ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯದಂತೆ ಸಮಾಜವು ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಂದು ತೀರ್ಥಹಳ್ಳಿಯಲ್ಲಿ ಸಮಾಜದ ಬಂಧುಗಳು ಬೃಹತ್ ಸಂಖ್ಯೆಯಲ್ಲಿ ಒಗ್ಗಟ್ಟಾಗಿ ಸೇರಿರುವುದು ಐತಿಹಾಸಿಕ ಬೆಳವಣಿಗೆಯಾಗಿದೆ. ಸಮಾಜದ ಜೊತೆ ಸದಾ ಜೊತೆಯಾಗಿ ನಿಲ್ಲುತ್ತೇನೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ತೀರ್ಥಹಳ್ಳಿಯ ಸುವರ್ಣ ಸಂಸ್ಕೃತಿ ಭವನದ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣಾ ಸಮಿತಿ ಹಾಗೂ ಆರ್ಯ ಈಡಿಗರ ಸಂಘ, ಬಿಲ್ಲವ ಸಂಘ, ನಾರಾಯಣ ಗುರು ವಿಚಾರ ವೇದಿಕೆ, ಈಡಿಗ-ಬಿಲ್ಲವ ಮಹಿಳಾ ಸಂಘ ಮತ್ತು ಸಮಾಜದ ಸಹಕಾರ ಸಂಘಗಳ ನೇತೃತ್ವದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಸಮಾಜದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಮಾಜದವರು ಇಲ್ಲಿಯವರೆಗೆ ಹೊಡೆತಗಳನ್ನು ತಿಂದಿದ್ದು ಸಾಕು. ಇನ್ನು ಮುಂದೆ ಒಗ್ಗಟ್ಟಾಗಿರೋಣ. ಪಂಗಡ, ಪಕ್ಷಗಳ ಭಿನ್ನಾಭಿಪ್ರಾಯಗಳನ್ನು ಮರೆತು ಸಮಾಜದ ಏಳಿಗೆಗಾಗಿ ದುಡಿಯೋಣ. ಇಂದು ತೀರ್ಥಹಳ್ಳಿಯಲ್ಲಿ ಯಶಸ್ವಿಯಾಗಿ ಸಮಾಜ ಸಂಘಟಿತವಾಗಿರುವಂತೆಯೇ ರಾಜ್ಯಾದ್ಯಂತ ಸಮಾಜವನ್ನು ಸಂಘಟಿಸುವ ಮೂಲಕ ನಮ್ಮ ಶಕ್ತಿಯನ್ನು ಕಾಯ್ದುಕೊಳ್ಳೋಣ ಎಂದು ಸಚಿವರು ಸಮಾಜ ಭಾಂದವರಿಗೆ ಕರೆ ನೀಡಿದರು.
ಯಾವುದೇ ಕೆಲಸಕ್ಕಾಗಲಿ ನಾವು ಬೇರೆಯವರ ಮನೆ ಬಾಗಿಲನ್ನು ಕಾಯುವ ಪರಿಸ್ಥಿತಿಯನ್ನು ಇನ್ನುಮುಂದೆ ತಂದುಕೊಳ್ಳುವುದು ಬೇಡ. ಶತಮಾನಗಳ ಹಿಂದೆಯೇ ಶ್ರೀ ನಾರಾಯಣ ಗುರುಗಳು ಹೇಳಿದಂತೆ ನಾವು ಸಂಘಟಿತರಾಗಬೇಕಿದೆ ಎಂದು ಒತ್ತಿ ಹೇಳಿದ ಸಚಿವ ಮಧು ಬಂಗಾರಪ್ಪ, ಬೇರೆಯವರು ನಮ್ಮ ಮನೆ ಕಾಯುವಂತಹ ವಾತಾವರಣ ಸೃಷ್ಟಿಯಾಗಬೇಕಾಗಿದೆ ಎಂದು ತಿಳಿಸಿದರು.
ನಮ್ಮ ಸಮಾಜದ ಹೆಮ್ಮೆಯ ನಾಯಕರನ್ನು ಸ್ಮರಿಸಿದ ಅವರು, ವರನಟ ಡಾ. ರಾಜ್ಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಸಮಾಜದ ಎರಡು ಕಣ್ಣುಗಳಿದ್ದಂತೆ. ಇಂದು ನಟ ಪುನೀತ್ ರಾಜ್ಕುಮಾರ್ ಅವರು ಸಮಾಜದ ಮೂರನೇ ಕಣ್ಣಿನಂತೆ ಹೊರಹೊಮ್ಮಿದ್ದಾರೆ. ಅವರನ್ನು ಆರಾಧಿಸುವ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇಂತಹ ಮಹಾನ್ ವ್ಯಕ್ತಿತ್ವಗಳನ್ನು ಪಡೆದಿರುವ ನಮ್ಮ ಸಮಾಜದ ಬಗ್ಗೆ ಹೆಮ್ಮೆ ಇರಬೇಕು ಎಂದರು.
ಮೂರು ಬೇಡಿಕೆ ಈಡೇರಿಸಿದ್ದ ಸಿದ್ದರಾಮಯ್ಯ
ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರವೇ ಆಚರಿಸುವುದು, ಅವರ ಚಿಂತನೆಗಳ ಬಗ್ಗೆ ಹೆಚ್ಚಿನ ಅಧ್ಯಯನಕ್ಕಾಗಿ ಅಧ್ಯಯನ ಪೀಠ ಸ್ಥಾಪಿಸಬೇಕು ಹಾಗೂ ಅವರ ವಿಚಾರಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸುವಂತೆ ನಾನು ವಿರೋಧ ಪಕ್ಷದಲ್ಲಿದ್ದಾಗಲೇ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರನ್ನು ಕೋರಿದ್ದೆ. ಈ ಬೇಡಿಕೆಗಳಿಗೆ ಸಿದ್ದರಾಮಯ್ಯ ಅವರು ಅಂದೇ ಸಮ್ಮತಿ ಸೂಚಿಸಿದ್ದರು. ನಾರಾಯಣ ಗುರುಗಳ ವಿಚಾರಧಾರೆಗಳು ಮುಂದಿನ ಪೀಳಿಗೆಗೆ ತಲುಪಬೇಕು. ಅವರ ಆಶಯದಂತೆ ಸಮಾಜದ ಪ್ರತಿಯೊಂದು ಮಗುವೂ ಶಿಕ್ಷಣವಂತರಾಗಬೇಕು. ಶಿಕ್ಷಣವೇ ಸಮಾಜದ ಪ್ರಗತಿಗೆ ಪ್ರಮುಖ ಸಾಧನವಾಗಿದೆ ಎಂದು ಹೇಳಿದರು.
ಸಮುದಾಯದ ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣಕ್ಕೆ ಬದ್ಧ
ಪ್ರಸ್ತುತ ಸರ್ಕಾರದಲ್ಲಿ ತಮ್ಮ ಸಮಾಜದಿಂದ ತಾವೊಬ್ಬರೇ ಸಚಿವರಾಗಿದ್ದು, ಸಮಾಜದ ಅಭಿವೃದ್ಧಿಯ ಹೊಣೆಗಾರಿಕೆ ತಮ್ಮ ಮೇಲಿದೆ. ಸಮಾಜದ ಬೇಡಿಕೆಗಳನ್ನು ಮುಡುಬ ರಾಘವೇಂದ್ರ ಅವರು ಗಮನಕ್ಕೆ ತಂದಿದ್ದಾರೆ. ಸಮುದಾಯದ ಮಕ್ಕಳಿಗೆ ಅನುಕೂಲವಾಗುವಂತೆ ಹಾಸ್ಟೆಲ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ತಾವು ಬದ್ಧರಾಗಿರುವುದಾಗಿ ಸಚಿವರು ಭರವಸೆ ನೀಡಿದರು.
ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆಗೆ ಕ್ರಮ
ನಾಡಿಗೆ ಬೆಳಕು ನೀಡಲು ತಮ್ಮ ಬದುಕನ್ನೇ ಈ ಜಿಲ್ಲೆಯವರು ಕತ್ತಲಾಗಿಸಿಕೊಂಡಿದ್ದಾರೆ. ಅದರಲ್ಲಿ ನಮ್ಮ ಸಮಾಜದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲ ಶರಾವತಿ ಸಂತ್ರಸ್ತರಿಗೆ ಹಕ್ಕು ಪತ್ರ ಸಿಗುವಂತೆ ಮಾಡುವುದು ನನ್ನ ಜವಾಬ್ದಾರಿಯಾಗಿದೆ ಎಂದು ಹೇಳಿದ ಮಧು ಬಂಗಾರಪ್ಪ, ಈ ನಿಟ್ಟಿನಲ್ಲಿ ಸತತವಾಗಿ ತಾವು ಪ್ರಯತ್ನ ಪಡುತ್ತಿದ್ದು, ಸದ್ಯದಲ್ಲಿಯೇ ಸುಪ್ರೀಂ ಕೋರ್ಟ್ ಕೂಡ ಒಪ್ಪುವಂತಹ ಪ್ರಸ್ತಾಪವೊಂದನ್ನು ಸಚಿವ ಸಂಪುಟದ ಮುಂದೆ ತಂದು, ಅದಕ್ಕೆ ಅಂಗೀಕಾರ ಪಡೆದು, ಕೇಂದ್ರಕ್ಕೆ ಕಳುಹಿಸಿಕೊಡುತ್ತೇನೆ. ಈ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಹಾಗೂ ಕಾಗೋಡು ತಿಮ್ಮಪ್ಪನವರ ಆಶಯವನ್ನು ಈಡೇರಿಸುವುದು ತಮ್ಮ ಗುರಿಯಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ನಂತರ ಈ ವಿಚಾರದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ವಿಶೇಷ ಆಸಕ್ತಿ ವಹಿಸಿ, ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಮಟ್ಟದಲ್ಲಿ ಯಾವುದೇ ಅಡೆತಡೆಗಳು ಎದುರಾಗದಂತೆ ಅಗತ್ಯ ಸಹಕಾರ ನೀಡಬೇಕು ಎಂದು ಮಧು ಬಂಗಾರಪ್ಪ ಅವರು ವೇದಿಕೆಯಲ್ಲಿಯೇ ಮನವಿ ಮಾಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ನಿಟ್ಟೂರು-ಗರ್ತಿಕೆರೆಯ ಬ್ರಹ್ಮಶ್ರೀ ನಾರಾಯಣ ಗುರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ವಹಿಸಿದ್ದರು. ಸಾರಗನಜಡ್ಡು ಕಾರ್ತಿಕೇಯ ಮಠದ ಶ್ರೀ ಯೋಗೇಂದ್ರ ಅವಧೂತರು ಉಪಸ್ಥಿತರಿದ್ದರು.
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಸುನೀಲ್ ಕುಮಾರ್, ಉಮಾನಾಥ ಕೋಟ್ಯಾನ್, ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಉಪಾಧ್ಯಕ್ಷ ಮುಡುಬ ರಾಘವೇಂದ್ರ ಸೇರಿದಂತೆ ಆರ್ಯ ಈಡಿಗ-ಬಿಲ್ಲವ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಮಾಜದ ಸಾವಿರಾರು ಬಂಧುಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.


