ನವೀಕರಿಸಬಹುದಾದ ಇಂಧನ ವಲಯಕ್ಕೆ ಪೂರಕ ಪರಿಸರ ವ್ಯವಸ್ಥೆ ಹಾಗೂ ಹೂಡಿಕೆದಾರ ಸ್ನೇಹಿ ನೀತಿಗಳನ್ನು ಹೊಂದಿರುವ ಕರ್ನಾಟಕಕ್ಕೆ ಬನ್ನಿ, ಹೂಡಿಕೆ ಮಾಡಿ ಎಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ದೇಶ- ವಿದೇಶಗಳ ಹೂಡಿಕೆದಾರರಿಗೆ ಆಹ್ವಾನ ನೀಡಿದ್ದಾರೆ.
ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ‘ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್ಪೋ–2026’ದ ಸಮಾವೇಶದಲ್ಲಿ ಮಾತನಾಡಿದ ಅವರು, “ಕರ್ನಾಟಕದಲ್ಲಿ ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆಗೆ ವಿಫುಲ ಅವಕಾಶಗಳಿದ್ದು, ಹೂಡಿಕೆದಾರ ಸ್ನೇಹಿ ನೀತಿಗಳು, ಭೂ ಪರಿವರ್ತನೆಗೆ ಸ್ವಯಂಚಾಲಿತ ಅನುಮತಿ ವ್ಯವಸ್ಥೆ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಅಪಾರ ಅವಕಾಶಗಳಿವೆ,” ಎಂದು ತಿಳಿಸಿದರು.
“ರಾಜ್ಯದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 2022ರಲ್ಲಿ 16 ಗಿಗಾವ್ಯಾಟ್ನಿಂದ ಪ್ರಸ್ತುತ 23 ಗಿಗಾವ್ಯಾಟ್ಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ವರ್ಷ 5ರಿಂದ 7 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸೇರ್ಪಡೆಗೊಳಿಸುವ ಗುರಿ ಹೊಂದಿದ್ದು, ಬರುವ 5 ವರ್ಷಗಳಲ್ಲಿ ಸುಮಾರು 30 ಗಿಗಾವ್ಯಾಟ್ ಸಾಮರ್ಥ್ಯ ಸೇರ್ಪಡೆಗೊಳಿಸುವ ಮಹತ್ವಾಕಾಂಕ್ಷೆಯ ಮಾರ್ಗಸೂಚಿಯನ್ನು ರೂಪಿಸಲಾಗಿದೆ,”ಎಂದು ಗೌರವ್ ಗುಪ್ತ ಹೇಳಿದರು.
“2024–25ನೇ ಸಾಲಿನಲ್ಲಿ 1,331 ಮೆಗಾವ್ಯಾಟ್ ಪವನ ವಿದ್ಯುತ್ ಸಾಮರ್ಥ್ಯ ಸೇರ್ಪಡೆಗೊಳಿಸಿ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನಕ್ಕೇರಿದೆ. ಈ ಮೂಲಕ ನವೀಕರಿಸಬಹುದಾದ ಇಂಧನ ವಲಯದ ಹೂಡಿಕೆಗೆ ಪ್ರಮುಖ ತಾಣವಾಗಿ ರಾಜ್ಯ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. 2035ರ ವೇಳೆಗೆ ನಮ್ಮ ಗುರಿ ಕೇವಲ ಇಂಧನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದಷ್ಟೇ ಅಲ್ಲ. ಬದಲಾಗಿ, ವಿಶ್ವಾಸಾರ್ಹ ನವೀಕರಿಸಬಹುದಾದ ಇಂಧನ ವ್ಯವಸ್ಥೆಯನ್ನು ನಿರ್ಮಿಸುವುದಾಗಿದೆ. ರಾಜ್ಯದ ಸಂಪನ್ಮೂಲ ಸಮರ್ಪಕತೆ ಯೋಜನೆಯಡಿ 2034–35ರ ವೇಳೆಗೆ 41.5 ಗಿಗಾವ್ಯಾಟ್ ಹೊಸ ಪವನ ಮತ್ತು ಸೌರ ವಿದ್ಯುತ್ ಸಾಮರ್ಥ್ಯ ಹಾಗೂ ಸುಮಾರು 11,000 ಮೆಗಾವ್ಯಾಟ್ ಗಂಟೆಗಳ ಬ್ಯಾಟರಿ ಇಂಧನ ಸಂಗ್ರಹ ಸಾಮರ್ಥ್ಯವನ್ನು ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ”ಎಂದು ವಿವರಿಸಿದರು.
“ರೈತರೊಂದಿಗೆ 30 ವರ್ಷಗಳ ಭೂ ಗುತ್ತಿಗೆ ಒಪ್ಪಂದದ ಮೂಲಕ ಅಭಿವೃದ್ಧಿಪಡಿಸಿರುವ ಪಾವಗಡ ಸೋಲಾರ್ ಪಾರ್ಕ್ನಂತಹ ನವೀನ ಮಾದರಿಗಳನ್ನು ರಾಜ್ಯವು ದೇಶಕ್ಕೆ ಪರಿಚಯಿಸಿದೆ. ರ್ಯಾಪ್ಟೆಯಲ್ಲಿ 1,100 ಮೆಗಾವ್ಯಾಟ್ ಗಂಟೆಗಳ ಇಂಧನ ಸಂಗ್ರಹ ವ್ಯವಸ್ಥೆಯೊಂದಿಗೆ 250 ಮೆಗಾವ್ಯಾಟ್ ಸೌರ ವಿದ್ಯುತ್ ಯೋಜನೆ, ಪ್ರತ್ಯೇಕ ಬ್ಯಾಟರಿ ಇಂಧನ ಸಂಗ್ರಹ ಯೋಜನೆಗಳು ಹಾಗೂ ಕೆಪಿಟಿಸಿಎಲ್ನ ವಿವಿಧ ಉಪಕೇಂದ್ರಗಳಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳು ಸೇರಿದಂತೆ ಬೃಹತ್ ಪ್ರಮಾಣದ ಸೌರ ಮತ್ತು ಇಂಧನ ಸಂಗ್ರಹ ಯೋಜನೆಗಳ ಅನುಷ್ಠಾನ ಪ್ರಗತಿಯಲ್ಲಿದೆ”ಎಂದು ಮಾಹಿತಿ ನೀಡಿದರು.
“ಪಿಎಂ-ಕುಸುಮ್ ಯೋಜನೆಯ ಮೂಲಕ ರೈತರ ಸಬಲೀಕರಣ ಹಾಗೂ ಗ್ರೀನ್ ಹೈಡ್ರೋಜನ್ ಮತ್ತು ಜೈವಿಕ ಇಂಧನಕ್ಕೆ ಉತ್ತೇಜನ ನೀಡುವುದರ ಜತೆಗೆ ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ ಉದ್ಯಮಶೀಲತೆಗೆ ಅವಕಾಶ ಕಲ್ಪಿಸುವುದೂ ನಮ್ಮ ಬದ್ಧತೆ,” ಎಂದು ಹೇಳಿದರು.
ರಾಜ್ಯದ ಒಟ್ಟು ವಿದ್ಯುತ್ ಸಾಮರ್ಥ್ಯದಲ್ಲಿ ನವೀಕರಿಸಬಹುದಾದದ ಇಂಧನದ ಪಾಲು ಶೇ.67: ದಿವ್ಯಾ ಪ್ರಭು
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ದಿವ್ಯಾ ಪ್ರಭು ಜಿ.ಆರ್.ಜೆ. ಮಾತನಾಡಿ, “ಎಕ್ಸ್ಪೋದಲ್ಲಿ ಭಾಗವಹಿಸುವ ಮೂಲಕ ನವೀಕರಿಸಬಹುದಾದ ಇಂಧನ ಹೂಡಿಕೆಗೆ ಪ್ರಮುಖ ತಾಣವಾಗಿ ರಾಜ್ಯದ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಗುರಿ ನಮ್ಮದು,”ಎಂದರು.
“ಸುಮಾರು 27 ಗಿಗಾವ್ಯಾಟ್ ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದಿರುವ ಕರ್ನಾಟಕವು, ರಾಜ್ಯದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇ.67ರಷ್ಟು ಪಾಲನ್ನು ಹೊಂದಿದೆ. ನೈಸರ್ಗಿಕ ಸಂಪನ್ಮೂಲ, ಪ್ರಗತಿಪರ ನೀತಿಗಳು, ಉತ್ತಮ ಮೂಲಸೌಕರ್ಯ ಹಾಗೂ ಹೂಡಿಕೆಗೆ ಪೂರಕವಾದ ವ್ಯವಸ್ಥೆ ಇರುವುದರಿಂದ ಹೂಡಿಕೆದಾರರ ನೆಚ್ಚಿನ ರಾಜ್ಯ ಎನಿಸಿಕೊಂಡಿದೆ,” ಎಂದು ಹೇಳಿದರು.
“ಕ್ರೆಡಲ್ನ ಸಾಮರ್ಥ್ಯ ವೃದ್ಧಿ, ಸೂರ್ಯ ಮಿತ್ರ ಮತ್ತು ವಾಯು ಮಿತ್ರದಂತಹ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಇನ್ಕ್ಯುಬೇಷನ್ ಕೇಂದ್ರಗಳು ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಿದೆ. ಅಲ್ಲದೇ, ಯೂನಿವರ್ಸಿಟಿ ಆಫ್ ಸೌತ್ ವೇಲ್ಸ್, ಐಐಎಸ್ಸಿ ಮತ್ತು ಐಐಎಂಬಿ ಜತಗಿನ ಸಹಯೋಗದಿಂದ ನವೀಕರಿಸಬಹುದಾದ ಇಂಧನ ಪರಿಸರ ವ್ಯವಸ್ಥೆಗ ಬಲ ತುಂಬಲಾಗಿದೆ,”ಎಂದರು
” ಕೇವಲ ವಿದ್ಯುತ್ ಉತ್ಪಾದನೆಗೆ ಮಾತ್ರವಲ್ಲದೆ, ಪ್ರಸರಣ ವ್ಯವಸ್ಥೆಯ ಬಲವರ್ಧನೆಗೂ ರಾಜ್ಯ ಆದ್ಯತೆ ನೀಡುತ್ತಿದೆ. ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಅಗತ್ಯವಾದ ಪ್ರಸರಣ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕೆಪಿಟಿಸಿಎಲ್ 27 ಮೀಸಲಾದ ಉಪಕೇಂದ್ರಗಳನ್ನು ಗುರುತಿಸಿದೆ” ಎಂದು ದಿವ್ಯಾ ಪ್ರಭು ತಿಳಿಸಿದರು.
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿನ ವಿಶೇಷ ಅನುಕೂಲಗಳು
‘ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕದ ವಿಶೇಷ ಅನುಕೂಲಗಳು’ ಎಂಬ ವಿಷಯದಡಿ ನಡೆದ ಕರ್ನಾಟಕ ಸಮಗ್ರ ಅಧಿವೇಶನವು ಶೃಂಗಸಭೆಯ ಪ್ರಮುಖ ಆಕರ್ಷಣೆಯಾಗಿತ್ತು. ರಾಜ್ಯದ ಪವನ ಮತ್ತು ಸೌರ ಇಂಧನ ಸಾಮರ್ಥ್ಯ, ಪ್ರಗತಿಪರ ನೀತಿಗಳು, ಪಾವಗಡದ ವಿಶಿಷ್ಟ ಭೂ ಗುತ್ತಿಗೆ ಮಾದರಿ ಹಾಗೂ ಹೂಡಿಕೆದಾರ ಸ್ನೇಹಿ, ತಕ್ಷಣವೇ ಯೋಜನೆಗಳನ್ನು ಆರಂಭಿಸಲು ಅನುಕೂಲವಾಗುವ ಮೂಲಸೌಕರ್ಯಗಳನ್ನು ಈ ಅಧಿವೇಶನದಲ್ಲಿ ಪ್ರಸ್ತುತಪಡಿಸಲಾಯಿತು.ಈ ಅಧಿವೇಶನದಲ್ಲಿ ಹೂಡಿಕೆದಾರರು, ಉದ್ಯಮದ ನಾಯಕರು ಮತ್ತು ಉತ್ಪಾದನಾ ವಲಯದ ಪ್ರತಿನಿಧಿಗಳು ಭಾಗವಹಿಸಿದ್ದರು.
ಹಳೆಯ ಪವನ ವಿದ್ಯುತ್ ಟರ್ಬೈನ್ಗಳ ಆಧುನೀಕರಣಕ್ಕೆ ಒತ್ತು
ಹಳೆಯ ಪವನ ವಿದ್ಯುತ್ ಟರ್ಬೈನ್ಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಮೇಲ್ದರ್ಜೆಗೇರಿಸುವ ಅವಕಾಶಗಳು, ಸವಾಲುಗಳು ಹಾಗೂ ಅದರ ಮಹತ್ವದ ಕುರಿತ ‘ಪವನ ವಿದ್ಯುತ್ ಟರ್ಬೈನ್ಗಳ ಆಧುನೀಕರಣ’ ಕುರಿತ ಸಂವಾದದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹಾಗೂ ಕೆಆರ್ಇಡಿಎಲ್ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಪ್ರಭು ಭಾಗವಹಿಸಿದರು.
ಕರ್ನಾಟಕ ಪೆವಿಲಿಯನ್
ಶೃಂಗಸಭೆಯ ಪ್ರಮುಖ ಆಕರ್ಷಣೆಗಳಲ್ಲಿ ಕ್ರೆಡಲ್ ನ ಸ್ಥಾಪಿಸಿದ್ದ ‘ಕರ್ನಾಟಕ ಪೆವಿಲಿಯನ್’ ಕೂಡ ಒಂದಾಗಿತ್ತು. ಐತಿಹಾಸಿಕ ಮೈಸೂರು ಅರಮನೆಯ ಭವ್ಯ ವಾಸ್ತುಶಿಲ್ಪದ ಪರಿಕಲ್ಪನೆಯಡಿ ಪೆವಿಲಿಯನ್ ಅನ್ನು ವಿನ್ಯಾಸಗೊಳಿಸಲಾಗಿತ್ತು. ವಿದ್ಯುತ್ ಕ್ಷೇತ್ರದಲ್ಲಿ ಕರ್ನಾಟಕ ಸಾಧಿಸಿರುವ ಮಹತ್ವದ ಮೈಲಿಗಲ್ಲುಗಳು ಮತ್ತು ಪ್ರಗತಿಯ ಪಯಣವನ್ನು ಇಲ್ಲಿ ಪ್ರದರ್ಶಿಸಲಾಗಿತ್ತು.
“ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ–2026ರಲ್ಲಿ ಕರ್ನಾಟಕವು ಪಾಲುದಾರ ರಾಜ್ಯವಾಗಿ ಭಾಗವಹಿಸಿದ್ದು ಸಂತಸದ ವಿಚಾರ. ಇಂಧನ ಕ್ಷೇತ್ರದಲ್ಲಿ ನಮ್ಮ ರಾಜ್ಯದ ಅಗ್ರ ಸ್ಥಾನ, ನವೀಕರಿಸಬಹುದಾದ ಇಂಧನದ ವಲಯದ ಅಗಾಧ ಸಾಮರ್ಥ್ಯ ಹಾಗೂ ಪ್ರಗತಿಪರ ನೀತಿಗಳನ್ನು ಹೂಡಿಕೆದರರ ಮುಂದಿಡಲು ಇದು ಅತ್ಯುತ್ತಮ ವೇದಿಕೆಯಾಗಿತ್ತು. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಇರುವ ಅಪಾರ ಅವಕಾಶಗಳನ್ನು ಅನ್ವೇಷಿಸಲು ಹೂಡಿಕೆದಾರರು, ಉದ್ಯಮದ ನಾಯಕರು ಹಾಗೂ ಜಾಗತಿಕ ಪಾಲುದಾರರನ್ನು ಕರನಾಟಕಕ್ಕೆ ಸ್ವಾಗತಿಸುತ್ತೇವೆ”.


