ದೇಶದ ಅಖಂಡತೆ, ಸುರಕ್ಷತೆಯನ್ನು ಕಾಪಾಡಲು ಹೋರಾಡುವ ನಮ್ಮ ಸೈನ್ಯವನ್ನು ಸದಾ ಸ್ಮರಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ 515 ಭೂ ಸೇನಾ ಕಾರ್ಯಾಗಾರ ಕಾರ್ಮಿಕ ಸಂಘದವರು ಪರಮವೀರ ಚಕ್ರ ಪದಕ ಪುರಸ್ಕೃತರ ಭಾವಚಿತ್ರವುಳ್ಳ ಕ್ಯಾಲೆಂಡರ್ ಹೊರತಂದಿರುವುದು ಶ್ಲಾಘನೀಯ ಎಂದು ಮಾಜಿ ಡಿಸಿಎಂ ಸಿ ಎನ್ ಅಶ್ವತ್ಥ ನಾರಾಯಣ ಹೇಳಿದರು.
ಮಲ್ಲೇಶ್ವರಂನಲ್ಲಿರುವ ತಮ್ಮ ಕಚೇರಿಯಲ್ಲಿ 515 ಭೂಸೇನಾ ಕಾರ್ಯಗಾರ ಕಾರ್ಮಿಕ ಸಂಘದ ವತಿಯಿಂದ ಹೊರತರಲಾಗಿರುವ ಮೇಜರ್ ಶೈತಾನ್ ಸಿಂಗ್, ಲೆಫ್ಟಿನೆಂಟ್ ಕರ್ನಲ್ ತಾರಾಪೋರ್ ಹಾಗೂ ಡಿಟ್ಯಾಚ್‌ಮೆಂಟ್ ಕಮಾಂಡರ್ ಅಬ್ದುಲ್ ಹಮೀದ್ ಅವರ ಭಾವಚಿತ್ರವುಳ್ಳ ೨೦೨೪ನೆ ಸಾಲಿನ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
“ಸೈನ್ಯಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ತಯಾರು ಮಾಡುವ ಕಾರ್ಮಿಕ ಸಂಘದ ದೇಶಪ್ರೇಮ ಅಪರಿಮಿತವಾದದ್ದು. ಪರಮವೀರ ಚಕ್ರ ಪಡೆದಂತಹ ಮಹಾನ್ ವ್ಯಕ್ತಿಗಳನ್ನು ಸ್ಮರಿಸಿ, ಸಿದ್ಧಪಡಿಸಿರುವ ಈ ಕ್ಯಾಲೆಂಡರ್ ಇಡೀ ದೇಶಕ್ಕೆ ಪ್ರೇರಣೆ ನೀಡುವಂತದ್ದು. ನಮ್ಮ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದಂತಹ ನಿಜವಾದ ನಾಯಕರು ಈ ಸೈನಿಕರು. ಅವರ ಭಾವಚಿತ್ರ ಅಳವಡಿಸಿ ಸಮಾಜಕ್ಕೆ ಕ್ಯಾಲೆಂಡರ್ ಹಂಚುತ್ತಿರುವುದಕ್ಕೆ ಕಾರ್ಮಿಕ ಸಂಘದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.
ಭೂಸೇನಾ ಕಾರ್ಯಗಾರ ಕಾರ್ಮಿಕ ಸಂಘದ ಅಧ್ಯಕ್ಷ ಸಮೀವುಲ್ಲಾ ಖಾನ್ ಮಾತನಾಡಿ, “ನಮ್ಮ ಕಾರ್ಮಿಕ ಸಂಘವು ಭಾರತ ಸರಕಾರದ ರಕ್ಷಣಾ ಇಲಾಖೆಯ ಬಿಎಂಎಸ್, ಬಿಪಿಎಂಎಸ್ ಜೊತೆ ಸಂಯೋಜನೆಯಾಗಿದೆ. ಇವತ್ತು ನಮ್ಮ ಯುವ ಪೀಳಿಗೆ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದಂತಹ ಮಹನೀಯರ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕ್ಯಾಲೆಂಡರ್ ಹೊರ ತರಲಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭೂ ಸೇನಾ ಕಾರ್ಯಾಗಾರ ಕಾರ್ಮಿಕ ಸಂಘದ ಪ್ರಮುಖರಾದ ತಿರುಕುಮಾರ್, ವರಲಕ್ಷ್ಮಿ , ಭಗತ್ ಸಿಂಗ್ ಬಿಸ್ಟ್, ಆದಿತ್ಯ ಗಣೇಶಯ್ಯ, ವೀರ ಕುಮಾರ್, ಕೃಷ್ಣಕುಮಾರ್, ಅಮರನಾಥ್, ಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.