Homeಕರ್ನಾಟಕಸ್ಟಿಂಗ್‌ಗೆ ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು: ಎಚ್‌ ಡಿ ಕುಮಾರಸ್ವಾಮಿ ಆರೋಪ

ಸ್ಟಿಂಗ್‌ಗೆ ಡಿಕೆಶಿ, ಪ್ರಿಯಾಂಕ್ ಖರ್ಗೆ ಸಂಚು: ಎಚ್‌ ಡಿ ಕುಮಾರಸ್ವಾಮಿ ಆರೋಪ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಮಾಡಿದ್ದ ಆರೋಪಿ ನಾನೇ ಸ್ಟಿಂಗ್ ಮಾಡಿದ್ದು ಎಂದು ಸತ್ಯ ಒಪ್ಪಿಕೊಂಡ ಮೇಲೆಯೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಬ್ಬರು ಇಡೀ ಪ್ರಕರಣವನ್ನು ನನ್ನ ಕಡೆಗೆ ತಿರುಗಿಸಿ ನನ್ನ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಲು ವ್ಯವಸ್ಥಿತ ಷಡ್ಯಂತ್ರ ರೂಪಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದಲ್ಲಿ ಶನಿವಾರ ಬೆಳಗ್ಗೆ ಶ್ರೀ ರಂಗನಾಥಸ್ವಾಮಿ ದೇವರ ದರ್ಶನ ಪಡೆದ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ಪತ್ರಕರ್ತ ರಾಕೇಶ್ ಶೆಟ್ಟಿ, ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ, ಅವರ ಸಹಚರರು ಸ್ಟಿಂಗ್ ನಡೆಸಿದ್ದಾರೆ ಎಂಬುದು ಎಲ್ಲರೂ ಬಲ್ಲ ಸಂಗತಿ. ಅಲ್ಲದೆ, ಇವರಿಬ್ಬರ ಹೆಸರನ್ನು ಸ್ವತಃ ಸಿದ್ದರಾಮಯ್ಯ ಅವರು, ಅವರ ಪುತ್ರ ಯತೀಂದ್ರ ಸಹ ಹೇಳಿದ್ದಾರೆ. ಹೀಗಿದ್ದರೂ ಮುಖ್ಯಮಂತ್ರಿ, ಗೃಹ ಮಂತ್ರಿ ಇಬ್ಬರೂ ಸೇರಿ ಇಡೀ ವಿಷಯವನ್ನು ನಮ್ಮತ್ತ ತಿರುಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನಾವು ಹೆದರುವುದಿಲ್ಲ, ಎದುರಿಸುವ ಶಕ್ತಿ ನಮ್ಮ ಪಕ್ಷಕ್ಕಿದೆ ಎಂದು ಸಚಿವರು ಗುಡುಗಿದರು.

ರಾಜ್ಯದಲ್ಲಿ ಸ್ಟಿಂಗ್ ವಿಷಯವನ್ನು ಮೊದಲು ಪ್ರಸ್ತಾಪ ಮಾಡಿದವರೇ ಹಾಲಿ ಮುಖ್ಯಮಂತ್ರಿ. ಅದಾದ ಮೇಲೆ ಮಾಜಿ ಸಿಎಂ ವಿರುಧ್ದ ಸ್ಟಿಂಗ್ ನಡೆದಿದೆ ಎನ್ನುವ ಮಾಹಿತಿ ಹೊರಗೆ ಬಂತು. ಅಂದಿನಿಂದಲೇ ಈ ಗೃಹ ಸಚಿವ, ಮುಖ್ಯಮಂತ್ರಿ ಇಬ್ಬರೂ ಸೇರಿ ಜೆಡಿಎಸ್ ತಲೆಗೆ ಕಟ್ಟಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

ಮೊದಲ ದಿನದಿಂದಲೇ ಗೃಹ ಸಚಿವರು ನಮ್ಮ ಪಕ್ಷದ ವಾರ್ ರೂಂನಲ್ಲಿ, ಸೋಶಿಯಲ್ ಮೀಡಿಯಾ ವಿಭಾಗದಲ್ಲಿ ಕೆಲಸ ಮಾಡುವ ಯುವಕರ ಕುಟುಂಬಗಳನ್ನು ಟಾರ್ಗೆಟ್ ಮಾಡಿ ಸರ್ಚ್ ವಾರೆಂಟ್ ಕೊಡಿಸಿದ್ದಾರೆ. ಅವರೆಲ್ಲರೂ ಅಪರಾಧ ಎಸಗಿದ್ದಾರೆ ಎನ್ನುವ ರೀತಿಯಲ್ಲಿ ಆಪಾದನೆ ಮಾಡುತ್ತಿದ್ದಾರೆ. ಸರಕಾರ ಹೇಳಿದಂತೆ ಕೆಲಸ ಮಾಡುವ ಪೊಲೀಸರನ್ನು ಬಿಟ್ಟು ಈ ಕೆಲಸ ಮಾಡಿಸುತ್ತಿದ್ದಾರೆ. ಸ್ಟಿಂಗ್ ಮಾಡಿ ಚಿತ್ರೀಕರಣ ಮಾಡಿದ ಆರೋಪಿಗಳನ್ನು ಬಿಟ್ಟು ನಮ್ಮ ಕಾರ್ಯಕರ್ತರ ಸುತ್ತ ಸುತ್ತುತ್ತಿದ್ದಾರೆ. ಇದು ಕುಮಾರಸ್ವಾಮಿ ಬಗ್ಗೆ ಅನುಮಾನ ಬರುವ ರೀತಿಯಲ್ಲಿ ನಡೆಯುತ್ತಿರುವ ತನಿಖೆ ಎಂದು ಕೇಂದ್ರ ಸಚಿವರು ನೇರ ಆರೋಪ ಮಾಡಿದರು.

ಯಾವ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ 2023ರಲ್ಲಿ ಸ್ಟಿಂಗ್ ಆಪರೇಷನ್‌ ಏತಕ್ಕೆ ಮಾಡಿದ? ಆತನನ್ನು ರಕ್ಷಿಸಲು ಸರ್ಕಾರವೇ ಸಂಪೂರ್ಣ ಸಹಕಾರ ಕೊಡುತ್ತಿದೆ. ಆತನ ನಿರೀಕ್ಷಣಾ ಜಾಮೀನು ಅರ್ಜಿಗೆ ಸರ್ಕಾರದ ಕಡೆಯಿಂದ ಆಕ್ಷೇಪಣೆಯನ್ನು ಸಲ್ಲಿಸುವುದಿಲ್ಲ ಎಂದರೆ ಈ ಸರಕಾರ ಹೇಗೆ ತನಿಖೆ ನಡೆಸುತ್ತಿದೆ ಎಂಬುದು ಅರ್ಥವಾಗುತ್ತದೆ. ಶೋಧ ಮಾಡುವ ನೆಪದಲ್ಲಿ ನಮ್ಮ ವಾರ್ ರೂಂ ಹುಡುಗರ ಕುಟುಂಬದ ಹೆಣ್ಣುಮಕ್ಕಳಿಗೆ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ದಾರೆ. ಭಯದ ವಾತಾವರಣ ಸೃಷ್ಟಿ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಮತ್ತು ಅವರ ಪುತ್ರ ಹೇಳಿದ ಹೆಸರುಗಳ ವ್ಯಕ್ತಿಗಳನ್ನು ಇವರು ರಕ್ಷಣೆ ಮಾಡುತ್ತಿದ್ದಾರೆ. ರಾಕೇಶ್ ಶೆಟ್ಟಿ, ಕೃಪಾ ಆಳ್ವಾ ಯಾಕೆ ಸ್ಟಿಂಗ್ ಮಾಡಿದರು? ಯಾರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಲು ಕುತಂತ್ರ ರೂಪಿಸಿದ್ದರು ಎಂಬುದರ ಬಗ್ಗೆ ಗೃಹ ಸಚಿವರು ಹೇಳಬೇಕು ಎಂದು ಕೇಂದ್ರ ಸಚಿವರು ಒತ್ತಾಯಿಸಿದರು.

ಸಿದ್ದರಾಮಯ್ಯ ಅವರನ್ನು ಹೇಗಾದರೂ ಅಧಿಕಾರದಿಂದ ಕೆಳಕ್ಕೆ ಇಳಿಸಬೇಕು ಎಂಬ ದುರುದ್ದೇಶದಿಂದ ಸ್ಟಿಂಗ್ ಅನ್ನು ಗುರಾಣಿಯಾಗಿ ಬಳಸಿಕೊಂಡರು. ಈ ವಿಷಯ ಹಾಲಿ ಮುಖ್ಯಮಂತ್ರಿಗೆ ಸಂಪೂರ್ಣವಾಗಿ ಗೊತ್ತಿದೆ. ಕಾಂಗ್ರೆಸ್ ಪಕ್ಷದ ಹಲವಾರು ನಾಯಕರಿಗೆ ವಿಷಯ ಗೊತ್ತಿದೆ. ಅದನ್ನೆಲ್ಲಾ ಮುಚ್ಚಿಟ್ಟು ನಮ್ಮನ್ನು ಬ್ಲಾಕ್‌ಮೇಲ್ ಮಾಡಲು ಹೊರಟಿದ್ದಾರೆ. ಮೊದಲಿನಿಂದಲೂ ತನಿಖೆ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಚಿವರು ಆಪಾದಿಸಿದರು.

ನಮ್ಮ ಹುಡುಗರ ಮೊಬೈಲ್, ಲ್ಯಾಪ್‌ಟಾಪ್ ವಶಪಡಿಸಿಕೊಳ್ಳುತ್ತಿದ್ದಾರೆ. ನಮ್ಮ ಪಕ್ಷದದಿಂದಲೇ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ ಎನ್ನುವ ರೀತಿ ದಾಖಲೆಗಳನ್ನು ಸೃಷ್ಟಿಸಲು ಹುನ್ನಾರ ಮಾಡುತ್ತಿದ್ದಾರೆ. ಈ ಸಂಚನ್ನು ಎದುರಿಸುವ ಶಕ್ತಿ ನನಗಿದೆ. ಅಷ್ಟು ಸುಲಭವಾಗಿ ಬಿಡಲ್ಲ, ಉಗ್ರ ಹೋರಾಟ ಮಾಡುತ್ತೇವೆ. ಅವರು ಮುಚ್ಚಿ ಹಾಕಲು ಪ್ರಯತ್ನ ಮಾಡಿದಷ್ಟು ನಾವು ಹೋರಾಟ ತೀವ್ರಗೊಳಿಸುತ್ತೇವೆ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.

ಪವರ್ ಟಿವಿ ಉದ್ಯೋಗಿ ಸಾವಿನ ಬಗ್ಗೆ ಮಾಹಿತಿ ಸಿಗುತ್ತಿದೆ:

ಪವರ್ ಟಿವಿಯಲ್ಲಿ ಕೆಲಸ ಮಾಡುತ್ತಿದ್ದ ವಿಕ್ಕಿ ಎಂಬ ಉದ್ಯೋಗಿಯ ಅನುಮಾನಾಸ್ಪದ ಸಾವಿನ ಬಗ್ಗೆ ಪ್ರಸ್ತಾಪಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ನಡೆದಿರುವ ಘಟನೆ ಅದು. ಅದನ್ನು ಯಾಕೆ ಮುಚ್ಚಿ ಹಾಕಿದರು? ಯುಡಿಆರ್ ಏಕೆ ಮಾಡಿದರು? ತನಿಖೆ ಏಕೆ ಮಾಡಲಿಲ್ಲ? ಮರಣೋತ್ತರ ಪರೀಕ್ಷೆ ಯಾಕೆ ಮಾಡಲಿಲ್ಲ? ಅಸಹಜ ಸಾವಾಗಿದ್ದರೆ ಏಕೆ ಮರಣೋತ್ತರ ಪರೀಕ್ಷೆ ಮಾಡಲಿಲ್ಲ? ಎಂದು ಪ್ರಶ್ನಿಸಿದರು.

ಆ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಕೊಡುತ್ತೇನೆ ಎಂದು ಹೇಳಿದ್ದ ವ್ಯಕ್ತಿ ₹2 ಲಕ್ಷ ಕೊಟ್ಟಿದ್ದಾನೆ ಎಂಬ ಚರ್ಚೆ ಮಾಹಿತಿ ಇದೆ ನನಗೆ. ಈ ಘಟನೆಯಿಂದ ಅವರು ಎಕ್ಸ್‌ಪೋಸ್ ಆಗುತ್ತಿದ್ದಾರೆ. ಎಲ್ಲದಕ್ಕೂ ಸಾಕ್ಷಿ, ಸಾಕ್ಷಿ ಅಂಥ ನಮ್ಮನ್ನು ಕೇಳುವುದಾದರೆ ಪೊಲೀಸ್ ಇಲಾಖೆ ಏಕೆ ಬೇಕು? ಸುಳ್ಳು ಸಾಕ್ಷಿಗಳನ್ನು ಸೃಷ್ಟಿ ಮಾಡಲು ಪೊಲೀಸ್ ಇಲಾಖೆ ಬೇಕಾ? ನಾನೇ ಸ್ಟಿಂಗ್ ಮಾಡಿದೆ ಎಂದು ಅವನು ಟೀವಿಯಲ್ಲಿ ಕೂತು ಹೇಳಿದ ಮೇಲೆಯೂ ಸ್ಟಿಂಗ್ ಬಗ್ಗೆ ಸಾಕ್ಷಿ ಕೊಡಿ ಕೇಳುತ್ತಿದ್ದಾರೆ. ಇದೇನಾ ತನಿಖೆ ಮಾಡುವ ವಿಧಾನ? ಸ್ಟಿಂಗ್ ಆಪರೇಷನ್ ಬಗ್ಗೆ ಗೃಹ ಸಚಿವರು ಬೋಲ್ಡ್ ಸ್ಟೆಪ್ ಎಲ್ಲಿ ತೆಗೆದುಕೊಂಡಿದ್ದಾರೆ? ಮುಚ್ಚಿ ಹಾಕುವ ಸ್ಟೆಪ್ ತೆಗೆದುಕೊಂಡಿದ್ದಾರೆ! ಮೊದಲ ದಿನದಿಂದಲೂ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ವಿರುಧ್ಧ ವಾಗ್ದಾಳಿ ನಡೆಸಿದರು.

ಯಾವ ಬಂಟನೂ ಓಡಿ ಹೋಗಿಲ್ಲ:

ಕುಮಾರಸ್ವಾಮಿ ಅವರ ಬಲಗೈ ಬಂಟ, ಎಡಗೈ ಬಂಟ ಓಡಿ ಹೋಗಿದ್ದಾರೆ ಎಂದು ಗೃಹ ಸಚಿವ ಖರ್ಗೆ ಹೇಳಿದ್ದಾರೆ ಎನ್ನುವ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು; ಯಾರು ಓಡಿ ಹೋಗಿದ್ದಾರೆ? ಯಾರು ಓಡಿ ಹೋಗಲು ಸಾಧ್ಯ? ಅವರ ಮೇಲೆ ಏನಿದೆ ಓಡಿ ಹೋಗಲು? ಪ್ರೀಯಾಂಕ್ ಖರ್ಗೆ ಇದನ್ನೆಲ್ಲಾ ಏಕೆ ಸೃಷ್ಟಿ ಮಾಡುತ್ತಿದ್ದಾರೆ ಎಂದು ಗೊತ್ತಿದೆ. ಕೆಪಿಎಸ್‌ಸಿ ಹಗರಣ ಮುಚ್ಚಿ ಹಾಕಿಕೊಳ್ಳಲು ಸ್ಟಿಂಗ್ ವಿಷಯವನ್ನು ಜೆಡಿಎಸ್ ಕಡೆಗೆ ತಿರುಗಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಕೆಪಿಎಸ್ಸಿ ಹಗರಣವನ್ನು 90% ಮುಚ್ಚಿ ಹಾಕಿದ್ದಾರೆ:

ಸ್ಟಿಂಗ್ ಬಗ್ಗೆ 80% ಸ್ಟಿಂಗ್ ತನಿಖೆ ಮುಗಿದು ಹೋಗಿದೆ ಎಂಬ ಸಚಿವ ಪ್ರೀಯಾಂಕ್ ಖರ್ಗೆ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು; ಪಾಪ.. ಅವರು 80% ಸ್ಟಿಂಗ್ ತನಿಖೆ ಮುಗಿಸಿದ್ದಾರೆ. ಕೆಪಿಎಸ್‌ಸಿ ಹಗರಣವನ್ನು 90% ಮುಚ್ಚಿ ಹಾಕಿದ್ದಾರೆ. ಸ್ಟಿಂಗ್ ಬಗ್ಗೆ ಇನ್ನು 20% ತನಿಖೆ ಇನ್ನೇನು ಮಾಡ್ತಾರೆ ನೋಡೋಣ. ಇವರು ಮಾಡಿರುವಂತಹ ಅಪರಾಧಗಳು, ಮಾಡಿರುವ ಅಕ್ರಮಗಳನ್ನು ಮುಚ್ಚಿಕೊಳ್ಳಲು ತನಿಖೆ ಮಾಡುತ್ತಿದ್ದಾರೆ. ಇವರಿಗೆ ಬೇಕಾದಂತಹ ಅಧಿಕಾರಿಗಳನ್ನು ಯಾವ್ಯಾವ ರೀತಿಯಲ್ಲಿ ವ್ಯವಸ್ಥಿತವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ನಾನು ಗಮನಿಸುತ್ತಿದ್ದೇನೆ. ಸಿದ್ದರಾಮಯ್ಯ ಅವರು ತನಿಖೆ ಆಗಬೇಕು ಎಂದಿದ್ದಾರೆ. ಸ್ಟಿಂಗ್ ಮೂಲಪುರುಷ ಅರೆಸ್ಟ್ ಮಾಡಿದಂತೆ ತೋರಿಸಿಕೊಂಡು ಸರ್ಕಾರದಿಂದ ತಕರಾರು ಮಾಡದೆ ಬೇಲ್ ಕೊಡಿಸಿದ್ದಾರೆ. ನಿರೀಕ್ಷಣಾ ಬೇಲ್‌ ಕೊಡಿಸಿದ್ದಾರೆ. ಇವರ ನಾಟಕ ಗೊತ್ತಾಗುತ್ತಿದೆ. ಆ ವ್ಯಕ್ತಿಗೆ ಇವರೇ ನಿರೀಕ್ಷಣಾ ಜಾಮೀನು ತೆಗೆದುಕೊಳ್ಳಲು ಯಾರಿಗೆ ಸಹಕಾರ ಕೊಟ್ಟಿದ್ದಾರೆ ಎಂದು ಸಚಿವರು ಹೇಳಿದರು.

ಎಲ್ಲವನ್ನೂ ಕಾಲವೇ ನಿರ್ಣಯ ಮಾಡುತ್ತದೆ, ಕಾಯಿರಿ:

ಎಲ್ಲವನ್ನು ಕಾಲ ನಿರ್ಣಯ ಮಾಡುತ್ತದೆ ಎಂದು ಸಿಎಂ ಹೇಳಿದ್ದಾರೆ. ಯಾವ ರೀತಿ ಕಾಲ ನಿರ್ಣಯ ಮಾಡಿಸಬೇಕು ಅಂತಲೇ, ಪಾಪ ಅವರು ಮೌನಕ್ಕೆ ಶರಣಾಗಿದ್ದಾರೆ. ಕಾಲವೇ ನಿರ್ಣಯ ಮಾಡುತ್ತದೆ, ಇವರು ಕಾಯಬೇಕು. ಪಾಪ.. ಅವರು ಇದರಲ್ಲಿ ಬಹಳ ಎಕ್ಸ್‌ಪರ್ಟ್ ಇದ್ದಾರೆ. ಚೆಸ್‌ ಪಾನ್ ಹೇಗೆ ಇಡಬೇಕೆಂದು ತನಿಖೆ ನಡೆಸುತ್ತಿದ್ದಾರೆ. ಈ ತನಿಖೆಯನ್ನು ಸಹ ಯಾವ ರೀತಿಯಲ್ಲೂ ತಾರ್ತಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಇದನ್ನು ಯಾವ ರೀತಿ ಮುಚ್ಚಿ ಹಾಕಬೇಕೆಂದು ಸುಮ್ಮನೆ ತನಿಖೆ ಮಾಡಿ ಅದನ್ನು ಇನ್ನೊಬ್ಬರ ತನಿಖೆಗೆ ಕಟ್ಟಿ ಕ್ಲೋಸ್ ಮಾಡಲು ಈಗಾಗಲೇ ಮುಖ್ಯಮಂತ್ರಿಗಳು, ಗೃಹ ಸಚಿವರು ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ರೂಪಿಸುತ್ತಿದ್ದಾರೆ. ಮುಂದೆ ಈ ರೀತಿ ಮಾಡದೆ ಇರಲು ಭಯ, ಭಕ್ತಿ ನಿರ್ಮಾಣ ಮಾಡಲು ಇವರಿಂದ ಸಾಧ್ಯವಿಲ್ಲ ಎಂದರು ಅವರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣ, ವಿಧಾನ ಪರಿಷತ್ ಸದಸ್ಯರಾದ ಎಸ್ ಎಲ್ ಭೋಜೇಗೌಡರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments