Homeಕರ್ನಾಟಕನಿಂದಿಸಿದವರನ್ನೇ ನೆಚ್ಚಿಕೊಳ್ಳುವುದು ಮೋದಿಗೂ ಬಿಜೆಪಿಗೂ ಹೊಸದಲ್ಲ: ಬಿ ಕೆ ಹರಿಪ್ರಸಾದ್

ನಿಂದಿಸಿದವರನ್ನೇ ನೆಚ್ಚಿಕೊಳ್ಳುವುದು ಮೋದಿಗೂ ಬಿಜೆಪಿಗೂ ಹೊಸದಲ್ಲ: ಬಿ ಕೆ ಹರಿಪ್ರಸಾದ್

ನಿಂದಿಸಿದವರನ್ನೇ ನೆಚ್ಚಿಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿಗೂ ಬಿಜೆಪಿ ಪಕ್ಷಕ್ಕೂ ಹೊಸದೇನಲ್ಲ. “ಗುರುತೇ ಇಲ್ಲದ ಕೋಟ್ಯಧಿಪತಿ” ಎಂದು ಚುನಾವಣಾ ವೇದಿಕೆಯಲ್ಲಿ ಪ್ರಧಾನಿ ಅವರನ್ನು ವೈಯಕ್ತಿಕವಾಗಿ ಅವಹೇಳನ ಮಾಡಿದ್ದನ್ನು ಪ್ರಧಾನಿಗಳು ಮರೆತಿರಬಹುದು, ದೇಶದ ಜನ ಮರೆತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಕುಟುಕಿದ್ದಾರೆ.

ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ನಿಲೇಕಣಿಯವರು ರೂಪಿಸಿದ ಆಧಾರ್ ಯೋಜನೆಯನ್ನು ‘ಸಾರ್ವಜನಿಕ ಹಣದ ಲೂಟಿ’, ‘ವ್ಯರ್ಥ ಯೋಜನೆ’, ‘ರಾಷ್ಟ್ರೀಯ ಭದ್ರತೆಗೆ ಅಪಾಯ’ ಎಂದು ಅಪಪ್ರಚಾರ ಮಾಡಿದ್ದವರು ಇದೇ ಬಿಜೆಪಿ ನಾಯಕರು. ಆದರೆ ಇಂದು ದೇಶದ ಪರೀಕ್ಷಾ ವ್ಯವಸ್ಥೆಯನ್ನು ಸರಿಪಡಿಸುವ ಉನ್ನತಾಧಿಕಾರ ಸಮಿತಿಯ ಚುಕ್ಕಾಣಿಯನ್ನು ಅದೇ ನಂದನ್ ನಿಲೇಕಣಿಯವರ ಕೈಗೆ ಒಪ್ಪಿಸಿದ್ದಾರೆ!” ಎಂದು ಹೇಳಿದ್ದಾರೆ.

“ಪ್ರಧಾನಮಂತ್ರಿಗಳೇ, ನಂದನ್ ನಿಲೇಕಣಿಯವರಿಗೆ ಈಗ ಏಕಾಏಕಿ “ಗುರುತು” ದೊರಕಿದೆಯೇ? ಅಥವಾ ನೀವು ಹಿಂದೆ ಮಾಡಿದ್ದ ಆರೋಪಗಳಿಗೇ ಇಂದು ಗುರುತೇ ಉಳಿದಿಲ್ಲವೇ? ಅಂದಿನ ಆರೋಪಗಳು ಸತ್ಯವಾಗಿದ್ದರೆ, ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅವರ ಕೈಗೆ ಒಪ್ಪಿಸಿರುವುದು ಏಕೆ” ಎಂದು ಪ್ರಶ್ನಿಸಿದ್ದಾರೆ.

“ಹಿಂದಿನ ಆರೋಪಗಳು ಸುಳ್ಳಾಗಿದ್ದರೆ, ಸಾರ್ವಜನಿಕ ವೇದಿಕೆಯಲ್ಲಿ ಒಬ್ಬ ಸಾಧಕನ ವಿರುದ್ಧ ನಡೆಸಿದ ವೈಯಕ್ತಿಕ ಅವಹೇಳನಕ್ಕಾಗಿ ಕ್ಷಮೆ ಕೇಳುವುದು ಯಾವಾಗ? ವಿರೋಧ ಪಕ್ಷದೊಂದಿಗೆ ಗುರುತಿಸಿಕೊಂಡಾಗ ದೇಶದ ಪ್ರತಿಭೆಯನ್ನು ಅವಮಾನಿಸುವುದು; ತಮ್ಮ ಆಡಳಿತದ ವೈಫಲ್ಯವನ್ನು ಸರಿಪಡಿಸಬೇಕಾದಾಗ ಅದೇ ಪ್ರತಿಭೆಯ ಬಾಗಿಲು ತಟ್ಟುವುದು ಇದು ನಾಯಕತ್ವವಲ್ಲ, ಅವಕಾಶವಾದದ ಅಶ್ಲೀಲ ಪ್ರದರ್ಶನ” ಎಂದು ಟೀಕಿಸಿದ್ದಾರೆ.

“ನಂದನ್ ನಿಲೇಕಣಿಯವರ ಸಾಮರ್ಥ್ಯದ ಬಗ್ಗೆ ನಮಗೆ ಪ್ರಶ್ನೆಯಿಲ್ಲ. ಪ್ರಶ್ನೆ ಇರುವುದು ನರೇಂದ್ರ ಮೋದಿಯವರ ರಾಜಕೀಯ ಪ್ರಾಮಾಣಿಕತೆಯ ಬಗ್ಗೆ. ದೇಶದ ಪರೀಕ್ಷಾ ವ್ಯವಸ್ಥೆಯನ್ನು ಸರಿಪಡಿಸಲು ಸಮಿತಿ ನೇಮಿಸುವ ಮೊದಲು, ನಿಮ್ಮ ಹಿಂದಿನ ಆರೋಪಗಳ ಪರೀಕ್ಷೆಗೆ ಉತ್ತರಿಸಿ ಪ್ರಧಾನಿಗಳೇ” ಎಂದು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments