಬದ ಸದಸ್ಯರು ಸಿಲುಕಿದ ತಕ್ಷಣ ಇಡೀ ಕುಟುಂಬದ ಬದುಕೇ ಬದಲಾಗುತ್ತಿದೆ. ನಿನ್ನೆವರೆಗೂ ಸಮಾಜದಲ್ಲಿ ಗೌರವದಿಂದ ಬದುಕುತ್ತಿದ್ದ ಕುಟುಂಬವನ್ನು ಅನುಮಾನದ ದೃಷ್ಟಿಯಿಂದ ನೋಡಲಾಗುತ್ತಿದೆ. ಮನೆಗೆ ಪೊಲೀಸರು ಬರುವುದರಿಂದ ಹಿಡಿದು ನೆರೆಹೊರೆಯವರ ಪ್ರಶ್ನೆಗಳು, ಸಂಬಂಧಿಕರ ನಿರ್ಲಕ್ಷ್ಯ, ಮಕ್ಕಳ ಶಾಲೆಯಲ್ಲಿ ಎದುರಾಗುವ ಮುಜುಗರದವರೆಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಕುಟುಂಬದವರು ಅಳಲು ತೋಡಿಕೊಂಡರು.
ವೃದ್ಧ ತಂದೆ-ತಾಯಿ, ಮಹಿಳೆಯರು ಮತ್ತು ಮಕ್ಕಳ ಬದುಕು ಸಂಕಷ್ಟದಲ್ಲಿ
ಕುಟುಂಬದ ಸದಸ್ಯನೊಬ್ಬ ಜೈಲು ಸೇರಿದ ಬಳಿಕ ವಿಶೇಷವಾಗಿ ವಯಸ್ಸಾದ ತಂದೆ-ತಾಯಿಯರ ಬದುಕು ದುಸ್ತರವಾಗುತ್ತಿದೆ. ಮಗನನ್ನು ಬೆಳೆಸಿ, ಶಿಕ್ಷಣ ನೀಡಿ ಜೀವನದಲ್ಲಿ ನೆಲೆ ನಿಲ್ಲಿಸಬೇಕೆಂದು ಕನಸು ಕಂಡಿದ್ದ ಪೋಷಕರು ವೃದ್ಧಾಪ್ಯದಲ್ಲಿ ನೆಮ್ಮದಿಯಿಂದ ಬದುಕಬೇಕಿತ್ತು. ಆದರೆ ಮಗ ಜೈಲು ಸೇರಿದ ಬಳಿಕ ಆತಂಕ, ಅವಮಾನ, ಕಣ್ಣೀರು ಮತ್ತು ಅನಿಶ್ಚಿತತೆಯ ನಡುವೆ ದಿನ ಕಳೆಯುವಂತಾಗಿದೆ.
ಕುಟುಂಬದ ದುಡಿಯುವ ವ್ಯಕ್ತಿಯೇ ಜೈಲು ಸೇರಿದಾಗ ಮನೆಯ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಡುತ್ತದೆ. ಮಕ್ಕಳ ಶಿಕ್ಷಣ ಅರ್ಧಕ್ಕೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವೃದ್ಧ ತಂದೆ-ತಾಯಿಯರಿಗೆ ಆರೈಕೆ ಮಾಡುವವರಿಲ್ಲದಂತಾಗುತ್ತದೆ. ಮಹಿಳೆಯರು ಕುಟುಂಬ ನಿರ್ವಹಣೆಗಾಗಿ ಪರದಾಡಬೇಕಾಗುತ್ತದೆ. ಜೀವನ ನಿರ್ವಹಣೆಗಾಗಿ ಕೆಲವರು ಸಾಲ ಮಾಡಬೇಕಾದರೆ, ಮತ್ತೆ ಕೆಲವರು ತಮ್ಮಲ್ಲಿರುವ ಅಲ್ಪಸ್ವಲ್ಪ ಆಸ್ತಿಯನ್ನೂ ಮಾರಾಟ ಮಾಡುವ ಪರಿಸ್ಥಿತಿಗೆ ತಲುಪುತ್ತಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಪೊಲೀಸರ ತನಿಖೆಯೇ ಕುಟುಂಬಗಳಿಗೆ ಶಿಕ್ಷೆಯಾಗಬಾರದು
ಅಪರಾಧ ಪ್ರಕರಣಗಳ ತನಿಖೆ ನಡೆಸುವುದು ಪೊಲೀಸರ ಕರ್ತವ್ಯ. ಅಪರಾಧಿಗಳನ್ನು ಪತ್ತೆಹಚ್ಚುವುದು, ಸಾಕ್ಷ್ಯ ಸಂಗ್ರಹಿಸುವುದು ಮತ್ತು ನ್ಯಾಯಾಲಯದ ಮುಂದೆ ಸತ್ಯವನ್ನು ಮಂಡಿಸುವುದು ಪೊಲೀಸ್ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಆದರೆ ತನಿಖೆಯ ಹೆಸರಿನಲ್ಲಿ ನಿರಪರಾಧ ಕುಟುಂಬದ ಸದಸ್ಯರನ್ನು ಬೆದರಿಸುವುದು, ಮಾನಸಿಕ ಒತ್ತಡ ಹೇರುವುದು ಅಥವಾ ಅನಗತ್ಯವಾಗಿ ಕಿರುಕುಳ ನೀಡುವುದು ಸರಿಯಲ್ಲ ಎಂದು ಸಂಘದ ಸದಸ್ಯರು ಅಭಿಪ್ರಾಯಪಟ್ಟರು.
ಕೆಲವು ಪ್ರಕರಣಗಳಲ್ಲಿ ಕುಟುಂಬದ ಸದಸ್ಯರನ್ನು ಪೊಲೀಸ್ ಠಾಣೆಗೆ ಕರೆಸುವುದು, ವಿಚಾರಣೆಯ ನೆಪದಲ್ಲಿ ಬೆದರಿಸುವುದು, ಮಾನಸಿಕವಾಗಿ ಹಿಂಸಿಸುವುದು ಹಾಗೂ ಕುಟುಂಬದ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳನ್ನು ಕುಟುಂಬದವರು ಮಾಡಿದರು.
ಪೊಲೀಸರು ಕಾನೂನಿನ ರಕ್ಷಕರಾಗಿದ್ದು, ಅವರ ಮೇಲೆ ಸಮಾಜಕ್ಕೆ ಅಪಾರ ನಂಬಿಕೆ ಇದೆ. ಅದೇ ಸಂದರ್ಭದಲ್ಲಿ ಸಂವಿಧಾನ ಮತ್ತು ಕಾನೂನು ಪ್ರತಿಯೊಬ್ಬ ನಾಗರಿಕನಿಗೆ ನೀಡಿರುವ ಹಕ್ಕುಗಳನ್ನು ಗೌರವಿಸುವ ಜವಾಬ್ದಾರಿಯೂ ಅವರ ಮೇಲಿದೆ. ಆರೋಪಿಯ ಕುಟುಂಬದವರನ್ನು ಆರೋಪಿಗಳಂತೆ ನಡೆಸಿಕೊಳ್ಳುವಂತಿಲ್ಲ. ಅಪರಾಧ ಸಾಬೀತಾಗುವವರೆಗೆ ಆರೋಪಿಗೂ ಕಾನೂನಿನ ರಕ್ಷಣೆ ಲಭ್ಯವಿರುತ್ತದೆ. ಹಾಗಿರುವಾಗ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲದ ಕುಟುಂಬದ ಸದಸ್ಯರು ಮಾನಸಿಕ ಹಿಂಸೆ ಅನುಭವಿಸುವುದು ಸರಿಯಲ್ಲ ಎಂದು ಹೇಳಿದರು.
ಕಾನೂನು ನೆರವಿನ ಹೆಸರಿನಲ್ಲಿ ಮತ್ತೊಂದು ಶೋಷಣೆ ಬೇಡ
ಜೈಲಿನಲ್ಲಿರುವ ವ್ಯಕ್ತಿಯನ್ನು ಬಿಡುಗಡೆ ಮಾಡಿಸಬೇಕೆಂಬ ಆತಂಕದಲ್ಲಿ ಕುಟುಂಬದವರು ವಕೀಲರ ನೆರವು ಪಡೆಯುತ್ತಾರೆ. ಆದರೆ ಕೆಲವು ಪ್ರಕರಣಗಳಲ್ಲಿ ವಕೀಲರ ಚಿತಾವಣೆಯಿಂದ ಕುಟುಂಬಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಿವೆ ಎಂಬ ಆರೋಪಗಳೂ ಕೇಳಿಬರುತ್ತಿವೆ ಎಂದು ಸಂಘದ ಸದಸ್ಯರು ತಿಳಿಸಿದರು.
ಈಗಾಗಲೇ ಆರ್ಥಿಕವಾಗಿ ಕುಸಿದಿರುವ ಕುಟುಂಬಗಳಿಗೆ ಕಾನೂನು ಹೋರಾಟದ ವೆಚ್ಚ, ನ್ಯಾಯಾಲಯಗಳ ಅಲೆದಾಟ ಮತ್ತು ಪ್ರಕರಣದ ಒತ್ತಡ ಮತ್ತಷ್ಟು ಹೊರೆಯಾಗುತ್ತಿದೆ. ಕೆಲವರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಇನ್ನು ಕೆಲವರು ತಮ್ಮ ಬದುಕಿನ ಆಸರೆಯಾಗಿರುವ ಆಸ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಕಾನೂನು ನೆರವು ಪಡೆಯುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಆದರೆ ಸಂಕಷ್ಟದಲ್ಲಿರುವ ಕುಟುಂಬಗಳ ಅಸಹಾಯಕತೆಯನ್ನು ಯಾರೂ ದುರುಪಯೋಗಪಡಿಸಿಕೊಳ್ಳಬಾರದು. ನ್ಯಾಯ ಕೊಡಿಸುವ ಹೆಸರಿನಲ್ಲಿ ಮತ್ತೊಂದು ಶೋಷಣೆ ನಡೆಯಬಾರದು ಎಂದು ಆಗ್ರಹಿಸಿದರು.
ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಆತಂಕಕಾರಿ ಹೇಳಿಕೆ
ಸಮಾಜದ ನಿಂದನೆ, ಅವಮಾನ, ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಒತ್ತಡವನ್ನು ತಾಳಲಾರದೆ ಕೆಲವರು ಆತ್ಮಹತ್ಯೆಯಂತಹ ದುರಂತ ನಿರ್ಧಾರಗಳಿಗೆ ಮುಂದಾಗಿರುವ ಬಗ್ಗೆ ಕುಟುಂಬದ ಸದಸ್ಯರು ಸಭೆಯಲ್ಲಿ ನೋವು ಹಂಚಿಕೊಂಡರು.
ಸಿದ್ದಮ್ಮ ಅವರು ಮಾತನಾಡಿ, ತಮ್ಮ ಮೊಮ್ಮಗ ಮಹಾದೇವ ಎರಡು ವರ್ಷ ಜೈಲಿನಲ್ಲಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದರು.
ಇದೇ ವೇಳೆ ರವಿ ಅವರು ತಮ್ಮ ಅಳಿಯ ಅಪ್ಪು ಅವರ ಸಾವಿನ ಕುರಿತು ಮಾತನಾಡಿ, ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನಗಳಲ್ಲಿ ಅಪ್ಪು ಪೊಲೀಸರಿಂದ ಕಿರುಕುಳ, ಅವಮಾನ ಮತ್ತು ಸಮಾಜದ ತಿರಸ್ಕಾರ ಅನುಭವಿಸಿದ್ದ ಎಂದು ಕುಟುಂಬದ ಪರವಾಗಿ ಆರೋಪಿಸಿದರು.
ಈ ಎರಡೂ ಸಾವುಗಳ ಹಿಂದಿನ ಪರಿಸ್ಥಿತಿಗಳನ್ನು ಗಂಭೀರವಾಗಿ ಪರಿಶೀಲಿಸಬೇಕು. ಕುಟುಂಬಗಳು ಮಾಡಿರುವ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಇಂತಹ ದುರಂತಗಳು ಮರುಕಳಿಸದಂತೆ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ನೆರವು ಮತ್ತು ಮಾನಸಿಕ ಬೆಂಬಲ ಒದಗಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಪ್ರೆಸ್ ಕ್ಲಬ್ನಲ್ಲಿ ಕಣ್ಣೀರಿಟ್ಟ ಕುಟುಂಬಗಳು
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಕುಟುಂಬಗಳ ಸದಸ್ಯರು ತಮ್ಮ ಬದುಕಿನಲ್ಲಿ ಎದುರಿಸುತ್ತಿರುವ ಒಂದೊಂದು ಸಮಸ್ಯೆಯನ್ನು ವಿವರಿಸಿದರು. ಕೆಲವರಿಗೆ ವೃದ್ಧ ತಂದೆ-ತಾಯಿಯರ ಆರೈಕೆಯ ಚಿಂತೆ, ಮತ್ತೊಬ್ಬರಿಗೆ ಮಕ್ಕಳ ಭವಿಷ್ಯದ ಆತಂಕ, ಇನ್ನು ಕೆಲವರಿಗೆ ಜೀವನ ನಿರ್ವಹಣೆಯೇ ದೊಡ್ಡ ಸವಾಲಾಗಿದೆ. ಕೆಲವರು ಪೊಲೀಸರ ಕಿರುಕುಳದ ಆರೋಪ ಮಾಡಿದರೆ, ಮತ್ತೆ ಕೆಲವರು ಸಮಾಜದ ಅವಮಾನ ಮತ್ತು ಆರ್ಥಿಕ ಸಂಕಷ್ಟದ ನೋವನ್ನು ಹಂಚಿಕೊಂಡರು.
ಅವರ ಮಾತುಗಳಲ್ಲಿ ಆಕ್ರೋಶ, ಅಸಹಾಯಕತೆ ಮತ್ತು ಕಣ್ಣೀರು ವ್ಯಕ್ತವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಕುಟುಂಬಗಳಿಗೂ ನ್ಯಾಯ ದೊರೆಯಬೇಕು, ಗೌರವದಿಂದ ಬದುಕುವ ಅವಕಾಶ ಸಿಗಬೇಕು ಎಂಬ ಹಂಬಲ ವ್ಯಕ್ತವಾಯಿತು.
ಕುಟುಂಬಗಳ ಪ್ರಮುಖ ಬೇಡಿಕೆಗಳೇನು?
ಕೈದಿಗಳ ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸುವಂತೆ ಸಂಘಟನೆಯು ಸರ್ಕಾರ, ಕಾನೂನು ಸೇವಾ ಪ್ರಾಧಿಕಾರಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಮುಂದೆ ಹಲವು ಬೇಡಿಕೆಗಳನ್ನು ಮಂಡಿಸಿತು.
- ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸುಲಭವಾಗಿ ದೊರೆಯುವ ಉಚಿತ ಕಾನೂನು ನೆರವು ಒದಗಿಸಬೇಕು.
- ಪ್ರಕರಣಗಳ ಸ್ಥಿತಿ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳ ಕುರಿತು ಕುಟುಂಬಗಳಿಗೆ ಪಾರದರ್ಶಕ ಮಾಹಿತಿ ನೀಡಬೇಕು.
- ತನಿಖೆಯ ಸಂದರ್ಭದಲ್ಲಿ ಕುಟುಂಬದ ಸದಸ್ಯರಿಗೆ ಯಾವುದೇ ರೀತಿಯ ಅನಗತ್ಯ ಕಿರುಕುಳವಾಗದಂತೆ ರಕ್ಷಣೆ ನೀಡಬೇಕು.
- ಅಗತ್ಯವಿರುವ ಕುಟುಂಬಗಳಿಗೆ ವೈದ್ಯಕೀಯ ನೆರವು ಒದಗಿಸಬೇಕು.
- ಅರ್ಹ ವೃದ್ಧರಿಗೆ ವೃದ್ಧಾಪ್ಯ ವೇತನ ಹಾಗೂ ಇತರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಲ್ಪಿಸಬೇಕು.
- ಜೈಲಿನಿಂದ ಬಿಡುಗಡೆಯಾದವರಿಗೆ ಪುನರ್ವಸತಿ, ಉದ್ಯೋಗ ಮತ್ತು ಜೀವನೋಪಾಯಕ್ಕೆ ಸೂಕ್ತ ಅವಕಾಶ ಕಲ್ಪಿಸಬೇಕು.
- ಕೈದಿಗಳ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ಹಾಗೂ ಅಗತ್ಯ ಸಹಕಾರ ನೀಡಬೇಕು.
- ಕುಟುಂಬದವರು ಮಾಡಿರುವ ನಿರ್ದಿಷ್ಟ ಕಿರುಕುಳದ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು.
ಈ ಬೇಡಿಕೆಗಳಿಗೆ ಸಂಬಂಧಪಟ್ಟ ಇಲಾಖೆಗಳು ತುರ್ತಾಗಿ ಸ್ಪಂದಿಸಬೇಕು. ಕುಟುಂಬದ ಸದಸ್ಯರ ತಪ್ಪಿಲ್ಲದಿದ್ದರೂ ಅವರು ಅನುಭವಿಸುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘಟನೆ ಮನವಿ ಮಾಡಿತು.
ಹಿರಿಯ ಪತ್ರಕರ್ತರಾದ ಧ್ಯಾನ್ ಪೂಣಚ್ಛ, ‘ಸುಧಾ’ ವಾರಪತ್ರಿಕೆಯ ರಾಘವೇಂದ್ರ ತೋಗರ್ಸಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತರಾದ ಸೋಮಸುಂದರ ರೆಡ್ಡಿ ಮತ್ತು ನಂಜುಂಡಪ್ಪ ವಿ., ಟಿವಿ9ನ ಕಿರಣ್ ಎಚ್.ವಿ., ಅಹಿಂದ ನ್ಯೂಸ್ನ ಶಿವಕುಮಾರ್ ದೇಶಿ, ಹಿರಿಯ ಪತ್ರಕರ್ತರಾದ ರಮೇಶ್ ಅಭಿಮನ್ಯು ಹಾಗೂ ಚಿತ್ರಲೋಕ ಡಾಟ್ ಕಾಮ್ನ ವೀರೇಶ್ ಕೆ.ಎಂ. ಭಾಗವಹಿಸಿದ್ದರು.
ಸಂಪನ್ಮೂಲ ಕೇಂದ್ರದ ಪ್ರೊ. ವೈ.ಜೆ. ರಾಜೇಂದ್ರ, ಸೇಂಟ್ ಜೋಸೆಫ್ ಕಾನೂನು ಕಾಲೇಜಿನ ವಕೀಲ ನೆಲ್ಸನ್, ಪ್ರಾರಂಭ ಸಂಪನ್ಮೂಲ ಕೇಂದ್ರದ ವಕೀಲರಾದ ಮೌಲ್ಯ, ಎಪಿಎಫ್ಜೆ ಸಂಚಾಲಕಿ ತ್ರಿವೇಣಿ ಖಾನ್, ಸಹ-ಸಂಚಾಲಕಿ ಚಂದ್ರಶ್ರೀ ಹಾಗೂ ಪ್ರಾರಂಭ ಸಂಪನ್ಮೂಲ ಕೇಂದ್ರ ಮತ್ತು ಎಪಿಎಫ್ಜೆ ಕಾರ್ಯದರ್ಶಿ ಧನುಷ್ ಬಾಬು, ನಾಗೇಶ್ ಕಾಳೇನಹಳ್ಳಿ ಉಪಸ್ಥಿತರಿದ್ದರು.


