ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್‌ನಡಿ ಈವರೆಗೂ ಬರಪರಿಹಾರ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಸದ್ಯಕ್ಕೆ ಬೆಳೆಹಾನಿ ಪರಿಹಾರದ ರೂಪದಲ್ಲಿ ಮೊದನೇ ಕಂತಾಗಿ ಅರ್ಹ ರೈತರಿಗೆ ಗರಿಷ್ಠ 2000 ರೂ.ವರೆಗೆ ಪಾವತಿಸಲು 2023-24ನೇ ಸಾಲಿನಲ್ಲಿ 105 ಕೋಟಿ ರೂ. ಅನುದಾನವನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಮಂಜೂರು ಮಾಡಿದೆ.
ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಅನುದಾನ ಬಿಡುಗಡೆ ಆದ ನಂತರ ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತಕ್ಕೆ ಅರ್ಹತೆ ಇರುವ ರೈತರಿಗೆ ಹೆಚ್ಚುವರಿ ಬೆಳೆಹಾನಿ ಪರಿಹಾರ ಬಿಡುಗಡೆಗೊಳಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಮಾರ್ಗಸೂಚಿಯ ಪ್ರಕಾರ ಶೇ.33ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬೆಳೆಹಾನಿಯಾಗಿರುವ ಮಳೆಯಾಶ್ರಿತ ಬೆಳೆಗಳಿಗೆ ಕನಿಷ್ಠ 1000 ರೂ. ಮತ್ತು ನೀರಾವರಿ ಬೆಳೆಗಳಿಗೆ 2000 ರೂ, ಹಾಗೂ ಬಹುವಾರ್ಷಿಕ ಬೆಳೆಗಳಿಗೆ 2,500 ರೂ. ಮತ್ತು ಪ್ರತಿ ರೈತರಿಗೆ ಗರಿಷ್ಠ ಎರಡು ಹೆಕ್ಟೆರ್‌ಗೆ ಸೀಮಿತಗೊಳಿಸಿ, ಮಳೆಯಾಶ್ರಿತ ಬೆಳೆಗಳಿಗೆ ಗರಿಷ್ಠ 17,000 ರೂ. ಮತ್ತು ನೀರಾವರಿ ಬೆಳೆಗಳಿಗೆ ಗರಿಷ್ಠ 34,000 ರೂ. ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಗರಿಷ್ಠ 45,000 ರೂ. ದಂತೆ ಅರ್ಹ ರೈತರಿಗೆ ಬೆಳೆಹಾನಿ ಪರಿಹಾರ ನೀಡಬೇಕಾಗಿದೆ ಎಂದು ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.