Homeಕರ್ನಾಟಕಬರ ಪರಿಸ್ಥಿತಿ ನಿರ್ವಹಣೆ, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಸಿಎಂ ಶಿವಕುಮಾರ್ 

ಬರ ಪರಿಸ್ಥಿತಿ ನಿರ್ವಹಣೆ, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಸಿಎಂ ಶಿವಕುಮಾರ್ 

ರಾಜ್ಯವನ್ನು ಕಾಡುತ್ತಿರುವ ಬರಗಾಲ ಪರಿಸ್ಥಿತಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.

ಕಲಬುರಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಗಳವಾರ ಪ್ರಸ್ತಾವಿಕ ಭಾಷಣ ಮಾಡಿದ ಸಿಎಂ ಅವರು, ಜನಪರ ಕೆಲಸ ಮಾಡದ ಅಧಿಕಾರಿಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದರು.

ಉತ್ತರ ಕರ್ನಾಟಕದ ಮೊದಲ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಕಲಬುರಗಿಯಲ್ಲಿ ಆಯೋಜಿಸಲಾಗಿತ್ತು.

ಸರ್ವರನ್ನೂ ಒಳಗೊಂಡ ಪರಿಶುದ್ಧ ಆಡಳಿತ, ಅಭಿವೃದ್ಧಿ ಮತ್ತು ಕಟ್ಟಕಡೆಯ ವ್ಯಕ್ತಿಗೂ ಅವರ ನಾಗರಿಕ ಹಕ್ಕುಗಳನ್ನು ತಲುಪಿಸುವುದು ನನ್ನ ಸರ್ಕಾರದ ಪ್ರಮುಖ ಗುರಿ. ಈ ಗುರಿ ಸಾಧಿಸಲು ಅಧಿಕಾರಿ ವರ್ಗ ಅತ್ಯಂತ ಕ್ರಿಯಾಶೀಲ, ಜನಪರ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು” ಎಂದು ತಿಳಿಸಿದರು.

ನಾನು ಬಸವಾದಿ ಶರಣರ ಸಮಾನತೆಯ ತತ್ವವನ್ನು ನಂಬುವವನು. ಆದ್ದರಿಂದಲೇ ನನ್ನ ಮೊದಲ ಉತ್ತರ ಕರ್ನಾಟಕ ಪ್ರವಾಸವನ್ನು ಬಸವಕಲ್ಯಾಣದಿಂದ ಆರಂಭಿಸಿದ್ದೇನೆ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಒಂದೇ ವೇಗದಲ್ಲಿ ಸಾಗಬೇಕು” ಎಂದು ಹೇಳಿದರು.

ಬೀದರ್, ಕಲ್ಬುರ್ಗಿ ಜಿಲ್ಲೆಯ ಜನತೆ ನೀಡಿರುವ ಅಭೂತಪೂರ್ವ ಬೆಂಬಲ, ಪ್ರೀತಿ ಮತ್ತು ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, “ಜನತೆ ನಮ್ಮ ಮೇಲೆ ಇಟ್ಟಿರುವ ನಂಬಿಕೆಯೇ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ನಮ್ಮನ್ನು ಈ ಸ್ಥಾನದಲ್ಲಿ ಕೂರಿಸಿರುವವ ಜನತೆಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯ” ಎಂದರು.

ಆಡಳಿತದ ಅನುಭವವನ್ನು ಹಂಚಿಕೊಂಡ ಅವರು, “ನಾನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷನಾಗಿ ಕೆಲಸ ಆರಂಭಿಸಿ ಮುಖ್ಯಮಂತ್ರಿ ಹುದ್ದೆಯವರೆಗೆ ಎಲ್ಲಾ ಹಂತಗಳನ್ನು ದಾಟಿಕೊಂಡು ಬಂದಿದ್ದೇನೆ. ಹೀಗಾಗಿ ಆಡಳಿತದ ಪ್ರತಿಯೊಂದು ಹಂತದಲ್ಲಿ ಏನು ನಡೆಯುತ್ತದೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ನೆಪಗಳನ್ನು ಕೇಳಲು ನಾನು ಸಿದ್ಧನಿಲ್ಲ. ನನಗೆ ಫಲಿತಾಂಶವೇ ಮುಖ್ಯ” ಎಂದು ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಿದರು.

ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಮಾತನಾಡಿದ ಮುಖ್ಯಮಂತ್ರಿಯವರು, “ಒಬ್ಬನೇ ಒಬ್ಬ ಅರ್ಹ ಮತದಾರ ತನ್ನ ಮತದಾನದ ಹಕ್ಕು ಕಳೆದುಕೊಳ್ಳಬಾರದು. ಇಲ್ಲಿ ರಾಜಕಾರಣ ಮುಖ್ಯವಲ್ಲ, ಆದರೆ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕು ರಕ್ಷಿಸುವುದು ಸರ್ಕಾರದ ಜವಾಬ್ದಾರಿ. ಬಿಎಲ್ಒಗಳು ಪ್ರತಿಯೊಂದು ಮನೆಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಿ ಅರ್ಹ ಮತದಾರರ ಹೆಸರನ್ನು ಉಳಿಸುತ್ತಾರೆಯೇ ಎಂಬುದರ ಮೇಲೆ ನಿಗಾ ವಹಿಸಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ” ಎಂದು ಸೂಚಿಸಿದರು.

ಕೆರೆ ತುಂಬಿಸುವುದು ಮತ್ತು ರಸಗೊಬ್ಬರ ಸಮರ್ಪಕ ವಿತರಣೆಗೆ ಯಾವುದೇ ತೊಂದರೆ ಆಗಬಾರದು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಸ್ಪಷ್ಟ ಸೂಚನೆ ನೀಡಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತವಾಗಿ ನೀವು ನಡೆದುಕೊಳ್ಳುತ್ತಿದ್ದೀರಿ. ಇದಕ್ಕೆ ನೀವು ಅಭಿನಂದನಾರ್ಹರು ಎಂದು ದೇವದುರ್ಗದ ಜೆಡಿಎಸ್‌ ಶಾಸಕಿ ಕರೆಮ್ಮ ನಾಯಕ್‌ ಅವರು ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments