– ತಮಗೆ ಬಸವಶ್ರೀ ಪ್ರಶಸ್ತಿ ಘೋಷಿಸಿದ ಬಸವೇದಿಕೆಗೆ ಕೃತಜ್ಞತೆ ಸಲ್ಲಿಸಿ ಪತ್ರ
ಇಂದು ಎಲ್ಲ ಕ್ಷೇತ್ರಗಳಲ್ಲೂ ಅಧಃಪತನವನ್ನು ಕಾಣುತ್ತಿದ್ದೇವೆ. ವ್ಯವಸ್ಥೆಯ ಕೆಡಿಕಿನ ಬಗ್ಗೆ ವಿವೇಕಶಾಲಿಗಳು ಸಿನಿಕರಾಗುತ್ತಿದ್ದಾರೆ. ಜನಪರ ಚಳುವಳಿಗಳು ಕ್ಷೀಣವಾಗುತ್ತಿವೆ. ಹಾಗಾಗಿ ಇಂದು ನಮಗೆ ಅಲ್ಲಮನ ತಾತ್ವಿಕತೆ, ಬಸವಣ್ಣನ ಕ್ರೀಯಾಶೀಲತೆ, ಅಂಬಿಗರ ಚೌಡಯ್ಯನ ಆಕ್ರೋಶ ಬೇಕಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪ್ರತಿಪಾದಿಸಿದ್ದಾರೆ.
ಬಸವ ವೇದಿಕೆ ವತಿಯಿಂದ ತಮಗೆ ‘ಬಸವಶ್ರೀ’ ಪ್ರಶಸ್ತಿ ಘೋಷಣೆ ಮಾಡಿರುವುದಕ್ಕೆ ವೇದಿಕೆಗೆ ಪತ್ರ ಬರೆದು ಧನ್ಯವಾದ ತಿಳಿಸಿರುವ ಅವರು, ಸದ್ಯದ ಸಂದರ್ಭದಲ್ಲಿ ವಚನಕಾರರ ಮಹತ್ವ ಹಾಗೂ ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದ್ದಾರೆ.
ಶ್ರೀಮಂತ ಬಡವ, ಹೆಣ್ಣು ಗಂಡು, ಮೇಲು ಕೀಳು, ಉಚ್ಚ ನೀಚ ತಾರತಮ್ಯಗಳನ್ನು ತೊಲಗಿಸುವ ಒಂದು ದಿವ್ಯಮಂತ್ರವಾಗಿ ಬಸವಣ್ಣನವರು ಸಾರಿದ್ದು ಏಕದೇವೋಪಾಸನೆ ಮತ್ತು ಕಾಯಕ ಮಹತ್ವ. ಅವರು ಜನರಿಂದ, ಜನರಿಗಾಗಿ ಜನರ ʻಮಹಾಮನೆʼ ಯನ್ನು ಕಟ್ಟಿ ಬಿಜ್ಜಳನ ಅರಮನೆಯನ್ನು ತೃಣವಾಗಿ ಭಾವಿಸಿದವರು. ಹಾಗೆ ನಡೆದ ಕಲ್ಯಾಣ ಕ್ರಾಂತಿಯಲ್ಲಿ ಸಾವಿರಾರು ಶರಣ ಶರಣೆಯರನ್ನು ತಮ್ಮ ತಮ್ಮ ಅನುಭವ, ಅನುಭಾವದಿಂದ ರಚಿಸಿದ ವಚನಗಳು ಕನ್ನಡದ ಸಾಹಿತ್ಯ ಲೋಕವನ್ನು ವಿಸ್ತಿರಿಸಿ ಸಂಸ್ಕೃತ ಮತ್ತು ಸಂಸ್ಕಾರವನ್ನು ಪ್ರಚುರಗೊಳಿಸಿದ ವಿಶಿಷ್ಟ ಸಾಹಿತ್ಯವಾಗಿದೆ ಎಂದು ಮಾಜಿ ಪ್ರಧಾನಿಗಳು ಬಣ್ಣಿಸಿದ್ದಾರೆ.
ಬಸವ ವೇದಿಕೆಯ ಮಿತ್ರರು ಬಸವ ಜಯಂತಿ ಅಂಗವಾಗಿ ಏರ್ಪಡಿಸಿರುವ ವಿಶಿಷ್ಟ ಕಾರ್ಯಕ್ರಮ ನಿಜಕ್ಕೂ ಅಭಿನಂದನೀಯ. ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿರುವ ಪೂಜ್ಯ ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಅರ್ಪಿಸುತ್ತೇನೆ. ಬಸವ ವೇದಿಕೆ ಗೆಳೆಯರು ನನ್ನ ಮೇಲಿನ ಅಭಿಮಾನದಿಂದಲೋ ಅಥವಾ ನನ್ನ ಹಿರಿತನದ ವಯಸ್ಸಿನ ಕಾರಣದಿಂದಲೋ ನನಗೆ ‘ಬಸವಶ್ರೀ’ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಿ ಆಯೋಜಿಸಿದ್ದಾರೆ ಎಂದು ಮಾಜಿ ಪ್ರಧಾನಿಗಳು ಹೇಳಿದ್ದಾರೆ.
ಖಂಡಿತವಾಗಿ ಈ ಪ್ರಶಸ್ತಿಗೆ ನಾನು ಅರ್ಹನಲ್ಲ. ಹಾಗಾಗಿ ಅತ್ಯಂತ ಮುಜುಗರ ಮತ್ತು ಸಂಕೋಚದಿಂದ ನಿಮ್ಮ ಅಭಿಮಾನಕ್ಕೆ ತಲೆ ಬಾಗುವವನಿದ್ದೇನೆ ಎಂದಿರುವ ಮಾಜಿ ಪ್ರಧಾನಿಗಳು, ಬಸವೇಶ್ವರರು 12ನೇ ಶತಮಾನದಲ್ಲಿ ನಡೆಸಿದ್ದು ಒಂದು ದೊಡ್ಡ ಜನಾಂದೋಲನ. ಅದೊಂದು ಅದ್ಭುತ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕತೆಯ ಕ್ರಾಂತಿ, ಕಾಯಕ ಮತ್ತು ದಾಸೋಹ ಎಂಬ ಪರಿಕಲ್ಪನೆಗಳು ಇಂದಿಗೂ ಪ್ರಸ್ತುತವಾಗಿರುವ ತತ್ವಾದರ್ಶಗಳು ಆಗಿವೆ ಎಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗುರುರಾಜ ಕರ್ಜಗಿಯವರೂ ಸೇರಿದಂತೆ ಅನೇಕ ಶರಣರ ಸೂಳ್ನುಡಿಗಳನ್ನು ಕೇಳಲಾದರೂ ನಾನು ಬರಬೇಕೆಂದಿದ್ದೆ. ಆದರೆ ನನ್ನ ಆರೋಗ್ಯ ವ್ಯತ್ಯಯದಿಂದಾಗಿ ಬರಲಾಗುತ್ತಿಲ್ಲ. ಆದುದರಿಂದ ಪೂಜ್ಯ ಸ್ವಾಮೀಜಿಯವರಲ್ಲಿ, ಸಂಘಟಕರಲ್ಲಿ, ಗೌರವಾನ್ವಿತ ಅತಿಥಿವರೇರ್ಯಾರಲ್ಲಿ, ಶರಣ ಸಮೂಹದಲ್ಲಿ ಕ್ಷಮೆ ಕೋರುತ್ತೇನೆ. ಕಾರ್ಯಕ್ರಮ ಯಶಸ್ವಿಯಾಗಿ ಇದರ ಸಂದೇಶ ಎಲ್ಲೆಡೆ ಪ್ರಚುರಗೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಪ್ರಧಾನಿಗಳು ತಿಳಿಸಿದ್ದಾರೆ.


