ಎರಡು ರಾಜ್ಯಗಳ ನದಿ ನೀರು ಹಚಿಕೆಯ ಬಗ್ಗೆ ನರ್ಮದಾ ನದಿ ನೀರು ಹಂಚಿಕೆ ವಿಚಾರದಲ್ಲಿ ಅಂದು ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ನರೇಂದ್ರ ಮೋದಿ ಹಾಗೂ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನಡುವೆ ನಡೆದಿದ್ದ ಸೌಹಾರ್ದ ಚರ್ಚೆ ಅತ್ಯಂತ ಮಾದರಿ ಮತ್ತು ಅನುಕರಣೀಯ ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಹೇಳಿದರು.
ಕೇಂದ್ರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಮ್ಮ ಒಡನಾಟ, ರಾಜಕೀಯ ಪ್ರಯಾಣದ ಬಗ್ಗೆ ರಚಿಸಿರುವ ʼಅಪನಾಪನ್ʼ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಜಿ ಪ್ರಧಾನಿಗಳು ಮಾತನಾಡಿದರು.
ಪುಸ್ತಕದಲ್ಲಿನ ಕೆಲ ಮಹತ್ವದ ಅಂಸಗಳನ್ನು ಉಲ್ಲೇಖಿಸಿದ ಮಾಜಿ ಪ್ರಧಾನಿಗಳು; 2006ರಲ್ಲಿ ನವದೆಹಲಿಯಲ್ಲಿ ಶಿವರಾಜ್ ಸಿಂಗ್ ಮತ್ತು ನರೇಂದ್ರ ಮೋದಿ ಅವರ ನಡುವೆ ಸರ್ದಾರ್ ಸರೋವರ ಯೋಜನೆ ಮತ್ತು ನರ್ಮದಾ ನೀರು ನಿರ್ವಹಣೆಗೆ ಸಂಬಂಧಿಸಿದಂತೆ ಸಭೆ ನಡೆಯಿತು. ಆಗ ಇಬ್ಬರೂ ಅವರವರ ರಾಜ್ಯಗಳ ಮುಖ್ಯಮಂತ್ರಿಗಳಾಗಿದ್ದರು. ಗುಜರಾತ್ ಮತ್ತು ಮಧ್ಯಪ್ರದೇಶ ಎರಡೂ ರಾಜ್ಯಗಳು ಒಟ್ಟಿಗೆ ಪ್ರಯೋಜನ ಪಡೆಯಬಹುದಾದ ಸಹಕಾರಿ ಚೌಕಟ್ಟನ್ನು ಮೋದಿ ಅವರು ರೂಪಿಸಿದ್ದರು. ಪರಸ್ಪರ ಸಹಕಾರ ತತ್ವದ ಚೌಕಟ್ಟಿನಲ್ಲಿ ನಡೆದ ಈ ಸಭೆ ಯಶಸ್ವಿಯಾಯಿತು. ಅದೊಂದು ಉತ್ತಮ ಸಭೆ. ಅಂತಾರಾಜ್ಯ ಜಲ ವಿವಾದಗಳ ಪರಿಹಾರದ ನಿಟ್ಟಿನಲ್ಲಿ ಅದು ಮಾದರಿ ಚರ್ಚೆ ಎಂದು ಬಣ್ಣಿಸಿದರು.
ನರ್ಮದಾ ನೀರಿನ ಹಂಚಿಕೆ ಮತ್ತು ಸರ್ದಾರ್ ಸರೋವರ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವ ಬಗ್ಗೆ ಒಮ್ಮತ ಸಾಧಿಸಲು ಪ್ರಧಾನಿಯಾಗಿದ್ದಾಗ ತಾವು ನಡೆಸಿದ ಪ್ರಯತ್ನಗಳನ್ನು ನೆನಪು ಮಾಡಿಕೊಂಡ ದೇವೇಗೌಡರು; 1996ರಲ್ಲಿ ನಾನು ಸೌಹಾರ್ದಯುತ ಮತ್ತು ಒಮ್ಮತ-ಆಧರಿತ ಪರಿಹಾರಕ್ಕೆ ಬರಲು ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದಿದ್ದೆ. ನಂತರ ಸುಪ್ರೀಂ ಕೋರ್ಟ್ ಆ ಪರಿಹಾರ ಸೂತ್ರವನ್ನು ಅಂಗೀಕರಿಸಿತು. ನರ್ಮದಾ ನದಿ ನೀರು ಗುಜರಾತ್ ಮತ್ತು ಮಧ್ಯಪ್ರದೇಶದ ಜನರಿಗೆ ಪ್ರಯೋಜನವನ್ನು ನೀಡುತ್ತಲೇ ಇದೆ ಎಂಬುದು ನನಗೆ ಬಹಳ ಸಂತೋಷದ ಸಂಗತಿ ಎಂದರು.
2019 ಸೆಪ್ಟೆಂಬರ್ ತಿಂಗಳಲ್ಲಿ ಸರ್ದಾರ್ ಸರೋವರ ಅಣೆಕಟ್ಟು ಪೂರ್ಣ ಮಟ್ಟಕ್ಕೆ ತುಂಬಿದಾಗ, ನಾನು ಬೆಂಗಳೂರಿನಿಂದ ಅಲ್ಲಿಗೆ ಹೋಗಿ ಅಣೆಕಟ್ಟನ್ನು, ಅದರ ಪೂರ್ಣ ಸಾಮರ್ಥ್ಯವನ್ನು ವೀಕ್ಷಿಸಿದೆ. ಇದು ನನಗೆ ಸಾರ್ಥಕದ ಕ್ಷಣವಾಗಿತ್ತು ಎಂದು ಮಾಜಿ ಪ್ರಧಾನಿಗಳು ಹೇಳಿದರು.
ಹಾಗೆಯೇ ʼಅಪಾನಪಣ್ʼ ಪುಸ್ತಕದ ಶೀರ್ಷಿಕೆ ತಮಗೆ ಬಹಳ ಇಷ್ಟವಾಯಿತು ಎಂದು ಹೇಳಿದ ಅವರು; ಇದು ಇಬ್ಬರು ಸಹೋದ್ಯೋಗಿಗಳ ಜತೆಗಿನ ಆಳವಾದ ಬಾಂಧವ್ಯವನ್ನು ಬೆಳೆಸಿಕೊಳ್ಳುವ ಮತ್ತು ಅನುಭವಿಸುವ ಬಗ್ಗೆ ಮತ್ತು ಆತ್ಮೀಯತೆ, ರಕ್ತ ಸಂಬಂಧ ಮತ್ತು ಏಕತೆಯ ಭಾವನೆ ಬಗ್ಗೆ ಈ ಕೃತಿ ಹೇಳುತ್ತದೆ. ಮೋದಿ ಮತ್ತು ಶಿವರಾಜ್ ಸಿಂಗ್ ಅವರ ನಡುವಿನ ದೀರ್ಘ ಕಾಲದ ಒಡನಾಟ, ಬಾಂಧವ್ಯವು ಅವರ ಶಿಸ್ತು ಮತ್ತು ಸಮರ್ಪಣಾ ಭಾವದಿಂದ ಒಟ್ಟಾಗಿ ಸಾಧಿಸಿದ ಧ್ಯೇಯದ ಬಗ್ಗೆ ಸ್ಪಷ್ಟವಾಗಿ ಹೇಳುತ್ತದೆ. ಈ ಇಬ್ಬರ ಪ್ರಯಾಣ ಈಗ ಇತಿಹಾಸದ ಭಾಗವಾಗಿದೆ ಎಂದು ಮಾಜಿ ಪ್ರಧಾನಿಗಳು ಬಣ್ಣಿಸಿದರು.
ಈ ಪುಸ್ತಕವು ವಿಶಿಷ್ಟ ರಾಜಕೀಯ ಜೀವನ ಚರಿತ್ರೆ ಅಥವಾ ಸಾಂಪ್ರದಾಯಿಕ ಆತ್ಮಚರಿತ್ರೆಯಲ್ಲ. ಇದು ಮೋದಿ ಅವರೊಂದಿಗಿನ ಮಹತ್ವದ ಪ್ರಯಾಣದ ಬಗ್ಗೆ ಶಿವರಾಜ್ ಸಿಂಗ್ ಅರ್ಥಪೂರ್ಣವಾಗಿ ಬರೆದಿದ್ದಾರೆ. ಅಲ್ಲದೆ, ಕೃತಿಯಲ್ಲಿ ಒಂದು ನಿರ್ದಿಷ್ಟ ಔದಾರ್ಯತೆ ಮತ್ತು ನಮ್ರತೆ ಇದೆ, ಅದು ಶಿವರಾಜ್ ಸಿಂಗ್ ಅವರು ಅಧಿಕಾರಕ್ಕೆ ಬರುವ ಮೊದಲೇ ಮೋದಿ ಅವರಿಂದ ಕಲಿತದ್ದನ್ನು ಮುಕ್ತವಾಗಿ ಹೇಳಿದ್ದಾರೆ. ಕಲಿಕೆ ಮತ್ತು ಔದಾರ್ಯದ ಈ ಸ್ವೀಕೃತಿ ಸಾರ್ವಜನಿಕ ಜೀವನ ಮತ್ತು ರಾಜಕೀಯದಲ್ಲಿ ಬಹಳ ಅಪರೂಪ. ಇದು ಶಿವರಾಜ್ ಸಿಂಗ್ ಅವರು ಬಹಳ ವಿಶೇಷ ವ್ಯಕ್ತಿ ಎಂಬುದನ್ನು ತೋರಿಸುತ್ತದೆ ಹಾಗೂ ಆ ವಿಶೇಷ ವ್ಯಕ್ತಿಗೆ ಇನ್ನೊಬ್ಬ ವಿಶೇಷ ವ್ಯಕ್ತಿಯನ್ನು, ಅಂದರೆ ಮೋದಿ ಅವರನ್ನು ಹೇಗೆ ಗುರುತಿಸುವುದು? ಮತ್ತು ಅವರ ಬಂಧಗಳನ್ನು ಹೇಗೆ ಗಾಢವಾಗಿಸಬೇಕೆಂಬುದು ತಿಳಿದಿದೆ. ಅವರ ದೀರ್ಘಕಾಲದ ಸ್ನೇಹ ಮತ್ತು ಸಹೋದರತ್ವವು ಈ ರಾಷ್ಟ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ ಎಂದು ದೇವೇಗೌಡರು ಬಣ್ಣಿಸಿದರು.
ನರೇಂದ್ರ ಮೋದಿ ಅವರು ಬಹಳ ಪರಿಣಾಮಕಾರಿ ಆಡಳಿತಗಾರ ಮತ್ತು ಅನೇಕ ಉತ್ತಮ ವಿಚಾರಗಳನ್ನು ಹೊಂದಿರುವ ವ್ಯಕ್ತಿ. 2014ರಲ್ಲಿ ಮೋದಿ ಅವರು ಈ ರಾಷ್ಟ್ರದ ಆಡಳಿತ ವಹಿಸಿಕೊಂಡು ಅನೇಕ ಉತ್ತಮ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಆಯಿತು ಎಂದು ದೇವೇಗೌಡರು ಹೇಳಿದರು.
ಅತ್ಯಂತ ಉತ್ತಮವಾದ ಈ ಕೃತಿ ಆದಷ್ಟು ಬೇಗ ಕನ್ನಡವು ಸೇರಿದಂತೆ ಭಾರತದ ಎಲ್ಲಾ ಭಾಷೆಗಳಿಗೆ ಅನುವಾದ ಆಗಲಿ ಎಂದು ಅವರು ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಹೇಳಿದರು.


