“ಪ್ರಜಾಪ್ರಭುತ್ವ ಸಂಸ್ಥೆಗಳನ್ನು ರಕ್ಷಿಸಲು, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಸಿಗುವಂತೆ ಮಾಡಲು ಎಂದಿಗೂ ಪ್ರಶ್ನಿಸುವುದನ್ನು ನಿಲ್ಲಿಸಬೇಡಿ, ನಿಮ್ಮ ಮೌಲ್ಯಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ ಮತ್ತು ಜನರನ್ನು ಎಂದಿಗೂ ಮರೆಯಬೇಡಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕರೆ ನೀಡಿದರು.
ಜ್ಞಾನಜ್ಯೋತಿ ಸಭಾಂಗಣದಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) 34ನೇ ಪದವಿ ಪ್ರಧಾನ ಸಮಾರಂಭದಲ್ಲಿ ಪದವಿ ಪಡೆಯುತ್ತಿರುವ ಕಾನೂನು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಿವಕುಮಾರ್ ಅವರು ಶನಿವಾರ ಮಾತನಾಡಿದರು.
ಪ್ರಶ್ನಿಸುವುದನ್ನು ಎಂದಿಗೂ ನಿಲ್ಲಿಸಬೇಡಿ
“ಸಮರ್ಥ ಪ್ರಜಾಪ್ರಭುತ್ವವು ಪ್ರಜೆಗಳಿಗೆ ಸರ್ಕಾರವನ್ನು ಪ್ರಶ್ನಿಸಲು ಅವಕಾಶ ನೀಡಬೇಕು. ವಿಶ್ವದಾದ್ಯಂತ ಪ್ರಜಾಪ್ರಭುತ್ವ ಸಂಸ್ಥೆಗಳು ಸವಾಲುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಸಂವಿಧಾನವನ್ನು ರಕ್ಷಿಸುವ ವಿಶೇಷ ಜವಾಬ್ದಾರಿ ಯುವ ವಕೀಲರು ಮತ್ತು ನೀತಿ ನಿರೂಪಕರ ಮೇಲಿದೆ. ಎಲ್ಲರೂ ಸರ್ಕಾರದೊಂದಿಗೆ ಸಮ್ಮತಿಸುವುದೇ ಸಶಕ್ತ ಪ್ರಜಾಪ್ರಭುತ್ವವಲ್ಲ. ಪ್ರತಿಯೊಬ್ಬ ಪ್ರಜೆಗೂ ಸರ್ಕಾರವನ್ನು ಪ್ರಶ್ನಿಸುವ ಸ್ವಾತಂತ್ರ್ಯವಿರುವುದೇ ನಿಜವಾದ ಸಶಕ್ತ ಪ್ರಜಾಪ್ರಭುತ್ವ” ಎಂದು ಹೇಳಿದರು.
“ಪದವೀಧರರು ವಿಚಾರಗಳನ್ನು ಪ್ರಶ್ನಿಸಬೇಕು, ಚರ್ಚಿಸಬೇಕು ಮತ್ತು ಸವಾಲು ಹಾಕಬೇಕು. ಅದೇ ಸಮಯದಲ್ಲಿ ಪರಿಹಾರಗಳನ್ನು ಕಂಡುಕೊಳ್ಳುವ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕು. ಸಾಂವಿಧಾನಿಕ ತತ್ವಗಳು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ಆಡಳಿತ, ನೀತಿ ನಿರೂಪಣೆ ಮತ್ತು ಸಾರ್ವಜನಿಕ ಜೀವನಕ್ಕೆ ಮಾರ್ಗದರ್ಶನ ನೀಡಬೇಕು” ಎಂದರು.
“ಭಾರತಕ್ಕೆ ಕೇವಲ ಹೆಚ್ಚಿನ ಸಂಖ್ಯೆಯ ವಕೀಲರ ಅಗತ್ಯವಿಲ್ಲ. ನಮಗೆ ಪ್ರಾಮಾಣಿಕತೆ, ಕರುಣೆ ಮತ್ತು ಧೈರ್ಯವಿರುವ ವಕೀಲರ ಅಗತ್ಯವಿದೆ. ಎಷ್ಟೇ ಕಷ್ಟಕರವಾಗಿದ್ದರೂ ಸಾಮಾನ್ಯ ಜನರ ಸಂಕಷ್ಟಗಳನ್ನು ಅರ್ಥಮಾಡಿಕೊಂಡು ಸರಿಯಾದದ್ದಕ್ಕಾಗಿ ಧ್ವನಿ ಎತ್ತಬೇಕು” ಎಂದು ಕಾನೂನು ಪದವೀಧರರಿಗೆ ಮನವಿ ಮಾಡಿದರು.
ನ್ಯಾಯಾಂಗ ಸೇವಾ ಪರೀಕ್ಷೆಯ ತರಬೇತಿಗಾಗಿ ಪ್ರತ್ಯೇಕ ಸಂಸ್ಥೆ, NLSIU ನಲ್ಲಿ ಸ್ಟಾರ್ಟ್-ಅಪ್ ಲಾ ಕ್ಲಿನಿಕ್ ಸ್ಥಾಪನೆ
“ಕರ್ನಾಟಕ ಸರ್ಕಾರವು ಕಾನೂನು ಪದವೀಧರರಿಗೆ ನ್ಯಾಯಾಂಗ ಸೇವಾ ಪರೀಕ್ಷೆಗಳಿಗೆ ತರಬೇತಿ ನೀಡಲು ಮತ್ತು ಯುವ ವಕೀಲರಿಗೆ ನಿರಂತರ ಶಿಕ್ಷಣವನ್ನು ಒದಗಿಸಲು ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲಿದೆ. ಅಲ್ಲದೆ, NLSIU ನಲ್ಲಿ ‘ಸ್ಟಾರ್ಟ್-ಅಪ್ ಲಾ ಕ್ಲಿನಿಕ್’ ಸ್ಥಾಪನೆಗೆ ಸರ್ಕಾರ ಬೆಂಬಲ ನೀಡಲಿದ್ದು, ಇಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ವಕೀಲರು ಯುವ ಉದ್ಯಮಿಗಳಿಗೆ ಉಚಿತ (ಪ್ರೋ ಬೋನೊ) ಕಾನೂನು ಸಲಹೆಯನ್ನು ನೀಡಲಿದ್ದಾರೆ” ಎಂದು ತಿಳಿಸಿದರು.
“ನ್ಯಾಯಾಂಗದಲ್ಲಿ ಪ್ರಕರಣಗಳು ಬಾಕಿ ಉಳಿಯುತ್ತಿರುವ ಸವಾಲಿನ ಕುರಿತು ಪ್ರಸ್ತಾಪಿಸಿದ ಅವರು, ಭಾರತೀಯ ನ್ಯಾಯಾಲಯಗಳ ಮುಂದೆ ಕೋಟಿಗಟ್ಟಲೆ ಪ್ರಕರಣಗಳು ಬಾಕಿಯಿದ್ದು, ವ್ಯಕ್ತಿಗಳು ಮತ್ತು ಕುಟುಂಬಗಳು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ನಮಗೆ ಅದು ಕೇವಲ ಇನ್ನೊಂದು ಪ್ರಕರಣದ ಸಂಖ್ಯೆಯಾಗಿರಬಹುದು. ಆದರೆ ಆ ವ್ಯಕ್ತಿಗೆ ಅದು ಅವರ ಜೀವನವೇ ಆಗಿರಬಹುದು. ನ್ಯಾಯವನ್ನು ವೇಗವಾಗಿ, ಸರಳವಾಗಿ, ಕೈಗೆಟುಕುವಂತೆ ಮತ್ತು ಎಲ್ಲರಿಗೂ ಸಿಗುವಂತೆ ಮಾಡುವುದು ಅಗತ್ಯ” ಎಂದು ಸಲಹೆ ನೀಡಿದರು.
ಅಭಿವೃದ್ಧಿಯನ್ನು ಪ್ರಜೆಗಳ ಘನತೆ, ಸ್ವಾತಂತ್ರ್ಯ, ಸಮಾನತೆ ಮತ್ತು ಭದ್ರತೆಯ ಮೂಲಕ ಅಳೆಯಬೇಕು
“2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿ ಇದೆ. ಅಭಿವೃದ್ಧಿಯನ್ನು ಕೇವಲ ಆರ್ಥಿಕ ಬೆಳವಣಿಗೆ, ಮೂಲಸೌಕರ್ಯ ಮತ್ತು ಉದ್ಯೋಗದ ಮೂಲಕ ಅಳೆಯಬಾರದು, ಬದಲಿಗೆ ಪ್ರಜೆಗಳ ಘನತೆ, ಸ್ವಾತಂತ್ರ್ಯ, ಸಮಾನತೆ ಮತ್ತು ಭದ್ರತೆಯ ಮೂಲಕ ಅಳೆಯಬೇಕು. ತರಗತಿಗಳಿಂದ ಆಚೆಗೆ ನೋಡಿ ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಸಾಮಾನ್ಯ ಕುಟುಂಬಗಳು ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳುವಂತೆ ಅವರು ಕಾನೂನು ಪದವೀಧರರಿಗೆ” ಕಿವಿಮಾತು ಹೇಳಿದರು.
“ಶಿಕ್ಷಣದ ನೈಜ ಉದ್ದೇಶ ಕೇವಲ ನಿಮ್ಮ ಸ್ವಂತ ಭವಿಷ್ಯವನ್ನು ರೂಪಿಸಿಕೊಳ್ಳುವುದು ಮಾತ್ರವಲ್ಲ, ಇತರರ ಜೀವನವನ್ನು ಉತ್ತಮಗೊಳಿಸುವುದು ಕೂಡ ಹೌದು. ಮುಂದಿನ ಐದು ದಶಕಗಳಲ್ಲಿ ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಯುವಜನತೆ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನ ಶಿಲ್ಪಿಗಳ ಆದರ್ಶಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದತೆಗಳು ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯಗಳಾಗಿವೆ” ಎಂದು ಬಣ್ಣಿಸಿದರು.
“ಭಾರತದ ಹಿರಿಮೆಯನ್ನು, ನಾವು ಎಷ್ಟು ಬೆಳೆಯುತ್ತೇವೆ ಎಂಬುದರಿಂದ ಮಾತ್ರವಲ್ಲ, ನಾವು ಎಷ್ಟು ನ್ಯಾಯಯುತವಾಗಿ ಬೆಳೆಯುತ್ತೇವೆ ಎಂಬುದರಿಂದ ಅಳೆಯಲಾಗುತ್ತದೆ. ತಮ್ಮ ಯಶಸ್ಸನ್ನು ತಾವು ಸುಧಾರಿಸುವ ಜೀವನಗಳು ಮತ್ತು ರಕ್ಷಿಸುವ ಹಕ್ಕುಗಳ ಆಧಾರದ ಮೇಲೆ ಅಳೆಯಬೇಕು” ಎಂದು ಹೇಳಿದರು.
“ಪದವಿ ಪಡೆದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಅಭಿನಂದಿಸುವೆ. ನಾನು ಕೂಡ ಒಮ್ಮೆ ವಕೀಲನಾಗಬೇಕೆಂದು ಬಯಸಿದ್ದೆ. ಆದರೆ, ವಿದ್ಯಾರ್ಥಿಯಾಗಿದ್ದಾಗಲೇ ಪಕ್ಷದ ಟಿಕೆಟ್ ದೊರೆತಿದ್ದರಿಂದ ರಾಜಕೀಯವು ನಮ್ಮನ್ನು ಸಾರ್ವಜನಿಕ ಜೀವನಕ್ಕೆ ಕರೆತಂದಿತು” ಎಂದು ತಮ್ಮ ನೆನಪುಗಳನ್ನು ಮೆಲುಕು ಹಾಕಿದರು.
ಈ ಪದವಿ ಪ್ರಧಾನ ಸಮಾರಂಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಹಾಗೂ NLSIU ನ ಕುಲಾಧಿಪತಿಗಳಾದ ನ್ಯಾಯಮೂರ್ತಿ ಸೂರ್ಯ ಕಾಂತ್, ಮುಖ್ಯ ಅತಿಥಿ ಅರುಂಧತಿ ನಾಗ್, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟಿನ ನ್ಯಾಯಮೂರ್ತಿಗಳು, NLSIU ಕುಲಪತಿ ಡಾ. ಸುಧೀರ್ ಕೃಷ್ಣಸ್ವಾಮಿ, ಅಧ್ಯಾಪಕರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.


