ದೆಹಲಿ ರಾಜಕಾರಣದಿಂದ ಹಿಡಿದು ಹಳ್ಳಿ ಹಳ್ಳಿಯ ಕಾಂಗ್ರೆಸ್ ಕಾರ್ಯಕರ್ತನವರೆಗೂ ಪರಿಚಿತರಾಗಿರುವ ಹರಿಪ್ರಸಾದ್ ಅವರ ಪಯಣ ಅತ್ಯಂತ ರೋಚಕವಾಗಿದೆ. ಬಿ.ಕಾಂ ಪದವೀಧರರಾಗಿರುವ ಹರಿಪ್ರಸಾದ್ ಅವರು ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಬಿಜೆಪಿ ನೀತಿಗಳ ವಿರುದ್ಧ ಮತ್ತು ಆರ್ಎಸ್ಎಸ್ ಸಿದ್ಧಾಂತಗಳ ವಿರುದ್ಧ ಅತ್ಯಂತ ಸ್ಪಷ್ಟವಾಗಿ ಮತ್ತು ಬಲವಾಗಿ ಧ್ವನಿಯೆತ್ತುವ ನಾಯಕ.
ರಾಜ್ಯ ರಾಜಕಾರಣದಲ್ಲಿ ಅಪರೂಪದ ವ್ಯಕ್ತಿತ್ವಕ್ಕೆ ಉದಾಹರಣೆಗೆಯಾಗಿ ನಿಲ್ಲುವವರ ಸಾಲಿನಲ್ಲಿ ಬಿ.ಕೆ.ಹರಿಪ್ರಸಾದ್ ಕೂಡ ಒಬ್ಬರು. ಇವರು ಸೇವಾದಳದ ಕೂಸು. ಎಲ್ಲೆಕ್ಕಿಂತಲೂ ಮಿಗಿಲಾಗಿ ಗಾಂಧಿ ಮನೆತನದ ಮೂರು ತಲೆಮಾರಿನ ನಂಟು ಹೊಂದಿರುವ ಅಪ್ಪಟ ಕಾಂಗ್ರೆಸ್ ಕಟ್ಟಾಳು. ಭಾನುವಾರ (ಜೂ.21) ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಪದಗ್ರಹಣ ಹೊಂದಲಿದ್ದಾರೆ.
ಬಿಜೆಪಿ ನೀತಿಗಳ ವಿರುದ್ಧ ಮತ್ತು ಆರ್ಎಸ್ಎಸ್ (RSS) ಸಿದ್ಧಾಂತಗಳ ವಿರುದ್ಧ ಅತ್ಯಂತ ಸ್ಪಷ್ಟವಾಗಿ ಮತ್ತು ಬಲವಾಗಿ ಧ್ವನಿಯೆತ್ತುವ ನಾಯಕ. ಕಡಲ ಕಿನಾರೆ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಮೂಲದ ಬಿಲ್ಲವ ಹುಡುಗ ದೆಹಲಿ ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನಾತ್ಮಕ ಚತುರ ಎಂಬ ಛಾಪು ಮೂಡಿಸಿದ್ದು ಈಗ ಇತಿಹಾಸ. ಸೇವಾದಳದ ರೂವಾರಿ ಎನ್.ಎಸ್.ಹರ್ಡೀಕರ್ ಅವರ ಮಾರ್ಗದರ್ಶನದಲ್ಲಿ ರೂಪಪಡೆದಿರುವ ಹರಿಪ್ರಸಾದ್ ‘ಉಳುವವನೆ ಭೂಮಿಯ ಒಡೆಯ’ ಯೋಜನೆಯ ರೂವಾರಿ ದಿ. ದೇವರಾಜ ಅರಸು ಅವರ ಸಾಮಾಜಿಕ ನ್ಯಾಯ ಮತ್ತು ರಾಜಕಾರಣಕ್ಕೆ ಆಕರ್ಷಿತರಾಗಿದವರು. ಸಣ್ಣ ಸಮುದಾಯದ ಪರವಾಗಿ ಮಿಡಿಯುವ ಗುಣ ಅಂತರ್ಗತದಲ್ಲಿ ಮಿಳಿತವಾಗಿದೆ.
ವಿದ್ಯಾರ್ಥಿ ದಿಸೆಯಿಂದ ಆರಂಭವಾದ ಇವರ ರಾಜಕೀಯ ಹೆಜ್ಜೆಗಳು ಬಲು ರೋಚಕದಿಂದ ಕೂಡಿದೆ. ಅದು 1978ನೇ ಇಸ್ವಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಚಿಕ್ಕಮಗಳೂರು ಲೋಕಸಭೆಯಿಂದ ಸ್ಪರ್ಧಿಸಿದ್ದ ಅವಧಿಯದು. ಆ ವೇಳೆ ಪಾದರಸದಂತ ಹರಿಪ್ರಸಾದ್ ಅವರ ಪ್ರಚಾರದ ವೈಖರಿ ಎಂಥವರನ್ನೂ ಕೂಡ ತಮ್ಮತ್ತ ಸೆಳೆಯುವಂತಿತ್ತು. ಭಾಷಣದಲ್ಲಿ ಆಗಲೇ ಪ್ರಖರ ಹಿಡತ ಸಾಧಿಸಿದ್ದ ಯುವಕ ಹರಿಪ್ರಸಾದ್ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸಹೋದರ ಸಂಜಯ್ ಗಾಂಧಿ ಅವರ ಕಣ್ಣಿಗೆ ಬೀಳುತ್ತಾರೆ.
ಆಗಲೇ ಹರಿಪ್ರಸಾದ್ ಅವರ ಮುಖ್ಯ ರಾಜಕೀಯ ಹಾದಿ ತೆರೆಯುತ್ತದೆ. ಗಾಂಧೀ ಕುಟಂಬಕ್ಕೆ ಮತ್ತಷ್ಟು ಹತ್ತಿರವಾಗುವ ಸುಯೋಗ ಕೂಡಿಬಂತು. ದೆಹಲಿಗೆ ತೆರಳುವಾಗ ಜತೆಯಲ್ಲೇ ಹರಿಪ್ರಸಾದ್ ಅವರನ್ನು ಕರೆದೊಯ್ದ ಸಂಜಯ್ ಗಾಂಧಿ ಪಕ್ಷದ ಪ್ರಮುಖ ಜವಾಬ್ದಾರಿಗಳನ್ನು ವಹಿಸುತ್ತಾರೆ. ಆ ಬಳಿಕ ಹರಿಪ್ರಸಾದ್ ರಾಷ್ಟ್ರರಾಜಕಾರಣದಲ್ಲಿ ತಮ್ಮದೆ ಮುದ್ರೆ ಒತ್ತುತ್ತಾರೆ. ದೆಹಲಿ ರಾಜಕಾರಣದ ಮತ್ತೊಂದು ರಾಜಕೀಯದ ಮಜಲು ಪ್ರಾರಂಭಿಸುತ್ತಾರೆ.

“ನಾನು ಬಾಲ್ ಇದ್ದಂತೆ, ತುಳಿದಷ್ಟು ಮೇಲೆ ಪುಟಿದೇಳುತ್ತೇನೆ” ಎನ್ನುವ ಹರಿಪ್ರಸಾದ್, ರಾಷ್ಟ್ರಮಟ್ಟದ ಸಂಘಟನಾ ಚತುರ. ಕಾಂಗ್ರೆಸ್ ಪಕ್ಷದ ಸಂಘಟನಾತ್ಮಕ ವಿಭಾಗಗಳಲ್ಲಿ ಹರಿಪ್ರಸಾದ್ ಅವರು ನಿರ್ವಹಿಸಿದ ಜವಾಬ್ದಾರಿಗಳು ಅಪಾರ. ಅಖಿಲ ಭಾರತ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ದೀರ್ಘಕಾಲ ಕೆಲಸ ಮಾಡಿದ್ದಾರೆ. ಈಶಾನ್ಯ ಭಾರತ ಸೇರಿದಂತೆ ಉತ್ತರ ಭಾರತ ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದಾಗ ಚಾಕಚಕ್ಯತೆ ತೋರಿದ್ದಾರೆ.
ದೆಹಲಿ ರಾಜಕಾರಣದಿಂದ ಹಿಡಿದು ಹಳ್ಳಿ ಹಳ್ಳಿಯ ಕಾಂಗ್ರೆಸ್ ಕಾರ್ಯಕರ್ತನವರೆಗೂ ಪರಿಚಿತರಾಗಿರುವ ಹರಿಪ್ರಸಾದ್ ಅವರ ಪಯಣ ಅತ್ಯಂತ ರೋಚಕವಾಗಿದೆ. ಕರಾವಳಿ ಮೂಲವಾದರೂ ಹರಿಪ್ರಸಾದ್ ಆಡಿಬೆಳೆದಿದ್ದು, ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ. 1954ರ ಜುಲೈ 29ರಂದು ಕೆಂಪಯ್ಯ ಮತ್ತು ತಾಯಿ ಗುಣವತಿ ಕೆ. ಅವರ ಪುತ್ರರಾಗಿ ಜನಿಸಿದರು. ಬೆಂಗಳೂರಿನಲ್ಲೇ ತಮ್ಮ ವಿದ್ಯಾಭ್ಯಾಸ ಪೂರೈಸಿದರು. ಬಿ.ಕಾಂ ಪದವೀಧರರಾಗಿರುವ ಹರಿಪ್ರಸಾದ್ ಅವರು ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಇವರ ಪತ್ನಿ ಶ್ರೀಮತಿ ಉಷಾ ಮತ್ತು ಇವರಿಗೆ ಒಬ್ಬ ಪುತ್ರಿ ಇದ್ದಾರೆ.
1972ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯತ್ವ ಪಡೆಯುವ ಮೂಲಕ ರಾಜಕೀಯ ಜೀವನ ಆರಂಭವಾಯಿತು. ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ ಸದಸ್ಯರಾಗಿ, ಎಂಇಇಎಸ್ ಕಾಲೇಜು ಮತ್ತು ಎಸ್ಜೆಆರ್ಸಿ ಕಾನೂನು ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಯುವ ಶಕ್ತಿಯನ್ನು ಸಂಘಟಿಸಿದರು. 1975-1976ರಲ್ಲಿ ಹೈಗ್ರೌಂಡ್ ಬ್ಲಾಕ್ ಕಾಂಗ್ರೆಸ್ ಚೇರ್ಮೆನ್ ಆಗಿದ್ದರು. 1979-81ರ ಅವಧಿಯಲ್ಲಿ ಅಖಿಲ ಭಾರತ ಎನ್ಎಸ್ಯುಐ ಪ್ರಧಾನ ಕಾರ್ಯದರ್ಶಿಯಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. ಇದಾದ ನಂತರ ರಾಜಕೀಯದ ಅವಕಾಶಗಳ ಬಾಗಿಲು ತೆರೆದುಕೊಂಡಿತು.
“ನನ್ನ ಜಾತಿ ಕಾಂಗ್ರೆಸ್, ನನ್ನ ಧರ್ಮ ಸಂವಿಧಾನ” ಎನ್ನುವ ಹರಿಪ್ರಸಾದ್ ಅವರ ‘ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬದ್ಧತೆ’ ಪ್ರಶ್ನಾತೀತ. ದಶಗಳ ರಾಜಕಾರಣದಲ್ಲಿ ಎಂದಿಗೂ ಪಕ್ಷ ನಿಷ್ಠೆ ಬದಲಿಸಿದವರಲ್ಲ. ಸಚಿವ ಸ್ಥಾನದ ಹಿಂದೆ ಹೋದವರಲ್ಲ. ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ, ಕಾರ್ಯಕರ್ತರ ಎದೆಯಲ್ಲಿ ಆತ್ಮವಿಶ್ವಾಸ ತುಂಬಬಲ್ಲ ನಾಯಕತ್ವ ಇವರದ್ದಾಗಿದೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಹರಿಪ್ರಸಾದ್ ಅವರನ್ನು 1990ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಗೆ ಕರೆತರುತ್ತಾರೆ. 2004ರಲ್ಲಿ ಸೋನಿಯಾ ಗಾಂಧಿಯವರ ಸೂಚನೆಯಂತೆ ಮತ್ತೆ ರಾಜ್ಯಸಭೆಗೆ ಮರುಪ್ರವೇಶಿಸುತ್ತಾರೆ. 2013 ಮತ್ತು 2014ರಲ್ಲಿ ರಾಹುಲ್ ಗಾಂಧಿಯವರು ಹರಿಪ್ರಸಾದ್ ಅವರನ್ನು ಮತ್ತೆ ರಾಜ್ಯಸಭೆಗೆ ಕಳುಹಿಸುತ್ತಾರೆ.

ಇದೀಗ ಎರಡನೇ ಭಾರಿಗೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಕೆಪಿಸಿಸಿ ಚುಕ್ಕಾಣಿ ಹಿಡಿಯುವಷ್ಟರ ಮಟ್ಟಿಗೆ ಹೆಮ್ಮರವಾಗಿ ಬೆಳೆದಿದ್ದಾರೆ. ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿ ಆಡಳಿತ ಪಕ್ಷವವನ್ನು ಮಾತಿನ ಅಸ್ತ್ರದ ಮೂಲಕ ಮಣಿಸಿದ್ದಾರೆ.
“ನಾನು ಹಿಂದು, ನನ್ನ ಹಿಂದು ಧರ್ಮ ಸಹಿಷ್ಣುತೆಯನ್ನು ಹೇಳುತ್ತದೆ. ಸ್ವಾಮಿ ವಿವೇಕಾನಂದರ ಹಿಂದು ಧರ್ಮ ನನ್ನದು. ಗಾಂಧಿ, ನೆಹರೂ, ಸರ್ದಾರ್ ಪಟೇಲ್ ಅವರು ನಂಬಿಕೆ ಇಟ್ಟಿದ್ದಂತಹ ಹಿಂದು ಧರ್ಮ ನನ್ನದು. ಸಾವರ್ಕರ್ ಮತ್ತು ಗೋಲ್ವಾಲ್ಕರ್ ಪ್ರತಿಪಾದಿಸುವ ಹಿಂದುತ್ವ ನನ್ನದ್ದಲ್ಲ” ಎಂದು ಹೇಳಿ ಸದನದಲ್ಲಿ ಬಿಜೆಪಿಗರ ವಿರುದ್ಧ ಗುಡುಗಿದ್ದ ಹರಿಪ್ರಸಾದ್ ಯುವ ಸಮೂಹಕ್ಕೆ ಆತ್ಮವಿಶ್ವಾಸದ ಪ್ರತೀಕವಾಗಿದ್ದಾರೆ. ಸೈದ್ದಾಂತಿಕ ಸ್ಪಷ್ಟತೆಯುಳ್ಳ ಹಣತೆಯಂತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವ ಹರಿಪ್ರಸಾದ್ ಅವರಿಗೆ ಅಭಿಮನ್ಯು ಬಳಗದಿಂದ ಶುಭಾಶಯಗಳು. ಇವರ ಅಧ್ಯಕ್ಷತೆ ಅವಧಿಯಲ್ಲಿ ಕಾಂಗ್ರೆಸ್ ಇನ್ನಷ್ಟು ಗಟ್ಟಿಯಾಗಲಿ.
ರಾಜಕೀಯ ಸ್ಥಾನಮಾನಗಳು:
* ರಾಜ್ಯಸಭೆ ಸದಸ್ಯರಾಗಿ ಆಯ್ಕೆ- 1990, 2004, 2013 ಮತ್ತು 2014
* ವಿಧಾನ ಪರಿಷತ್ ಸದಸ್ಯ- 30 ಜೂನ್ 2020ರಿಂದ
* ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ- 27 ಜನವರಿ 2022ರಿಂದ 2023ರ ಮೇವರೆಗೆ
* 1981-82 ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ
*1990-96 ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಮಿತಿಗಳ ಸಲಹಾ ಸಮಿತಿಯ ಸದಸ್ಯ
*1995-96 ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಮಿತಿ ಹಾಗೂ ಕಾರ್ಮಿಕ ಕಲ್ಯಾಣ ಸಮಿತಿಯ ಸದಸ್ಯ
*2004-2009 ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಮಿತಿಯ ಸದಸ್ಯ
*2004-2010 ನಗರಾಭಿವೃದ್ಧಿ ಸಮಿತಿ ಸದಸ್ಯ
* 2004-2010- ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯ
*2006-2010 ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಸಲಹಾ ಸಮಿತಿ ಅಧ್ಯಕ್ಷ
* 2007-2010 ಭಾರತ-ಟರ್ಕಿ ಸಂಸದೀಯ ಸ್ನೇಹ ಕೂಟದ ಸದಸ್ಯ
* 2007-2009 ಭಾರತ-ಪೋಲೆಂಡ್ ಸಂಸದೀಯ ಸ್ನೇಹ ಕೂಟದ ಸದಸ್ಯ
* 2008-2010 ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ
* 2008-2009 ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ
* 2008-2010 ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯ
* 2009-2010 ಕಾಫಿ ಮಂಡಳಿ ಸದಸ್ಯ
* 2013 ಪೆಟ್ರೋಲಿಯಂ ಮತ್ತು ಸ್ವಾಭಾವಿಕ ಅನಿಲ ಸಮಿತಿಯ ಸದಸ್ಯ
* 2013-2014 ಮಾಹಿತಿ ತಂತ್ರಜ್ಞಾನ ಸಮಿತಿ ಸದಸ್ಯ
* 2014 ರಾಷ್ಟ್ರೀಯ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಮಂಡಳಿ ಸದಸ್ಯ
* 2014 ವಿಮಾ ಕಾನೂನು (ತಿದ್ದುಪಡಿ) ಮಸೂದೆಯ ರಾಜ್ಯಸಭೆಯ ಸಲಹಾ ಸಮಿತಿಯ ಸದಸ್ಯ
* 2014-2017 ಹಿಂದುಳಿದ ವರ್ಗಗಳ ಸಮಿತಿಯ ಸದಸ್ಯ
* 2017 ಕಲ್ಲಿದ್ದಲು ಮತ್ತು ಉಕ್ಕು ಸಮಿತಿಯ ಸದಸ್ಯ
* 2018 ರಾಸಾಯನಿಕ ಮತ್ತು ರಸಗೊಬ್ಬರ ಸಮಿತಿ ಸದಸ್ಯ, ಆಹಾರ ನಿರ್ವಹಣೆ ಜಂಟಿ ಸಮಿತಿಯ ಸದಸ್ಯ
ರಾಜಕೀಯ ಹಿನ್ನೆಲೆ:
* 1972ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯತ್ವ ಸ್ವೀಕಾರ.
* ಅಖಿಲ ಭಾರತ ಎನ್ಎಸ್ಯುಐ ಪ್ರಧಾನ ಕಾರ್ಯದರ್ಶಿ- 1979-81
* ಅಖಿಲ ಭಾರತ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ- 1989-1990
* ಕರ್ನಾಟಕ ರಾಜ್ಯ ಸಂಸದರ ವೇದಿಕೆ ಸಂಯೋಜಕರು- 1994- 1996
* ಅಖಿಲ ಭಾರತ ಕಾಂಗ್ರೆಸ್ ಸಮಿತಿ ಜಂಟಿ ಕಾರ್ಯದರ್ಶಿ- 1997-1998
* ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರು- 2000-2001
* ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ- 2001-2006
* ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ- 2006-2018
* ಹಾಲಿ ಹರಿಯಾಣ ರಾಜ್ಯ ಕಾಂಗ್ರೆಸ್ ಎಐಸಿಸಿ ಉಸ್ತುವಾರಿ
ಎಐಸಿಸಿ ಉಸ್ತುವಾರಿ:
ಗುಜರಾತ್, ಪುದುಚ್ಚೇರಿ, ದಿಯೂ ಮತ್ತು ದಮನ್, ಗೋವಾ, ದಾದರ್ ನಗರ್ ಹವೇಲಿ, ಹರ್ಯಾಣ, ಮಧ್ಯಪ್ರದೇಶ, ಚತ್ತೀಸ್ಗಢ, ಜಾರ್ಖಂಡ್, ಒಡಿಶಾ, ಬಿಹಾರ, ರಾಹಸ್ಥಾನ, ಪಂಜಾಬ್, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ತ್ರಿಪುರ, ಮಣಿಪುರ ಮತ್ತು ಉತ್ತರ ಪ್ರದೇಶ
ರಾಜ್ಯಮಟ್ಟದ ಹುದ್ದೆಗಳು:
* ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ ಸದಸ್ಯ- 1973-1977 ಮತ್ತು 1977-1978
* ಎಂಇಇಎಸ್ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ- 1972-1973
* ಎಸ್ಜೆಆರ್ಸಿ ಕಾನೂನು ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ-1977-1978
* ಪ್ರಧಾನ ಕಾರ್ಯದರ್ಶಿ- ಹೈಗೃೌಂಡ್ ಬ್ಲಾಕ್ ಯುವ ಕಾಂಗ್ರೆಸ್ ಸನಿತಿ- 1973-1976
* ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ- 1981-1982
* ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ- 1980-1982
* ಇಂಡಿಯನ್ ಯಂಗ್ ವರ್ಕರ್ಸ್ ಕೌನ್ಸಿಲ್ ಅಧ್ಯಕ್ಷ- 1981-1982
ಬರೆಹ: ಅಭಿಮನ್ಯು


