Homeಕರ್ನಾಟಕಕಾವೇರಿ ನೀರಿನ ವಿಚಾರ | ಕಾನೂನು ತಜ್ಞರು, ವಿರೋಧ ಪಕ್ಷಗಳ ಸಲಹೆ ಬಳಿಕ ಮುಂದಿನ ತೀರ್ಮಾನ:...

ಕಾವೇರಿ ನೀರಿನ ವಿಚಾರ | ಕಾನೂನು ತಜ್ಞರು, ವಿರೋಧ ಪಕ್ಷಗಳ ಸಲಹೆ ಬಳಿಕ ಮುಂದಿನ ತೀರ್ಮಾನ: ಸಿಎಂ ಡಿ ಕೆ ಶಿವಕುಮಾರ್

ಕಾವೇರಿ ನೀರಿನ ವಿಚಾರವಾಗಿ ಕಾನೂನು ತಜ್ಞರ ಸಲಹೆ ಹಾಗೂ ವಿರೋಧ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ಪಡೆದ ಬಳಿಕ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಮಾತನಾಡಿ, “ಕಾವೇರಿ ನೀರಿನ ವಿಚಾರದಲ್ಲಿ ನಿತ್ಯ 3500 ಕ್ಯೂಸೆಕ್ ನೀರುನ್ನು ತಮಿಳುನಾಡಿಗೆ ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿದೆ. ಈ ಹಿಂದೆ ಇಂತಹ ಸಂಕಷ್ಟ ಕಾಲದಲ್ಲಿ ಅನೇಕ ತೀರ್ಮಾನ ಬಂದಿವೆ. 2016, 2017, 2018, 2023ರಲ್ಲಿ ಇಂತಹ ಆದೇಶ ಬಂದಿವೆ. ಕಳೆದ 3 ವರ್ಷಗಳಲ್ಲಿ ಮಳೆ ಬಹಳ ಸಂತುಷ್ಟಿಯಾಗಿ ಬಂದಿದೆ. ಕಳೆದ ವರ್ಷ ಜೂನ್ ತಿಂಗಳಲ್ಲೇ ಕೆಆರ್ ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದೆವು. ಕಳೆದ ವರ್ಷ ಉತ್ತಮ ಮಳೆ ಬೆಳೆ ಆಗಿತ್ತು. ಕಳೆದ ವರ್ಷ 177 ಟಿಎಂಸಿ ಬದಲಾಗಿ 400ಕ್ಕೂ ಹೆಚ್ಚು ಟಿಎಂಸಿ ನೀರು ಹರಿಸಲಾಗಿತ್ತು. ಅನೇಕ ಪ್ರಮಾಣದ ನೀರು ಸಮುದ್ರವನ್ನು ಸೇರಿದೆ” ಎಂದು ತಿಳಿಸಿದರು.

“ಬಿಳಿಗುಂಡ್ಲುವಿಗೆ 3,500 ಕ್ಯೂಸೆಕ್ ನೀರನ್ನು ಹರಿಸಲು ನೀಡಿರುವ ಆದೇಶದ ವಿರುದ್ಧ ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮುಂದೆ ಮೇಲ್ಮನವಿ ಸಲ್ಲಿಸಿದ್ದೆವು. ನಮ್ಮ ವಿರೋಧ ಪಕ್ಷಗಳ ಸ್ನೇಹಿತರು, ಅಧಿಕಾರಿಗಳು ಹೋಗಿಲ್ಲ ಎಂದು ಆರೋಪ ಮಾಡಿದರು. ನಾನು ಅವರಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಆದರೆ ರಾಜ್ಯದ ಜನರಿಗೆ ಮಾಹಿತಿ ನೀಡುವುದು ನನ್ನ ಜವಾಬ್ದಾರಿಯಾಗಿದೆ. ನಿನ್ನೆ ಸಿಡಬ್ಲ್ಯೂಎಂಎ ಮುಂದೆ ಮೇಲ್ಮನವಿ ಸಲ್ಲಿಸಿದ್ದೆವು. ಬಸವರಾಜ ಬೊಮ್ಮಾಯಿ ಅವರ ಬಳಿ ಇದ್ದ ಸಲಹೆಗಾರರನ್ನೇ ನಾವು ಮುಂದುವರಿಸಿದ್ದೇವೆ. ಅವರು ಸಭೆಯಲ್ಲಿ ಭಾಗವಹಿಸಿದ್ದರು” ಎಂದರು.

“ನೀರು ಹರಿಸುವ ನೀರಿನ ಪ್ರಮಾಣ ಕಡಿಮೆ ಮಾಡಿ, ನೀರು ಬಿಡುವ ತೀರ್ಮಾನವನ್ನು ಮುಂದಕ್ಕೆ ಹಾಕಿ, ನಮಗೆ ಕಾಲಾವಕಾಶ ನೀಡಿ ಎಂದು ನಾವು ಮನವಿ ಮಾಡಿದ್ದೆವು. ಆದರೆ ತಮಿಳುನಾಡಿನವರು ನಿಮಗೆ ಹೆಚ್ಚಿನ ನೀರು ಬರುತ್ತಿದೆ. ನೀವು ಹೆಚ್ಚಿನ ನೀರು ಬಿಡಬೇಕು ಎಂದು ವಾದ ಮಂಡಿಸಿದರು. ನಮ್ಮ ಅಧಿಕಾರಿಗಳು ನಮಗೆ ಸಮಾಧಾನ ತರುವಂತೆ ಸಿಡಬ್ಲ್ಯೂಎಂಎ ಮುಂದೆ ವಾದ ಮಂಡಿಸಿದರು. ನಮ್ಮ ಅಡ್ವೋಕೇಟ್ ಜನರಲ್, ಎಸಿಎಸ್ ಅವರು ವಾದ ಮಂಡಿಸಿದ್ದಾರೆ. ಆದರೆ ಪ್ರಾಧಿಕಾರ, ನಿಮಗೆ ಒಳಹರಿವು ಇದ್ದು, ನಿಮಗೆ ಬಿಡಲು ಹೇಳಿರುವ ನೀರು ಕಡಿಮೆ ಪ್ರಮಾಣದ್ದಾಗಿದೆ ಎಂದು ಹೇಳಿದ್ದಾರೆ” ಎಂದರು.

ರಾಜ್ಯದಲ್ಲಿ ಒಳಹರಿವು ಚೇತರಿಕೆ, ಸಮಾಧಾನಕರ ವಿಚಾರ

“ಕಾವೇರಿ ಪ್ರಾಧಿಕಾರದವರಿಗೆ, ತಮಿಳುನಾಡಿನವರಿಗೆ, ಮಾಧ್ಯಮವರರು ಸೇರಿದಂತೆ ಎಲ್ಲರಿಗೂ ಪ್ರತಿ ಅಣೆಕಟ್ಟಿನ ಒಳಹರಿವಿನ ಮಾಹಿತಿ ಇದ್ದು, ಹಾರಂಗಿ ಜಲಾಶಯ 95%, ಕಬಿನಿ 83%, ಕೆಆರ್ಎಸ್ 36%, ಹೇಮಾವತಿಯಲ್ಲಿ 67% ನೀರು ಶೇಖರಣೆಯಾಗಿದೆ. ಈ ಮಾಹಿತಿಯನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಪ್ರತಿನಿತ್ಯ 3,500 ಕ್ಯೂಸೆಕ್ ನಂತೆ 15 ದಿನಕ್ಕೆ 4.5 ಟಿಎಂಸಿ ನೀರು ಹರಿಸಲು ಆದೇಶ ನೀಡಲಾಗಿದೆ. ರಾಜ್ಯದಲ್ಲಿ ಒಳಹರಿವು ಚೇತರಿಕೆ ಕಂಡಿರುವುದು ಸಮಾಧಾನಕರ ವಿಚಾರ. ನಮ್ಮ ಅಣೆಕಟ್ಟುಗಳ ಒಳಹರಿವು 25 ಸಾವಿರ ಕ್ಯೂಸೆಕ್ ನಷ್ಟಿದ್ದು, ಅದರಲ್ಲಿ 3,500 ಕ್ಯೂಸೆಕ್ ನೀರು ಬಿಡಲು ಸೂಚಿಸಿದ್ದಾರೆ. ಈ ಮಾಹಿತಿಗಳನ್ನು ಸಮಿತಿ ಹಾಗೂ ಪ್ರಾಧಿಕಾರ ಎರಡೂ ತನ್ನ ಆದೇಶದಲ್ಲಿ ಸೂಚಿಸಿವೆ. ಆದರೂ ನಮ್ಮ ರಾಜ್ಯದ ರೈತರ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯ. ನಾವು ನಮ್ಮ ರಾಜ್ಯದ ರೈತರ ರಕ್ಷಣೆ ಮಾಡುತ್ತೇವೆ. ನಾವು ಶಾಸಕರನ್ನು ಕರೆದು ಕುಡಿಯುವ ನೀರು ಹಾಗೂ ಕೆರೆಗಳನ್ನು ತುಂಬಿಸುವ ರಕ್ಷಣೆ ನೀಡಿದ್ದೇವೆ. ಬಂಗಾರಪ್ಪನವರ ಕಾಲದಿಂದ ಇಲ್ಲಿಯವರೆಗೂ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗೆಲ್ಲ ನಾವು ರಾಜ್ಯದ ಹಿತಕ್ಕೆ ಅಗತ್ಯ ರಕ್ಷಣೆ ನೀಡಲು ಬದ್ಧತೆ ತೋರಿದ್ದೇವೆ. ಈಗಲೂ ನಾವು ನಮ್ಮ ಕರ್ತವ್ಯಕ್ಕೆ ಬದ್ಧರಾಗಿದ್ದೇವೆ” ಎಂದು ಹೇಳಿದರು.

ಕೇಂದ್ರ ಸಚಿವರು ಹಾಗೂ ಸಂಸದರಿಂದ ಉತ್ತಮ ಸಹಕಾರ

“ವಿರೋಧ ಪಕ್ಷದ ನಾಯಕರು ಮಾಧ್ಯಮಗಳ ಮೂಲಕ ಅನೇಕ ಮಾರ್ಗದರ್ಶನ ನೀಡಿದ್ದಾರೆ. ನಾವು ಮೇಲ್ಮನವಿ ಸಲ್ಲಿಸುವ ಮುನ್ನ ಕೇಂದ್ರ ಸಂಸದರು ಹಾಗೂ ಕೇಂದ್ರ ಸಚಿವರ ಸರ್ವಪಕ್ಷ ಸಭೆ ಮಾಡಿದ್ದೆ. ಎಲ್ಲಾ ಪಕ್ಷದ ಸಂಸದರು ಬಹಳ ಗೌರವದಿಂದ ರಾಜ್ಯದ ನೆಲ, ಜಲ ವಿಚಾರದಲ್ಲಿ ಸಭೆಯಲ್ಲಿ ಭಾಗವಹಿಸಿ ಚರ್ಚೆ ಮಾಡಿದ್ದಾರೆ. 3 ಕೇಂದ್ರ ಸಚಿವರು ಸೇರಿದಂತೆ 36 ಸಂಸದರು ಭಾಗವಹಿಸಿದ್ದರು. ನಾನು ಪ್ರಹ್ಲಾದ್ ಜೋಷಿ ಹಾಗೂ ಸಂಸದರ ಜತೆ ಚರ್ಚೆ ಮಾಡಿದ್ದೆ. ನಮ್ಮ ಮೇಲ್ಮನವಿ ಅರ್ಜಿಯನ್ನು ನಾವು ಜೋಷಿ ಅವರು, ಸೋಮಣ್ಣ ಹಾಗೂ ಶೋಭ ಕರಂದ್ಲಾಜೆ ಅವರಿಗೆ ಕಳುಹಿಸಿಕೊಟ್ಟಿದ್ದೆ. ಅವರು ಕೂಡ ತಮ್ಮ ಪ್ರಯತ್ನ ಮಾಡಿದ್ದಾರೆ. ಅವರು ಕೇಂದ್ರ ಸಚಿವರ ಮೇಲೆ ಒತ್ತಡ ಹಾಕಿದ್ದಾರೆ” ಎಂದರು.

“ತಮಿಳುನಾಡಿನವರು 9.94 ಟಿಎಂಸಿ ನೀರನ್ನು ಹರಿಸಬೇಕು ಎಂದು ವಾದ ಮಂಡಿಸಿದ್ದರು. ಆದರೆ ಸಮಿತಿಯು ಅದರಲ್ಲಿ ಅರ್ಧದಷ್ಟು ಪ್ರಮಾಣದ ನೀರು ಹರಿವಿಗೆ ಸೂಚಿಸಿದ್ದಾರೆ. ಕಳೆದ 2-3 ದಿನಗಳಿಂದ ನಮ್ಮಲ್ಲಿ ಒಳಹರಿವು ಹೆಚ್ಚಾಗಿದೆ. ಈ ವಿಚಾರವಾಗಿ ಚರ್ಚೆ ಮಾಡಲು ಎಲ್ಲಾ ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾವೇರಿ ಭಾಗದ ಎಲ್ಲಾ ಪಕ್ಷಗಳ ಶಾಸಕರು, ಸಂಸತ್ ಸದಸ್ಯರಿಗೆ ಭಾನುವಾರ ಸರ್ವಪಕ್ಷ ಸಭೆ ಕರೆಯಲಾಗಿದೆ. ಕಾನೂನು ತಂಡದ ಜೊತೆಗೆ ನಾನು, ಪರಮೇಶ್ವರ್, ರಾಮಲಿಂಗಾ ರೆಡ್ಡಿ ಅವರು ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಸರ್ವಪಕ್ಷ ಸಭೆಯಲ್ಲಿ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಅಭಿಪ್ರಾಯ ಮಂಡಿಸಿ, ನಂತರ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಬಿಜೆಪಿಯ ಸಂಸದರು, ಕೇಂದ್ರ ಸಚಿವರು ನಮಗೆ ಸಹಕಾರ ನೀಡಿದ್ದಾರೆ. ಇಲ್ಲಿ ಕೆಲವರು ವಿರೋಧ ಮಾಡಿರಬಹುದು, ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ರಾಜ್ಯದ ಹಿತವನ್ನು ಅವರು ಕಾಪಾಡುತ್ತಾರೆ ಎಂದು ಭಾವಿಸಿದ್ದೇನೆ” ಎಂದು ಹೇಳಿದರು.

ಪರಿಸ್ಥಿತಿ ತಿಳಿಯಾದ ಬಳಿಕ ತಮಿಳುನಾಡು ಸಿಎಂ ವಿಜಯ್ ಅವರ ಜೊತೆ ಸಭೆ

“ಆಗಸ್ಟ್ 3ರಂದು ತಮಿಳನಾಡು ಸಿಎಂ ಬರುವ ತೀರ್ಮಾನವಾಗಿತ್ತು. ಈ ಹಿಂದೆ ನಾನೇ ತಮಿಳುನಾಡಿಗೆ ಹೋಗಲು ಮನವಿ ಮಾಡಿದ್ದೆ ಆದರೆ ಡಿಎಂಕೆ ಸರ್ಕಾರ ಅನುಮತಿ ನೀಡಿರಲಿಲ್ಲ, ನಂತರ ಚುನಾವಣೆ ಬಂದು ಸರ್ಕಾರ ಬದಲಾಗಿದೆ. ಈಗ ವಿಜಯ್ ಅವರು ತಮ್ಮ ತಂಡದೊಂದಿಗೆ ಕರ್ನಾಟಕ್ಕೆ ಬರುವುದಾಗಿ ತಿಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಭಟನೆ ಮಾಡುವ ಬೆಳವಣಿಗೆ ನಮಗೆ ಸಮಾಧಾನ ತರುತ್ತಿಲ್ಲ. ಈ ವಿಚಾರವನ್ನು ಸೌಹಾರ್ದತೆ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಸಮಸ್ಯೆ ಬಗೆಹರಿದರೆ ಅವರಿಗೂ ಹಿತ, ನಮಗೂ ಹಿತ. ಈಗ ಪರಿಸ್ಥಿತಿ ಉತ್ತಮವಾಗಿಲ್ಲ, ಹೀಗಾಗಿ ನಮ್ಮ ಸಭೆಯನ್ನು ಕೆಲ ದಿನಗಳ ಕಾಲ ಮುಂದೂಡೋಣ ಎಂದು ನಾನು ತಮಿಳುನಾಡು ಮುಖ್ಯಮಂತ್ರಿಗಳಿಗೆ ಮನವಿ ಮಾಡಲು ಚರ್ಚೆ ಮಾಡುತ್ತೇನೆ. ಹೊರಗಿನಿಂದ ಅತಿಥಿಗಳು ಬರುವಾಗ ನಾವು ಸೌಹಾರ್ದತೆ ಹಾಗೂ ಗೌರವಪೂರ್ವಕವಾಗಿ ಆತಿಥ್ಯವಹಿಸಬೇಕು. ಹೀಗಾಗಿ ಆಗಸ್ಟ್ 3ರ ಬದಲು ಬೇರೆ ದಿನಾಂಕ ನಿಗದಿ ಮಾಡಿ ಮನವಿ ಮಾಡುತ್ತೇನೆ. ಅವರು ಅವರ ರಾಜ್ಯದ ಹಿತ ಕಾಪಾಡುವ ಉದ್ದೇಶವಿದ್ದರೆ, ನಮಗೆ ನಮ್ಮ ರಾಜ್ಯದ ಹಿತ ಕಾಪಾಡುವ ಉದ್ದೇಶವಿದೆ. ಸೌಹಾರ್ದತೆಯಿಂದ ಇದನ್ನು ಬಗೆಹರಿಸಿಕೊಳ್ಳಲು ಸಾಧ್ಯವೇ ಎಂದು ಚರ್ಚೆ ಮಾಡಲಾಗುತ್ತಿದೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments