ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ವಿಧೇಯಕ ಜಾರಿಯನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸಿರುವ ಕ್ರಮ ಆತಂಕಕಾರಿ ಬೆಳವಣಿಗೆಯಾಗಿದ್ದು, ಇದು ದಕ್ಷಿಣ ಭಾರತದ ರಾಜ್ಯಗಳ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ ಎಂದು ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ನಾರಿ ಶಕ್ತಿ ವಂದನಾ ಕಾಯ್ದೆ ಅಧಿನಿಮಯ ಜಾರಿಗೆ ತರುತ್ತಿರುವುದನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸಲಿದೆ. ಆದರೆ ಈ ಅಧಿನಿಯಮದಿಂದ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯದ ಜೊತೆಗೆ ಶಿಕ್ಷಣ, ಆರೋಗ್ಯ, ರಕ್ಷಣೆ ದೊರೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
2023ರಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕರಿಸಿದ ವೇಳೆ, ಮುಂದಿನ ಜನಗಣತಿಯ ನಂತರ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ, ಜನಗಣತಿ ಪ್ರಕ್ರಿಯೆ ಇದೀಗಷ್ಟೇ ಆರಂಭವಾಗಿರುವ ಸಂದರ್ಭದಲ್ಲಿ 2011ರ ಜನಗಣತಿ ದತ್ತಾಂಶವನ್ನು ಆಧರಿಸಿ 2029ರೊಳಗೆ ಮೀಸಲಾತಿ ಜಾರಿಗೆ ಮುಂದಾಗಿರುವುದು ಸ್ಪಷ್ಟತೆಯ ಕೊರತೆಯನ್ನು ಉಂಟುಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಸ್ತುತ 543 ಲೋಕಸಭಾ ಕ್ಷೇತ್ರಗಳನ್ನು 850ಕ್ಕೆ ಹೆಚ್ಚಿಸುವ ಪ್ರಸ್ತಾವನೆಯು ಉತ್ತರ ಭಾರತದ ಹಿಂದಿ ಭಾಷಾ ರಾಜ್ಯಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಪುನರ್‌ವಿಂಗಡಣೆ ಬಳಿಕ ದಕ್ಷಿಣ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಪಾಲು ಪ್ರಸ್ತುತ 24.3 ಶೇಕಡದಿಂದ 20.7 ಶೇಕಡಕ್ಕೆ ಇಳಿಕೆಯಾಗುವ ಸಾಧ್ಯತೆ ಇದ್ದು, ಇದು ರಾಜಕೀಯ ಪ್ರಾತಿನಿಧ್ಯ ಕುಗ್ಗಿಸುವ ಜೊತೆಗೆ ಒಕ್ಕೂಟ ವ್ಯವಸ್ಥೆಯಲ್ಲಿ ಅಸಮತೋಲನಕ್ಕೆ ಕಾರಣವಾಗಲಿದೆ. ಉದಾಹರಣೆಗೆ ಉತ್ತರ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ಥಾನ, ಹರಿಯಾಣ, ಛತ್ತೀಸ್‌ಗಢ, ಉತ್ತರಾಖಂಡ ಹಾಗೂ ದೆಹಲಿ ರಾಜ್ಯಗಳಲ್ಲಿ ಒಟ್ಟಾರೆ 159 ಕ್ಷೇತ್ರಗಳ ಏರಿಕೆ (ಸುಮಾರು 77%) ಕಾಣಿಸಿಕೊಳ್ಳಲಿದೆ. ಇದಕ್ಕೆ ವಿರುದ್ಧವಾಗಿ ದಕ್ಷಿಣ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕೇವಲ 44 ಕ್ಷೇತ್ರಗಳ (ಸುಮಾರು 33%) ಏರಿಕೆ ಮಾತ್ರ ಸಂಭವಿಸಲಿದೆ ಎಂದು ಅವರು ಹೇಳಿದರು.
ದಕ್ಷಿಣ ರಾಜ್ಯಗಳು ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಜನಸಂಖ್ಯೆ ಕೇವಲ 18 ಶೇಕಡಾ ಇದ್ದರೂ, ಜಿಡಿಪಿಗೆ ಸುಮಾರು ಶೇ 35% ಕೊಡುಗೆ ನೀಡುತ್ತಿವೆ. ಕರ್ನಾಟಕ ರಾಜ್ಯ ಮಾತ್ರವೇ 2025-26 ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿಗೆ ಶೇ 9.19% ಕೊಡುಗೆ ನೀಡಿದೆ. ಆದರೂ ಜನಸಂಖ್ಯೆಯನ್ನು ಆಧಾರವನ್ನಾಗಿಸಿಕೊಂಡ ಹಣಕಾಸು ಆಯೋಗದ ಸೂತ್ರದಿಂದ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುವುದರಿಂದ ಕೇಂದ್ರದಿಂದ ದೊರೆಯುವ ಹಣಕಾಸು ನೆರವು ಕೂಡ ಕುಗ್ಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಮಹಿಳಾ ಮೀಸಲಾತಿ ವಿಷಯವನ್ನು ಕ್ಷೇತ್ರ ಮರುವಿಂಗಡಣೆಗೆ ಜೋಡಿಸಿರುವುದು ನಿಜವಾದ ಉದ್ದೇಶಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಪ್ರಕ್ರಿಯೆ ಆಡಳಿತಾರೂಢ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ರೂಪುಗೊಳ್ಳುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಅವರು ಆರೋಪಿಸಿದರು.


