ಬಡವರು ಮತ್ತು ದುರ್ಬಲರ ಮತವನ್ನು ಕಸಿಯುವ ತಂತ್ರದ ಭಾಗವಾಗಿ ಎಸ್ಐಆರ್ ಇಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ಈ ದೇಶದಲ್ಲಿ ವಾಸವಿದ್ದು, ದೇಶದ ಮತದಾರ ಅಲ್ಲದವರಿಗೆ ಮತ ನಿರಾಕರಿಸಿ, ನೈಜ ಭಾರತೀಯರಿಗೆ ಮಾತ್ರ ಮತದಾನದ ಅವಕಾಶ ಕೊಡುವ ಪ್ರಕ್ರಿಯೆ ಇದಾಗಿದೆ. ದಾಖಲೆ ಕೊಡದವರಿಗೆ ಭಾರತೀಯರೆಂದು ದಾಖಲೆ ಕೊಡುವಂತೆ ನೋಟಿಸ್ ಕೊಡಲಾಗುತ್ತದೆ. ವಿದೇಶದಿಂದ ಬಂದು ಅಕ್ರಮವಾಗಿ ನೆಲೆಸಿದವರು ಮತ್ತು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವವರಿಗೆ ಮತ ನಿರಾಕರಿಸುವುದು ಇದರ ಮೂಲ ಉದ್ದೇಶಗಳಲ್ಲಿ ಒಂದು ಎಂದು ವಿವರಿಸಿದರು.
ರಾಜ್ಯದಲ್ಲಿ ವಿನಾಕಾರಣ ದೊಂಬಿ ಸೃಷ್ಟಿ, ಕುಕ್ಕರ್ ಬಾಂಬ್ ಇಟ್ಟುಕೊಂಡು ಹೋಗುವ ಪರಂಪರೆ, ಪೊಲೀಸ್ ಠಾಣೆಗೆ ಬೆಂಕಿ ಹಾಕುವವರು, ಶಿವಲಿಂಗ ಇರುವ ದೇವಸ್ಥಾನದಲ್ಲಿ ಭಕ್ತರಿಗೆ ಅಪಮಾನ ಮಾಡಿ ಭಕ್ತೆಯರಿಗೆ ಬೆದರಿಸುವುದು- ಇಂಥ ಸಮಾಜದ್ರೋಹಿಗಳ ವಿರುದ್ಧದ ಪ್ರಕರಣ ವಾಪಸ್ ಪಡೆದಿದ್ದಾರೆ. ಇದರಿಂದ ಕ್ರೌರ್ಯ ವೈಭವೀಕರಿಸುವವರು, ಷಡ್ಯಂತ್ರ ಮಾಡುವವರು, ಬೆದರಿಕೆ ಒಡ್ಡವವರು, ಹಿಂದೂ ವಿರೋಧಿಗಳಿಗೆ ಅನುಕೂಲ ಆಗಲಿದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಟೀಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯನವರು ಕೇಂದ್ರ ಸರಕಾರ, ಪ್ರಧಾನಿ ಮೋದಿ ಅವರನ್ನು ಟೀಕಿಸಲು ಏನು ಸಿಗುತ್ತದೆ ಎಂದು ಹುಡುಕುತ್ತಿರುತ್ತಾರೆ. ಯುದ್ಧ ನಡೆಯುತ್ತಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗೆ ಅನುಗುಣವಾಗಿ ಬೆಲೆ ಏರಿಕೆ ಮಾಡಲಾಗಿದೆ. ಹಲವಾರು ದೇಶಗಳಲ್ಲಿ ಪರಿಸ್ಥಿತಿ ಅವರ ಕೈಮೀರಿ ಹೋಗಿ ಬಹಳ ಕಷ್ಟ ಪಡುವಂತಾಗಿದೆ ಎಂದು ಉತ್ತರ ಕೊಟ್ಟರು. ತೈಲ ಸಂಗ್ರಹ, ವಿತರಣೆ, ಆಮದು ಮತ್ತು ಉತ್ಪಾದನೆಯಲ್ಲಿ ನಿಯಂತ್ರಣ ಸಾಧಿಸಿ ಭಾರತೀಯರಿಗೆ ವಿತರಿಸುವ ಕೆಲಸವನ್ನು ಮೋದಿಯವರು ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.


