ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಭಾರಿ ಪ್ರಮಾಣದ ಸುಟ್ಟ ನಗದು ಪತ್ತೆಯಾದ ವಿವಾದದ ನಂತರ, ಇಂದು (ಏಪ್ರಿಲ್ 10) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ದೆಹಲಿ ಹೈಕೋರ್ಟ್ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾಗ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾದ ಆರೋಪ ಕೇಳಿ ಬಂದಿತ್ತು. ಆ ಬಳಿಕ ಅವರನ್ನು ಕಳೆದ ವರ್ಷದ ಏಪ್ರಿಲ್ನಲ್ಲಿ ದೆಹಲಿ ಹೈಕೋರ್ಟ್ನಿಂದ ಅಲಹಾಬಾದ್ಗೆ ವರ್ಗಾಯಿಸಲಾಗಿತ್ತು.
ತನಿಖೆಯ ವೇಳೆ, ತಮ್ಮ ವಿರುದ್ಧದ ಆರೋಪಗಳನ್ನು ನ್ಯಾಯಮೂರ್ತಿ ವರ್ಮಾ ತಳ್ಳಿಹಾಕಿದ್ದು, ಹಣವು ತಮ್ಮದಾಗಿಲ್ಲ ಮತ್ತು ಘಟನೆ ನಡೆದ ವೇಳೆ ತಾವು ಸ್ಥಳದಲ್ಲಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಪ್ರಕರಣದ ಗಂಭೀರತೆಯನ್ನು ಗಮನಿಸಿ, ಲೋಕಸಭಾ ಸ್ಪೀಕರ್ ಮಹಾಭಿಯೋಗ ಪ್ರಕ್ರಿಯೆ ಆರಂಭಿಸುವ ಸಲುವಾಗಿ ತನಿಖಾ ಸಮಿತಿಯನ್ನು ರಚಿಸಿದ್ದರು. ಇದರ ಮಧ್ಯೆ ತಮ್ಮ ವಿರುದ್ಧದ ತನಿಖಾ ಕ್ರಮವನ್ನು ಪ್ರಶ್ನಿಸಿ ನ್ಯಾಯಮೂರ್ತಿ ವರ್ಮಾ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಸುಪ್ರೀಂ ಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿ ತನಿಖೆಗೆ ತಡೆ ನೀಡಲು ನಿರಾಕರಿಸಿತ್ತು.
ಪ್ರಸ್ತುತ, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ತಮ್ಮ ವಿರುದ್ಧ ಕೇಳಿಬಂದಿರುವ ಈ ನಗದು ಪತ್ತೆ ಆರೋಪಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗದ ಆಂತರಿಕ ವಿಚಾರಣೆಯನ್ನು (ಇನ್-ಹೌಸ್ ಎನ್ಕ್ವೈರಿ) ಎದುರಿಸುತ್ತಿದ್ದಾರೆ. ಈ ತನಿಖೆಯು ಪ್ರಗತಿಯಲ್ಲಿರುವಾಗಲೇ ಇದೀಗ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರ ಕೈಗೊಂಡಿದ್ದಾರೆ.


