ದೇಶವನ್ನೇ ವಿಭಜನೆಯ ದುರಂತಕ್ಕೆ ತಳ್ಳಿದ ಮಹಮ್ಮದ್ ಅಲಿ ಜಿನ್ನಾ ಜೊತೆಗೆ ದೇಶದ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಅವರನ್ನು ಹೋಲಿಕೆ ಮಾಡುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ ಅಕ್ಷರಶಃ ರಾಜಕೀಯ ದ್ರಾಷ್ಟ್ಯತೆ, ಇತಿಹಾಸದ ಅಜ್ಞಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ವಿರುದ್ಧದ ದುರ್ಬುದ್ಧಿಯನ್ನು ತೋರಿಸುತ್ತದೆ ಎಂದು ಎಐಸಿಸಿ ಮುಖಂಡ ಮತ್ತು ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಕಟುವಾಗಿ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ಈ ದೇಶದ ಐಕ್ಯತೆ, ಅಖಂಡತೆ ಮತ್ತು ಸ್ವಾತಂತ್ರ್ಯಕ್ಕಾಗಿ ತಮ್ಮ ರಕ್ತ, ಬೆವರು, ಬದುಕನ್ನೇ ತ್ಯಾಗ ಮಾಡಿದ ಪರಂಪರೆ ಕಾಂಗ್ರೆಸ್ ಪಕ್ಷದ್ದಾಗಿದೆ. ದೇಶಕ್ಕಾಗಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಜೈಲು ಸೇರಿದ್ದಾರೆ, ಪ್ರಾಣ ಬಲಿದಾನ ಮಾಡಿದ್ದಾರೆ. ಆದರೆ ಇಂದು ಅದೇ ಕಾಂಗ್ರೆಸ್ ಪಕ್ಷದ ನಾಯಕರನ್ನು ಜಿನ್ನಾಗೆ ಹೋಲಿಸುವ ಮೂಲಕ ಬಿಜೆಪಿ ನಾಯಕರು ತಮ್ಮ ರಾಜಕೀಯ ದಿವಾಳಿತನವನ್ನು ದೇಶದ ಮುಂದೆ ಬಯಲಿಗೆಳೆದಿದ್ದಾರೆ” ಎಂದು ಕುಟುಕಿದ್ದಾರೆ.
“ಅವಿಭಜಿತ ಬಂಗಾಳದಲ್ಲಿ ಮುಸ್ಲಿಂ ಲೀಗ್ ಜೊತೆಗೆ ಜನಸಂಘದ ಸ್ಥಾಪಕರಾದ ಶ್ಯಾಮಪ್ರಸಾದ್ ಮುಖರ್ಜಿ ಮೈತ್ರಿ ಸರ್ಕಾರ ನಡೆಸಿದ ಇತಿಹಾಸ ಜೋಷಿ ಮರೆತಂತಿದೆ. ದೇಶದ ವಿಭಜಕ ಜಿನ್ನಾಗೆ “ಜಾತ್ಯಾತೀತ ನಾಯಕನ” ಬಿರುದು ಕೊಟ್ಟ ಲಾಲ್ ಕೃಷ್ಣ ಅಡ್ವಾನಿಯ ಹೇಳಿಕೆ ನೆನಪಿಲ್ಲವೇ? ಬಿಜೆಪಿ ಪರಿವಾರದ ಅನೇಕರಿಂದ ಜಿನ್ನಾ ಕುರಿತ ಮೃದು ನಿಲುವುಗಳು ಹೊರಬಂದಿರುವುದೂ ಇತಿಹಾಸದಲ್ಲೇ ದಾಖಲಾಗಿದೆ. ಆದರೆ ಇತಿಹಾಸವನ್ನು ಆಯ್ದುಕೊಂಡು ಓದುವ ಬಿಜೆಪಿಗೆ ಸತ್ಯ ಎಂದಿಗೂ ಸಹ್ಯವಾಗುವುದಿಲ್ಲ” ಎಂದಿದ್ದಾರೆ.
“ಕಾಂಗ್ರೆಸ್ ವಿರುದ್ಧ ದೇಶಭಕ್ತಿಯ ಪ್ರಮಾಣಪತ್ರ ಹಂಚುವ ಬಿಜೆಪಿ ನಾಯಕರು ಮೊದಲು ತಮ್ಮ ಸೈದ್ಧಾಂತಿಕ ಮೂಲಗಳ ಇತಿಹಾಸವನ್ನಾದರೂ ಅಧ್ಯಯನ ಮಾಡಲಿ. ಇಂದು ದೇಶ ಎದುರಿಸುತ್ತಿರುವ ನಿರುದ್ಯೋಗ, ಬೆಲೆ ಏರಿಕೆ, ರೈತರ ಸಂಕಷ್ಟ, ಆರ್ಥಿಕ ಅಸ್ಥಿರತೆ ಮುಂತಾದ ನೈಜ ಸಮಸ್ಯೆಗಳ ಬಗ್ಗೆ ಉತ್ತರ ಕೊಡಲು ಸಾಧ್ಯವಾಗದ ಬಿಜೆಪಿ ನಾಯಕರು, ಇಂತಹ ಅಸಂಬದ್ಧ ಮತ್ತು ಪ್ರಚೋದನಕಾರಿ ಹೇಳಿಕೆಗಳ ಮೂಲಕ ಜನರ ಗಮನ ಬೇರೆಡೆ ತಿರುಗಿಸಲು ಯತ್ನಿಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.


