Homeಕರ್ನಾಟಕಬಿ ವೈ ವಿಜಯೇಂದ್ರ ಇನ್ನೂ ರಾಜಕೀಯದಲ್ಲಿ ಎಳಸು: ಬಿ ಕೆ ಹರಿಪ್ರಸಾದ್ ಕಿಡಿ

ಬಿ ವೈ ವಿಜಯೇಂದ್ರ ಇನ್ನೂ ರಾಜಕೀಯದಲ್ಲಿ ಎಳಸು: ಬಿ ಕೆ ಹರಿಪ್ರಸಾದ್ ಕಿಡಿ

ಚೆಕ್ ಮೂಲಕ ಲಂಚ ಪಡೆದ ಪ್ರಕರಣದಲ್ಲಿ ಜೈಲಿಗೆ ಹೋದ ದೇಶದ‌ ಮೊದಲ ಮುಖ್ಯಮಂತ್ರಿಯ ಪುತ್ರ ಬಿ ವೈ ವಿಜಯೇಂದ್ರ  ಇಂದು ಕಾಂಗ್ರೆಸ್ ಗೆ ನೈತಿಕತೆಯ ಪಾಠ ಹೇಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಕುಟುಕಿದ್ದಾರೆ.

ಎಕ್ಸ್ ತಾಣದಲ್ಲಿ ಬರೆದುಕೊಂಡಿರುವ ಅವರು, “ಭ್ರಷ್ಟಾಚಾರದ ಬಗ್ಗೆ ತಮ್ಮದೇ ಪಕ್ಷದ ನಾಯಕರಿಂದ ಗಂಭೀರ ಆರೋಪಗಳಿಗೆ ಗುರಿಯಾಗಿರುವ ಬಿ ಎಸ್ ಯಡಿಯೂರಪ್ಪ, ಈಗಲೂ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪಿ. ಈ ರೀತಿ ಅಸಹಾಯಕ ಅಪ್ರಾಪ್ತ ಹುಡುಗಿಯನ್ನು ಲೈಂಗಿಕವಾಗಿ ಪೀಡಿಸಿದ ಮನೆಯ ಹುಡುಗ ಪ್ರಭು ಶ್ರೀರಾಮಚಂದ್ರನ ಹಣ ಕಳವು ಆರೋಪಿಗಳ ಪರ ವಹಿಸುವುದರಲ್ಲಿ ವಿಶೇಷವೇನೂ ಕಾಣುವುದಿಲ್ಲ” ಎಂದಿದ್ದಾರೆ.

“ನ್ಯಾಷನಲ್ ಹೆರಾಲ್ಡ್ ಮೇಲಿನ ಕೇಂದ್ರದ ದುರುದ್ದೇಶದ ಆರೋಪಗಳಿಗೆ ನ್ಯಾಯಾಲಯವೇ ಛೀಮಾರಿ ಹಾಕಿದೆ. ಅಕ್ರಮವಾಗಿದ್ದರೆ ಹನ್ನೆರಡು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವವರು ಕ್ರಮ ತೆಗದುಕೊಳ್ಳುವ ಧೈರ್ಯ ಯಾಕಿಲ್ಲ. ನ್ಯಾಷನಲ್ ಹೆರಾಲ್ಡ್ ಲಾಭ ಮಾಡುವ ಸಂಸ್ಥೆಯಲ್ಲ, ಜನಸೇವೆ ಮಾಡುವ ಟ್ರಸ್ಟ್. ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಗ್ಗೆ ಮಾತ್ನಾಡುವ ನೈತಿಕತೆ ಇದೆಯಾ ಈ ಬೇಬಿ ಯಡಿಯೂರಪ್ಪರಿಗೆ” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

“ಅಷ್ಟಕ್ಕೂ ಅಯೋಧ್ಯೆಯಲ್ಲಿ ಭ್ರಷ್ಟಾಚಾರ ನಡೆದಿರುವುದು, ಜನ ಸಾಮಾನ್ಯರ ದೇಣಿಗೆಯನ್ನು ನುಂಗಿ ನೀರು ಕುಡಿದಿದ್ದು, ಯಾವುದೇ ರಸೀದಿ ಇಲ್ಲದೆ ಕೋಟ್ಯಾಂತರ ಹಣ ಲೂಟಿ ಹೊಡೆದಿದ್ದಾರೆ ಎಂಬುದನ್ನು ಇಡೀ ದೇಶ ನೋಡಿದೆ‌. ಬಿಜೆಪಿ ಪಕ್ಷದ ಸರ್ಕಾರವೇ ಇರುವ ಉತ್ತರ ಪ್ರದೇಶ ಸರ್ಕಾರ ಈ ಸಂಬಂಧ ಎಸ್ಐಟಿ ತನಿಖೆ ನಡೆಸುತ್ತಿದೆ. ಹೀಗಿರುವಾಗ ರಾಮನ ಹೆಸರಿನಲ್ಲಿ ನಡೆದ ಭ್ರಷ್ಟಾಚಾರವನ್ನು ನಾವು ಪ್ರಶ್ನಿಸಿದಾಗ ಭ್ರಷ್ಟರಿಗಲ್ಲದೇ ಇನ್ನಾರಿಗೆ ಕಸಿವಿಸಿಯಾಗಲು ಸಾಧ್ಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಬಿ ವೈ ವಿಜಯೇಂದ್ರ ಇನ್ನೂ ರಾಜಕೀಯದಲ್ಲಿ ಎಳಸು. ರಾಮಮಂದಿರ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದರೆ ಸಿಬಿಐಯನ್ನು ನಂಬುತ್ತೇವೆ ಎಂದಲ್ಲ. ಸಿಬಿಐ ತನಿಖೆಗಾಗಿ ಒತ್ತಾಯಿಸುವುದರ ಉದ್ದೇಶ, ಪ್ರಕರಣವನ್ನು ರಾಜ್ಯ ಸರ್ಕಾರದ ಅಥವಾ ಸ್ಥಳೀಯ ಪೊಲೀಸರ ಪ್ರಭಾವದಿಂದ ದೂರವಿಟ್ಟು ಸ್ವತಂತ್ರ ಸಂಸ್ಥೆಯ ಮೂಲಕ ತನಿಖೆ ನಡೆಸುವಂತೆ ಆಗ್ರಹಿಸುವುದು. ಹಾಗಂತ, ಬಿಜೆಪಿ ಕಾಲದಲ್ಲಿ ಸಿಬಿಐ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಯ ಕಾರ್ಯವೈಖರಿ, ಅದರ ತನಿಖೆಯ ನಿಷ್ಪಕ್ಷಪಾತತೆ ಮತ್ತು ಅಂತಿಮ ವರದಿಯನ್ನು ಪ್ರಶ್ನಿಸುವ ಅಥವಾ ವಿಮರ್ಶಿಸುವ ಹಕ್ಕು ನಮಗೆ ಇರುತ್ತದೆ” ಎಂದಿದ್ದಾರೆ.

“ಬಿ ವೈ ವಿಜಯೇಂದ್ರ ಹಳೆಯ ದಾಖಲೆ ತೆಗೆದು ನೋಡಬೇಕು. ಅವರ ತಂದೆ ಬಿ ಎಸ್ ಯಡಿಯೂರಪ್ಪ ಜೈಲಿಗೆ ಹೋಗುವ ಮೊದಲು ಎಷ್ಟು ಪ್ರಕರಣ ಸಿಬಿಐಗೆ ವಹಿಸಿದರು ? ಯಡಿಯೂರಪ್ಪ ಜೈಲಿಗೆ ಹೋದ ಬಳಿಕ ಬಂದ ಬಿಜೆಪಿ ಮುಖ್ಯಮಂತ್ರಿಗಳು ಎಷ್ಟು ಪ್ರಕರಣವನ್ನು ಸಿಬಿಐಗೆ ವಹಿಸಿದರು ? ಕೇಂದ್ರದಲ್ಲಿ ಯುಪಿಎ ಇರುವವರೆಗೆ ರಾಜ್ಯದ ಬಿಜೆಪಿ ಸರ್ಕಾರವು ಯಾವ ಪ್ರಕರಣವನ್ನೂ ಸಿಬಿಐಗೆ ವಹಿಸಿಲ್ಲ. ಆದರೆ 2013 ರ ಕಾಂಗ್ರೆಸ್ ರಾಜ್ಯ ಸರ್ಕಾರವು ಸಿಬಿಐ ವಿರುದ್ದ ಹೋರಾಡುತ್ತಲೇ ಹಲವು ಪ್ರಕರಣಗಳನ್ನು ಸಿಬಿಐಗೆ ವಹಿಸಿತ್ತು.‌ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಸಿಬಿಐಗೆ ಕಾಂಗ್ರೆಸ್ ವಹಿಸಿದ ಎಲ್ಲಾ ಪ್ರಕರಣಗಳಲ್ಲೂ ನಮಗೆ ಕ್ಲೀನ್ ಚಿಟ್ ಸಿಕ್ಕಿದೆ. ಅದು ಸಿಬಿಐ ನ್ಯಾಯ ನೀಡಿದೆ ಎಂದಲ್ಲ, ನಾವು ನ್ಯಾಯಯುತವಾಗಿಯೇ ಬದುಕಿದ್ದೇವೆ, ರಾಜಕಾರಣ ಮಾಡಿದ್ದೇವೆ ಎಂದರ್ಥ” ಎಂದು ತಿಳಿಸಿದ್ದಾರೆ.

“ರಾಮ ಮುಖ್ಯವೋ, ರಾಮನ ಹಣ ಕದ್ದವರು ಮುಖ್ಯವೋ ಎಂದು ವಿಜಯೇಂದ್ರರನ್ನು ಕೇಳಿದರೆ, ರಾಮನ ಹಣ ಕದ್ದವರ ಜೊತೆ ಸೇರಿಕೊಳ್ಳುತ್ತಾರೆ ಎಂದು ಅವರ ಹೇಳಿಕೆಯ ಮೂಲಕ ಜನ ಅರ್ಥ ಮಾಡಿಕೊಳ್ಳುತ್ತಾರೆ. ರಾಮನಿಗೆ ನೀಡಿದ ದೇಣಿಗೆ ಲೂಟಿಗೆ ಪ್ರಧಾನಿ ನರೇಂದ್ರ ಮೋದಿಯ ರಾಜೀನಾಮೆ ಕೇಳದೇ ಇನ್ಯಾರ ರಾಜೀನಾಮೆ ಕೇಳಬೇಕು ? ರಾಮ ಮಂದಿರಕ್ಕೆ ಅಡಿಗಲ್ಲು ಹಾಕಿದ್ದು ಮೋದಿ, ರಾಮಮಂದಿರ ಕಟ್ಟಿದ್ದು ಮೋದಿ, ರಾಮಮಂದಿರಕ್ಕೆ ಪೈಂಟ್ ಮಾಡುವಾಗ ಪರಿಶೀಲನೆ ಮಾಡಿದ್ದು ಮೋದಿ, ರಾಮ ಮಂದಿರ ಉದ್ಘಾಟನೆ ಮಾಡಿದ್ದು ಮೋದಿ, ಅರ್ಚಕರ ಬದಲು ರಾಮನ ಪ್ರತಿಷ್ಠಾಪನೆ ಮಾಡಿದ್ದು ಮೋದಿ, ಟ್ರಸ್ಟ್ ರಚಿಸಿದ್ದು ಮೋದಿ, ಟ್ರಸ್ಟ್ ಗೆ ಸದಸ್ಯರನ್ನು ನೇಮಿಸಿದ್ದು ಮೋದಿ ! ಈಗ ಟ್ರಸ್ಟ್, ಬಿಜೆಪಿ, ಆರ್ ಎಸ್ಎಸ್ ನಾಯಕರು ಒಟ್ಟುಗೂಡಿ ರಾಮನ ಹುಂಡಿ ಹಣ ಲೂಟಿ ಮಾಡಿದರೆ ಮೋದಿಯ ರಾಜೀನಾಮೆ ಕೇಳದೇ ಇನ್ನಾರ ರಾಜೀನಾಮೆ ಕೇಳಬೇಕು” ಎಂದು ಕೇಳಿದ್ದಾರೆ.

“ಮರ್ಯಾದಾ ಪುರುಷೋತ್ತಮ ರಾಮ ತಂದೆ ನೀಡಿದ ವಚನ ಪಾಲನೆಗಾಗಿ ವನವಾಸ ಹೋದರೆ, ಯಡಿಯೂರಪ್ಪನವರು ಅವರ ಪುತ್ರ ವಿಜಯೇಂದ್ರನಿಗಾಗಿ ಸಿಕ್ಕಸಿಕ್ಕ ಕಡೆಯೆಲ್ಲಾ ಸಹಿ ಮಾಡಿ, ಲಂಚ ಪಡೆದು ಜೈಲುವಾಸ ಅನುಭವಿಸಿದರು. ಹಾಗಾಗಿ ವಿಜಯೇಂದ್ರರು ಸಧ್ಯ ಬಿಜೆಪಿಯೊಳಗಿನ ಅಸಮಾದಾನವನ್ನು ತಣಿಸಿ ರಾಜ್ಯಾಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳುವ ಕಡೆ ಗಮನ ಹರಿಸಬೇಕು. ರಾಮ ಮಂದಿರ ಹಗರಣದ ಬಗ್ಗೆ ಪ್ರಶ್ನೆ ಕೇಳುವ ಕಾಂಗ್ರೆಸ್ಸಿಗರನ್ನು ಟೀಕಿಸುವ ಯಾವ ನೈತಿಕತೆಯೂ ವಿಜಯೇಂದ್ರರಿಗಿಲ್ಲ ಎಂಬುದನ್ನು ಅರಿತರೆ ಒಳ್ಳೆಯದು” ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments