Homeಕರ್ನಾಟಕಕರ್ನಾಟಕದ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್‌ ಮಾದರಿ ಅಧ್ಯಯನ: ಕ್ರೆಡಲ್‌ಗೆ ಪಂಜಾಬ್ ನಿಯೋಗ

ಕರ್ನಾಟಕದ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್‌ ಮಾದರಿ ಅಧ್ಯಯನ: ಕ್ರೆಡಲ್‌ಗೆ ಪಂಜಾಬ್ ನಿಯೋಗ

ಕರ್ನಾಟಕದಲ್ಲಿ ಅನುಷ್ಠಾನಗೊಳಿಸುತ್ತಿರುವ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (BESS) ಯೋಜನೆಗಳ ಮಾದರಿ ಹಾಗೂ ಕಾರ್ಯವೈಖರಿ ಕುರಿತು ಅಧ್ಯಯನ ನಡೆಸಲು ಪಂಜಾಬ್ ರಾಜ್ಯದ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗುರ್‌ಕೀರತ್ ಕಿರ್ಪಾಲ್ ಸಿಂಗ್ ನೇತೃತ್ವದ ನಿಯೋಗವು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕ್ರೆಡಲ್) ಕಚೇರಿಗೆ ಭೇಟಿ ನೀಡಿತು.

ಈ ಸಂದರ್ಭದಲ್ಲಿ ಕ್ರೆಡಲ್‌ನ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಪ್ರಭು ಜಿ.ಆರ್.ಜೆ. ಅವರು ಪಂಜಾಬ್ ನಿಯೋಗಕ್ಕೆ ಬ್ಯಾಟರಿ ಇಂಧನ ಸಂಗ್ರಹ ವ್ಯವಸ್ಥೆಯ ವಿವಿಧ ಮಾದರಿಗಳು, ಅನುಷ್ಠಾನ ವಿಧಾನ ಹಾಗೂ ತಾಂತ್ರಿಕ ಮತ್ತು ವಾಣಿಜ್ಯ ಕಾರ್ಯಸಾಧ್ಯತೆ ಕುರಿತು ಮಾಹಿತಿ ನೀಡಿದರು.

ಬ್ಯಾಟರಿ ಎನರ್ಜಿ ಸ್ಟೋರೇಜ್, ಸೌರಶಕ್ತಿ-ಜೊತೆಗೆ ಇಂಧನ ಸಂಗ್ರಹ ಮತ್ತು ಹೈಬ್ರಿಡ್ ಮಾದರಿಗಳ ಕಾರ್ಯನಿರ್ವಹಣೆ, ಸರಾಸರಿ ವಿದ್ಯುತ್ ಖರೀದಿ ವೆಚ್ಚ, ನಿರ್ವಹಣಾ ಸಾಮರ್ಥ್ಯ ಹಾಗೂ ಗರಿಷ್ಠ ವಿದ್ಯುತ್ ಬೇಡಿಕೆಯ ಅವಧಿಯಲ್ಲಿ ಇವುಗಳ ಬಳಕೆಯ ಸಾಧ್ಯತೆಗಳ ಕುರಿತು ನಿಯೋಗವು ಮಾಹಿತಿ ಪಡೆದುಕೊಂಡಿತು.

ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಕೈಗೊಂಡಿರುವ ನವೀಕರಿಸಬಹುದಾದ ಇಂಧನ ಯೋಜನೆಗಳ ಬಗ್ಗೆಯೂ ವಿವರಿಸಲಾಯಿತು. ವಿದ್ಯುತ್ ಗ್ರಿಡ್‌ನ ಸ್ಥಿರತೆ ಕಾಪಾಡುವ ಮತ್ತು ನವೀಕರಿಸಬಹುದಾದ ಇಂಧನದ ಸಮರ್ಥ ಬಳಕೆಯನ್ನು ಹೆಚ್ಚಿಸುವಲ್ಲಿ ಬ್ಯಾಟರಿ ಸಂಗ್ರಹ ವ್ಯವಸ್ಥೆಯ ಮಹತ್ವವನ್ನು ದಿವ್ಯಾ ಪ್ರಭು ವಿವರಿಸಿದರು.

2027ರ ಸೆಪ್ಟೆಂಬರ್ ವೇಳೆಗೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಯೋಜನೆಗಳ ಅನುಷ್ಠಾನ ಗುರಿ

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ವಿದ್ಯುತ್ ಗ್ರಿಡ್‌ನ ಸ್ಥಿರತೆಯನ್ನು ಬಲಪಡಿಸುವ ಹಾಗೂ ನವೀಕರಿಸಬಹುದಾದ ಇಂಧನದ ಸಮರ್ಥ ಬಳಕೆಗೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಅಳವಡಿಕೆ ಅತ್ಯಗತ್ಯವಾಗಿದೆ. ಕರ್ನಾಟಕ ಸರ್ಕಾರ ಈ ವ್ಯವಸ್ಥೆಯ ಅನುಷ್ಠಾನಕ್ಕೆ ಬದ್ಧವಾಗಿದ್ದು, 2027ರ ಸೆಪ್ಟೆಂಬರ್ ವೇಳೆಗೆ ಬ್ಯಾಟರಿ ಇಂಧನ ಸಂಗ್ರಹ ಯೋಜನೆಗಳನ್ನು ಅನುಷ್ಠಾನಗೊಳಿಸುವ ಗುರಿ ಹೊಂದಿದೆ. ಈ ಯೋಜನೆಗಳ ತಾಂತ್ರಿಕ ಮತ್ತು ವಾಣಿಜ್ಯ ಕಾರ್ಯಸಾಧ್ಯತೆಯ ಮಾಹಿತಿಯನ್ನು ಪಂಜಾಬ್ ರಾಜ್ಯದೊಂದಿಗೆ ಹಂಚಿಕೊಳ್ಳುತ್ತಿರುವುದು ಸಂತಸದ ಸಂಗತಿ. ರಾಜ್ಯಗಳ ನಡುವಿನ ಇಂತಹ ಮಾಹಿತಿ ವಿನಿಮಯವು ದೇಶದ ವಿದ್ಯುತ್ ವಲಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ” ಎಂದರು.

ಪಂಜಾಬ್ ರಾಜ್ಯದ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗುರ್‌ಕೀರತ್ ಕಿರ್ಪಾಲ್ ಸಿಂಗ್ ಮಾತನಾಡಿ, “ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್‌ನ ವಿವಿಧ ಮಾದರಿಗಳು, ಅವುಗಳ ಅನುಷ್ಠಾನ ವೆಚ್ಚ, ಸರಾಸರಿ ವಿದ್ಯುತ್ ವೆಚ್ಚ ಹಾಗೂ ಪಂಜಾಬ್‌ನ ವಿದ್ಯುತ್ ಅಗತ್ಯಗಳಿಗೆ ಸೂಕ್ತವಾದ ಮಾದರಿಯನ್ನು ಗುರುತಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ. ನವೀಕರಿಸಬಹುದಾದ ಇಂಧನ ಉತ್ಪಾದನೆಯೊಂದಿಗೆ ಇಂಧನ ಸಂಗ್ರಹ ವ್ಯವಸ್ಥೆಯನ್ನು ಸಂಯೋಜಿಸುವ ಪ್ರಾಯೋಗಿಕ ಸಾಧ್ಯತೆಗಳ ಕುರಿತು ತಿಳಿದುಕೊಳ್ಳಲು ನಿಯೋಗ ಆಸಕ್ತಿ ಹೊಂದಿದೆ” ಎಂದು ತಿಳಿಸಿದರು.

ಈ ಅಧ್ಯಯನ ಪ್ರವಾಸದಲ್ಲಿ ಪಂಜಾಬ್ ನಿಯೋಗದೊಂದಿಗೆ ರಿನ್ಯೂ ಪವರ್, ಒರಿಯಾನ ಪವರ್ ಮತ್ತು ಪೀಸ್ ಡಿಜಿಟೆಕ್ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕ್ರೆಡಲ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments