Homeಕರ್ನಾಟಕದಕ್ಷಿಣ ಭಾಗದ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ 50 ರೂ. ಶೀಘ್ರದಲ್ಲೇ ಜಮೆ: ಸಿದ್ದರಾಮಯ್ಯ ಸೂಚನೆ

ದಕ್ಷಿಣ ಭಾಗದ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ 50 ರೂ. ಶೀಘ್ರದಲ್ಲೇ ಜಮೆ: ಸಿದ್ದರಾಮಯ್ಯ ಸೂಚನೆ

ದಕ್ಷಿಣ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಶಾಸಕ ದಿನೇಶ್ ಗೂಳಿಗೌಡ ಅವರು ಸಲ್ಲಿಸಿದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ರೈತರ ಆರ್ಥಿಕ ಹಿತದೃಷ್ಟಿಯಿಂದ ಕೂಡಲೇ ಮಧ್ಯಪ್ರವೇಶಿಸಿರುವ ಸಿಎಂ, ಈ ಮನವಿಯನ್ನು ಪರಿಶೀಲಿಸಿ ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸಕ್ಕರೆ ನಿರ್ದೇಶನಾಲಯದ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ 7 ಸಕ್ಕರೆ ಕಾರ್ಖಾನೆಗಳು ರೈತರ ಖಾತೆ ವಿವರವನ್ನು ನೀಡಿದ್ದು, ಶೀಘ್ರದಲ್ಲೇ ರೈತರಿಗೆ ಸರ್ಕಾರದ ಪಾಲಿನ 50 ರೂ. ಪ್ರೋತ್ಸಾಹ ಧನ ಜಮೆಯಾಗಲಿದೆ. ಇನ್ನು ರೈತರ ಖಾತೆಗಳಿಗೆ ಹಣ ಜಮೆ ಮಾಡುವಂತೆ ಟ್ರಜರಿಗೆ ಜಿಲ್ಲಾಧಿಕಾರಿಗಳು ವಿವರಗಳನ್ನು ನೀಡಿದ್ದಾರೆ.

2025-26ನೇ ಹಂಗಾಮಿನ ಕಬ್ಬು ಬೆಳೆಗಾರರ ಬಾಕಿ ಪ್ರೋತ್ಸಾಹಧನ ಪಾವತಿ, ರೈತರ ಬ್ಯಾಂಕ್ ಖಾತೆ ವಿವರಗಳನ್ನು ನೀಡಲು ನಿರಾಕರಿಸುತ್ತಿರುವ ಹಾಗೂ ಸರ್ಕಾರದ ಆದೇಶ ಉಲ್ಲಂಘಿಸುತ್ತಿರುವ ದಕ್ಷಿಣ ಕರ್ನಾಟಕದ 7 ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಬಗ್ಗೆ ಶಾಸಕರಾದ ದಿನೇಶ್‌ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೋರಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿಎಂ, ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ, ತೆಗೆದುಕೊಂಡ ಕ್ರಮದ ಬಗ್ಗೆ ವರದಿಯನ್ನೂ ನೀಡುವಂತೆ ಸಕ್ಕರೆ ನಿರ್ದೇಶನಾಲಯದ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸಕ್ಕರೆ ಕಾರ್ಖಾನೆಗಳು ರೈತರ ಖಾತೆ ವಿವರವನ್ನು ನೀಡಿವೆ.
ಆದರೆ, ತಮ್ಮ ಪಾಲಿನ 50 ರೂ. ನೀಡಲು ಹಿಂದೇಟು ಹಾಕಿರುವ ಕಾರ್ಖಾನೆಗಳು ಇದರ ವಿರುದ್ಧ ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿದ್ದು, ಸದ್ಯ ಪ್ರಕರಣ ವಿಚಾರಣಾ ಹಂತದಲ್ಲಿದೆ.

ಶಾಸಕ ದಿನೇಶ್ ಗೂಳಿಗೌಡ ಪತ್ರದ ಸಾರಾಂಶ

ರಾಜ್ಯ ಸರ್ಕಾರ ಘೋಷಿಸಿದ ಪ್ರತಿ ಟನ್ ಕಬ್ಬಿಗೆ 100 ರೂ. (ಸರ್ಕಾರದ 50 ರೂ. ಸೇರಿಸಿ) ಪ್ರೋತ್ಸಾಹಧನ ನೀಡಲು ದಕ್ಷಿಣ ಕರ್ನಾಟಕದ 7 ಪ್ರಮುಖ ಖಾಸಗಿ ಸಕ್ಕರೆ ಕಾರ್ಖಾನೆಗಳು ಹಿಂದೇಟು ಹಾಕಿದ್ದವು. ಅಲ್ಲದೆ, ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದವು. ಅಷ್ಟೇ ಅಲ್ಲದೆ, ಸರ್ಕಾರದ ಪಾಲಿನ ಹಣವನ್ನು ರೈತರ ಖಾತೆಗೆ ಹಾಕಲು ಅಗತ್ಯವಿರುವ ರೈತರ ವಿವರಗಳನ್ನು ನೀಡದೆ ಜಿಲ್ಲಾಡಳಿತದೊಂದಿಗೆ ಅಸಹಕಾರ ತೋರುತ್ತಿದ್ದವು. ಈ ಹಠಮಾರಿ ಧೋರಣೆಯಿಂದಾಗಿ ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಪತ್ರ ಬರೆದಿದ್ದ ಶಾಸಕ ದಿನೇಶ್ ಗೂಳಿಗೌಡ, ರೈತರಿಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದರು.

ಲೈಸೆನ್ಸ್ ರದ್ದುಗೊಳಿಸಲೂ ಮನವಿ

ರೈತರಿಗೆ ಬಾಕಿ ನೀಡದ ಹಾಗೂ ಸರ್ಕಾರದ ನಿಯಮ ಪಾಲಿಸದ ಈ 7 ಕಾರ್ಖಾನೆಗಳ ‘ಕ್ರಶಿಂಗ್ ಲೈಸೆನ್ಸ್’ ಅನ್ನು ಮುಂಬರುವ ಹಂಗಾಮಿಗೆ ನವೀಕರಿಸಬಾರದು. ಸರ್ಕಾರವು ಹೈಕೋರ್ಟ್‌ನಲ್ಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಅಡ್ವೊಕೇಟ್ ಜನರಲ್ ಅವರ ಮೂಲಕ ಬಲವಾದ ವಾದ ಮಂಡಿಸಬೇಕು. ಮುಂಗಾರು ಹಂಗಾಮು ಆರಂಭವಾಗುವ ಮುನ್ನವೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈ ಕಾರ್ಖಾನೆ ಮಾಲೀಕರ ತುರ್ತು ಸಭೆ ಕರೆದು, ರೈತರ ಹಣ ಬಿಡುಗಡೆ ಮಾಡದಿದ್ದರೆ ಕಾರ್ಖಾನೆಗಳನ್ನು ಸರ್ಕಾರದ ವಶಕ್ಕೆ ಪಡೆಯುವ ಬಗ್ಗೆ ಎಚ್ಚರಿಕೆ ನೀಡಬೇಕು ಎಂದು ಸಿಎಂಗೆ ಮನವಿ ಮಾಡಿದ್ದರು.

ರೈತರಿಗೆ 50 ರೂ. ನೀಡದ ದಕ್ಷಿಣ ಕರ್ನಾಟಕದ 7 ಸಕ್ಕರೆ ಕಾರ್ಖಾನೆಗಳು

1. ಬನ್ನಾರಿ ಅಮ್ಮನ್ ಶುಗರ್ಸ್, ಕುಂತೂರು, ಕೊಳ್ಳೇಗಾಲ ತಾಲೂಕು, ಚಾಮರಾಜನಗರ ಜಿಲ್ಲೆ
2. ಚಾಮುಂಡೇಶ್ವರಿ ಶುಗರ್ಸ್ ಲಿ. ಚನ್ನರಾಯಪಟ್ಟಣ, ಹಾಸನ ಜಿಲ್ಲೆ
3. ಕೋರಮಂಡಲ ಶುಗರ್ಸ್, ಕೆ.ಆರ್.ಪೇಟೆ ತಾಲೂಕು, ಮಂಡ್ಯ ಜಿಲ್ಲೆ
4. ಚಾಮುಂಡೇಶ್ವರಿ ಶುಗರ್ಸ್ ಲಿ. ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ
5. ಎಂಆರ್ ಎನ್ ಕೇನ್ ಪವರ್ ಅಂಡ್ ಬೈಯೋರಿಪೈನರಿಸ್ ಪ್ರೈ.ಲಿ. ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ
6. ಎನ್ ಎಸ್ ಎಲ್ ಶುಗರ್ಸ್ ಲಿ. ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ
7. ಬನ್ನಾರಿ ಅಮ್ಮನ್ ಶುಗರ್ಸ್ ಲಿ. ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments