Homeಕರ್ನಾಟಕಶಿವಮೊಗ್ಗದ ಘನತೆ ಕುಸಿಯಲು ಬಿಜೆಪಿಯೇ ಕಾರಣ: ಶಿಕಾರಿಪುರದಲ್ಲಿ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

ಶಿವಮೊಗ್ಗದ ಘನತೆ ಕುಸಿಯಲು ಬಿಜೆಪಿಯೇ ಕಾರಣ: ಶಿಕಾರಿಪುರದಲ್ಲಿ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ರಾಜ್ಯಾಧ್ಯಕ್ಷರ ಕ್ಷೇತ್ರದಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಸೇರಿ ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ. ಐತಿಹಾಸಿಕ, ಸಾಂಸ್ಕೃತಿಕ ಹಾಗೂ ರಾಜಕೀಯವಾಗಿ ಹೆಸರುವಾಸಿಯಾಗಿದ್ದ ಶಿವಮೊಗ್ಗ ಜಿಲ್ಲೆ ಬಿಜೆಪಿಯ ಆಡಳಿತದಲ್ಲಿ ಯಾವ ಸ್ಥಿತಿಗೆ ಬಂದಿದೆ ಎಂಬುದನ್ನು ಜನರು ಆಲೋಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.

ಶಿಕಾರಿಪುರದಲ್ಲಿ ನಡೆದ ಜನತಾ ಜೋಡೋ ಜಾಗೃತಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಈಸೂರಿನಿಂದ ಯಾತ್ರೆ ಆರಂಭಿಸಿರುವುದಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. 1942ರಲ್ಲಿ ಬ್ರಿಟಿಷರ ವಿರುದ್ಧ ಭಾರತ ಬಿಟ್ಟು ತೊಲಗಿ ಚಳವಳಿ ನಡೆದಾಗಲೇ ಈಸೂರು ಸ್ವತಂತ್ರ ಎಂದು ಘೋಷಿಸಿಕೊಂಡ ವೀರಭೂಮಿ ಇದು. ಬಂಗಾರಪ್ಪ, ಕುವೆಂಪು, ಶಾಂತವೇರಿ ಗೋಪಾಲಗೌಡ, ಕಡಿದಾಳ್ ಮಂಜಪ್ಪ, ಜೆ.ಎಚ್. ಪಟೇಲ್ ಸೇರಿದಂತೆ ಅನೇಕ ಮಹನೀಯರನ್ನು ನೀಡಿದ ಶಿವಮೊಗ್ಗ ಜಿಲ್ಲೆ ಇಂದು ಯಾವ ಪರಿಸ್ಥಿತಿಗೆ ಬಂದಿದೆ ಎಂದು ಪ್ರಶ್ನಿಸಿದರು.

“ಮರಿ ಯಡಿಯೂರಪ್ಪನವರು ತಮ್ಮ ಅಭಿವೃದ್ಧಿಯನ್ನು ನೋಡಿ ಎಂದು ಹೇಳುತ್ತಾರೆ. ಶಿಕಾರಿಪುರದ ವಿವೇಕಾನಂದ ಶಿಕ್ಷಣ ಸಂಸ್ಥೆಗೆ ಮಲ್ಲಜ್ಜನ ಕಟ್ಟೆ ಕೆರೆಯನ್ನು 90 ವರ್ಷಗಳ ಅವಧಿಗೆ ಲೀಸ್ ಪಡೆದಿರುವುದು ಅಭಿವೃದ್ಧಿಯೇ? ಅರಣ್ಯ ಒತ್ತುವರಿ ಮಾಡಿ ಖಾಸಗಿ ಜಮೀನಿಗೆ ನೀರು ಹರಿಸಲು ಕೆರೆ ನಿರ್ಮಿಸಿರುವುದು ಅಭಿವೃದ್ಧಿಯೇ?” ಎಂದು ಹರಿಪ್ರಸಾದ್ ಪ್ರಶ್ನಿಸಿದರು.

“ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿದೆಯೇ?” ಎಂದು ಪ್ರಶ್ನಿಸಿದ ಅವರು, ಹಿಂದಿನ ದಿನಗಳಲ್ಲಿ ಸಣ್ಣಪುಟ್ಟ ಆರೋಪಗಳನ್ನೂ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದವರು ಇಂದು ತಮ್ಮ ಕುಟುಂಬದ ಆಸ್ತಿ, ಶಿಕ್ಷಣ ಸಂಸ್ಥೆಗಳು ಮತ್ತು ಜೀವನಶೈಲಿಯ ಬಗ್ಗೆ ಪ್ರಶ್ನೆ ಬಂದಾಗ ಉತ್ತರಿಸಬೇಕಾಗಿದೆ ಎಂದರು.
ಯಡಿಯೂರಪ್ಪ ಅವರು 2008ರಲ್ಲಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಶಾಸಕರನ್ನು ಸೆಳೆಯುವ ಮೂಲಕ ನಡೆದ ‘ಆಪರೇಷನ್ ಕಮಲ’ ರಾಜ್ಯದ ರಾಜಕೀಯ ಘನತೆಗೆ ಧಕ್ಕೆ ತಂದಿತು ಎಂದು ಆರೋಪಿಸಿದ ಹರಿಪ್ರಸಾದ್, ನಂತರ ಕೆಜೆಪಿ ಸ್ಥಾಪಿಸಿ ಮತ್ತೆ ಬಿಜೆಪಿಗೆ ಸೇರ್ಪಡೆಯಾದ ರಾಜಕೀಯ ಬೆಳವಣಿಗೆಗಳನ್ನೂ ಟೀಕಿಸಿದರು.

“ರಾಹುಲ್ ಗಾಂಧಿ ದೇಶದಲ್ಲಿ ಶಾಂತಿ, ಸೌಹಾರ್ದತೆಗಾಗಿ ಹೆಜ್ಜೆ ಹಾಕಿದರು”

ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯ ಸ್ಮರಣಾರ್ಥವಾಗಿ ಜನತಾ ಜೋಡೋ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದ ಅವರು, ದೇಶದಲ್ಲಿ ದ್ವೇಷ ಮತ್ತು ಅಸೂಯೆಯ ವಾತಾವರಣದ ವಿರುದ್ಧ ಶಾಂತಿ, ಸೌಹಾರ್ದತೆ ಮತ್ತು ಒಗ್ಗಟ್ಟಿನ ಸಂದೇಶವನ್ನು ಯಾತ್ರೆ ಸಾರುತ್ತಿದೆ ಎಂದು ಹೇಳಿದರು.
“ಭಾರತದಲ್ಲಿ ಹಲವು ಧರ್ಮಗಳು, ಭಾಷೆಗಳು ಮತ್ತು ಸಂಸ್ಕೃತಿಗಳಿದ್ದರೂ ಭಾರತೀಯರಾಗಿ ಒಗ್ಗಟ್ಟಿನಿಂದ ಬದುಕುತ್ತಿದ್ದೇವೆ. ಆದರೆ ಬಿಜೆಪಿ ದ್ವೇಷದ ವಾತಾವರಣ ಸೃಷ್ಟಿಸುತ್ತಿದೆ” ಎಂದು ಅವರು ಆರೋಪಿಸಿದರು.

ಕುವೆಂಪು ಅವರ “ವಿಶ್ವಮಾನವ” ಸಂದೇಶವನ್ನು ಉಲ್ಲೇಖಿಸಿದ ಹರಿಪ್ರಸಾದ್, ಸಮಾಜದಲ್ಲಿ ಮೌಢ್ಯತೆ ತೊಡೆದುಹಾಕಿ, ಬಡತನದ ವಿರುದ್ಧ ಹೋರಾಡಿ, ವಿಜ್ಞಾನದ ದೀವಿಗೆ ಹಿಡಿದು ವಿಶ್ವಪಥದತ್ತ ಸಾಗಬೇಕು ಎಂಬ ಸಂದೇಶವನ್ನು ಕುವೆಂಪು ನೀಡಿದ್ದರು. ಶಿವಮೊಗ್ಗವನ್ನು ಅವರು “ಸರ್ವಜನಾಂಗದ ಶಾಂತಿಯ ತೋಟ” ಎಂದು ಬಣ್ಣಿಸಿದ್ದರು ಎಂದರು.

18 ಕೋಟಿ ಲಂಚ ಪಡೆದವರು ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ಮಾಡುವುದು ದುರಂತ

ಬಿಜೆಪಿ ನಾಯಕರು ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಪಾದಯಾತ್ರೆಯನ್ನೂ ಟೀಕಿಸಿದ ಹರಿಪ್ರಸಾದ್, “18 ಕೋಟಿ ರೂಪಾಯಿಗಳನ್ನು ಆರ್‌ಟಿಜಿಎಸ್ ಮೂಲಕ ಲಂಚ ಪಡೆದವರು ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ಮಾಡುವುದು ದುರಂತ” ಎಂದು ಆರೋಪಿಸಿದರು.

ಬಿಜೆಪಿ ನಾಯಕರ ರಾಜಕೀಯ ಪಾದಯಾತ್ರೆ ಜನರ ಹಿತಕ್ಕಾಗಿ ಅಲ್ಲ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ತಿಂಗಳುಗಟ್ಟಲೆ ವಿವರಿಸಬಹುದು. ಬಿಜೆಪಿಯ ಸಾಧನೆ ಏನು ಎಂದು ಪ್ರಶ್ನಿಸಿದರು.

“ಮತದಾರರ ಪಟ್ಟಿಯಿಂದ 1.7 ಕೋಟಿ ಜನರನ್ನು ಕೈಬಿಡಲಾಗಿದೆ”
ಮತದಾರರ ಪಟ್ಟಿಯ ಪರಿಷ್ಕರಣೆ ವಿಚಾರವನ್ನೂ ಪ್ರಸ್ತಾಪಿಸಿದ ಹರಿಪ್ರಸಾದ್, ಕರ್ನಾಟಕದಲ್ಲಿ 5.47 ಕೋಟಿ ಮತದಾರರ ಪೈಕಿ 1.7 ಕೋಟಿ ಮತದಾರರನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು. 43 ಲಕ್ಷ ಜನರಿಗೆ ನೋಟಿಸ್ ನೀಡಲಾಗಿದೆ ಎಂದ ಅವರು, ಹಿರಿಯ ನಾಗರಿಕರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲು ಅಧಿಕಾರಿಗಳ ಮುಂದೆ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು “ವಂದೇ ಮಾತರಂನ ಮೊದಲ ಎರಡು ಪ್ಯಾರಾಗಳನ್ನಷ್ಟೇ ಹಾಡುತ್ತೇವೆ” ವಂದೇ ಮಾತರಂ ವಿವಾದದ ಕುರಿತು ಮಾತನಾಡಿದ ಹರಿಪ್ರಸಾದ್, 1937ರಲ್ಲಿ ಅದರ ಮೊದಲ ಎರಡು ಪ್ಯಾರಾಗಳನ್ನು ಕಾಂಗ್ರೆಸ್ ಅಳವಡಿಸಿಕೊಂಡಿತ್ತು. 1950ರಲ್ಲಿ ರಾಜೇಂದ್ರ ಪ್ರಸಾದ್ ಅವರು ಅದನ್ನು ರಾಷ್ಟ್ರಗೀತೆ ಎಂದು ಗೌರವಿಸಿದ್ದರು. ಕಳೆದ ಹಲವು ದಶಕಗಳಿಂದ ಯಾವುದೇ ವಿರೋಧವಿಲ್ಲದ ವಿಚಾರವನ್ನು ಇದೀಗ ಜನರ ಗಮನವನ್ನು ಬೇರೆಡೆ ಸೆಳೆಯಲು ಮುನ್ನೆಲೆಗೆ ತರಲಾಗುತ್ತಿದೆ ಎಂದು ಆರೋಪಿಸಿದರು.
“ಗಲ್ಲಿಗೆ ಹಾಕಿದರೂ ಸರಿ, ನಾವು ಮೊದಲ ಎರಡು ಪ್ಯಾರಾಗಳನ್ನಷ್ಟೇ ಹಾಡುತ್ತೇವೆ. ಮುಂದೆಯೂ ಇದೇ ಮಾತನ್ನು ಹೇಳುತ್ತೇನೆ” ಎಂದು ಅವರು ಹೇಳಿದರು.

“ಮುಂದಿನ ಪೀಳಿಗೆಗೆ ಸಂವಿಧಾನ ಉಳಿಸಿ ಕೊಡಬೇಕು”
ಸ್ವಾತಂತ್ರ್ಯ ಹೋರಾಟದ ಫಲವಾಗಿ ದೇಶಕ್ಕೆ ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯಾತೀತ ತತ್ವ ಮತ್ತು ಚುನಾವಣಾ ವ್ಯವಸ್ಥೆ ದೊರೆತಿದೆ. ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹರಿಪ್ರಸಾದ್ ಹೇಳಿದರು.

ಮೋದಿ ಸರ್ಕಾರದ ಆಡಳಿತದ ಕುರಿತು ಟೀಕಿಸಿದ ಅವರು, ದೇಶದಲ್ಲಿ ಪದವೀಧರರಿಗೆ ಉದ್ಯೋಗದ ಕೊರತೆ ಇದೆ ಎಂದು ಆರೋಪಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ₹72 ಸಾವಿರ ಕೋಟಿ ಸಾಲಮನ್ನಾ ಹಾಗೂ ಕಾಫಿ ಬೆಳೆಗಾರರಿಗೆ ₹1,200 ಕೋಟಿ ಪ್ಯಾಕೇಜ್ ನೀಡಲಾಗಿತ್ತು ಎಂದು ಅವರು ಉಲ್ಲೇಖಿಸಿದರು.
“ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಕರ ಉದ್ಯೋಗ ಮತ್ತು ಮಹಿಳೆಯರ ಸುರಕ್ಷತೆ ಸೇರಿದಂತೆ ಜನರ ಪ್ರಮುಖ ಸಮಸ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ನಲ್ಲಿ ಸಮರ್ಪಕವಾಗಿ ಚರ್ಚೆಯಾಗುತ್ತಿಲ್ಲ. ಬಿಜೆಪಿಯವರ ರಾಜಕಾರಣದಲ್ಲಿ ಹಿಂಸೆ ಮತ್ತು ಸುಳ್ಳುಗಳೇ ಮುಖ್ಯವಾಗಿವೆ” ಎಂದು ಹರಿಪ್ರಸಾದ್ ಆರೋಪಿಸಿದರು.

ಕಾಗೋಡು ಚಳವಳಿಯಂತಹ ರೈತ ಹೋರಾಟಗಳಿಗೆ ಸಾಕ್ಷಿಯಾದ, ಸಾಮಾಜಿಕ ನ್ಯಾಯ ಮತ್ತು ಪ್ರಗತಿಪರ ಚಿಂತನೆಗಳ ನೆಲವಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಜನರು ಮತ್ತೆ ಸಾಮಾಜಿಕ ನ್ಯಾಯ, ಸೌಹಾರ್ದತೆ ಮತ್ತು ಪ್ರಜಾಪ್ರಭುತ್ವದ ಪರವಾಗಿ ಒಗ್ಗೂಡಬೇಕು ಎಂದು ಅವರು ಕರೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments