Homeಕರ್ನಾಟಕಸರ್ಕಾರಿ ನಿವೇಶನದಲ್ಲಿ ಐದು ವರ್ಷದೊಳಗೆ ಮನೆ ಕಟ್ಟದಿದ್ದರೆ ನಿವೇಶನ ವಾಪಸ್: ಸಿಎಂ ಡಿ ಕೆ ಶಿವಕುಮಾರ್

ಸರ್ಕಾರಿ ನಿವೇಶನದಲ್ಲಿ ಐದು ವರ್ಷದೊಳಗೆ ಮನೆ ಕಟ್ಟದಿದ್ದರೆ ನಿವೇಶನ ವಾಪಸ್: ಸಿಎಂ ಡಿ ಕೆ ಶಿವಕುಮಾರ್

ಬಿಡಿಎ ಆಗಲಿ, ಕಾರ್ಪೊರೇಷನ್ ನಿವೇಶನವಾಗಲಿ ಅದರ ಮಾಲೀಕರು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹೀಗಾಗಿ ನಿವೇಶನ ಪಡೆದ 5 ವರ್ಷದೊಳಗೆ ಅಲ್ಲಿ ಮನೆ ನಿರ್ಮಾಣ ಮಾಡಬೇಕು. ಕಟ್ಟದಿದ್ದರೆ, ಅದಕ್ಕೆ ದುಪ್ಪಟ್ಟು ತೆರಿಗೆ ಅಥವಾ ನಿವೇಶನ ಹಿಂಪಡೆಯಲಾಗುವುದು. ಮನೆ ಕಟ್ಟದೇ ಖಾಲಿ ಇಟ್ಟುಕೊಂಡರೆ ಅಲ್ಲಿ ಕಸದ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಈ ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಹೆಬ್ಬಾಳ ಜಂಕ್ಷನ್‌ ಬಳಿ “ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನಕ್ಕೆ ಚಾಲನೆ ನೀಡಿ ಶಿವಕುಮಾರ್‌ ಅವರು ಶನಿವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

ಮನೆ ಕಟ್ಟದಿದ್ದರೆ ನಿವೇಶನ ವಾಪಸ್ ತೆಗೆದುಕೊಳ್ಳುತ್ತೀರಾ ಎಂದು ಕೇಳಿದಾಗ, “ಬೇರೆ ವಿಧಿಯಿಲ್ಲ, ನಾವು ಇದನ್ನು ಮಾಡಲೇಬೇಕಾಗುತ್ತದೆ. ನಾವು ನಿವೇಶನ ನೀಡುವುದು ಮನೆ ಕಟ್ಟಿಕೊಳ್ಳಲು. ಕೆಲವರು 20, 30, 40 ವರ್ಷವಾದರೂ ಮನೆ ಕಟ್ಟಿಲ್ಲ. ಅವರು ಕಟ್ಟಿರುವ ಹಣವನ್ನು ಬಡ್ಡಿ ಸಮೇತ ವಾಪಸ್ ನೀಡಿ ನಿವೇಶನ ಹಿಂಪಡೆಯಲಾಗುವುದು. ಸಿಐಟಿಬಿ, ಬಿಡಿಎ, ಸೊಸೈಟಿಗಳಿಂದ ನಿವೇಶನ ಪಡೆದ ಮೇಲೆ ಮನೆ ಕಟ್ಟಬೇಕಾಗಿರುವುದು ಅವರ ಕರ್ತವ್ಯ. ನಿವೇಶನಕ್ಕೆ ಕಾಪೌಂಡ್ ಕೂಡ ಹಾಕದೇ, ಕಸ ಹಾಕಲು ಅವಕಾಶ ಕೊಟ್ಟರೆ ಹೇಗೆ? ಅವರ ಜಾಗದಲ್ಲಿ ಅವರು ಕಸ ಹಾಕದೇ ಇದ್ದರೂ, ಅವರ ಜಾಗವನ್ನು ಅವರು ರಕ್ಷಣೆ ಮಾಡಿಕೊಳ್ಳಬೇಕು” ಎಂದು ತಿಳಿಸಿದರು.

“ಮಹಾತ್ಮಾ ಗಾಂಧೀಜಿ ಅವರು ಸ್ವಚ್ಛತೆಯೇ ದೇವರು ಎಂದು ನಮಗೆ ಮಾರ್ಗದರ್ಶನ ನೀಡಿದ್ದಾರೆ. ರಾಜೀವ್ ಗಾಂಧಿ ಅವರು ನಿಮ್ಮ ಮನೆ ಮುಂದೆ ಸ್ನಚ್ಛತೆ ಕಾಪಾಡಿದರೆ, ಬೀದಿ ಸ್ವಚ್ಛವಾಗುತ್ತದೆ. ಬೀದಿ ಸ್ವಚ್ಛವಾದರೆ ಊರು ಸ್ವಚ್ಛವಾಗುತ್ತದೆ, ಊರು ಸ್ವಚ್ಛವಾದರೆ ನಾಡು ಸ್ವಚ್ಛವಾಗುತ್ತದೆ ಎಂದು ಹೇಳಿದ್ದಾರೆ. ಬೆಂಗಳೂರಿನ ಸ್ವಚ್ಛತೆ ನಮ್ಮ ಕರ್ತವ್ಯ. ನಿಮ್ಮ ಬೆಂಗಳೂರನ್ನು ಕಾಪಾಡಿಕೊಳ್ಳುವುದು ನಿಮ್ಮ ಕರ್ತವ್ಯ” ಎಂದರು.

ಎಲ್ಲೆಂದರಲ್ಲಿ ಕಸ ಸುರಿಯುವ ವಾಹನ ಮುಲಾಜಿಲ್ಲದೆ ಮುಟ್ಟುಗೋಲು ಹಾಕಿಕೊಳ್ಳಿ

“ಬೆಂಗಳೂರು ಸರ್ಕಾರದ ಆಸ್ತಿಯಲ್ಲ, ಬೆಂಗಳೂರು ನಿಮ್ಮ ಆಸ್ತಿ. ಇದನ್ನು ಕಾಪಾಡಲು ಅಭಿಯಾನ ಆರಂಭಿಸಿದ್ದೇವೆ. ಘನತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವ ವಾಹನಗಳಿಗೆ ನೋಟೀಸ್ ಕೊಡಲಾಗಿತ್ತು. ಕ್ಯಾಮೆರಾ ಕಣ್ಗಾವಲು ಇಡಲಾಗಿತ್ತು. ಈಗ ಮತ್ತೆ ಯತಾಸ್ಥಿತಿಯಲ್ಲಿ ಕಸ ಸುರಿಯುತ್ತಿದ್ದಾರೆ. ಅನುಮತಿ ಇಲ್ಲದೇ ಕಸ ಸುರಿಯುವವರ ವಾಹನವನ್ನು ಮುಲಾಜಿಲ್ಲದೇ ಮುಟ್ಟುಗೋಲು ಹಾಕಿಕೊಳ್ಳಿ ಎಂದು ನಾನು ಪೊಲೀಸರಿಗೆ ನಿರ್ದೇಶನ ನೀಡುತ್ತಿದ್ದೇನೆ. ಜನರಲ್ಲಿ ನಾವು ನಾಗರಿಕ ಪ್ರಜ್ಞೆ ತರಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.

“ಹಸಿರಿನ ವಿಚಾರವಾಗಿ ನನ್ನಲ್ಲಿ ವಿಭಿನ್ನ ಆಲೋಚನೆ ಇದೆ. ಅದನ್ನು ಈಗ ನಾನು ಪ್ರಸ್ತಾಪ ಮಾಡುವುದಿಲ್ಲ, 100 ದಿನಗಳ ಕಾರ್ಯಕ್ರಮದ ವೇಳೆ ಪ್ರಕಟ ಮಾಡುತ್ತೇವೆ. ಬೆಂಗಳೂರು ಸ್ವಚ್ಛತೆ ಬಗ್ಗೆ ಟೀಕೆ ಟಿಪ್ಪಣಿ ಬರುತ್ತಿವೆ. ನಾವು ಮಾಡುವ ಕೆಲಸ ಶಾಶ್ವತವಾಗಿ ಉಳಿಯುತ್ತದೆ, ಟೀಕೆಗಳು ಸಾಯುತ್ತವೆ. ಶಿವಾಜಿನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ದಾಳಿ ಮಾಡಲಾಗಿದೆ. ಯಾರಾದರೂ ಇದನ್ನು ಅಧಿಕಾರಿಗಳ ಮೇಲೆ ದಾಳಿ ಎಂದು ಭಾವಿಸಿದ್ದರೆ ಅದು ಭ್ರಮೆ. ಇದು ಸರ್ಕಾರ, ಸಚಿವರು ಹಾಗೂ ಶಾಸಕರ ಮೇಲಿನ ದಾಳಿ ಎಂದೇ ಭಾವಿಸುತ್ತೇವೆ. ನಾವು ಎಲ್ಲಾ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ” ಎಂದು ಹೇಳಿದರು.

“ಬೀದಿವ್ಯಾಪಾರದವರಿಗೆ ಬೇರೆ ಜಾಗಗಳಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುವುದು. ಬೀದಿ ವ್ಯಾಪಾರಿಗಳು ಪಾದಚಾರಿಗಳು ಹಾಗೂ ವಾಹನ ಸಂಚಾರಕ್ಕೆ ತೊಂದರೆ ಮಾಡಲು ಸಾಧ್ಯವಿಲ್ಲ. ಇಂದಿನಿಂದ ಆರಂಭವಾಗುತ್ತಿರುವ ಈ ಅಭಿಯಾನ ಬೆಂಗಳೂರಿಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಮಾದರಿ ಕಾರ್ಯಕ್ರಮವಾಗಿದೆ. ಎಲ್ಲಾ ಶಾಸಕರು ತಮ್ಮ ಕ್ಷೇತ್ರದಲ್ಲಿ ಈ ಅಭಿಯಾನ ಕೈಗೆತ್ತಿಕೊಳ್ಳಬೇಕು. ಇದು ನಿಮ್ಮ ಬೆಂಗಳೂರು, ಇಡೀ ದೇಶ ನಿಮ್ಮನ್ನು ಗಮನಿಸುತ್ತಿದೆ. ಅನೇಕ ರಾಷ್ಟ್ರೀಯ ನಾಯಕರು ಅನೇಕ ಮಾರ್ಗದರ್ಶನ ನೀಡಿದ್ದು, ಅದನ್ನು ಮುಂದುವರಿಸಿಕೊಂಡು ಹೋಗೋಣ” ಎಂದರು.

ಎನ್ ಜಿಒ, ಸಂಘ ಸಂಸ್ಥೆಗಳು ನಾಲ್ಕೈದು ರಸ್ತೆ ಜವಾಬ್ದಾರಿ ಪಡೆದು ಸ್ವಚ್ಛತೆ ಕಾಪಾಡಬಹುದು

“ದೇಶದ ಎಲ್ಲಾ ನಗರಗಳಲ್ಲೂ ಈ ಕಸ ಹಾಕುವ ಸಮಸ್ಯೆ ಇದೆ. ಬೆಂಗಳೂರಿನಲ್ಲಿ ಕಸದ ವಿಚಾರವಾಗಿ ಕಾರ್ಯಕ್ರಮ ಮಾಡಿ ಅನೇಕ ವರ್ಷಗಳಾಗಿವೆ. ಮುಂದಿನ ದಿನಗಳಲ್ಲಿ ಇದಕ್ಕೆ ಹೊಸ ರೂಪ ನೀಡುತ್ತಿದ್ದೇವೆ. ಎನ್ ಜಿಒಗಳು, ಸಂಘ ಸಂಸ್ಥೆಗಳು ಒಂದೊಂದು ಪ್ರದೇಶದ ಜವಾಬ್ದಾರಿ ಹೊತ್ತುಕೊಂಡರೆ ನಾನು ಸ್ವಾಗತಿಸುತ್ತೇನೆ. ನಾಲ್ಕು ರಸ್ತೆ ಜವಾಬ್ದಾರಿ ತೆಗೆದುಕೊಂಡು ಬಂದರೆ ಸಾಕು. ಈ ಅಭಿಯಾನಕ್ಕೆ ನಾಗರಿಕರ ಸಹಕಾರ ಬೇಕು” ಎಂದು ತಿಳಿಸಿದರು.

ಕಾವೇರಿಯ ಒಂದು ಅಣೆಕಟ್ಟು ತುಂಬುತ್ತಿದ್ದು, ನೀರು ಹಿಡಿದಿಡಲು ಸಾಧ್ಯವಿಲ್ಲ

ಕಾವೇರಿ ವಿಚಾರವಾಗಿ ಬಿಜೆಪಿ ನಾಯಕರ ಟೀಕೆ, ಆರೋಪದ ಬಗ್ಗೆ ಕೇಳಿದಾಗ, “ಬಿಜೆಪಿ ನಾಯಕರು ಆರೋಪ ಮಾಡುತ್ತಾರೆ. ನಾವು ಇನ್ನೂ ನೀರು ಹರಿಸಿಲ್ಲ, ಅವರೇ ಸರ್ವಪಕ್ಷ ಸಭೆ ಕರೆಯುವ ಸಲಹೆ ನೀಡಿದ್ದಾರೆ. ಆದರೆ ಇಂದು ಸಂಜೆ ವೇಳೆಗೆ ಒಂದು ಅಣೆಕಟ್ಟು ಭರ್ತಿಯಾಗಲಿದೆ. ಆ ಅಣೆಕಟ್ಟು ತುಂಬಿದ ಬಳಿಕವೂ ನೀರನ್ನು ಹಿಡಿದಿಡಲು ಆಗುವುದಿಲ್ಲ. ಅತ್ತ ತಮಿಳುನಾಡಿನವರು ಸುಪ್ರೀಂ ಕೋರ್ಟಿಗೆ ಹೋಗಲು ಸಿದ್ಥತೆ ಮಾಡಿಕೊಳ್ಳಲಾಗುತ್ತಿದೆ ಎಂದು ಎಂದು ಈಗಾಗಲೇ ಹೇಳಿಕೆಗಳು ಬಂದಿವೆ. 36-39 ಕ್ಯೂಸೆಕ್ ನೀರು ಒಳಹರಿವು ಇದ್ದು, ನಮಗೆ ನೀರು ಹರಿಸಲು ಹೇಳಿರುವುದು 3,500 ಕ್ಯೂಸೆಕ್ ನೀರು. ವಿರೋಧ ಪಕ್ಷದವರು ಹಾಗೂ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ ನಾವು ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments