Homeಕರ್ನಾಟಕಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನ್: ಒಂದು ವಿಮರ್ಶೆ

ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನ್: ಒಂದು ವಿಮರ್ಶೆ

ಟಿಪ್ಪು ಸುಲ್ತಾನ ಕುರಿತು ಮರೆಯಾಗಿದ್ದ ಇತಿಹಾಸವನ್ನು ‘ಕರಾವಳಿಯ ಚರಿತ್ರೆಯಲ್ಲಿ ಹೈದರ್‌ ಅಲಿ ಮತ್ತು ಟಿಪ್ಪು ಸುಲ್ತಾನ್’ ಕೃತಿಯು ಕಟ್ಟಿಕಟ್ಟಿಕೊಡಲು ಲೇಖಕ ನವೀನ್ ಸೂರಿಂಜೆ ಅವರು ಯಶಸ್ವಿಯಾಗಿದ್ದಾರೆ. ಆ ಮೂಲಕ ಮುಂದಿನ ತಲೆಮಾರಿಗೆ ಕಳೆದು ಹೋಗಬಹುದಾಗಿದ್ದ ಅನೇಕ ಸತ್ಯಸಂಗತಿಗಳನ್ನು ಈ ಕೃತಿಯಲ್ಲಿ ದಾಖಲಿಸುವ ಮೂಲಕ ಲೇಖಕರು ಮಾಡಿದ ಸಾಹಿತ್ಯ ಕಾರ್ಯ ನಮ್ಮ ಯುವ ತಲೆಮಾರಿಗೆ ಮಾದರಿಯಾಗಿದೆ ಎನ್ನುತ್ತಾರೆ ವಿಮರ್ಶಕ ಡಾ. ಈರಣ್ಣ ಇಂಜಗನೇರಿ

ರಾಷ್ಟ್ರಕವಿ ಕುವೆಂಪು ಅವರು ಕನ್ನಡ ನಾಡನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವೆಂದು ಕರೆದಿದ್ದಾರೆ. ಅಂತೆಯೇ ಚರಿತ್ರೆಯಲ್ಲಿ ದಾಖಲಾದ ರಾಜಕೀಯ ಮತ್ತು ಧಾರ್ಮಿಕ ಸಂಗತಿಗಳನ್ನು ಅವಲೋಕಿಸಿದಾಗ ಕನ್ನಡ ನಾಡು ಅನೇಕ ವೈರುಧ್ಯತೆಗಳ ಮಧ್ಯದಲ್ಲಿಯೇ ಸಾಂಸ್ಕೃತಿಕ ಸಾಮರಸ್ಯವನ್ನು ಉಳಿಸಿಕೊಂಡು ಬಂದಿದೆ. ಕನ್ನಡದ ನೆಲದಂತೆ ಭಾರತದ ದೇಶವೂ ನಾಗರೀಕತೆಯ ಕಾಲದಿಂದಲೂ ತನ್ನದೇ ಆದಸಾಂಸ್ಕೃತಿಕ ಹೆಗ್ಗರುತನ್ನು ತನ್ನೊಳಗೆ ಬಹು ಜತನದಿಂದ ಕಾಪಾಡಿಕೊಂಡು ಬಂದಿದೆ. ನಮ್ಮ ನೆಲದಲ್ಲಿ ಜಾತಿ, ಧರ್ಮ, ಪಂಥ ಹಾಗೂ ಆಚರಣೆಗಳು ಬೇರೆ ಬೇರೆಯಾಗಿದ್ದರೂ, ಭಾರತೀಯರಾದ ನಾವೆಲ್ಲರೂ ‘ಒಂದೇ ಗೂಡಿನ ಹಕ್ಕಿಗಳು’ ಎಂಬಂತೆ ಬಾಳುತ್ತಿದ್ದೇವೆ. ಮುಂದೆ ಒಕ್ಕೂಟ ವ್ಯವಸ್ಥೆಯ ಮೂಲಕ ನಾವೆಲ್ಲರೂ ರಚಿಸಿಕೊಂಡು ಒಪ್ಪಿಕೊಂಡ ಸಂವಿಧಾನದ ನಿಯಮಗಳು ಎಲ್ಲ ಜಾತಿ, ಧರ್ಮದವರಿಗೂ ಮುಕ್ತ ಮತ್ತು ಸಮಾನ ಅವಕಾಶಗಳನ್ನು ನೀಡಿದ್ದರೂ, ವಾಸ್ತವದ ನೆಲೆಯಲ್ಲಿ ನಮ್ಮ ಜನರು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ಇಂತಹ ವಿರೋಧಾಭಾಸಗಳನ್ನು ಎದುರಿಸುತ್ತಲೇ ನಮ್ಮ ಯುವ ತಲೆಮಾರು ಹೊಸ ಶಕ್ತಿಯಾಗಿ ರೂಪುಗೊಳ್ಳಬೇಕಾಗಿದೆ. ಕಳೆದ ವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಯುವಕರ ಪ್ರತಿಭಟನೆಯು ಇದಕ್ಕೆ ಮಾದರಿಯಾಗಿದೆ ಜೊತೆಗೆ ಇದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ.

ಭಾರತೀಯ ಭೂಪ್ರದೇಶವು ನಿಸರ್ಗದತ್ತವಾಗಿ ಭೌಗೋಳಿಕ ವೈಶಿಷ್ಟತೆಯನ್ನು ಹೊಂದಿದೆ. ಜಾತಿ, ಧರ್ಮ ಮತ್ತು ಮಾನವ ಸಂಬoಧಗಳ ವಿಷಯಗಳಲ್ಲಿ ಭಾರತೀಯರಷ್ಟು ಭಾವನಾತ್ಮಕ ವ್ಯಕ್ತಿಗಳು ಜಗತ್ತಿನ ಯಾವ ಪ್ರದೇಶಗಳಲ್ಲಿಯೂ ಕಾಣಸಿಗುವುದಿಲ್ಲ.ಹೀಗಾಗಿಯೇ ಶತಮಾನಗಳ ಕಾಲದಿಂದಲೂಈ ನೆಲದಲ್ಲಿ ತುಂಬಾ ಗಟ್ಟಿಯಾಗಿ ಕೌಟುಂಬಿಕ ವ್ಯವಸ್ಥೆಯು ಬೆಳೆದು ಬಂದಿರುವುನ್ನು ಕಾಣುತ್ತೇವೆ. ಈ ನೆಲದಲ್ಲಿ ಅನೇಕ ಸಾಧು-ಸಂತರು, ಶರಣರು, ಜ್ಞಾನಿಗಳು ಜನ್ಮ ತಳೆದು ಭಕ್ತಿ, ಜ್ಞಾನ, ಆಧ್ಯಾತ್ಮ ದ ಮೂಲಕ ನೊಂದವರ ಬಾಳಿಗೆ ಬೆಳಕು ನೀಡಿದ್ದಾರೆ. ಜೊತೆಗೆ ತಮ್ಮ ಕೈಲಾದಷ್ಟು ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಲು ಪ್ರಯತ್ನಿಸಿದ್ದಾರೆ. ಅಂತೆಯೇ ಈ ಸಮಾಜವನ್ನು ಸುಧಾರಿಸಲು ಮಹಾತ್ಮರು ಬಳಸಿಕೊಂಡ ದೇವರು, ಜಾತಿ, ಧರ್ಮಗಳೆಂಬ ಅಸ್ತçಗಳನ್ನೇ, ತಮ್ಮ ಸ್ವಾರ್ಥ ಸಾಧನೆಯ ತಂತ್ರಗಳನ್ನಾಗಿ ಬಳಸಿಕೊಂಡ ಈ ನೆಲದ ದೇಶಿಯ ಅರಸರು, ವಿದೇಶಿ ಆಕ್ರಮಣಕಾರರು, ನಮ್ಮನ್ನಾಳುತ್ತಿರುವ ಬಹಳಷ್ಟು ರಾಜಕೀಯ ನಾಯಕರು ಜಾತಿ, ಧರ್ಮಗಳ ಹೆಸರಿನಲ್ಲಿ ಪರಸ್ಪರರ ಮಧ್ಯದಲ್ಲಿಯೆ ವಿಷಬೀಜವನ್ನು ಬಿತ್ತಿ ಈ ನೆಲದ ಸಾಂಸ್ಕೃತಿಕ ಸಾಮರಸ್ಯದ ವಾತಾವರಣನ್ನೇ ಹಾಳುಮಾಡುತ್ತಿದ್ದಾರೆ. ಇಂದು ನಾವೆಲ್ಲ ಮುಕ್ತ ಪ್ರಜಾಪ್ರಭುತ್ವದಂತಹ ವ್ಯವಸ್ಥೆಯಲ್ಲಿ ಬದುಕುತ್ತಿರುವಾಗಲೂ ಮತ, ಪಂಥಗಳೆoಬ ಗಡಿಯನ್ನು ದಾಟುವುದು ಬಹುದೊಡ್ಡ ಸವಾಲಿನ ಕಾರ್ಯವಾಗಿದೆ.

ಗುಡಿ, ಚರ್ಚ್, ಮಸೀದಿಗಳ ಬಿಟ್ಟು ಹೊರ ಬನ್ನಿ,
ಬಡತನವ ಬುಡಮಟ್ಟ ಕೀಳ ಬನ್ನಿ ….
ಮೌಢ್ಯತೆಯ ಮಾರಿಯನ್ನು ಹೊರದೂಡಲೈತನ್ನಿ
ವಿಜ್ಞಾನ ದೀವಿಗೆಯನ್ನು ಹಿಡಿದು ಬನ್ನಿ ….

ಎನ್ನುವ ಕುವೆಂಪು ಅವರ ಕವನದ ಸಾಲುಗಳು, ನಾವೆಲ್ಲರೂ ಜಾತಿ, ಧರ್ಮವನ್ನು ಮೀರಿ ಮನುಷ್ಯತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾದ ಅಂಶವನ್ನು ತಿಳಿಸುತ್ತದೆ. ಆದರೆ ನಮ್ಮ ಸುತ್ತಲಿನ ವಾಸ್ತವಿಕ ಸಂಗತಿಯು ಈ ಮಾತಿಗೆ ವಿರೋಧಾಭಾಸವಾಗಿಯೇ ಎಲ್ಲೆಡೆ ಕಂಡುಬರುತ್ತಿದೆ. ಇತಿಹಾಸದಲ್ಲಿ ಬರೆದ ಸಾಲುಗಳ ಮಧ್ಯದಲ್ಲಿ ದಾಖಲಾಗದೇ ಉಳಿದ ಸಂಗತಿಗಳನ್ನು ಗುರುತಿಸುವ ಮೂಲಕ ನಾವಿಂದು ಕಳೆದು ಹೋದ ಸಾಂಸ್ಕೃತಿಕ ಸಂಗತಿಗಳನ್ನು ಪುನಃ ಸ್ಥಾಪಿಸಬೇಕಾದ ಅಗತ್ಯವಿದೆ. ಈ ಸಾಲಿಗೆ ಇತ್ತೀಚಿಗೆ ನವೀನ ಸೂರಿಂಜೆಯವರು ಬರೆದ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನ್’ ಕೃತಿಯು ಅತಿ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ.

ಕನ್ನಡ ನೆಲವು ಬೀದರನಿಂದ, ಚಾಮರಾಜನಗರದವರೆಗೂ ಭೌಗೋಳಿಕವಾಗಿ ಹರಡಿಕೊಂಡಿದೆ. ಈ ಎಲ್ಲ ಪ್ರದೇಶಗಳಲ್ಲೂ ಜಾತಿ, ಧರ್ಮ ಮತ್ತು ದೇವರುಗಳ ಹೆಸರಿನಲ್ಲಿ ಸಂಘರ್ಷಗಳು ನಡೆಯುತ್ತಿವುದಕ್ಕೆ ಪತ್ರಿಕೆ, ಟಿ.ವಿ. ಮತ್ತು ಸಾಮಾಜಿಕ ಜಾಲತಾಣಗಳು ಸಾಕ್ಷಿಯಾಗಿವೆ. ಅವುಗಳಲ್ಲೂ ಕಲಬುರ್ಗಿ, ಹುಬ್ಬಳ್ಳಿ, ಬೆಂಗಳೂರು, ಮಂಗಳೂರು ಮುಂತಾದ ಪ್ರಮುಖ ಪ್ರದೇಶಗಳಲ್ಲಿ ನಡೆಯುತ್ತಿರುವ ಧಾರ್ಮಿಕ ಸಂಘರ್ಷಗಳು ಹೆಚ್ಚು ಸದ್ದು ಮಾಡುತ್ತದೆ. ಬಾಲ್ಯದಿಂದಲೂ ಒಂದೇ ಪರಿಸರದಲ್ಲಿ ಕೂಡಿ ಆಡಿ ಬೆಳೆದ ಮಕ್ಕಳು ವಯಸ್ಸಿಗೆ ಬಂದಾಗ ಪರಸ್ಪರರು ಸಹಬಾಳ್ವೆಯ ಪ್ರಭುದ್ಧತೆಯನ್ನು ತೋರುವ ಬದಲಾಗಿ ಶತ್ರುಗಳಂತೆ ವರ್ತಿಸುತ್ತಿದ್ದಾರೆ. ವೇಷ ಭೂಷಣ, ಆಡುವ ಮಾತು, ನೋಡುವ ನೋಟ, ಅಂತರ್‌ಜಾಲಗಳಲ್ಲಿ ಹಾಕಿಕೊಳ್ಳುವ ಪೋಸ್ಟರಗಳು ಇವೆಲ್ಲವೂ ವೈರತ್ವದ ನೆಲೆಯಲ್ಲಿಯೇ ಕಂಡುಬರುತ್ತಿದೆ. ಇದಕ್ಕೆಲ್ಲಾ ಪೂರಕ ಎನ್ನುವಂತ ಜಾತಿಯ ಮುಖಂಡರು, ರಾಜಕೀಯ ಪುಡಾರಿಗಳು, ಧಾರ್ಮಿಕ ನಾಯಕರು ಅವರಿಗೆ ದಾರಿತಪ್ಪಿಸುತ್ತಿದ್ದಾರೆ. ಇವರಿಬ್ಬರ ಮಧ್ಯದಲ್ಲಿ ಸಾಮಾನ್ಯರು ಹಾಗೂ ಮುಗ್ಧ ಪ್ರಜೆಗಳು ಬಲಿಯಾಗುತ್ತಿರುವುದನ್ನು ಇಂದು ಎಲ್ಲೆಡೆ ಕಾಣಬಹುದಾದ ಸಾಮಾನ್ಯ ಸಂಗತಿಯಾಗಿದೆ.

ನಾನೊಬ್ಬ ಸಾಹಿತ್ಯದ ವಿದ್ಯಾರ್ಥಿಯಾಗಿ ಯಾರೊಬ್ಬರ ಪಕ್ಷಪಾತಿಯಾಗದೇ ವಿಮರ್ಶೆಯ ಮೂಲಕ ನವೀನ ಸೂರಿಂಜೆಯವರು ಅವರು ಬರೆದ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್‌ಅಲಿ ಮತ್ತು ಟಿಪ್ಪುಸುಲ್ತಾನ್ ಕೃತಿ’ಯನ್ನು ಓದಿದಾಗ ಚರಿತ್ರೆಯಲ್ಲಿ ಬರೆದ ಸಾಲುಗಳ ಮಧ್ಯ ದಾಖಲಾಗದೇ ಇರುವ ಬಹು ಮಹತ್ವದ ಸಂಗತಿಗಳನ್ನು ಓದಿದಂತಹ ಅನುಭವವಾಯಿತು. ಇದಕ್ಕೂ ಮುಂಚೆಯೇ ನಾನು ಕನ್ನಡದ ಜಾನಪದ ವಿದ್ವಾಂಸರಾದ ಪ್ರೊ. ಕೃಷ್ಣಮೂರ್ತಿ ಹನೂರು ‘ಟಿಪ್ಪು ಮತ್ತು ಹೈದರಾಲಿಯ’ ಕುರಿತು ಬರೆದ ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ ಕಾದಂಬರಿಯನ್ನು ಓದಿದ್ದೆ. ಆ ಕೃತಿಯು ಟಿಪ್ಪು ಮತ್ತು ಹೈದರಾಲಿಯ ಕಾಲದಲ್ಲಿ ಜನಸಾಮಾನ್ಯರು ಅನುಭವಿಸಿದ ಸಾಮಾಜಿಕ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ದಾಖಲಿದ್ದಾರೆ. ನವೀನ ಸೂರಿಂಜೆಯವರು ಈ ಕೃತಿಯನ್ನು ರಚಿಸುವ ಮೂಲಕ ಹೈದರ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರ ಸಾಮರಸ್ಯದ ಬದುಕಿನ ಕುರಿತು ಜನಸಾಮಾನ್ಯರಿಗೆ ತಿಳಿಯದಿರುವ ಅನೇಕ ಸತ್ಯ ಸಂಗತಿಗಳನ್ನು ದಾಖಲೆಗಳ ಮೂಲಕ ತುಂಬಾ ಆಪ್ತವಾದ ಶೈಲಿಯಲ್ಲಿ ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಟಿಪ್ಪು ಸುಲ್ತಾನ ಕೇವಲ ಬಾದಶಹ, ಬಹದ್ದೂರ, ನಾಗರಿಕ ಟಿಪ್ಪು, ನವಾಬ ಎಂಬ ನಾಮಾಂಕಿತಗಳಿಗೆ ಮಾತ್ರ ಸಿಮೀತವಾಗದೆ ಅವರ ಶಕ್ತಿ ಕನ್ನಡ ನೆಲದ ಸಾಮರ್ಥ್ಯವನ್ನು ಇಂಗ್ಲೇಡಿನ ಅರಮನೆಯ ಸಿಂಹಾಸನವೂ ನಡುಗುವಂತೆ ಮಾಡಿದ ಅಪ್ಪಟ ಸ್ವಾಭಿಮಾನಿಯಾಗಿದ್ದರು.
ನವೀನ ಸೂರಿಂಜೆಯವರು ಈ ನಾಡು ಕಂಡ ಪ್ರಗತಿಪರ ಪತ್ರಕರ್ತರು, ಕೋಮುವಾದ, ಜಾತಿವಾದ, ಅಸಮಾನತೆಯ ಶಕ್ತಿಗಳ ವಿರುದ್ಧ ಕರಾರುವಕ್ಕಾಗಿ ಮಾತನಾಡುವ ವಾಸ್ತವಿಕ ನೆಲೆಗಟ್ಟಿನ ವಿಚಾರವಾದಿಗಳು, ಲಿಂಗಾತೀತ ಹಾಗೂ ಜಾತ್ಯಾತೀತ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಸಹಹೃದಯಿಗಳು.ಅವರು ಮೂಲತಃ ಮಂಗಳೂರಿನವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕಳೆದ ಎರಡು ದಶಕಗಳಿಂದ ರೈತರ ಭೂಸ್ವಾಧೀನ, ಮಕ್ಕಳ ಕಳ್ಳಸಾಗಾಟ, ಮಹಿಳೆಯರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ ನಿವಾರಣೆ ಹಾಗೂ ದಮನಿತರ ನ್ಯಾಯಯುತ ಹಕ್ಕುಗಳ ಹೋರಾಟಕ್ಕೆ ಸಾಕ್ಷಿಪ್ರಜ್ಞೆಯಾಗಿ ನಿಂತವರು. ಬರವಣಿಗೆಯ ಮೂಲಕ ಇತಿಹಾಸದಲ್ಲಿ ಮರೆಯಾಗಿ ಹೋಗಿದ್ದ ಅನೇಕ ಧರ್ಮ ಸತ್ಯಗಳನ್ನು ನವಸಮಾಜಕ್ಕೆ ತಲುಪಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರು ಇದೇ ವರ್ಷ 2026 ರಲ್ಲಿ ರಚಿಸಿದ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನ್’ ಸಂಶೋಧನಾ ಕೃತಿಯು ನಾಡಿನ ಶ್ರೇಷ್ಠ ಸಂಸ್ಥೆಯಾದ ನವಕರ್ನಾಟಕ ಪ್ರಕಾಶನದಿಂದ ಪ್ರಕಟಗೊಂಡಿದೆ. ಜೊತೆಗೆ ಈ ಕೃತಿಯ ಜನಪ್ರಿಯತೆಯ ಕಾರಣವಾಗಿ ಕೆಲವೇ ತಿಂಗಳುಗಳಲ್ಲಿ ಮರು ಮುದ್ರಣಗಳನ್ನು ಕಂಡಿರುವುದು ಸ್ಮರಣೀಯವಾಗಿದೆ.

ಅನೇಕ ದಶಕಗಳಿಂದಲೂ ವಿದ್ವಾಂಸರ ವಲಯದಲ್ಲಿ ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನ್ ಕುರಿತು ಭಿನ್ನವಾದ ವಾದಗಳಿದ್ದರೂ, ಇಂದಿಗೂ ಜನಸಾಮಾನ್ಯರ ದೃಷ್ಟಿಯಲ್ಲಿ ಟಿಪ್ಪುಸುಲ್ತಾನ ‘ಮೈಸೂರಿನ ಹುಲಿ’ ಎಂದು ಕರೆಯುತ್ತಾರೆ. ಕೆಲವು ಧಾರ್ಮಿಕ ಮುಖಂಡರುತಮ್ಮ ಅಧಿಕಾರ ಹಾಗೂ ಪ್ರತಿಷ್ಠೆಯ ಬಲದಿಂದ ಒತ್ತಾಯ ಪೂರ್ವಕವಾಗಿ ಟಿಪ್ಪುಸುಲ್ತಾನ ಒಬ್ಬ ಹಿಂದೂ ವಿರೋಧಿ ಎಂದು ಬಿಂಬಿಸಿದ್ದಾರೆ. ಪುರೋಹಿತಶಾಹಿಯ ಇಂತಹ ಹುಸಿ ನಂಬಿಯನ್ನು ಒಡೆದು ಹಾಕಿ ಇತಿಹಾಸದಲ್ಲಿ ಮರೆಯಾದ ಅನೇಕ ಸತ್ಯವನ್ನು ಈ ಕೃತಿಯಲ್ಲಿ ದಾಖಲಿಸುವ ಮೂಲಕ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಯಾವುದೇ ಒಂದು ಕೃತಿಯನ್ನು ಅಥವಾ ವ್ಯಕ್ತಿಯನ್ನು ಒರೆಗೆ ಹಚ್ಚಿ ನೋಡಿದಾಗ ಮಾತ್ರ ಅದರ ನಿಜವಾದ ಶಕ್ತಿ ತಿಳಿಯುತ್ತದೆ ಎನ್ನುವಂತೆ ನವೀನ ಸೂರಿಂಜಿಯವರು ಈ ಕೃತಿಯನ್ನು ರಚಿಸುವ ಮೂಲಕ ಟಿಪ್ಪು ಸುಲ್ತಾನ ಕೇವಲ ಒಬ್ಬ ಅರಸ ಮಾತ್ರವಲ್ಲ ಆತ ಕನ್ನಡ ನೆಲದ ಸಾಂಸ್ಕೃತಿಕ ನಾಯಕ, ದೇಶಿಯ ಅರಸರಲ್ಲಿ ಸಮ ಸಮಾಜದ ಕಲ್ಪನೆಯನ್ನು ಹುಟ್ಟುಹಾಕಿದ ಯುಗಪುರುಷ, ಪ್ರಜಾಪ್ರಭುತ್ವವಾದಿ ಎನ್ನುವುದನ್ನು ಅನೇಕ ದಾಖಲೆಗಳ ಮೂಲಕ ತಿಳಿಸಿಕೊಟ್ಟಿದ್ದಾರೆ.

ಹೈದರ ಅಲಿಯ ಕಾಲದಲ್ಲಿ ಮಂಗಳೂರನ್ನು ‘ಕುಡ್ಲ’, ‘ಕೊಡಿಯಾಲ’ ಎಂದು ಕರೆಯುತ್ತಿದ್ದರು. ಮಂಗಳೂರಿಗೆ ಈ ಹೆಸರನ್ನು ಕೊಟ್ಟಿದ್ದೆ ಹೈದರ ಅಲಿ. ಸ್ಥಳಿಯರಾದ ತುಳು ಮತ್ತು ಕೊಂಕಣಿ ಜನರ ಮನಸ್ಥಿತಿಯನ್ನು ಅರಿತಿದ್ದ ಮತ್ತು ಉದಾರವಾದ ಮನಸ್ಸನ್ನು ಹೊಂದಿದ್ದ ಹೈದರ ಅಲಿಯು ಯಾವತ್ತೂ ತಮ್ಮ ಮೂಗಿನ ನೇರಕ್ಕೆ ಯೋಚಿಸುವ ಸ್ವಭಾವವನ್ನು ಹೊಂದಿರಲಿಲ್ಲ. ಜನರ ಕಲ್ಯಾಣದ ಮೂಲಕ ಕೀರ್ತಿಯನ್ನು ಸಂಪಾದಿಸಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. 1763 ರಲ್ಲಿ ದಕ್ಷಿಣಕನ್ನಡ ಪ್ರದೇಶವನ್ನು ಗೆಲ್ಲುವಲ್ಲಿ ಕ್ಷಿಶ್ಚಿಯನ್ ಸೈನಿಕರ ಪಾತ್ರವೇ ಪ್ರಮುಖವಾಗಿತ್ತು. ಆಡಳಿತದಲ್ಲಿ ಧರ್ಮವನ್ನು ಬೆರಸುತ್ತಿರಲಿಲ್ಲ. ಜೊತೆಗೆ 1766-69 ರ ಅವಧಿಯಲ್ಲಿ ನಡೆದ ಮೊದಲ ಮೈಸೂರು ಯುದ್ಧದಲ್ಲಿ ಹೈದರಾಲಿಯ ಸೈನ್ಯದಲ್ಲಿ ಅಧಿಕ ಸಂಖ್ಯೆಯ ಕ್ರಿಶ್ಚಿಯನ್ ಸೈನಿಕರಿದ್ದರು. ಎನ್ನುವ ಸಂಗತಿಗಳ ಮೂಲಕ ಹೈದರಲಿಯ ಉದಾರವಾದ ವ್ಯಕ್ತಿತ್ವವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಭಾರತದ ನೆಲದಲ್ಲಿ ಮಧ್ಯಕಾಲೀನ ಅವಧಿಯಲ್ಲಿ ಅಧಿಕಾರಕ್ಕಾಗಿ ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ನಡೆಸುತ್ತಿದ್ದ ಒಳಸಂಚು, ಮೋಸ, ಅಕ್ರಮಗಳ ಕಾರಣವಾಗಿಯೇ ಅನೇಕ ವಿದೇಶಿಯರು ನಮ್ಮ ಮೇಲೆ ದಾಳಿ ಮಾಡಿ ನಮ್ಮನ್ನು ಶೋಷಣೆ ಮಾಡಿದ ಅನೇಕ ಸತ್ಯ ಸಂಗತಿಗಳನ್ನು ಈ ಕೃತಿಯಲ್ಲಿ ದಾಖಲೆಗಳ ಸಮೇತ ವಿವರಿಸಿದ್ದಾರೆ. ಪೋರ್ಚುಗೀಸರಿಗೆ ವ್ಯಾಪಾರಕ್ಕಾಗಿ ಭೂಪ್ರದೇಶವನ್ನು ನೀಡಿ ಸಹಾಯ ಮಾಡಿದರು. ತುಂಬಾ ಸಂಪತ್ಭರಿತವಾದ ಚಿನ್ನದ ಮೊಟ್ಟೆಯನ್ನು ನೀಡುವ ಮಲಬಾರ ಪ್ರದೇಶವನ್ನು ಗೆದ್ದು ಅದನ್ನು ನೋಡಿಕೊಳ್ಳಲು ಮುಸ್ಲಿಂ ಬದಲಾಗಿ, ಹಿಂದೂ ಧರ್ಮಕ್ಕೆ ಸೇರಿದ ಮಾದಣ್ಣನನ್ನು ಗವರ್ನನ್ ಆಗಿ ನೇಮಿಸಿದ್ದು, ಶಿವ-ಪಾರ್ವತಿಯ ಚಿತ್ರವುಳ್ಳ ನಾಣ್ಯವನ್ನು ಚಲಾವಣೆಯ ತಂದಿದ್ದು ಮಾದರಿಯಾಗಿದೆ. ಉತ್ತಮವಾದ ಸೈನ್ಯವನ್ನು ಒಳಗೊಂಡಿದ್ದ ಹೈದರಲಿಯು ಯಾವತ್ತೂ ಮತಾಂಧನಾಗಿರಲಿಲ್ಲ. ಎಲ್ಲ ಸಂದರ್ಭಗಳಲ್ಲಿ ಸರ್ವಾಧಿಕಾರಿಯಾಗಿ ವರ್ತಿಸದೆ ಪ್ರಜಾಪ್ರಭುತ್ವದ ಅಂಶಗಳನ್ನು ಆಚರಣೆಗೆ ತಂದಿದ್ದ ಬಗೆಯನ್ನು ನವೀನ ಸೂರಿಂಜೆಯವರು ಈ ಕೃತಿಯಲ್ಲಿ ದಾಖಲಿದ್ದಾರೆ.

ಅನೇಕ ಬಿರುದುಗಳಿಂದ ಪ್ರಸಿದ್ಧಿಯನ್ನು ಹೊಂದಿದ ಟಿಪ್ಪು ಸುಲ್ತಾನ ನೇರವಾಗಿಯೇ ವಸಾಹತುಶಾಹಿಯನ್ನು ವಿರೋಧಿಸುವ ಮೂಲಕ ಬ್ರಿಟಿಷ್ ಸರಕಾರಕ್ಕೆ ನಡುಕವನ್ನುಂಟು ಮಾಡಿದ್ದನು. ಜೊತೆಗೆನಮ್ಮ ನೆಲದಲ್ಲಿ ಆಚರಣೆಯಲ್ಲಿದ್ದ ಬಹುಪತ್ನಿತ್ವ, ದೇವರ ಹೆಸರಿನಲ್ಲಿ ನಡೆಯುತ್ತಿದ್ದ ನಗ್ನಸೇವೆ ಮುಂತಾದ ಅನಿಷ್ಟ ಆಚರಣೆಗಳನ್ನು ಹೋಗಲಾಡಿಸುವಲ್ಲಿ ಕಠಿಣವಾದ ಕಾಯಿದೆಗಳನ್ನು ಜಾರಿಗೆ ತಂದನು. ದೇಶಿಯ ಅರಸರಲ್ಲಿ ಸೌಹಾರ್ಧತೆ ಮತ್ತು ಬ್ರಾತೃತ್ವ ಭಾವನೆಗಳನ್ನು ಬೆಳೆಸುವ ಮೂಲಕ ರಾಜಕೀಯ ಶಕ್ತಿಯಾಗಿ ಬೆಳೆದನು. ಸಮುದ್ರ ವ್ಯಾಪಾರಗಳ ಮೂಲಕ ಪ್ರಾನ್ಸ್, ಕೊಲ್ಲಿ ಹಾಗೂ ಫ್ರೇಂಚ್ ದೇಶದ ನಾಯಕರೊಂದಿಗೆ ಸ್ನೇಹವನ್ನು ಸಂಪಾದಿಸಿ ಬ್ರಿಟಿಷ ಸರಕಾರದ ವಿರುದ್ಧ ಹೋರಾಟಕ್ಕೆ ರೂಪುರೇಷಗಳನ್ನು ಸಿದ್ಧಪಡಿಸಿದನು. ಹಿಂದೂ, ಕೈಸ್ತ, ಜೈನ, ಬೌದ್ಧ ಮತ್ತು ಇಸ್ಲಾಂ ಧರ್ಮಗಳ ಜನರು ತಮ್ಮ ಸ್ವಾರ್ಥಕ್ಕಾಗಿ ದೇಶಿಯ ಅರಸರುಗಳಿಗೆ ಮಾಡುತ್ತಿದ್ದ ಅನ್ಯಾಯವನ್ನು ಸರಿಪಡಿಸುವುದಕ್ಕಾಗಿ ರಾಜಪ್ರಭುತ್ವದ ವಿರುದ್ದ ಸಂಚು ರೂಪಿಸುವ ಎಲ್ಲ ಧರ್ಮದ ಜನರಿಗೆ ಕಠಿಣವಾದ ಶಿಕ್ಷೆಯನ್ನು ಜಾರಿಗೆ ತಂದನು ಇಂತಹ ಅನೇಕ ಅಂಶಗಳನ್ನು ನವೀನ್ ಸೂರಿಂಜೆ ಅವರು ಈ ಕೃತಿಯ ಮೂಲಕ ಅನಾವರಣಗೊಳಿಸಿದ್ದಾರೆ.

ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನ್ ಅವರ ಸಾಧನೆಯ ಕುರಿತುಕನ್ನಡ ನಾಡಿನ ಪ್ರಸಿದ್ಧ ಮಠಗಳು ಪ್ರಕಟಿಸಿದ ದಾಖಲೆಗಳು ಮತ್ತು ಪುಸ್ತಕಗಳ ವಿವರಗಳನ್ನುತಿಳಿಸುತ್ತಾರೆ. ಇಂತಹ ಪರಿಪೂರ್ಣ ದೃಷ್ಟಿಕೋನದ ಆಧಾರಗಳ ಕಾರಣದಿಂದಾಗಿಯೇ ಕಾಂಗ್ರೇಸ್ ಸರಕಾರದ ಆಡಳಿತದ ಅವಧಿಯಲ್ಲಿ ‘ಟಿಪ್ಪುಸುಲ್ತಾನ’ ಜಯಂತಿಯನ್ನು ಆಚರಣೆಗೆ ತಂದಿತು.ಆದರೆ ನಂತರದ ಅವಧಿಯಲ್ಲಿ ಈ ಆಚರಣೆಯ ಕುರಿತು ತಾತ್ವಿಕವಾದ ವಿರೋಧಗಳು ಉಂಟಾಗಿ ಆಚರಣೆಯನ್ನು ಕೈಬಿಡಲಾಯಿತು ಎನ್ನುವುದನ್ನು ಇಲ್ಲಿ ನೆನೆಪಿಸಿಕೊಳ್ಳಬಹುದಾಗಿದೆ. ಅಂದು ಟಿಪ್ಪುಸುಲ್ತಾನ್ ಗುರುತಿಸಿದ ಭೂ ಭಾಗಗಳ ಆಧಾರದಲ್ಲೇ ‘ಕರ್ನಾಟಕ ರಾಜ್ಯ’ ಉದಯವಾಯಿತು. ಹಾಗಾಗಿ ಈಗಿನ ಭೂಪಟದ ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ಕರ್ನಾಟಕ ಏಕೀಕರಣದ ಮೂಲ ಪುರುಷ ಟಿಪ್ಪುಸುಲ್ತಾನ್ ಎಂದು ಮರು ಓದಿಕೊಳ್ಳಬೇಕಾದ ಸಂದರ್ಭ ಇಂದಿನ ಅಗತ್ಯ ಕಾರ್ಯಗಳಲ್ಲಿ ಒಂದಾಗಿದೆ ಎನ್ನುವ ಅನೇಕ ಒಳ ಸುಳಿಗಳಿಗಳ ಸತ್ಯವನ್ನು ಈ ಕೃತಿಯ ಮೂಲಕ ಲೇಖಕರು ಓದುಗರರಿಗೆ ತಿಳಿಸುತ್ತಾರೆ.ಇಂದು ಜಾತಿ, ಧರ್ಮಗಳೆಂಬ ಮಾಯಾ ಜಿಂಕೆಯನ್ನು ಜನಸಾಮಾನ್ಯರಿಗೆ ತೋರಿಸುವ ರಾಜಕೀಯ ನಾಯಕರುಗಳು ಆಡಳಿತ ಪಕ್ಷದವರ ‘ಅಭಿವೃದ್ಧಿಯನ್ನು’ ಹೈಜಾಕ್ ಮಾಡುವ ತಂತ್ರಗಾರಿಕೆಯು ನಡೆಯುತ್ತಿರುವುದರ ಕುರಿತು ವಿಷಾದ ವ್ಯಕ್ತಪಡಿಸುತ್ತಾರೆ.

ವೈದಿಕ ಮನೋಧೋರಣೆಯ ಕೆಲವು ಸಂಪ್ರದಾಯವಾದಿಗಳು ಇದನ್ನು ಒಂದು ಪ್ರತಿಷ್ಠೆಯನ್ನಾಗಿ ಮಾಡಿಕೊಂಡರೆ ಅವರನ್ನು ಓಲೈಸುವವರು ಟಿಪ್ಪುಸುಲ್ತಾನ್ ಹಿಂದೂ ವಿರೋಧಿಯಾಗಿದ್ದನೆಂದು ಎಲ್ಲೆಡೆ ಸಾರಿಹೇಳುತ್ತಾರೆ ಹೀಗೆ ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ಇತಿಹಾಸವನ್ನು ದಾಖಲಿಸಲು ಹೋದರೆ ಮುಂದಿನ ತಲೆಮಾರುಗಳ ಪರಸ್ಥಿತಿಯನ್ನು ನೆನಸಿಕೊಂಡರೆ ಕನ್ನಡ ನೆಲದಲ್ಲಿ ಅಂತರಗoಗೆಯoತೆ ಇರುವ ಸಾಮರಸ್ಯದ ಸಂಸ್ಕೃತಿಯೇ ಕಣ್ಮರೆಯಾಗುವ ಸಂದರ್ಭಗಳು ಎದುರಾಗಬಹುದು. ಇಂತಹ ಅನೇಕ ತಪ್ಪು ಸಂಗತಿಗಳನ್ನು ಸೂಕ್ತ ದಾಖಲೆಗಳ ಮೂಲಕ ನವೀನ್ ಸೂರಿಂಜೆಯವರು ತಿಳಿಯಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತದೇಶವು ಇಂದು ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರೀಯವಾಗಿದೆ. ಸ್ವಾತಂತ್ರ್ಯ ಜೀವನ ಮತ್ತು ಸ್ವಾಭಿಮಾನದ ಬದುಕು ಪ್ರಜಾಪ್ರಭುತ್ವದ ಜೀವಾಳವಾಗಿವೆ. ಜನ್ಮತಃ ಪ್ರಜಾಪ್ರಭುತ್ವವಾದಿಯಾಗಿದ್ದ ಟಿಪ್ಪುಸುಲ್ತಾನ್ ತನ್ನ ನೇರ ಮತ್ತು ದಿಟ್ಟ ಸ್ವಭಾವದ ಮೂಲಕವೇ ಇಂಗ್ಗೇಡ್ ಸರಕಾರಕ್ಕೆ ಕನ್ನಡ ನೆಲದ ಸ್ವಾಭಿಮಾನದ ಪಾಠವನ್ನು ರುಜುವಾತುಮಾಡಿದ ಕಲಿಯಾಗಿದ್ದಾನೆ. 1748 ರಲ್ಲಿ ನಡೆದ ಮಂಗಳೂರು ಒಪ್ಪಂದದ ಅಂಶಗಳು ಈ ಸಂಗತಿಯನ್ನು ತಿಳಿಸುತ್ತವೆ. ಟಿಪ್ಪುಸುಲ್ತಾನ್ ಆಡಳಿತಾವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಸಾಮಂತ ಅರಸರು ತಮ್ಮಪ್ರದೇಶಗಳ ಅಧಿಕಾರವನ್ನು ತಾವೇ ನಡೆಸಿಕೊಂಡು ಹೋಗುತ್ತಿದ್ದರು. ಕಂದಾಯ ವಸೂಲಿ, ನ್ಯಾಯ ವ್ಯವಸ್ಥೆ ಸೇರಿದಂತೆ ಎಲ್ಲ ವಿಷಯಗಳಲ್ಲಿ ಸ್ವತಂತ್ರರಾಗಿದ್ದರು. ಚೌಟರು, ಬಂಗರಸರು, ಹೆಗ್ಗಡೆಯವರು, ಕುಂಬಳೆ, ನೀಲೇಶ್ವರರು ಮತ್ತು ಅಜಿಲರು ತಮ್ಮ ಅರಮನೆಗಳನ್ನು ಕಟ್ಟಿಕೊಂಡು ಸಂತೋಷದಿoದ ರಾಜ್ಯಬಾರ ಮಾಡುತ್ತಿದ್ದರು. ತುಂಡರಸರನ್ನು ಸ್ವತಂತ್ರವಾಗಿ ಬಿಟ್ಟಿದ್ದನು ಆದರೆ ಅವರು ತಮಗೆ ತೋಚಿದಂತೆ ಹೆಚ್ಚಿನ ಪ್ರಮಾಣದ ತೆರಿಗೆಯನ್ನು ಹಾಕಿ ಪ್ರಜೆಗಳಿಗೆಗೆ ತೊಂದರೆ ಕೊಡುವಂತಿರಲಿಲ್ಲ. ದುಡಿಯುವ ವರ್ಗದವರ ಮೇಲೆ ಅಪಾರವಾದ ನಂಬಿಕೆಯನ್ನು ಹೊಂದಿದ್ದ ಟಿಪ್ಪುಸುಲ್ತಾನ್ ಸಾಮಾನ್ಯ ಜನರ ಪ್ರೀತಿಗೆ ಪಾತ್ರವಾದನು.ಎಲ್ಲ ಕಾರ್ಮಿಕರಿಗೂ ಸಂಬಳದ ವ್ಯವಸ್ಥೆಯನ್ನು ಮಾಡಿದ್ದನು. ಮಂಗಳೂರು, ಉತ್ತರ ಕನ್ನಡ ಮತ್ತು ಕಾಸರಗೋಡು ಒಳಗೊಂಡಿರುವoತೆ, 20 ಸಾವಿರ ಚದರ ಮೈಲು ವ್ಯಾಪ್ತಿಯ ಭೂಪ್ರದೇಶವನ್ನು ಒಳಗೊಂಡಿತ್ತು ಎನ್ನುವುದನ್ನು ತಿಳಿಸುತ್ತಾ, ಟಿಪ್ಪು ಸುಲ್ತಾನ ಆಡಳಿತದ ದಕ್ಷತೆಯನ್ನುಮರೆತು ಹೋಗಬಹುದಾದ ಇತಿಹಾಸದ ದಾಖಲೆಗಳನ್ನು ಪುನಃ ಕಟ್ಟಿಕೊಟ್ಟಿದ್ದಾರೆ.

ಟಿಪ್ಪುಸುಲ್ತಾನ್ ಒಬ್ಬ ಮೇಧಾವಿ ಅರಸನಾಗಿದ್ದನು. ಕನ್ನಡ, ಹಿಂದಿ, ಉರ್ದು, ಪರ್ಶಿಯನ್, ಅರೇಬಿಕ್ ಮತ್ತು ಫ್ರೆಂಚ್ ಮುಂತಾದ ಭಾಷೆಗಳನ್ನು ಓದಲು ಮತ್ತು ಬರೆಯಲು ಬಲ್ಲವರಾಗಿದ್ದನು. ಆತನ ಶಕ್ತಿ ಸಾಮರ್ಥ್ಯವನ್ನು ಅರಿತಿದ್ದ ಅಂದಿನ ಹಿಂದೂ ಮತ್ತು ಮುಸ್ಲಿಂ ಧರ್ಮಾಧಿಕಾರಿಗಳೆಲ್ಲರೂ ಸೇರಿ ಆತನಿಗೆ ಪಟ್ಟಾಧಿಕಾರ ಮಾಡಿದ್ದರು. ಬಹುಸಂಖ್ಯಾತರಾಗಿದ್ದ ಹಿಂದುಗಳ ಮನಸ್ಥಿತಿಯನ್ನು ಅರಿತ ಟಿಪ್ಪು ಅನೇಕ ಹಿಂದೂ ದೇವಾಲಯಗಳನ್ನು ಜೀರ್ಣೋದ್ದಾರ ಮಾಡಿರುವ ಕುರಿತು ದಾಖಲೆಗಳಿವೆ. ಇಂದು ಶೃಂಗೇರಿಯಲ್ಲಿರುವ ಶಾರದಾ ಅಮ್ಮನವರ ಮೂರ್ತಿಯನ್ನು ಮರಾಠಿ ಬ್ರಾಹ್ಮಣರು ಬದಲಾಯಿಸಿದ್ದರು.ಅದನ್ನು ಅರಿತುಕೊಂಡ ಟಿಪ್ಪು ಸುಲ್ತಾನನು ಶಾರದಾ ಅಮ್ಮನವರ ಮೂರ್ತಿಯನ್ನು ಮರು ಸ್ಥಾಪಿಸಲು ನೆರವಾಗುವ ಮೂಲಕ ಎಲ್ಲ ವರ್ಗದ ಜನರ ಪ್ರೀತಿಯನ್ನು ಗಳಿಸಿದನು. ಅದೇ ರೀತಿಯಲ್ಲಿ ಸೊಂದಾ ಮಠ, ಪೊನ್ನಚಾರು ಮಠ, ಹವ್ಯಕ ಸಮಾಜ, ಹೊಸ ನಗರ ಮಠ, ಮಂಗಳೂರು, ಉಡುಪಿ, ಮೂಡಬಿದರಿ ಮುಂತಾದ ಸ್ಥಳಗಳಲ್ಲಿ ಟಿಪ್ಪು ಸುಲ್ತಾನ ಮಾಡಿದ ಸೇವಾ ಕಾರ್ಯಗಳು ಶ್ರೀ ಮಠಗಳು ಪ್ರಕಟಿಸಿದ ಪುಸ್ತಕಗಳಲ್ಲಿಯೇ ದಾಖಲಾಗಿವೆ ಎನ್ನುವ ಅಂಶವನ್ನು ಸೂರಿಂಜೆಯವರು ದಾಖಲಿಸಿದ್ದಾರೆ. ಜೊತೆಗೆ 1779 ರಲ್ಲಿ ತಿರುಪತಿ ದೇವಾಲಯಕ್ಕೆ ಆನೆ, ಪಲ್ಲಕ್ಕಿ ಸಹಿತ ಅಪಾರ ಸಂಪತ್ತನ್ನು ದಾನª ಮಾಡಿದ ಕುರಿತ ಅಂಶಗಳು ದಾಖಲಾಗಿವೆ ಎನ್ನುವ ಸತ್ಯವನ್ನು ಲೇಖಕರು ಈ ಕೃತಿಯಲ್ಲಿ ತಿಳಿಸಿಕೊಟ್ಟಿದ್ದಾರೆ.

1783 ರಲ್ಲಿ ಜನರಲ್ ಮ್ಯಾಥ್ಯೂಸ್‌ನ ನೇತ್ವತ್ವದಲ್ಲಿ ನಡೆದ ದಾಳಿಯಲ್ಲಿ ಟಿಪ್ಪುವಿಗೆ ಆರಂಭಿಕ ಹಿನ್ನಡೆಯಾಯಿತು. ನಂತರದಲ್ಲಿ ಪರಾಕ್ರಮದಿಂದ ಹೋರಾಡಿ ಮಂಗಳೂರ ಒಪ್ಪಂದ ಮೂಲಕ ಯುದ್ಧವು ಸಮಾಪ್ತಿಯಾಗುತ್ತದೆ. ಈ ಸಂದರ್ಭದಲ್ಲಿ ರಾಜದ್ರೋಹ ಮಾಡಿದ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ರಾಜದ್ರೋಹಿಗಳನ್ನು ಕೊಲ್ಲಿಸಲು ಆಜ್ಞಾಪಿಸುತ್ತಾನೆ. ಈ ಸಂದರ್ಭದಲ್ಲಿ ಅವರ ಕೆಳಹಂತದ ಅಧಿಕಾರಿಗಳು ಸಾಮಾನ್ಯ ಜನರಿಗೆ ತೊಂದರೆಯನ್ನು ನೀಡುತ್ತಾರೆ. ಅನೇಕ ಕಡೆ ಆಕ್ರಮಣಗಳು ನಡೆಯುತ್ತವೆ. ಈ ಸುದ್ದಿಯನ್ನು ತಿಳಿದ ಟಿಪ್ಪು ಸುಲ್ತಾನನು ತಾನೇ ನೇರವಾಗಿ ಜನರಲ್ಲಿಗೆ ಹೋಗಿ ಪರಸ್ಥಿತಿಯನ್ನು ತಿಳಿಗೊಳಿಸುತ್ತಾನೆ. ಟಿಪ್ಪು ಸುಲ್ತಾನನ ಶಕ್ತಿ ಸಾಮರ್ಥ್ಯವನ್ನು ಅರಿತಿದ್ದ ಹೈದರಾಬಾದ ನಿಜಾಮ ಆದಿಯಾಗಿ ಅನೇಕ ದೇಶಿಯ ಅರಸರುಗಳು ಬ್ರಿಟಿಷರಿಗೆ ಬೆಂಬಲವಾಗಿ ನಿಲ್ಲುತ್ತಾರೆ.ನಮ್ಮ ನೆಲದ ಅರಸರುಗಳ ಕಚ್ಚಾಟದ ಕಾರಣವಾಗಿಯೇ ವಿದೇಶಿಯರು ನಮ್ಮನ್ನು ಆಳಿದ್ದಾರೆ. ಈ ಸತ್ಯವನ್ನು ಅರಿತ ಟಿಪ್ಪು ಸುಲ್ತಾನನು ಅನೇಕ ಸಂದರ್ಭಗಳಲ್ಲಿ ದೇಶಿ ಅರಸರನ್ನು ವಿರೋಧಿಸಲಿಲ್ಲ.

ಬರಗಾಲ, ಪ್ರಕೃತಿ ವಿಕೋಪಗಳಿಂದಾಗಿ ಅನೇಕ ತುಂಡರಸರು ಸರಿಯಾಗಿ ಕಪ್ಪು ಕಾಣಿಕೆಯನ್ನು ನೀಡದಿದ್ದರೂ, ಟಿಪ್ಪು ಸುಲ್ತಾನನು ಅವರಿಗೆ ಹೆಚ್ಚು ಒತ್ತಾಯ ಮಾಡುತ್ತಿರಲಿಲ್ಲ. ಪ್ರತಿಯಾಗಿ ಸಹಾಯ ಮಾಡಿದ ಅನೇಕ ಉದಾಹಣೆಗಳು ಇತಿಹಾಸದಲ್ಲಿ ದಾಖಲಾಗಿವೆ. ಆದರೆ ಆ ಅವಧಿಯಲ್ಲಿ ಸ್ಥಳಿಯ ಮಟ್ಟದಲ್ಲಿ ಜಾತಿ ಮತ್ತು ಧರ್ಮಗಳಿಂದ ತುಂಬಾ ಪ್ರಭಾವಶಾಲಿಗಳಾದ ಮಾಧ್ವರು ಮತ್ತು ವೈಷ್ಣವರು ಪರಸ್ಪರ ತಮ್ಮ ಅಧಿಕಾರ ಮತ್ತು ಹಕ್ಕುಗಳಿಗಾಗಿ ಹೋರಾಡುತ್ತಿದ್ದರು. ಇವರ ಮಧ್ಯದಲ್ಲಿ ನಡೆದ ಸಂಘರ್ಷಗಳಿoದ ಉಂಟಾದ ಧಾರ್ಮಿಕ ಹಾನಿಯನ್ನು ಅಂದಿನ ಮುಸ್ಲಿಂ ಅರಸರು ಮಾಡಿದ್ದಾರೆಂದು ಸುಳ್ಳುಆರೋಪವನ್ನು ಟಿಪ್ಪು ಸುಲ್ತಾನನ ಮೇಲೆ ಹಾಕಿ ಸಾಮಾನ್ಯ ಜನರನ್ನು ನಂಬಿಸಿ ಇತಿಹಾಸದಲ್ಲಿ ಟಿಪ್ಪುನನ್ನು ಹಿಂದೂ ವಿರೋಧಿ ಎಂದು ಬಿಂಬಿಸಿದ್ದಾರೆ. ಇಂತಹ ಅನೇಕ ಸತ್ಯಗಳನ್ನು ಸೂಕ್ತ ದಾಖಲೆಗಳ ಮೂಲಕ ತಿಳಿಸಿಕೊಡುವಲ್ಲಿ ನವೀನ್ ಸೂರಿಂಜೆ ಅವರು ಯಶಸ್ವಿಯಾಗಿದ್ದಾರೆ.

ಭಾರತದಲ್ಲಿ ಪ್ರಜಾಪ್ರಭುತ್ವದ ತಿಳುವಳಿಕೆಯನ್ನು ಮೂಡಿಸಿದ ಮೊದಲ ಅರಸ ಎಂಬ ಹೊಗಳಿಕೆಗೆ ಪಾತ್ರನಾದ ಟಿಪ್ಪು ಸುಲ್ತಾನನ ಹೃದಯ ವೈಶಾಲತೆ ಹಾಗೂ ಅವರ ಸಾಧನೆಯ ಹೆಜ್ಜೆಗುರುತುಗಳನ್ನು ತಿಳಿಸಿಕೊಡುವಲ್ಲಿ ಈ ಕೃತಿಯು ಹೊಸ ದಾಖಲೆಯಾಗಿದೆ. ಕನ್ನಡ ನೆಲದಲ್ಲಿ ಜನಿಸಿದ ಟಿಪ್ಪು ಸುಲ್ತಾನ ತನ್ನ ಸ್ವಯಂ ಪ್ರಭೆಯ ಮೂಲಕವೇ ಬೆಳೆದು ಸರ್ವಾಧಿಕಾರಿಯಾಗಿ ಆಳ್ವಿಕೆ ಮಾಡುವ ಸಾಕಷ್ಟು ಅವಕಾಶಗಳಿದ್ದಾಗಲೂ, ಆ ರೀತಿ ವರ್ತಿಸದೆ ಈ ನೆಲದ ಎಲ್ಲ ಸಮುದಾಯಗಳ ಜನರ ಮನಸ್ಸನ್ನು ಅರಿತು ಜನಪರವಾಗಿ ಆಳ್ವಿಕೆ ನಡೆಸಿದ ಟಿಪ್ಪು ಸುಲ್ತಾನ ಮರೆಯಾಗಿದ್ದ ಇತಿಹಾಸವನ್ನು ‘ಕರಾವಳಿಯ ಚರಿತ್ರೆಯಲ್ಲಿ ಹೈದರ್‌ ಅಲಿ ಮತ್ತು ಟಿಪ್ಪು ಸುಲ್ತಾನ್’ ಕೃತಿಯು ಕಟ್ಟಿಕಟ್ಟಿಕೊಡಲು ಯಶಸ್ವಿಯಾಗಿದೆ. ಆ ಮೂಲಕ ಮುಂದಿನ ತಲೆಮಾರಿಗೆ ಕಳೆದು ಹೋಗಬಹುದಾಗಿದ್ದ ಅನೇಕ ಸತ್ಯಸಂಗತಿಗಳನ್ನು ಈ ಕೃತಿಯಲ್ಲಿ ದಾಖಲಿಸುವ ಮೂಲಕ ಲೇಖಕರು ಮಾಡಿದ ಸಾಹಿತ್ಯ ಕಾರ್ಯ ನಮ್ಮ ಯುವ ತಲೆಮಾರಿಗೆ ಮಾದರಿಯಾಗಿದೆ.

ಬರೆಹ: ಡಾ. ಈರಣ್ಣ ಇಂಜಗನೇರಿ
ಅಧ್ಯಾಪಕರು, ಧಾರವಾಡ
9901669309
irannainjaganeri@gmail.com

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments