ರಾಷ್ಟ್ರದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಸಣ್ಣತನದಿಂದ ಮಾತನಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹರಿಹಾಯ್ದರು.
ಬೆಂಗಳೂರಿನಲ್ಲಿ ಮಂಗಳವಾರ ತಮ್ಮನ್ನು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು; ಇತರ ಅನೇಕ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದ ಆರ್ಥಿಕ ಪರಿಸ್ಥಿತಿ ಬಹಳ ಉತ್ತಮವಾಗಿದೆ. ಅಂದಮಾತ್ರಕ್ಕೆ ನಾವು ಕೂಡ ನಮ್ಮ ಹಣಕಾಸು ವ್ಯವಸ್ಥೆಯನ್ನು ಹಾಳು ಮಾಡಿಕೊಳ್ಳಬಾರದಲ್ಲವೇ? ಎಂದರು.
ರಾಷ್ಟ್ರದ ಜನತೆಯ ಹಿತದೃಷ್ಟಿಯಿಂದ ಪ್ರಧಾನಿಗಳು ಕಾಳಜಿ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಹಣಕಾಸು ವ್ಯವಸ್ಥೆಗೆ ಹಿನ್ನಡೆ ಉಂಟಾಗಬಾರದು ಎಂದು ಅವರು ರಾಷ್ಟ್ರದ ಜನತೆಗೆ ಕೆಲವು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಇದರಲ್ಲಿ ತಪ್ಪು ಹುಡುಕುವಂಥದ್ದು ಏನಿದೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಮಧ್ಯಪ್ರಾಚ್ಯದಲ್ಲಿನ ನಡೆಯುತ್ತಿರುವ ಬೆಳವಣಿಗೆಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಸುಮಾರು ಒಂಬತ್ತು ವಿಷಯಗಳ ಬಗ್ಗೆ ಪ್ರಧಾನಿಗಳು ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಅನಗತ್ಯವಾಗಿ ಗೊಂದಲ ಉಂಟು ಮಾಡುತ್ತಿದ್ದಾರೆ. ಅವರೇ ಇವತ್ತು ಅಧಿಕಾರದಲ್ಲಿದಿದ್ದರೆ ಏನು ಮಾಡುತ್ತಿದ್ದರು? ಹಿಂದೆ ಅನೇಕ ಬಾರಿ ಅಧಿಕಾರದಲ್ಲಿದ್ದಾಗ ಕೈ ಚೆಲ್ಲಿ ಕೂತಿದ್ದರು. ತೈಲ ಬಿಕ್ಕಟ್ಟು ಎಲ್ಲ ದೇಶಗಳನ್ನು ಬಾಧಿಸುತ್ತಿದೆ. ಭಾರತದಲ್ಲಿ ತೈಲ ಉತ್ಪಾದನೆ ಆಗುತ್ತಿಲ್ಲ, ಬದಲಿಗೆ ಬೇರೆ ದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಗೊತ್ತಿಲ್ಲವೆ? ರಾಷ್ಟ್ರದ ಹಿತ ದೃಷ್ಟಿಯಿಂದ ಪ್ರಧಾನಿಗಳು ಮಾತ್ರ ನೀಡಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ನಾಯಕರು ಸಣ್ಣತನದಿಂದ ಮಾತನಾಡುವುದು ಸರಿಯಲ್ಲ ಎಂದು ಸಚಿವ ಕುಮಾರಸ್ವಾಮಿ ಅವರು ಕಿಡಿಕಾರಿದರು.
ರಾಷ್ಟ್ರವು ಹಿಂದೆ ಇಂತಹ ಸಂಕಷ್ಟ ಸಂದರ್ಭಗಳಿಗೆ ಸಿಕ್ಕಿದಾಗೆಲ್ಲ ಕಾಂಗ್ರೆಸ್ ಪಕ್ಷ ಹೇಗೆಲ್ಲಾ ವರ್ತಸಿದೆ ಎಂಬುದನ್ನು ನೋಡಿದ್ದೇವೆ. ನಾನು ರಾಜ್ಯದ ಮುಖ್ಯಮಂತ್ರಿಗಳಿಗೆ ಹೇಳುವುದು ಇಷ್ಟೇ, ನೀವು ಪದೇ ಪದೇ ರಾಜ್ಯದ ಜಿಡಿಪಿಯನ್ನು ಕೇಂದ್ರದ ಜಿಡಿಪಿಗೆ ಹೋಲಿಕೆ ಮಾಡುವುದನ್ನು ಬಿಟ್ಟು ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ. ತಲಾ ಆದಾಯದಲ್ಲಿ ರಾಜ್ಯವು ಮುಂದೆ ಇದೆ ಎಂದು ಮುಖ್ಯಮಂತ್ರಿಗಳು ಹೇಳಿಕೊಳ್ಳುತ್ತಾರೆ. ಆ ಮಾನದಂಡದಲ್ಲಿ ನಾವು ರಾಜ್ಯದ ಅಭಿವೃದ್ಧಿಯನ್ನು ಅಳೆಯಲು ಆಗುವುದಿಲ್ಲ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ನೋಡಿದರೆ ಜನ ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ಅನ್ನೋದು ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವರು ಕಟುವಾಗಿ ಟೀಕಿಸಿದರು.
ಇವರಿಗೆ ಜಿಬಿಎ ಚುನಾವಣೆ ಮಾಡುವ ಯೋಗ್ಯತೆ ಇಲ್ಲ
ಮುಖ್ಯಮಂತ್ರಿ ಕುರ್ಚಿ ಕಿತ್ತಾಟದಲ್ಲಿ ಮೂರು ವರ್ಷ ಹಾಳು ಮಾಡಿಕೊಂಡಿದ್ದಾರೆ. ಆ ತೆರಿಗೆ ಈ ತೆರಿಗೆ ಅಂತ ಹಾಕಿ ಬೆಂಕಳೂರು ಜನರನ್ನು ಕಿತ್ತು ತಿನ್ನುತ್ತಿದ್ದಾರೆ. ಈಗ ವೋಟು ಕೇಳಲು ಹೋದರೆ ಬೆಂಗಳೂರು ಜನ ಏನು ಮಾಡುತ್ತಾರೆ ಎನ್ನುವುದು ಇವರಿಗೆ ಚೆನ್ನಾಗಿ ಗೊತ್ತಿದೆ, ಹೀಗಾಗಿ ಈವರು ಚುನಾವಣೆ ನಡೆಸಲು ಹೆದರುತ್ತಿದ್ದಾರೆ ಎಂದು ಕೇಂದ್ರ ಸಚಿವರು ದೂರಿದರು.
ಜಿಬಿಎ ಚುನಾವಣೆ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನಡುವೆ ಆಂತರಿಕ ಪೈಟ್ ನಡೆಯುತ್ತಿದೆ. ಜಿಬಿಎ ಚುನಾವಣೆ ನಡೆದರೆ ನನ್ನ ಸ್ಥಾನ ಭದ್ರ ಆಗುತ್ತದೆ ಎಂದು ಸಿದ್ದರಾಮಯ್ಯ, ಚುನಾವಣೆ ನಡೆಯದೆ ಇದ್ದರೆ ಸಿಎಂ ಆಗಬಹುದು ಎಂದು ಡಿಕೆಶಿ ಇದ್ದಾರೆ. ಒಬ್ಬರಿಗೆ ತಮ್ಮ ಸ್ಥಾನ ಉಳಿಯಬೇಕು, ಮತ್ತೊಬ್ಬರಿಗೆ ಸಿಎಂ ಸ್ಥಾನ ಸಿಗಬೇಕು, ಹಾಗಾಗಿ ಜಿಬಿಎ ವಿಚಾರದಲ್ಲಿ ಹಗ್ಗಜಗ್ಗಾಟ ನಡೆದಿದೆ ಎಂದು ಅವರು ಆರೋಪಿಸಿದರು.
ನೀಟ್ ಆಮೇಲೆ, ಮೊದಲು ಕೆಪಿಎಸ್ಸಿ ಸರಿಪಡಿಸಿ ಎಂದ ಹೆಚ್.ಡಿ. ಕುಮಾರಸ್ವಾಮಿ
ನೀಟ್ ಪರೀಕ್ಷೆ ಬಗ್ಗೆ ಮಾತನಾಡುವ ಯೋಗ್ಯತೆ ರಾಜ್ಯ ಸರಕಾರಕ್ಕಿಲ್ಲ ಎಂದಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ರಾಜ್ಯದಲ್ಲಿ ಅನೇಕ ಸಲ ಪ್ರಶ್ನೆಪತ್ರಿಕೆಗಳು ಲೀಕ್ ಆಗಿದ್ದವು. ಪರೀಕ್ಷೆಗಳನ್ನು ಮುಂದಕ್ಕೆ ಹಾಕಿದ್ದರ? ಎಂದು ಅವರು ಪ್ರಶ್ನಿಸಿದ್ದಾರೆ.
ನಮ್ಮ ರಾಜ್ಯದಲ್ಲಿ ಎಷ್ಟು ಬಾರಿ ಪರೀಕ್ಷೆ ಮುಂದೆ ಹಾಕಿದ್ದರು? ಕಾಂಗ್ರೆಸ್ ಕಾಲದಲ್ಲಿ ಎಷ್ಟು ಅನಾಹುತ ಆಗಿಲ್ಲ? KPSC ಸಂಸ್ಥೆಯನ್ನು ಸರಿಪಡಿಸಲು ಆಗಲಿಲ್ಲ. ಅದರ ಬಗ್ಗೆ ಜನ ಯಾವ ರೀತಿ ಮಾತನಾಡುತ್ತಿದ್ದಾರೆ? ಆ ಸಂಸ್ಥೆ ಹಾಳಾಗೋಕೆ ಪ್ರಾರಂಭ ಆಗಿದ್ದು ಕಾಂಗ್ರೆಸ್ ನಿಂದಲೇ. ಮುಖ್ಯಮಂತ್ರಿಗಳು ಎಲ್ಲಾ ತೊಳೆಯುತ್ತೇವೆ ಅಂದರು, ಯಾವ ರೀತಿ ತೊಳೆದರು ಎನ್ನುವುದನ್ನು ನಾವೆಲ್ಲಾ ನೋಡಿದಿದೇವೆ. ರೀಡೂ ಮಾಡಿಕೊಟ್ಟ ವ್ಯಕ್ತಿಯನ್ನೇ ತಂದು KPSC ಅಧ್ಯಕ್ಷ ಮಾಡಿ ಕೂರಿದರು. ಪ್ರತಿ ಹುದ್ದೆಗೂ ಇಂತಿಷ್ಟು ಎಂದು ದುಡ್ಡು ನಿಗದಿ ಮಾಡಿ ಕೊಳ್ಳೆ ಹೊಡದರು. ಬೀದಿ ಬೀದಿಯಲ್ಲಿ ಪೋಸ್ಟ್ ಗಳನ್ನು ಹರಾಜು ಹಾಕಲಾಯಿತು. ಅಂತಹ ವಾತಾಚವರಣ ಸೃಷ್ಟಿಯಾಗಿದ್ದು ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಎಂದು ಕೇಂದ್ರ ಸಚಿವರು ಹರಿಹಾಯ್ದರು.
ಎಲ್ಲೋ ರಾಜಸ್ತಾದಲ್ಲಿ ಪೇಪರ್ ಲೀಕ್ ಆಗಿದೆ ಎಂದು ಹೇಳಲಾಗುತ್ತಿದೆ. ಯಾರೋ ಮಾಡಿದ ತಪ್ಪಿಗೆ ಸರ್ಕಾರದ ಮೇಲೆ ತಪ್ಪು ಹೊರೆಸಲು ಆಗೊದಿಲ್ಲ. ಈ ಕೇಂದ್ರ ಸರ್ಕಾರ ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ತಪ್ಪಿತಸ್ಥರು ತಪ್ಪಿಸಿಕೊಳ್ಳಲು ಆಗುವುದಿಲ್ಲ. ನಮ್ಮ ರಾಜ್ಯದಲ್ಲಿ ಅನೇಕ ಬಾರಿ ಇಂತಹ ಸಂದರ್ಭ ಕಾಂಗ್ರೆಸ್ ನವರ ಕಾಲದಲ್ಲೂ ಅಗಿದೆ. ಕಾಂಗ್ರೆಸ್ ನವರಿಗೆ ಯಾವ ನೈತಿಕತೆ ಇದೆ ಬಗ್ಗೆ ಚರ್ಚೆ ಮಾಡುವುದಕ್ಕೆ ಎಂದು ಅವರು ಪ್ರಶ್ನಿಸಿದರು.


