- ಯುದ್ಧದಿಂದ ದೇಶದಲ್ಲಿ ಸಾಕಷ್ಟು ಸಮಸ್ಯೆ; ಪ್ರಧಾನಿಯವರು ಮೌನ ಮುರಿದಿಲ್ಲ
- ಸಿಎಂ ಹುದ್ದೆ ಬಗ್ಗೆ ಹೇಳಿಕೆ; ಪರಮೇಶ್ವರ್ ಅವರನ್ನೇ ಕೇಳಬೇಕು: ಡಿ ಕೆ ಸುರೇಶ್
ಲೋಕಸಭಾ, ವಿಧಾನಸಭಾ ಕ್ಷೇತ್ರಗಳ ಮರು ವಿಂಗಣೆಯಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕ್ಷೇತ್ರಗಳು ಕಡಿಮೆಯಾಗುವುದರ ಜೊತೆಗೆ ಆರ್ಥಿಕ ಮುಗ್ಗಟನ್ನು ಎದುರಿಸಬೇಕಾಗುತ್ತದೆ. ನಮ್ಮ ತೆರಿಗೆಗಳು ಉತ್ತರದ ರಾಜ್ಯಗಳಿಗೆ ಹಂಚಿಕೆಯಾಗಲಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಹೇಳಿದರು.
ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಮಂಗಳವಾರ ಪ್ರತಿಕ್ರಿಯಿಸಿ, “ನಾನು ಈ ಬಗ್ಗೆ ಹಿಂದೆಯೇ ಹೇಳಿದ್ದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ. ದಕ್ಷಿಣದ ರಾಜ್ಯಗಳು ಎಚ್ಚೆತ್ತುಕೊಳ್ಳಬೇಕು. ಒಂದಲ್ಲ ಒಂದು ದಿನ ಈ ಕೂಗು ಎದ್ದೇಳಲಿದೆ ಎಂದಿದ್ದೇ. ಇಲ್ಲದಿದ್ದರೇ ಜನರು ಪರ್ಯಾಯವಾಗ ಮಾರ್ಗಗಳನ್ನು ಆಲೋಚನೆ ಮಾಡುತ್ತಾರೆ ಎಂದು ಹೇಳಿದ್ದೆ. ಎಷ್ಟು ಸೀಟು ಹೋಗಲಿದೆ ಬರಲಿದೆ ಎನ್ನುವುದು ಮುಖ್ಯವಲ್ಲ” ಎಂದರು.
“ಇದೇ 16ನೇ ತಾರೀಕಿನಿಂದ ವಿಶೇಷ ಲೋಕಸಭಾ ಅಧಿವೇಶನ ಕರೆಯಲಾಗಿದೆ. ಸರ್ಕಾರ ಯಾವ ರೀತಿಯಲ್ಲಿ ಬಿಲ್ ಮಂಡಿಸಲಿದೆ ಎಂದು ನೋಡಬೇಕಿದೆ. ಒಟ್ಟಾರೆ ದಕ್ಷಿಣದ ಹಣವನ್ನು ಉತ್ತರದ ರಾಜ್ಯಗಳಿಗೆ ತಗೆದುಕೊಂಡು ಹೋಗುವಂತಹ ಹುನ್ನಾರ ಇದಾಗಿದೆ” ಎಂದು ಹೇಳಿದರು.
“2011 ರ ಜನಗಣತಿಯ ಅನ್ವಯ ನಾವು ವಿಂಗಡಣೆ ಮಾಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಇದು ಇನ್ನು ಮಾರಕ. 2011 ರ ಜನಗಣತಿ ಪ್ರಕಾರ ಬೆಂಗಳೂರಿನ ಜನಸಂಖ್ಯೆ 60-70 ಲಕ್ಷ. ಈಗ 1.40 ಕೋಟಿ ಜನಸಂಖ್ಯೆಯಿದೆ. ಕರ್ನಾಟಕದ ಜನಸಂಖ್ಯೆ 5 ಕೋಟಿಯಿತ್ತು ಈಗ ಏಳು ಕೋಟಿಗೂ ಮೀರಿ ಜನಸಂಖ್ಯೆ ಬೆಳೆಯುತ್ತಿದೆ. ಇದರ ಜೊತೆಗೆ ಆರ್ಥಿಕ ಸವಾಲು ಸೇರಿದಂತೆ ಅನೇಕ ಸವಾಲುಗಳು ಎದುರಾಗುತ್ತವೆ. ಎಲ್ಲಾ ಪಕ್ಷಗಳು ಇದರ ಬಗ್ಗೆ ಚಿಂತನೆ ಮಾಡಬೇಕು” ಎಂದು ತಿಳಿಸಿದರು.
ಯುದ್ಧದಿಂದ ದೇಶದಲ್ಲಿ ಸಾಕಷ್ಟು ಸಮಸ್ಯೆ; ಪ್ರಧಾನಿಯವರು ಮೌನ ಮುರಿದಿಲ್ಲ
“ಯುದ್ಧದಿಂದ ಸಾಕಷ್ಟು ಸಮಸ್ಯೆಗಳನ್ನು ನಮ್ಮ ದೇಶ ಎದುರಿಸುತ್ತಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ತನ್ನ ಮೌನವನ್ನು ಮುರಿದಿಲ್ಲ. ಭಾರತದ ನಾಗರಿಕರಿಗೆ ಪ್ರಧಾನಿಯವರು ಬೇರೆ ಸಂದರ್ಭದಲ್ಲಿ ಸಂದೇಶ ನೀಡುತ್ತಾರೆ. ಆದರೆ ಇವತ್ತಿನ ತನಕ ಪ್ರಧಾನಿ ಸೇರಿದಂತೆ ಯಾವ ಕೇಂದ್ರ ಸಚಿವರು ಸಹ ದೇಶದ ಜನರು ಪರಿಸ್ಥಿತಿ ಹೇಗೆ ಎದುರಿಸಬೇಕು ಎಂದು ಸಂದೇಶ ನೀಡಿಲ್ಲ. ಭಾರತದ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ನೇರ ಹೊಣೆಗಾರಿಕೆ ಪ್ರಧಾನಿಯವರೇ ಹೊರಬೇಕು. ಯಾವ ವಿಚಾರದಲ್ಲಿ ಸಮಸ್ಯೆಯಿದೆ. ಮುಂದಿನ ಆರು ತಿಂಗಳು ಹೇಗೆ ಇವುಗಳನ್ನು ಎದುರಿಸಬೇಕು. ಇದಕ್ಕೆ ಯಾವ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಸಂದೇಶ ನೀಡಬೇಕು” ಎಂದರು.
ಪರಮೇಶ್ವರ್ ಅವರನ್ನೇ ಕೇಳಬೇಕು
ಮುಂದಿನ ಎರಡು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಅವರನ್ನೇ ಕೇಳಬೇಕು. ಗೃಹಸಚಿವರು ಅಧಿಕೃತವಾಗಿ ಹೇಳಿದ್ದಾರೆ. ಅವರು ಹೇಗೆ ಹೇಳುತ್ತಾರೋ ಹಾಗೆ ಕೇಳಬೇಕು” ಎಂದು ಹೇಳಿದರು.
ಉಪಚುನಾವಣೆ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು
ಉಪಚುನಾವಣೆ ಬಗ್ಗೆ ಕೇಳಿದಾಗ, “ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ಗ್ಯಾರಂಟಿಗಳನ್ನು ನೀಡಿದ್ದೇವೆ. ಆ ಭಾಗದ ಅಭಿವೃದ್ದಿ ವಿಚಾರದಲ್ಲಿ ನಮ್ಮ ಸರ್ಕಾರ ಸಾಕಷ್ಟು ಸ್ಪಂದಿಸಿದೆ. ಹೀಗಾಗಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ” ಎಂದರು.
ಬಾಗಲಕೋಟೆಯಲ್ಲಿ ಸೋಲಾಗಲಿದೆ ಎನ್ನುವ ಬಗ್ಗೆ ಕೇಳಿದಾಗ, “ಇದೆಲ್ಲಾ ಊಹಾಪೋಹ. ನಾವು ಅತ್ಯಧಿಕ ಮತಗಳಿಂದ ಗೆಲ್ಲಲಿದ್ದೇವೆ” ಎಂದರು.


