Homeಕರ್ನಾಟಕ183 ಗ್ರಾಮಗಳಲ್ಲಿ ನೀರಿನ ಸಮಸ್ಯೆ, 31 ಗ್ರಾಮಗಳಿಗೆ ಟ್ಯಾಂಕರ್‌ ನೀರು: ಸಚಿವ ಪ್ರಿಯಾಂಕ್‌ ಖರ್ಗೆ 

183 ಗ್ರಾಮಗಳಲ್ಲಿ ನೀರಿನ ಸಮಸ್ಯೆ, 31 ಗ್ರಾಮಗಳಿಗೆ ಟ್ಯಾಂಕರ್‌ ನೀರು: ಸಚಿವ ಪ್ರಿಯಾಂಕ್‌ ಖರ್ಗೆ 

ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಎದುರಾಗಲಿರುವ ಕುಡಿಯುವ ನೀರಿನ ಅಭಾವವನ್ನು ಎದುರಿಸಲು ಮೊದಲ ಆದ್ಯತೆಯಾಗಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಮುಖಾಂತರ ಪಡೆಯಲಾಗುವುದಲ್ಲದೆ, ಅಗತ್ಯವಿರುವ ಸ್ಥಳದಲ್ಲಿ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ನೀರು ಬತ್ತಿ ಹೋಗಿರುವ ಕೊಳವೆ ಬಾವಿಗಳನ್ನು ಫ್ಲಶಿಂಗ್ ಮತ್ತು ಆಳಗೊಳಿಸುವುದರೊಂದಿಗೆ ನೀರಿನ ಮೂಲಗಳನ್ನು ಹೆಚ್ಚಿಸಲಾಗುವುದು, ಅನಿವಾರ್ಯ ಸಂದರ್ಭಗಳಲ್ಲಿ ಕೊಳವೆಬಾವಿಗಳನ್ನು ಕೊರೆಯುವುದು ಅತ್ಯಗತ್ಯವೆಂದು ಕಂಡು ಬಂದಲ್ಲಿ, ಸಂಬಂಧಪಟ್ಟ ಭೂವಿಜ್ಞಾನಿಗಳ ವರದಿಯನುಸಾರ ಸೂಕ್ತ ಕ್ರಮ ಕೈಗೊಂಡು ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಕಾಮಗಾರಿಗಳನ್ನು ಕೈಗೊಳ್ಳಲು ತಿಳಿಸಲಾಗಿದೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.

ರಾಜ್ಯವು ಮೂಲತಃ ಶುಷ್ಕ ಪ್ರದೇಶವಾಗಿರುವುದರಿಂದ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹಾಲಿ ಇರುವ ಬಹುತೇಕ ಜಲಮೂಲಗಳು ಬತ್ತಿಹೋಗಿ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಂಭವವಿರುತ್ತದೆ. ಸದರಿ ಸಮಸ್ಯೆಯನ್ನು ದೈನಂದಿನ ಆಧಾರದ ಮೇಲೆ ಮೇಲ್ವಿಚಾರಣೆ ಮಾಡಲು ಕ್ರಮವಹಿಸಿದ್ದು, ಆದ್ದರಿಂದ ಗ್ರಾಮೀಣ ಪ್ರದೇಶದ ಜನರಿಗೆ ನೀರಿನ ಅಭಾವ ಎದುರಾದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ಈಗಾಗಲೆ ಹೊರಡಿಸಲಾಗಿರುವ ಸುತ್ತೋಲೆಯಲ್ಲಿ ತಿಳಿಸಲಾಗಿರುತ್ತದೆ ಎಂದು ಸಚಿವರು ಹೇಳಿದ್ದಾರೆ.

ಶುದ್ಧ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಹಾಗೂ ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಹಂತವಾಗಿ ಎಲ್ಲಾ ಕುಡಿಯುವ ನೀರಿನ ಮೂಲಗಳ ಮಾದರಿಗಳನ್ನು, ಪ್ರತಿ ಗ್ರಾಮದಲ್ಲಿ ಕನಿಷ್ಠ 3 ನಳ ನೀರು ಸಂಪರ್ಕಗಳ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೂಡಲೇ ಕೈಗೊಂಡು ಮಾಹಿತಿಗಳನ್ನು ದಾಖಲಿಸಲು ಸೂಚಿಸಲಾಗಿದೆ; ಎಲ್ಲಾ ಕುಡಿಯುವ ನೀರಿನ ಮೇಲ್ಮಟ್ಟದ ಜಲಸಂಗ್ರಹಾರ (OHT)ಗಳನ್ನು ಮಾರ್ಗಸೂಚಿಗಳ ಅನ್ವಯ ಶುಚಿಗೊಳಿಸಲು ಸೂಕ್ತ ಕ್ರಮವಹಿಸುವಂತೆಯೂ ಸೂಚಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

183 ಗ್ರಾಮಗಳಲ್ಲಿ ನೀರಿನ ಸಮಸ್ಯೆ

ರಾಜ್ಯದಲ್ಲಿ ಈಗಾಗಲೆ 21 ಜಿಲ್ಲೆಗಳ 144 ತಾಲ್ಲೂಕುಗಳಲ್ಲಿನ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುತ್ತದೆ, ಇವುಗಳ ಪೈಕಿ 31 ಗ್ರಾಮಗಳಿಗೆ 96 ಟ್ಯಾಂಕರ್‌ಗಳ ಮುಖಾಂತರ ಹಾಗೂ 152 ಗ್ರಾಮಗಳಿಗೆ 154 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಕುಡಿಯುವ ನೀರನ್ನು ಒದಗಿಸಲು ಕ್ರಮವಹಿಸಲಾಗಿದೆ ಎಂಬ ಮಾಹಿತಿಯನ್ನು ಸಚಿವ ಪ್ರಿಯಾಂಕ್‌ ಖರ್ಗೆ ನೀಡಿದ್ದಾರೆ.

ಮಾರ್ಚ್ 2026ರಲ್ಲಿ ಫ್ಲಷಿಂಗ್‌ ಹಾಗೂ ಆಳಗೊಳಿಸುವ ಮೂಲಕ 1053 ಕೊಳವೆ ಬಾವಿಗಳನ್ನು ದುರಸ್ತಿಗೊಳಿಸುವುದು ಹಾಗೂ ತುರ್ತು ಸಂದರ್ಭಗಳಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯುವುದು ಅವಶ್ಯಕವೆಂದು ನಿರೀಕ್ಷಿಸಲಾಗಿದ್ದು, ಆದ್ಯತೆಯ ಮೇರೆಗೆ ಕ್ರಮವಹಿಸಲು ಎಲ್ಲಾ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

2026ನೇ ಸಾಲಿನ ಬೇಸಿಗೆಯಲ್ಲಿ ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಅವಶ್ಯವಿರುವ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯಗಳ ಬರ ಪರಿಹಾರ ನಿಧಿ ಹಾಗೂ ಇಲಾಖೆಯ ಟಾಸ್ಕ್‌ಫೋರ್ಸ್‌ ಅಡಿ ಸಂಯೋಜಿತಗೊಳಿಸಿ ಬಳಸಿಕೊಂಡು ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸಲು ಗ್ರಾಮ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು ಹಾಗೂ ಜಿಲ್ಲಾಡಳಿತದ ಸಮನ್ವಯದೊಂದಿಗೆ ಕ್ರಮ ಕೈಗೊಂಡು ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸಚಿವ ಪ್ರಿಯಾಂಕ್‌ ಖರ್ಗೆ ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments